»   » ಚಿತ್ರ ವಿಮರ್ಶೆ: ಐಪಿಸಿ ಸೆಕ್ಷನ್ 300

ಚಿತ್ರ ವಿಮರ್ಶೆ: ಐಪಿಸಿ ಸೆಕ್ಷನ್ 300

By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಕಡಿಮೆ ಬಜೆಟ್, ಸೀಮಿತ ಸನ್ನಿವೇಶಗಳು, ಕ್ಷಣಕ್ಷಣಕ್ಕೂ ಕುಹೂಹಲಕ್ಕೆ ಮುನ್ನುಡಿ ಬರೆಯುವ ನಿರೂಪಣೆ, ಸಣ್ಣ ಎಳೆ ಆಧರಿಸಿದ ಕತೆಗೆ ಎರಡೂವರೆ ತಾಸು ಬೋರ್ ಆಗದ ರೀತಿಯಲ್ಲಿ ಹೆಣೆಯಲಾದ ಚಿತ್ರಕತೆ, ಕೌತುಕಕ್ಕೆ ಕಾರಣವಾಗುವ ಪಾತ್ರಗಳು...

ಈ ಮಾದರಿಯ ಚಿತ್ರಗಳು ಕನ್ನಡದಲ್ಲಿ ಕಡಿಮೆ. ಸುನಿಲ್ ಕುಮಾರ್ ದೇಸಾಯಿ, ವೇಮಗಲ್ ಜಗನ್ನಾಥ್ ಮೊದಲಾದವರು ಇಂಥ ಪ್ರಯೋಗ ಮಾಡಿ, ಗೆದ್ದಿದ್ದರು. ಈಗ ಅದೇ ಹಾದಿಯಲ್ಲಿ ಮೂಡಿಬಂದಿರುವ ಚಿತ್ರ ಐಪಿಸಿ ಸೆಕ್ಷನ್ 300. ನಿರ್ದೇಶಕ ಶಶಿಕಾಂತ್ ಮೊದಲ ಯತ್ನದಲ್ಲೇ ಗೆಲುವಿನ ಬಾವುಟ ಹಾರಿಸಿದ್ದಾರೆ.

ಅನಿರೀಕ್ಷಿತ ತಿರುವು ನೀಡುವ ಒಂದು ಸಾಮಾನ್ಯ ಕತೆಯನ್ನು ವಿಭಿನ್ನ ರೀತಿಯಲ್ಲಿ ನಿರೂಪಿಸಿದ್ದಾರೆ. ಹಾಗಂತ ಇದು ಹಿಚ್‌ಕಾಕ್ (ಹಾಲಿವುಡ್ ಚಿತ್ರ ಜಗತ್ತಿನ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಸರದಾರ) ಮಾದರಿಯ ಸಿನೆಮಾ ಎಂದರೆ ತಪ್ಪಾಗುತ್ತದೆ. ಅಲ್ಲಲ್ಲಿ ಕೆಲವು ಕಮರ್ಷಿಯಲ್ ಅಂಶಗಳು ಹಾಡು, ಡ್ಯಾನ್ಸು, ಅನಗತ್ಯ ಕಾಮಿಡಿ... ಸೇರಿಕೊಂಡು, ಕತೆಯ ಓಘ ಹಾಗೂ ವೇಗಕ್ಕೆ ಧಕ್ಕೆ
ಉಂಟುಮಾಡಿವೆ.

ಪ್ರೇಕ್ಷಕರನ್ನು ಒಂದಷ್ಟು ಹೊತ್ತು ಹಿಡಿದು ಕೂರಿಸುವ ತಾಕತ್ತು ಚಿತ್ರಕತೆಗಿದೆ. ನಿರೂಪಣೆಯಲ್ಲಿ ಜಾಣತನವಿದೆ. ಇಡೀ ಚಿತ್ರದ ಸೂತ್ರಧಾರ ದೇವರಾಜ್. ಪಾತ್ರಕ್ಕೆ ಜೀವ ತುಂಬುವ ಪರಿ, ಕಣ್ಣಲ್ಲೇ ಮಾತನಾಡುವ ವೈಖರಿ ಇಷ್ಟವಾಗುತ್ತದೆ. ವಿಜಯರಾಘವೇಂದ್ರ ನಟನೆಗೆ ಮೋಸ ಮಾಡಿಲ್ಲ. ಅವರ ಪಾತ್ರಕ್ಕೆ ಚ್ಯುತಿ ಬಂದಿಲ್ಲ. ನಾಯಕಿ ಪ್ರಿಯಾಂಕಾ ಮೇಕಪ್ ಮಾಡಿಕೊಳ್ಳುವ ಸಮಯವನ್ನು ಅಭಿನಯ ತರಬೇತಿ ಶಾಲೆಗೆ ಮೀಸಲಿಡಲಿ.

ಗ್ಲ್ಯಾಮರ್ ಬೊಂಬೆ ಸುಮನ್ ರಂಗನಾಥ್ ಮೋಹಕ ನೋಟ, ಆಕರ್ಷಕ ಮೈಮಾಟ... ರಂಗರಂಗಾ! ಅದೇನೇ ಇರಲಿ, ಬಹಳ ದಿನಗಳ ನಂತರ ಹೀಗೊಂದು ಸನ್ಪೆನ್ಸ್ ಥ್ರಿಲ್ಲರ್ ಸಿನಿಮಾ ಬಂದಿದೆ. ನೋಡೋರಿಗೆ ಯಾರ ಹಂಗ್ಯಾಕೆ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada