»   » ಹಮೀದ್ ಕನ್ನಡ ಕಿರುಚಿತ್ರ ವಿಮರ್ಶೆ

ಹಮೀದ್ ಕನ್ನಡ ಕಿರುಚಿತ್ರ ವಿಮರ್ಶೆ

Posted By: * ಮಲೆನಾಡಿಗ
Subscribe to Filmibeat Kannada

ಭಯೋತ್ಪಾದನೆ ಇಂದು ಮಾಧ್ಯಮಗಳಲ್ಲಿ ಬಹು ಚರ್ಚಿತ ವಿಷಯ. ಸುದ್ದಿ ಮಾಧ್ಯಮದಂತೆ ಸಿನಿಮಾ ಮಾಧ್ಯಮವನ್ನು 'ಭಯೋತ್ಪಾದನೆ' ಆವರಿಸಿದೆ. ಉಗ್ರಗಾಮಿಗಳು ಪ್ರತಿ ಹತ್ತು ಚಿತ್ರಗಳಲ್ಲಿ ಎಂಟು ಚಿತ್ರಗಳಲ್ಲಿ ಕಾಣಸಿಗುತ್ತಾರೆ. ಆದರೆ, ಸಾಮಾನ್ಯವಾಗಿ ಎಲ್ಲವೂ ಕ್ರೌರ್ಯದ ಪ್ರತಿಪಾದಕ ಚಿತ್ರಗಳಾಗಿರುತ್ತದೆ ಎಂಬುದು ದುರಂತವಾದರೂ ಸತ್ಯ. ಆದರೆ, ವಿದ್ಯಾವಂತ ಯುವ ಪೀಳಿಗೆ ಉಗ್ರರ ಹಾದಿ ತುಳಿದು, ಅದರಿಂದ ಹೊರಬರಲಾರದೆ ಪಡುವ ಮಾನಸಿಕ ವೇದನೆಯ ಚಿತ್ರಣ ಬಹುಶಃ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಕಾಣಬಹುದು. ಅಂತಹ ಒಂದು ಪ್ರಯತ್ನವನ್ನು ಮಾಡಿದ್ದಾರೆ ಯುವ ನಿರ್ದೇಶಕ ಕೆ.ಆರ್ ರವೀಂದ್ರ.

ಮುಸ್ಲಿಂ ಜನಾಂಗದ ಮುಗ್ಧ ಯುವಕರು ಟೆರೆರಿಸ್ಟ್ ಗಳಾಗಿ ಪರಿವರ್ತಿತರಾಗಲು ಕಾರಣ ಏನೇ ಇದ್ದರೂ, ಅಂತಿಮವಾಗಿ ಶಾಂತಿ ಮಂತ್ರ ಒಂದೇ ದೇವರಿಗೆ ಪ್ರೀತಿ ಎಂಬುದಂತೂ ನಿಜ. 'ಮುಸ್ಲಿಮರೆಲ್ಲರೂ ಉಗ್ರರಲ್ಲ, ಉಗ್ರರೆಲ್ಲ ಮುಸ್ಲಿಮರಲ್ಲ' ಎನ್ನುವ ಮಾತಂತೂ ಎಲ್ಲರೂ ಕೇಳಿರುವಂಥದ್ದೆ. ಇದೇ ವಿಷಯದ ಮೇಲೆ ಮೈ ನೇಮ್ ಇಸ್ ಖಾನ್ ಕಥೆ ಕೂಡ ಸಾಗುತ್ತದೆ. ಕೇವಲ ಜಾತಿ ಆಧಾರದ ಮೇಲೆ ತನ್ನ ಸುತ್ತಮುತ್ತಲಿನ ಜನರಿಂದ ದೂಷಣೆಗೆ ಒಳಗಾಗಿ, ದುಷ್ಟರ ಕೂಟ ಸೇರಿ, ಪರಿತಪಿಸುವ ಓರ್ವ ಮುಸ್ಲಿಂ ಯುವಕನ ಕಥೆಯನ್ನು ಹತ್ತೇ ನಿಮಿಷದಲ್ಲಿ ಹೇಳುವ ಸಣ್ಣ ಬಜೆಟ್ ನ ಸದಭಿರುಚಿಯ ಚಿತ್ರ ಹಮೀದ್-the loser.

ಇದು ಕೆ.ಆರ್ ರವೀಂದ್ರ ಅವರ ಚೊಚ್ಚಲ ಪ್ರಯತ್ನ. ಬಹುತೇಕ ಅಭಿನಯದ ಗಂಧ ಗಾಳಿ ಗೊತ್ತಿರದ ಹೊಸ ಕಲಾವಿದರನ್ನು ಹಾಕಿಕೊಂಡು, 10 ನಿಮಿಷದ ಕನ್ನಡ ಚಿತ್ರವನ್ನು ರವೀಂದ್ರ ಅವರು ನಿರ್ದೇಶಿಸಿ ಗೆದ್ದಿದ್ದಾರೆ. ಹಮೀದ್ ಚಿತ್ರ ಪ್ರದರ್ಶನಕ್ಕಾಗಿ ಈಗಾಗಲೇ ಉತ್ತರಪ್ರದೇಶದ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಕೋರಿಕೆ ಸಲ್ಲಿಸಿದೆ. ಈ ಮೂಲಕ ಕನ್ನಡ ಚಿತ್ರವೊಂದು ವಿಶ್ವವಿದ್ಯಾಲಯ ಸದಭಿರುಚಿ ಚಿತ್ರಗಳ ಗ್ರಂಥಾಲಯವನ್ನು ಸೇರಲಿದೆ ಎನ್ನುವುದು ಹೆಮ್ಮೆಯ ಸಂಗತಿ.

ಕಥೆ ಹೀಗಿದೆ:
ಕೆಲವರ್ಷಗಳ ಕಾಲ ತನ್ನ ಹೆತ್ತವರು, ಆಪ್ತರಿಂದ ದೂರಿಗಿದ್ದ ಚಿತ್ರದ ನಾಯಕ ಹಮೀದ್ ಮತ್ತೆ ಬೆಂಗಳೂರಿಗೆ ವಾಪಾಸ್ಸಾಗಿರುತ್ತಾನೆ. ಆದರೆ, ಉಗ್ರಗಾಮಿಯಾಗಿ ಬದಲಾದ ನಾಯಕನನ್ನು ಕಂಡು ಅವರ ತಂದೆ, ಪ್ರೇಯಸಿ ಹಾಗೂ ಗೆಳೆಯರು ಮರುಗ ಪಡುತ್ತಾರೆ, ಬೈದು ದೂರಾಗುತ್ತಾರೆ. ನಾಯಕ ತನ್ನ ಆಪ್ತ ಗೆಳೆಯ ಬಳಿ ತಾನು ಉಗ್ರಗಾಮಿ ಆದದ್ದು ಹೇಗೆ, ಯಾಕೆ ಎಂಬುದನ್ನು ವಿವರಿಸುತ್ತಾನೆ. ನಾಯಕನಿಗೆ ಆತನ ಆಪ್ತ ಗೆಳೆಯ ಬುದ್ಧಿಮಾತು ಹೇಳುತ್ತಾನೆ. ಆದರೆ, ಅಷ್ಟರಲ್ಲಿ ಕಾಲ ಮಿಂಚಿರುತ್ತದೆ. ನಾಯಕ ತನ್ನ ಉಗ್ರಗಾಮಿ ಮಿತ್ರರ ಜೊತೆ ಸೇರಿ ಬಾಂಬ್ ಸ್ಫೋಟದ ಸಂಚು ರೂಪಿಸಿರುತ್ತಾನೆ. ಬಾಂಬ್ ಸ್ಪೋಟ ಸಫಲವಾಗುತ್ತದೆ, ಆದರೆ, ನಾಯಕನ ಆಪ್ತರು, ಕುಟುಂಬದವರು ಕೂಡ ಸ್ಫೋಟಕ್ಕೆ ಬಲಿಯಾಗಿರುತ್ತಾರೆ. ಕೊನೆಗೆ, ಗೆಳೆಯನ ಮಾತು ಕೇಳಿ ಬದಲಾಗುತ್ತಾನಾ? ಅಥವಾ ಪೊಲೀಸರಿಂದ ಪಾರಾಗಿ, ಉಗ್ರಗಾಮಿ ಸಹಚರ ಜೊತೆ ಪರಾರಿಯಾಗುತ್ತಾನಾ ಎಂಬುದನ್ನು ಚಿತ್ರ ನೋಡಿ ತಿಳಿಯಬಹುದು.

ಪಾತ್ರಧಾರಿಗಳು ಹಾಗೂ ನಟನೆ: ಏಳೆಂಟು ಜನ ಪಾತ್ರಧಾರಿಗಳು ಚಿತ್ರದಲ್ಲಿ ಕಾಣ ಸಿಗುತ್ತಾರೆ. ಚಿತ್ರದ ಅಲ್ಪಾವಧಿಯಲ್ಲಿ ಹೆಚ್ಚಿನದ್ದನ್ನು ನಿರೀಕ್ಷಿಸುವುದು ಕಷ್ಟವಾದರೂ ಕೆಲವರದ್ದು ಸ್ವಾಭಾವಿಕ, ಮತ್ತೆ ಹಲವರದ್ದು ನಿರ್ಭಾವುಕ ಎಂದು ಹೇಳಬಹುದು. ಆದರೆ, ಒಟ್ಟಾರೆ ಚಿತ್ರದ ಥೀಮ್ ಗೆ ನಟನೆ ಏನೂ ಅಡ್ಡಿಯಾಗಿಲ್ಲ.

ಛಾಯಾಗ್ರಹಣ, ಚಿತ್ರೀಕರಣ ಸ್ಥಳ: ಬೆಂಗಳೂರಿನ ರಸ್ತೆಗಳು, ಹನುಮಗಿರಿ ಗುಡ್ಡದಲ್ಲಿ ಚಿತ್ರೀಕರಿಸಲಾಗಿದೆ. ಛಾಯಾಗ್ರಾಹಕ ಮೋಹನ್ ಅವರಿಗೆ ಫುಲ್ ಮಾರ್ಕ್ಸ್. ಗುಡ್ಡದ ಮೇಲಿಂದ ಕೆಳಗೆ ಇನ್ನು ಒಂದೆರಡು ಶಾಟ್ ಗಳನ್ನು ತೆಗೆಯಬಹುದಿತ್ತು. ಬಾಂಬ್ ಸ್ಫೋಟದ ಚಿತ್ರಣಗಳು ದೃಶ್ಯಕ್ಕೆ ಹೊಂದಿಕೆಯಾಗುತ್ತದೆ.

ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆ ಹೊತ್ತಿರುವ ನಿರ್ದೇಶಕ ರವೀಂದ್ರ ಎಲ್ಲೂ ಮೋಸ ಮಾಡುವುದಿಲ್ಲ. ಡಬ್ಬಿಂಗ್ ಕೂಡ ಸಮರ್ಪಕವಾಗಿ ಬಂದಿದೆ. ಆದರೆ, ನಾಯಕನ ಸಂಭಾಷಣೆಯಲ್ಲಿ ಒಂದಿಷ್ಟು ಪಂಚ್ ಬೇಕಿತ್ತು. ದೊಡ್ಡ ಸಿನಿಮಾ ತೆಗೆಯುವುದು ಸುಲಭ ಆದರೆ, ಕಡಿಮೆ ಅವಧಿ ಸಿನಿಮಾ ಮಾಡಿ ಸೈ ಎನಿಸಿಕೊಳ್ಳುವುದು ಕಷ್ಟ. ಇಂತಹ ಚಿತ್ರಗಳಲ್ಲಿ ಸಂಕಲನಕಾರರ ಪಾತ್ರ ಹಿರಿದು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಸ್ ಜಿ ಪ್ರಸಾದ್ ಅವರು. ಯುವ ಕಲಾವಿದರ ಮೇಲೆ ನಂಬಿಕೆ ಇಟ್ಟು ನಿರ್ಮಾಪಕ ಆದಿತ್ಯ ನಾಗರಾಜು ಹೊಸಬಗೆಯ ಪ್ರಯತ್ನ ಮಾಡಿದ್ದಾರೆ. ಚಿತ್ರಕ್ಕೆ ಒಟ್ಟು ಖರ್ಚಾಗಿದ್ದು 12 ಸಾವಿರ ಅಷ್ಟೇ.

ಒಟ್ಟಾರೆಯಾಗಿ ಹೊಸಬರ ಪ್ರಯತ್ನಕ್ಕೆ ಸಿನಿಪ್ರೇಮಿಗಳ ಬೆಂಬಲ ಅಗತ್ಯ. ನಿಮ್ಮಲ್ಲಿ ಕಡಿಮೆ ಬಜೆಟ್ಟಿನ ಸದಭಿರುಚಿ ಸಿನಿಮಾ ನಿರ್ಮಿಸುವ, ನಿರ್ದೇಶಿಸುವ ಆಸೆ ಇದ್ದರೆ ಹಾಗೂ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ತಪ್ಪದೇ ಪ್ರತಿಭಾವಂತ ನಿರ್ದೇಶಕ ಕೆ ಆರ್ ರವೀಂದ್ರ[ravikotaki@gmail.com] [ಮೊಬೈಲ್ : 99450 10310] ಅವರನ್ನು ಸಂಪರ್ಕಿಸಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada