»   » ನಿರ್ದೇಶಕನ ಪಾಲಿಗೆ ವಿಷ್ಣುವೇ ಆಪ್ತರಕ್ಷಕ

ನಿರ್ದೇಶಕನ ಪಾಲಿಗೆ ವಿಷ್ಣುವೇ ಆಪ್ತರಕ್ಷಕ

By: * ಪ್ರಸಾದ ನಾಯಿಕ
Subscribe to Filmibeat Kannada

ದೆವ್ವ, ಭೂತ ಅಥವಾ ಆತ್ಮ ಮಾನವನ ಜೀವನದ ಮೇಲೆ ಪ್ರಭಾವ ಬೀರುವುದೆ? ಬೀರಿದರೆ ಅದಕ್ಕೆ ವೈಜ್ಞಾನಿಕ ತಳಹದಿಯೇನು? ಇಂಥ ಘಟನೆಗಳೂ ವೈಜ್ಞಾನಿಕವಾಗಿ ಇಷ್ಟೊಂದು ಮುಂದುವರಿದ ಪ್ರಪಂಚದಲ್ಲಿಯೂ ಘಟಿಸುತ್ತವೆಯಾ? ಚಂದಮಾಮಾ ಕಥೆಯಲ್ಲಿನ ವಿಕ್ರಂ ಮತ್ತು ಬೇತಾಳ ಕಥೆಗಳು ಇಂದಿಗೂ ಪ್ರಸ್ತುತವೆ? ಇವುಗಳೆಲ್ಲವುಗಳಿಗೆ ಸೂಕ್ತ ಉತ್ತರ ನೀಡುವುದು ಸಾಧ್ಯವೆ? ನಂಬುವವರು ನಂಬುತ್ತಾರೆ, ನಂಬದಿರುವವರು ನಂಬುವುದಿಲ್ಲ.

ವಿಷ್ಣುವರ್ಧನ್ ಅವರ 200ನೆಯ ಚಿತ್ರ, 'ಆಪ್ತಮಿತ್ರ' ಚಿತ್ರದ ಮುಂದುವರಿದ ಭಾಗ 'ಆಪ್ತರಕ್ಷಕ' ಈ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಳ್ಳಲು ಪ್ರಯತ್ನಪಟ್ಟಿದೆ. ಆಪ್ತಮಿತ್ರ ಮುಗಿದು ಐದು ವರ್ಷಗಳ ನಂತರವೂ ಇನ್ನೂ ಜೀವಂತವಾಗಿರುವ ನಾಗವಲ್ಲಿ ಆತ್ಮ ಮತ್ತು ಅದರ ಸುತ್ತ ಹೆಣೆದುಕೊಂಡಿರುವ ಚಿತ್ರಕಥೆ ಪ್ರೇಕ್ಷಕನ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಹೇಳುವುದು ಕಷ್ಟ. ಆದರೆ, ತಮ್ಮ ಕೊನೆಯ ಚಿತ್ರದಲ್ಲಿ ವಿಷ್ಣುವರ್ಧನ್ ಪ್ರೇಕ್ಷಕರ ಮೇಲೆ ಮಾತ್ರವಲ್ಲ ಇಡೀ ಚಿತ್ರದ ತುಂಬ ಆವರಿಸಿಕೊಂಡಿದ್ದಾರೆ.

ವಯಸ್ಸು ಮಾಗಿದ್ದರೂ ಆಪ್ತಮಿತ್ರ ವಿಷ್ಣುವಿನಲ್ಲಿ ಅದೇ ಲವಲವಿಕೆ. ಎಂದಿಗಿಂತಲೂ ಪಕ್ವವಾಗಿರುವ ಹಾವ. ಸಾಹಸಸಿಂಹ ಇಹಲೋಕ ತ್ಯಜಿಸಿದ್ದರೂ ಇಲ್ಲೇ ಇದ್ದಾರೇನೋ ಎನ್ನುವಂಥ ಭಾವ. ಲಂಪಟ ರಾಜನಾಗಿ ಅಭಿನಯದಲ್ಲಿ ವಿಷ್ಣು ಮನೋವಿಜ್ಞಾನಿ ವಿಷ್ಣುವನ್ನು ಮೀರಿಸಿದ್ದಾರೆ. ಒಟ್ಟಿನಲ್ಲಿ ಕಟ್ಟಾ ಅಭಿಮಾನಿಗಳ ಮೇಲೆ ಸಮೂಹಸನ್ನಿಯಂತೆ ವಿಷ್ಣು ಆವರಿಸಿಕೊಂಡಿದ್ದಾರೆ. ಕಟ್ಟಾ ವಿಷ್ಣು ಅಭಿಮಾನಿಗಳಿಗೆ, ಆಪ್ತಮಿತ್ರ ನೋಡದವರಿಗೆ ಆಪ್ತರಕ್ಷಕ ಹೇಳಿ ಮಾಡಿಸಿದ ಸಿನೆಮಾ. ನಿರ್ದೇಶಕ ಪಿ. ವಾಸು ಪಾಲಿಗೆ ನಿಜವಾದ ಆಪ್ತರಕ್ಷಕ ವಿಷ್ಣುವರ್ಧನ್.

Vishnuvardhan

ಪಿ ವಾಸು ಕಥೆ : ನಿನ್ನೆ ಮಾಡಿದ ಸಾರು ಸಖತ್ತಾಗಿದೆ ಅಂತ ಅಡುಗೆ ಭಟ್ಟನ ಬೆನ್ನು ತಟ್ಟಿರ್ತೀರಾ. ಅದೇ ಖುಷಿಯಲ್ಲಿ ಹಸಿದವರನ್ನು ಮತ್ತೆ ತೃಪ್ತಿಪಡಿಸಬೇಕೆಂಬ ಹಪಾಹಪಿಯಲ್ಲಿ ಅಷ್ಟೇ ರುಚಿಕಟ್ಟಾದ ಮತ್ತು ಸ್ವಲ್ಪ ವಿಭಿನ್ನವಾದ ಸಾಂಬಾರನ್ನು ಅಡುಗೆ ಭಟ್ಟ ಮಾಡಲು ನಿರ್ಧರಿಸುತ್ತಾನೆ, ಹಸಿದವ ಕೇಳದಿದ್ದರೂ ಕೂಡ. ಬೇಳೆ ಚೆನ್ನಾಗಿ ಬೇಯಿಸಿರುತ್ತಾನೆ. ಮಸಾಲೆಯನ್ನು ಚೆನ್ನಾಗಿ ಅರಿದು ಹಾಕಿರುತ್ತಾನೆ. ಆದರೆ, ಒಗ್ಗರಣೆ ಹಾಕುವಲ್ಲಿ ಸ್ವಲ್ಪ ಯಡವಟ್ಟು, ಬೆಲ್ಲ ತುಸು ಕಮ್ಮಿ, ಖಾರದಲ್ಲಿ ಏರುಪೇರು. ಒಟ್ಟಾರೆ ಅದೇ ಸ್ವಾದ ಉಳಿಸಿಕೊಂಡ ಅದೇ ಬಗೆಯ ಸಾರು ಅಥವಾ ಸಾಂಬಾರಿನ ರುಚಿ ಅಷ್ಟಕ್ಕಷ್ಟೇ. ಇದು ಆಪ್ತರಕ್ಷಕ!

ಕಥೆಯಲ್ಲಿ ಹೊಸತನವಿಲ್ಲ, ಚಿತ್ರಕಥೆಯಲ್ಲಿ ಬಿಗಿತನವಿಲ್ಲ. ಆಪ್ತಮಿತ್ರದಲ್ಲಿ ಇದ್ದ ಗ್ಲಾಮರ್, ಹಾಡುಗಳ ಮಾಧುರ್ಯ, ಚಿತ್ರಕಥೆಯ ತೀವ್ರತೆ, ನಟನೆಯಲ್ಲಿನ ಸತ್ವ ಆಪ್ತರಕ್ಷಕದಲ್ಲಿ ಮಾಯವಾಗಿದೆ. ಇದ್ದದ್ದು ಒಂದೇ, ಅದು ವಿಷ್ಣು ಮಾತ್ರ. ಛಾಯಾಚಿತ್ರದ ಮುಖಾಂತರ ಮನೆಮನೆಗೂ ಸಂಚರಿಸುವ ನಾಗವಲ್ಲಿ ತಂದಿಡುವ ಆವಾಂತರದ ಕಥೆ ಹೇಳುವಲ್ಲಿ ನಿರ್ದೇಶಕ ವಾಸು ಚಿತ್ರಕಥೆಯನ್ನು ಗೋಜಲು ಗೋಜಲು ಮಾಡಿದ್ದಾರೆ. ದೈವಶಕ್ತಿ ಮೇಲೋ ಮನೋಶಕ್ತಿ ಮೇಲೋ ಎಂದು ಹೇಳುವಲ್ಲಿ ತಾವೇ ಗೊಂದಲದಲ್ಲಿ ಬಿದ್ದಿದ್ದಾರೆ. ದೈವಶಕ್ತಿಯನ್ನೇ ನಂಬಿಕೊಂಡ ಮಂತ್ರವಾದಿಯನ್ನು ಬಫೂನ್ ನಂತೆ ಚಿತ್ರಿಸಿದ್ದಾರೆ. ವಿಷ್ಣು ನಂಬಿಕೊಂಡ ಮನೋಶಕ್ತಿಯೇ ಗೆಲ್ಲುತ್ತದೆಂದು ತೋರಿಸುವಲ್ಲಿಯೂ ವಾಸು ಸೋತಿದ್ದಾರೆ.

ವಿಜಯರಾಜೇಂದ್ರ ಬಹಾದ್ದೂರ್ ಎಂಬ ಲಂಪಟ ರಾಜನಿಂದ ಮೋಹಕ್ಕೊಳಗಾದ ನಾಗವಲ್ಲಿ ಅವನಿಂದ ಹತ್ಯೆಗೊಳಗಾಗಿ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸುವುದು ಕಥೆ. ಆದರೆ, ರಾಜನಂತೆಯೇ ಇರುವ ಕ್ಯಾಪ್ಟನ್(ವಿಷ್ಣು) ವಿರುದ್ಧ ನಾಗವಲ್ಲಿ ಯಾಕೆ ಸೇಡು ತೀರಿಸಿಕೊಳ್ಳುವುದಿಲ್ಲ? ನೂರಕ್ಕೂ ಹೆಚ್ಚು ವರ್ಷ ಬದುಕಿದ್ದ ಗುಹೆಯಲ್ಲಿದ್ದ ರಾಜನ ಜಾಗ ಹುಡುಕುವಲ್ಲಿ ಎಲ್ಲೆಲ್ಲೂ ಸಂಚರಿಸುವ ಪ್ರೇತಾತ್ಮ ಯಾಕೆ ವಿಫಲವಾಗುತ್ತದೆ? ಚಿತ್ರಪಟ ತಂದ ಮಾತ್ರಕ್ಕೆ ಇತರ ಅಮಾಯಕರನ್ನು ಯಾಕೆ ನಾಗವಲ್ಲಿ ಕಾಡುತ್ತಾಳೆ? ನಾಗವಲ್ಲಿ ಚಿತ್ರ ಬಿಡಿಸುವ ಭಾವನಾ ಅನುಮಾನ ಬರುವ ಹಾಗೆ ವರ್ತಿಸುವುದೇಕೆ? ಹುಚ್ಚಿಯಾಗಿದ್ದ ಲಕ್ಷ್ಮಿ ಗೋಪಾಲಸ್ವಾಮಿ ನಾಗವಲ್ಲಿ ಆವರಿಸಿಕೊಂಡವಳಂತೆ ವರ್ತಿಸುವುದೇಕೆ? ಈ ಪ್ರಶ್ನೆಗಳಿಗೆ ವಾಸುವೇ ಉತ್ತರ ನೀಡಬೇಕು. ಚಿತ್ರಕ್ಕೆ ಅವಶ್ಯಕವಾಗಿ ಬೇಕಿದ್ದ ಸಸ್ಪೆನ್ಸ್ ಮತ್ತು ಥ್ರಿಲ್ ನಿರ್ಮಾಣ ಮಾಡುವಲ್ಲಿ ವಾಸು ವಿಫಲರಾಗಿದ್ದಾರೆ.

ವೇಣುಗೋಪಾಲ್ ಅವರ ಕಲಾವೈಭವ, ಪಿಎಚ್ ಕೆ ದಾಸ್ ಅವರ ಸಿನೆಮಾಟೋಗ್ರಫಿ, ಸೇತು ಅವರ ಸೌಂಡ್ ಎಫೆಕ್ಟ್ ಅತ್ಯುತ್ತಮವಾಗಿದೆ. ಆದರೆ, ಅವುಗಳಿಗೆ ಪೂರಕವಾಗುವಂಥ ಸನ್ನಿವೇಶ ಸೃಷ್ಟಿಸುವಲ್ಲಿ ವಾಸು ಹಿಂದೆ ಬಿದ್ದಿದ್ದಾರೆ. ಗುರುಕಿರಣ್ ಅವರ ಸಂಗೀತವೂ ಮಾಧುರ್ಯದ ಹೊಳಪನ್ನು ಕಳೆದುಕೊಂಡಿದೆ. ಸಂಕಲನಕಾರ ಸುರೇಶ್ ಅರಸ್ ಕೂಡ ಅಷ್ಟು ಆಸ್ಥೆಯಿಂದ ಕೆಲಸ ಮಾಡಿಲ್ಲ. ನಟನಾ ವಿಭಾಗದಲ್ಲಿಯೂ ಕೋಮಲ್ ಕಾಮಿಡಿ ಮತ್ತು ನಾಗವಲ್ಲಿ ವಿಮಲಾ ರಾಮನ್ ಅದ್ಭುತ ನರ್ತನ ಹೊರತುಪಡಿಸಿದರೆ ಭಾವನಾ, ಸಂಧ್ಯಾ, ರಮೇಶ್ ಭಟ್, ಶ್ರೀನಿವಾಸ ಮೂರ್ತಿ, ವಿನಯಾ ಪ್ರಸಾದ್ ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೋಳು ಉಪ್ಪಿನಕಾಯಿಗಳು. ನಾಗವಲ್ಲಿಯ ಹೊಡೆತಕ್ಕೆ ಮೆಟ್ಟಿಲ ಮೇಲಿಂದ ಎಗರಿ ಬೀಳುವ ಮಂತ್ರವಾದಿ ಅವಿನಾಶ್ ಪಾತ್ರ ಪೋಷಣೆ ನಿಜಕ್ಕೂ ಹಾಸ್ಯಾಸ್ಪದ.

ಒಟ್ಟಿನಲ್ಲಿ ಹೇಳುವುದಾದರೆ, ವಿಷ್ಣುವನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿ ಪ್ರೇಕ್ಷಕನೇ ಆಪ್ತರಕ್ಷಕನಾದರೆ ನಿರ್ಮಾಪಕ ಕೃಷ್ಣ ಕುಮಾರ್ ಬಚಾವ್.

English summary
Kannada movie Aptharakshaka review. Vishnuvardhan excels in his role but director P Vasu disappoints.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada