For Quick Alerts
  ALLOW NOTIFICATIONS  
  For Daily Alerts

  ಕಳ್ಳರ ಸಂತೆ:ಲಂಚ ಸಾಮ್ರಾಜ್ಯಕ್ಕೆ ಕನ್ನಡಿ

  By *ವಿನಾಯಕರಾಮ್ ಕಲಗಾರು
  |

  ಒಬ್ಬ ದುಡ್ಡಿಗೆ ನಂದಿ ಬೆಟ್ಟವನ್ನೇ ಮೂರು ತಿಂಗಳು ಬಿಟ್ಟುಕೊಡ್ತಾನೆ. ಇನ್ನೊಬ್ಬ ಲಂಚಾವತಾರ' ತಾಳಿ, ವಿಧಾನ ಸೌಧವನ್ನೇ ಕೊಡ್ತೀನಿ ಅಂತಾನೆ. ಮತ್ತೊಬ್ಬ ಎರಡು ಲಕ್ಷ ಕೊಟ್ರೆ ಮಾತ್ರ ಲೆಕ್ಚರರ್ ಪೋಸ್ಟ್ ಅಂತಾನೆ...ಅಲ್ಲಿಗೆ ಉದಯವಾಯಿತು ನಮ್ಮ... ಇಲ್ಲಿ ಎಲ್ಲಾ ಇದೆ. ಪೊಲೀಸರ ದಬ್ಬಾಳಿಕೆ, ರಾಜಕಾರಣಿಗಳ ದೊಂಬರಾಟ, ಭ್ರಷ್ಟ ಅಧಿಕಾರಿಗಳ ಬದುಕು, ಕಷ್ಟ ಪಡುವವರ ಬಯಲಾಟ...ಹೀಗೆ ಇಡೀ ಕತೆ ನಮ್ಮನ್ನು ವಿಧ - ವಿಧಾನ - ರೀತಿಯಲ್ಲಿ ಮನರಂಜಿಸುತ್ತದೆ.

  ಮಧ್ಯೆ ಎಲ್ಲೋ ಒಂದು ಕಡೆ ವಿಡಂಬನೆಯಲ್ಲಿ ವಿಲೀನವಾದ ಅನುಭವ. ಇಡೀ ಪ್ರಪಂಚವನ್ನೇ ಸುತ್ತಿ ಬಂದ ಧಾವಂತ. ಮೋಸ, ವಂಚನೆಗಳು ಅನಾಯಾಸವಾಗಿ ಅನಾವರಣಗೊಳ್ಳುತ್ತವೆ. ಮತ್ತೊಮ್ಮೆ ಮಾಸ್ಟರ್ ಹಿರಣ್ಣಯ್ಯ ನೆನಪಾಗುತ್ತಾರೆ. ಚಿತ್ರಕತೆ ಇಲ್ಲಿಂದ ಆರಂಭಗೊಂಡು, ಎಲ್ಲ ತತ್ತ್ವದೆಲ್ಲೆ ಮೀರಿ ಮತ್ತೆಲ್ಲೋ ಅಂತ್ಯವಾಗುತ್ತದೆ. ಬಡ, ಜಾಣ ಹುಡುಗನೊಬ್ಬನ ಕರುಣಾಜನಕ ಕತೆಗೆ ಮುನ್ನುಡಿ ಬರೆಯುತ್ತದೆ.

  ಲಂಚ ಸಾಮ್ರಾಜ್ಯ'ಕ್ಕೆ ಕನ್ನಡಿ ಹಿಡಿಯುತ್ತದೆ... ಚಿತ್ರದ ಪ್ರಧಾನ ಬಿಂದು ಯಶ್. ಕತೆ ಎಂಬ ಗಾಳಿ ಪಟದ ಸೂತ್ರಧಾರಿಯೇ ಆತ. ಅವನಿಂದಲೇ... ಅವನಿಂದಲೇ... ಕತೆಯೊಂದು ಶುರುವಾಗಿದೆ... ಅವನ ಪಾತ್ರ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋದಂತೆ ಪ್ರೇಕ್ಷಕ ಆ ಪಾತ್ರದ ಪರಕಾಯ ಪ್ರವೇಶ ಮಾಡುತ್ತಾನೆ. ಇದು ಖಂಡಿತ ಉತ್ಪ್ರೇಕ್ಷೆ ಅಲ್ಲ!

  ಸಮಾಜದ ಆಗುಹೋಗುಗಳ ಬಗ್ಗೆ ಅಲ್ಲಲ್ಲಿ ಚರ್ಚೆ, ಮಧ್ಯದಲ್ಲಿ ಒಂದಷ್ಟು ಪ್ರೇಮ ಪರ್ವ. ಹಂತ ಹಂತವಾಗಿ ಆಂಗಲ್ ಬದಲಿಸುತ್ತಾ ಹೋಗುವ ಚಿತ್ರಕತೆ. ಪಂಚ್ ಕೊಡುವ ಡೈಲಾಗ್ ಗಳು. ಅಲ್ಲೇ ಒಂದಷ್ಟು ವ್ಯಂಗ್ಯ... ಹೀಗೆ ಇಡೀ ಸಿನಿಮಾ ಒಂದು ದೂರ ತೀರ ಯಾನ. ಒಬ್ಬ ಮಹಿಳೆಯಾಗಿ ಇಂಥದ್ದೊಂದು ಕತೆಯನ್ನು ನಿಭಾಯಿಸಿ, ಯಶ ಗಳಿಸುವುದು ಸುಲಭದ ಮಾತಲ್ಲ.

  ದ್ವಿತಿಯಾರ್ಧದಲ್ಲಿ ಬರುವ ಕ್ಯಾಬಿನೆಟ್ ಮೀಟಿಂಗ್‌ನ ದೃಶ್ಯಗಳಂತೂ ಚಿಂದಿ. ದುಂಡುಮೇಜಿನ ಸಭೆಯಲ್ಲಿ ಹತ್ತಾರು ರಾಜಕಾರಣಿಗಳು ಕುಳಿತು ವಟವಟ ಎನ್ನುವ ದೃಶ್ಯವೊಂದೇ ಸಾಕು, ಸುಮನಾ ಸಾಮರ್ಥ್ಯವನ್ನು ಬಯಲಿಗೆಳೆಯಲು... ಯಶ್ ಅಭಿನಯ ಕೊನೆ ಕೊನೆಗೆ ಅಚ್ಚರಿ ಮೂಡಿಸುತ್ತದೆ. ಶ್ರೀಧರ್ ಸಂಭಾಷಣೆಯನ್ನು ಅರಗಿಸಿಕೊಂಡು, ಮುಲಾಜಿಲ್ಲದೇ ಹೇಳುವುದು ಕಷ್ಟಸಾಧ್ಯ. ಅದರಲ್ಲಿನ ಒಳಾರ್ಥ ಅರಿತಾಗ ಮಾತ್ರ ಹಾಗೆ ನಟಿಸಲು ಸಾಧ್ಯ. ಯಶ್ ಅಲ್ಲಿ ಯಶ ಕಂಡಿದ್ದಾರೆ. ನಟನೆ, ನೃತ್ಯ, ಹೊಡೆದಾಟ, ಮಾತುಗಾರಿಕೆ ಎಲ್ಲದಕ್ಕೂ ಯಶ್ ಈಸ್ ಎಸ್.

  ಹಸಿರಿನ ಎಲೆಗಳ ಮಧ್ಯೆ ಅರಳಿದ ಕೆಂದಾವರೆ = ಹರಿಪ್ರಿಯಾ. ನಟನೆಯಲ್ಲಿ ಕೊಂಚ ಚೇತರಿಕೆ ಕಂಡರೆ ಹರಿ ಕನ್ನಡದಲ್ಲಿ ನಾಯಕಿಯಾಗಿ ಇನ್ನಷ್ಟು ವರ್ಷ ನಿಲ್ಲುತ್ತಾರೆ ಎನ್ನುವು ದನ್ನು ಸಂತೆ ನಿರೂಪಿಸಿದೆ. ಸುಂದರನಾಥ ಸುವರ್ಣ ವರ್ಣಮಯ ದೃಶ್ಯಗಳನ್ನು ಹೆಣೆದಿದ್ದಾರೆ. ಕೆಲವು ಕಡೆ ಸೆರೆ ಹಿಡಿದಿರುವ ಸನ್ನಿವೇಶಗಳು, ಮಂದಬೆಳಕಿನಲ್ಲಿ ಮೂಡಿಸಿದ ಚಿತ್ರಾವಳಿಗಳು ಇಷ್ಟವಾಗುತ್ತವೆ. ವಿ.ಮನೋಹರ್ ಯಾವ ಕೆಟಗರಿಯ ಚಿತ್ರಗಳಾದರೂ ಅದರಲ್ಲಿ ಹೊಸತನ ತೋರುತ್ತಾರೆ ಎನ್ನುವುದು ಸಂತೆಯಲ್ಲಿ ಸಾಬೀತಾಗಿದೆ. ಮೂರು ಹಾಡುಗಳು ಮುದ ನೀಡುತ್ತವೆ. ಕಳೆದು ಹೋದ ಖಾಲಿ ಪುಟವ ಮರಳಿ ತಂದು ಕಾವ್ಯ ಬರೆದೆ...ಹಾಡು ಮತ್ತೆ ಮತ್ತೆ ಕಿವಿ ತುಂಬುತ್ತದೆ.

  ರೀರೆಕಾರ್ಡಿಂಗ್‌ನಲ್ಲಿನ ವಿಶೇಷತೆ ಎಂದರೆ ನಟರ ಒಂದೊದು ಹಾವಭಾವಕ್ಕೂ ಒಂದೊಂದು ಥರದ ಸಂಗೀತ ಸಾಧನ ಬಳಸಿ ಮ್ಯೂಸಿಕ್ ಕೊಟ್ಟಿರುವುದು. ರಂಗಾಯಣ ರಘು ಸಿಎಮ್ ಪಾತ್ರದಲ್ಲಿ ಮಿಂಚಿಂಗೋ ಮಿಂಚಿಂಗು. ಜೈ ಜಗದೀಶ್, ಶೋಭರಾಜ್, ಕಿಶೋರ್, ಅಚ್ಯುತ, ದತ್ತಣ್ಣ, ಜಿ.ಕೆ.ಗೋವಿಂದರಾಜ್...ಈ ರೀತಿ ತಾರೆಗಳ ತಾಂಡವವೇ ಇದೆ. ಸಂಕಲನದಲ್ಲಿ ಕೊಂಚ ಸುಧಾರಣೆ ಬೇಕಿತ್ತು. ಗಾಂಧೀಜಿ ಹಾಗೂ ಚಾಣಕ್ಯನ ಹೆಸರನ್ನು ಸಂಭಾಷಣೆಯಲ್ಲಿ ಬಳಸಿರುವುದು ಅಷ್ಟು ಸಮಂಜಸ ಎನಿಸುವುದಿಲ್ಲ. ಶ್ರೀಧರ್ ಇಲ್ಲಿ ಯಾರೊಬ್ಬರನ್ನೂ ಬಿಟ್ಟಿಲ್ಲ... ಸಾಹಿತಿಗಳು, ರಾಜಕಾರಣಿಗಳು(ಅವರ ಗರ್ಲ್ ಫ್ರೆಂಡ್‌ಗಳು) ಪುಡಿ, ಹಿಡಿ ರೌಡಿಗಳು, ಪ್ರೇಮಿಗಳು, ಸ್ವಾರ್ಥಿಗಳು, ಮೋಸಗಾರರು, ವಿಶ್ವ ಭೂಪಟದ ನಾನಾ ಬಗೆಯ ವಿಷಯ ಲಂಪಟರು... ಎಲ್ಲರನ್ನೂ ಒಮ್ಮೆ ನೆನಪಿಸುತ್ತಾರೆ. ಒಟ್ಟಾರೆ ಒಂದು ಅಪ್ಪಟ ಸ್ವಮೇಕ್ ಹಾಗೂ ಸವಾಲಿನ ಚಿತ್ರವನ್ನು ತೋರಿಸುತ್ತಾರೆ. ನಿಮ್ಮ ಮನಸನ್ನು ಕದಡುತ್ತಾರೆ...ಅಂಡ್ ಗೆಲ್ಲುತ್ತಾರೆ..ಚೀಯರ್‍ಸ್....

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X