»   »  ವಿಮರ್ಶೆ:ಥ್ರಿಲ್ಲರ್ ಸೂಪರ್ ಉಪ್ಪಿ ಬಂಪರ್!

ವಿಮರ್ಶೆ:ಥ್ರಿಲ್ಲರ್ ಸೂಪರ್ ಉಪ್ಪಿ ಬಂಪರ್!

Subscribe to Filmibeat Kannada

ಚಿತ್ರ: ರಜನಿ
ಚಿತ್ರಕತೆ, ಸಾಹಸ ಮತ್ತು ನಿರ್ದೇಶನ: ಥ್ರಿಲ್ಲರ್ ಮಂಜು
ಸಂಗೀತ: ಹಂಸಲೇಖ
ಸಂಭಾಷಣೆ: ರಾಮ್‌ನಾರಾಯಣ್
ಛಾಯಾಗ್ರಹಣ: ಜನಾರ್ದನ್ ಬಾಬು
ಸಂಕಲನ: ಗೋವರ್ಧನ್
ತಾರಾಗಣ: ಉಪೇಂದ್ರ, ಆರತಿ ಛಾಬ್ರಿಯಾ, ರಂಗಾಯಣ ರಘು, ತುಳಸಿ ಶಿವಮಣಿ, ದೊಡ್ಡಣ್ಣ, ಶರತ್ ಲೋಹಿತಾಶ್ವ, ರಮೇಶ್ ಭಟ್, ಮಂಡ್ಯ ರಮೇಶ್, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮುಕುಲ್ ದೇವ್ ಮುಂತಾದವರು.

ಉಪೇಂದ್ರ ಅದೃಷ್ಟವೇ ಹಾಗಿದೆಯೊ ಏನೋ ಗೊತ್ತಿಲ್ಲ. ಇನ್ನೇನು ಉಪ್ಪಿ ಸಿನಿ ಜೀವನ ಉಪ್ಪಿನಂಗಡಿ ಹೊಳೆಯಲ್ಲಿ ಮುಳುಗಿತು ಎನ್ನುವ ಹೊತ್ತಿಗೆ ಅವರ ಯಾವುದೋ ಒಂದುಚಿತ್ರವನ್ನು ಜನ ಅಪ್ಪಿಕೊಳ್ಳುತ್ತಾರೆ. ಎರಡು ವರ್ಷಕ್ಕೆ ಒಂದು ಚಿತ್ರ ಕಚ್ಚಿಕೊಳ್ಳುತ್ತದೆ. ಅದಕ್ಕೆ ವರ್ಷದ ಹಿಂದೆ ಬಂದ ಬುದ್ಧಿವಂತ ಚಿತ್ರವೇ ಸಾಕ್ಷಿ. ಹತ್ತಾರು ತೋಪುಕೊಟ್ಟ ಹಂತದಲ್ಲೇ ಅದು ಮತ್ತೆ ಉಪ್ಪಿಯನ್ನು ಎತ್ತಿ ಹಿಡಿಯಿತು. ನಂತರ ಮತ್ತಷ್ಟು ಸೋಲು ಕಂಡರೂ ಆ ಸೈಡ್ ಎಫೆಕ್ಟ್ ಇದ್ದೇ ಇತ್ತು!

*ದೇವಶೆಟ್ಟಿ./ಕಲಗಾರು

ಈಗ ಉಪ್ಪಿಗೆ ಮರುಜೀವ ನೀಡಲು ರಜನಿ ಚಿತ್ರ ಬಂದಿದೆ. ಸಾರಥಿ ಥ್ರಿಲ್ಲರ್ ಮಂಜು ಉಪ್ಪಿಗೆ ಮರುಜನ್ಮ ನೀಡುವಲ್ಲಿ ಸಫಲರಾಗಿದ್ದಾರೆ. ಉಪ್ಪಿಯನ್ನು ಮತ್ತೆ ಪಲ್ಲಕ್ಕಿಗೆ ತಂದು ಕೂರಿಸುವಲ್ಲಿ ರಜನಿ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಒಂದು ಅದೂಟಛಿರಿ ಚಿತ್ರ ಹೇಗಿರಬೇಕು? ರಜನಿ ಚಿತ್ರದ ಹಾಗಿರಬೇಕು ಎಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು. ಇಲ್ಲಿ ಹತ್ತಾರು ಲಾರಿಗಳು, ಐವತ್ತು ಅರವತ್ತು ಆಟೊಗಳು, ನೂರಾರು ಕಾರುಗಳು, ಅದರ ಸುತ್ತ ದುಪ್ಪಟ್ಟು ದುಪ್ಪಟ್ಟು ಜನಗಳು. ಕನ್ನಡದ ಮಟ್ಟಿಗೆ ಈ ಮಟ್ಟದ ಖರ್ಚು ನಿಜಕ್ಕೂ ಶ್ಲಾಘನೀಯ.

ನಿರ್ಮಾಪಕ ರಾಮು ಮತ್ತೊಮ್ಮೆ ಎಕೆ 47, ಲಾಕಪ್‌ಡೆತ್ ಚಿತ್ರಗಳನ್ನು ನೆನಪಿಗೆ ತರುತ್ತಾರೆ. ಅದಕ್ಕಿಂತ ಹೆಚ್ಚಾಗಿ ಥ್ರಿಲ್ಲರ್ ಮಂಜು ಚಿತ್ರವನ್ನು ನಿಭಾಯಿಸಿರುವ ಬಗ್ಗೆ ಹೇಳಬೇಕು. ಇತ್ತೀಚೆಗೆ ಬಂದ ಚಿತ್ರಗಳಲ್ಲಿ ಅದ್ದೂರಿತನ ಇರುವುದಿಲ್ಲ ಎಂದಲ್ಲ. ಆದರೆ ಅದನ್ನು ಸೀಮಿತ ಅವಧಿಯಲ್ಲಿ, ಚಿತ್ರಕತೆಗೆ ಹೊಂದಿಕೊಳ್ಳುವಂತೆ, ವಿಭಿನ್ನ ರೀತಿಯಲ್ಲಿ ತೋರಿಸುವ ಶೈಲಿ ಕೆಲವು ನಿರ್ದೇಶಕರಿಗೆ ಗೊತ್ತಿರುವುದಿಲ್ಲ. ಬೋರ್ಗಲ್ಲ ಮೇಲೆ ನೀರು ಸುರಿದ ಹಾಗೆ ಕಾಸು ಸುರಿಯುತ್ತಾರೆ. ಅದು ಮೂರೇ ವಾರದಲ್ಲಿ ಕಾವೇರಿ ತಾಯಿಯ ಕಾಲುಂಗುರವಾಗಿಬಿಡುತ್ತದೆ, ಅಷ್ಟೇ!

ಆದರೆ ರಜನಿಯಲ್ಲಿ ಹಾಗಾಗಿಲ್ಲ. ಇಲ್ಲಿ ಎಲ್ಲವೂ ಎದ್ದು ಕಾಣುತ್ತವೆ. ಆಟೊಗಳು ಪಲ್ಟಿಯಾಗುತ್ತವೆ. ಕಾರುಗಳು ಆಕಾಶಕ್ಕೆ ಮುತ್ತಿಡುತ್ತವೆ. ಲಾರಿಗಳು ಲಗಾಟಿ ಹೊಡೆಯುತ್ತವೆ. ಇವೆಲ್ಲವನ್ನೂ ನೋಡನೋಡುತ್ತಾ ಮತ್ತಷ್ಟು ಹಾಸ್ಯ, ಮನರಂಜನೆ, ಜೋಕು ಜೋಕಾಲಿ, ಮನಸು ರಂಗೋಲಿ... ಇದು ತೆಲುಗಿನ ಕೃಷ್ಣ ಚಿತ್ರದ ಕನ್ನಡ ರೂಪಾಂತರ.ಮೂಲ ಕತೆಯೇ ಹಾಗಿರುವುದರಿಂದ ಚಿತ್ರಕತೆಗೆ ಇನ್ನಷ್ಟು ಓಘ ಸಿಕ್ಕಿದೆ. ಹಾಗಂತ ಎಲ್ಲಾ ಹಿಟ್ ರಿಮೇಕ್ ಗಳೂ ಗೆಲ್ಲುತ್ತೆ ಎಂದಲ್ಲ. ಅದು ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಮೂಡಿಬರುವುದು ನೂರಕ್ಕೆ, ಸಾವಿರಕ್ಕೆ ಒಂದು ಮಾತ್ರ. ರಜನಿ ಆ ನೂರರಲ್ಲಿ ಒಂದು ಎನ್ನಬಹುದು!

ಹಾಸ್ಯ, ಕತೆಯ ಓಟಕ್ಕೆ ಸಾಥ್ ನೀಡುತ್ತದೆ. ದೃಶ್ಯಗಳು ಒಂದರ ಹಿಂದೆ ಒಂದರಂತೆ ಚಕಚಕ ಸಾಗುತ್ತವೆ. ಮೊದಲಾರ್ಧ ಮುಗಿಯುವ ಪರಿ ಅಚ್ಚರಿ ಮೂಡಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಲಿಂಕ್ ಕೊಡುವಲ್ಲಿಚಿತ್ರಕತೆ ಸಹಾಯ ಮಾಡುತ್ತದೆ. ರಂಗಾಯಣ ರಘು ಇಡೀ ಮೊದಲಾರ್ಧವನ್ನು ಕೇವಲ ಮಾತಿನ ಶಾಯರಿಯಿಂದ ನುಂಗಿ ಹಾಕುತ್ತಾರೆ. ರಘು ಸಾಮರ್ಥ್ಯವನ್ನು ಬಳಸಿಕೊಳ್ಳುವವರು ಮಾತ್ರಗೆಲ್ಲುತ್ತಾರೆ ಎನ್ನುವುದು ಇಲ್ಲಿ ಸಾಬೀತಾಗಿದೆ. ಆತ ನಡೆದರೆ ಹಾಸ್ಯ, ನಿಂತರೆ ಕಾಮಿಡಿ, ವಿಚಿತ್ರವಾಗಿ ಲುಕ್ ಕೊಟ್ಟರೆ ವಿನೋದ. ಮಾತನಾಡಿದರೆ ಮನರಂಜನೆ.ಒಟ್ಟಾರೆ ಅವರೊಬ್ಬ ವಿಕಟರೂಪಿ... ರಘು ಇಲ್ಲಿ ಹಾಸ್ಯದ ಜತೆ ಜತೆಯಲ್ಲಿ ಪೋಷಕ ಪಾತ್ರಕ್ಕೂ ಜೀವ ತುಂಬಿದ್ದಾರೆ.

ದ್ವಿತೀಯಾರ್ಧದಲ್ಲಿ ಚಿತ್ರಕತೆ ಕುಂಟಲು ಶುರುಮಾಡಿತು ಎನ್ನುವ ಹೊತ್ತಿಗೆ ಸಾಧು ಮಹಾರಾಜ್ ಎಂಟ್ರಿ ಕೊಡುತ್ತಾರೆ. ಬುಲೆಟ್ ಪ್ರಕಾಶ್ ಸಾಥ್ ನೀಡುತ್ತಾರೆ. ಮತ್ತೆ ಮಸ್ತಿ, ಮಜಾ, ಮೋಜು...ದೊಡ್ಡಣ್ಣ ಬಹಳ ದಿನಗಳ ನಂತರ ದೊಡ್ಡ ಪಾತ್ರ ಮಾಡಿದ್ದಾರೆ. ಕಿಲ್ಲರ್ ವೆಂಕಟೇಶ್, ರಮೇಶ್ ಭಟ್, ಮಂಡ್ಯ ರಮೇಶ್, ಸತ್ಯಜಿತ್, ತುಳಸಿ ಶಿವಮಣಿ ಮೊದಲಾದವರು ತಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸಿ, ಜೀವ ತುಂಬಿದ್ದಾರೆ. ಬಾಲಿವುಡ್‌ನ ಮುಕುಲ್ ದೇವ್‌ಗಿಂತ ಚೆನ್ನಾಗಿ ಸ್ಯಾಂಡಲ್‌ವುಡ್‌ನ ಶರತ್ ಲೋಹಿತಾಶ್ವ ನಟಿಸಿದ್ದಾರೆ.

ರಾಮ್‌ನಾರಾಯಣ್ ಸಂಭಾಷಣೆ ಉಪ್ಪಿ ಚಿತ್ರಕ್ಕೆ ಹೊಂದಿಕೊಳ್ಳುತ್ತದೆ. ಹಿಂದೆ ಬುದಿಟಛಿವಂತದಲ್ಲೂ ರಾಮ್ ಕೈಚಳಕ ತೋರಿಸಿದ್ದರು. ಈಗ ಅದು ಮತ್ತೆ ಮರುಕಳಿಸಿದೆ. ಪ್ರಾಸಬದ್ಧ ವಾಕ್ಯಗಳು ಚಪ್ಪಾಳೆಗೆ ನಾಂದಿ ಹಾಡು ತ್ತವೆ. ಹಾಸ್ಯದ ಟೈಮಿಂಗ್ ಇಷ್ಟವಾಗುತ್ತದೆ. ಉಪ್ಪಿ ಎಂದಿನಂತೆ ಸುದೀರ್ಘ ಹಾಗೂ ಸುಗಮವಾಗಿ ನಟಿಸಿದ್ದಾರೆ. ಆದರೆ ಅವರ ಬೆನ್ನು ಹಾಗೂ ಎದೆಯ ಭಾಗ ಅದೇಕೋ ಅಗತ್ಯಕ್ಕಿಂತ ಹೆಚ್ಚು ಹಿಗ್ಗಿದ ಹಾಗಿದೆ. ಕೆಲವೆಡೆ ಗೂನಾದಂತೆ ಕಾಣುತ್ತಾರೆ. ಕುಣಿಯುವಾಗ, ಫೈಟ್ ಮಾಡುವಾಗ ಅದು ಗೊತ್ತಾಗುತ್ತದೆ. ನಾಯಕಿ ಆರತಿ ಛಾಬ್ರಿಯಾ ಪಕ್ಕಾ ಗ್ಲ್ಯಾಮರ್ ಬೊಂಬೆ. ಮಾದಕ ಮೈಮಾಟವಷ್ಟೇ ಆಕೆಯ ಬಂಡವಾಳ. ಸಿಂಗಾರಗೊಂಡಬಿಂಕ,ವಯ್ಯಾರದ ಡೊಂಕು ಆಕೆಯ ಆಸ್ತಿ.ಥಳುಕು ಜಾಸ್ತಿ, ಬಳುಕಿನ ಜತೆ ದೋಸ್ತಿ. ಅಭಿನಯ ಮಾತ್ರ ನಾಸ್ತಿ. ಮುಖದಲ್ಲಿ ಭಾವನೆಗೆ ಇಂಚಿನಷ್ಟೂ ಜಾಗವಿಲ್ಲ... ಆಕೆನಡೆದರೆ ನೆಲ ನಾಚುತ್ತದೆ. ನಕ್ಕರೆ ಸಕ್ಕರೆ ಕರಗುತ್ತದೆ!

ಛಾಯಾಗ್ರಹಣ ಅದ್ದೂರಿತನಕ್ಕೆ ಕನ್ನಡಿ ಹಿಡಿಯುತ್ತದೆ. ಹೊಡೆದಾಟವೊಂದಕ್ಕೆ ಬಳಸಲಾಗಿರುವ ಹದಿನೈದು ಲಕ್ಷದ ಬಳೆ ಬಜಾರಿನ ಸೆಟ್ ಕಣ್ಣು ಕುಕ್ಕುತ್ತದೆ. ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆಯಲ್ಲಿ ಮಾಸ್ಟರ್ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಹಂಸಲೇಖ ಸಂಗೀತದಲ್ಲಿ ಇನ್ನಷ್ಟು ಸತ್ವ ಇರಬೇಕಿತ್ತು. ಸಂಗೀತದಅಬ್ಬರದ ನಡುವೆ ಸಾಹಿತ್ಯ ಹುದುಗಿ ಹೋಗಿದೆ. ಹಂಸ್ ಇನ್ನಷ್ಟು ಶ್ರಮವಹಿಸಿದ್ದರೆ ಮತ್ತಷ್ಟು ಗುಣಮಟ್ಟದ ಗೀತೆಗಳನ್ನು ಕೊಡಬಹುದಿತ್ತು. ಆದರೆ ಕೊನೆಗೆ ಬರುವತಿರಬೋಕಿ ಕಣ್ಣುಗಳು... ಹಾಡು ಪಡ್ಡೆ ಹುಡುಗರ ಪಾಲಿನ ಪರಮಾನ್ನ, ಚಿತ್ರಾನ್ನ ಚಿತ್ರಾನ್ನ...ಹಾಗೇ ಟೂ ಪೀಸಾ, ಒನ್ ಪೀಸಾ, ಪೀಸ್ ಲೆಸ್ಸಾ...ಎಂದು ಥ್ರಿಲ್ಲರ್ ಬರೆದ ಸಾಲನ್ನು ಉಪ್ಪಿ ಹೇಗೆ ಒಪ್ಪಿಕೊಂಡರೊ ಎನ್ನುವುದು ಹಳಸಿದ ಅನ್ನ !

ಒಂದು ಹಾಡು ಅನಗತ್ಯ. ಕಲಾಸಿಪಾಳ್ಯ, ಶಿವಾಜಿನಗರ ಎಂಬ ಸಾಹಿತ್ಯಕ್ಕೆ ಫಾರಿನ್ ದೃಶ್ಯಗಳ ಜೋಡಣೆ ಹಾಸ್ಯಾಸ್ಪದ. ಹೀಗೆ ಅಲ್ಲಲ್ಲಿ ಸಣ್ಣ ಪುಟ್ಟ ತಪ್ಪುಗಳಿದ್ದರೂ ನೂರಕ್ಕೆ ನೂರು ಪರ್ಸೆಂಟ್ ಮನರಂಜನೆಗೆ ಮೋಸವಿಲ್ಲ. ಆ ಮಟ್ಟಿಗೆ ಇಲ್ಲಿ ಉಪ್ಪಿ ನಿಜಕ್ಕೂ ರಿಯಲ್‌ಸ್ಟಾರ್, ಥ್ರಿಲ್ಲರ್ ಮಂಜು ಆಕ್ಷನ್ ಸ್ಟಾರ್, ಆರತಿ ಟ್ವಿಂಕಲ್ ಸ್ಟಾರ್, ರಂಗಾಯಣ ರಘು ಹ್ಯೂಮರ್ ಸ್ಟಾರ್, ನಿರ್ಮಾಪಕ ರಾಮು ಕ್ರೋರ್‌ಸ್ಟಾರ್... ಒಟ್ಟಾರೆ ಸೂಪರ್ ಸ್ಟಾರ್ ಕಣೋ ಕಾಂತಾ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada