»   » ಪೃಥ್ವಿ: ಬೆಳ್ಳಿಪರದೆಗೆ ಬಳ್ಳಾರಿ ಗಣಿ ರಾಜಕೀಯ

ಪೃಥ್ವಿ: ಬೆಳ್ಳಿಪರದೆಗೆ ಬಳ್ಳಾರಿ ಗಣಿ ರಾಜಕೀಯ

Posted By: *ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ಹೊಡಿ ಬಡಿ ಕಡಿ ಲಾಂಗು ಮಚ್ಚು ಚಿತ್ರಗಳಿಂದ ಕಂಗಾಲಾಗಿದ್ದ ಕನ್ನಡ ಪ್ರೇಕ್ಷಕರು 'ಪೃಥ್ವಿ' ಚಿತ್ರದ ಮೂಲಕ ಸತ್ವಭರಿತ ಕತೆಯನ್ನುನಿರೀಕ್ಷಿಸಬಹುದು. ಬಳ್ಳಾರಿ ಗಣಿಧಣಿಗಳ ದರ್ಪ, ದೌರ್ಜನ್ಯ, ರಾಜಕೀಯ, ದಗಲ್ಬಾಜಿತನ, ಐಶಾರಾಮಿ ಬದುಕಿಗೆ ಕನ್ನಡಿ ಹಿಡಿಯುತ್ತದೆ 'ಪೃಥ್ವಿ' ಚಿತ್ರ. ಪ್ರಸಕ್ತ ಕರ್ನಾಟಕದ ರಾಜಕೀಯ ಚಿತ್ರಣವನ್ನು ಜಾಕಬ್ ವರ್ಗೀಸ್ ಸಮರ್ಥವಾಗಿ ತೆರೆಗೆ ತಂದಿದ್ದಾರೆ. ಯುವ ಜಿಲ್ಲಾಧಿಕಾರಿಯಾಗಿ ಪುನೀತ್ ರಾಜ್ ಕುಮಾರ್ ಅಭಿನಯ ಪವರ್ ಫುಲ್ ಆಗಿದೆ.

ಗಣಿಗಾರಿಕೆಯಿಂದ ಗಬ್ಬೆದ್ದ ರಸ್ತೆಗಳು, ಕಲುಷಿತವಾದ ಅಂತರ್ಜಲ, ರೋಗರುಜಿನಗಳ ತಾಂಡವ, ಡೈನಮೈಟ್ ಸದ್ದು, ಕರ್ನಾಟಕ ಆಂಧ್ರ ಗಡಿ ವಿವಾದ...ಹೀಗೆ ಒಂದಕ್ಕೊಂದು ಬೆಸೆದುಕೊಂಡ ರಾಜಕೀಯ, ಸಾಮಾಜಿಕ ಬಂಧಗಳು ಚಿತ್ರ ಉದ್ದಕ್ಕೂ ಪ್ರೇಕ್ಷಕನಿಗೆ ಬಳ್ಳಾರಿಯ ನರಕಸದೃಶ ಜೀವನವನ್ನು ತೋರಿಸುತ್ತವೆ.

ಇಂತಿಪ್ಪ ಬಳ್ಳಾರಿ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಯಾಗಿ ಪೃಥ್ವಿ ಕುಮಾರ್ ಅಲಿಯಾಸ್ 'ಪೃಥ್ವಿ' ಅಡಿಯಿಡುತ್ತಾರೆ. ಗಣಿಧಣಿಗಳ ದರ್ಪ, ದೌರ್ಜನ್ಯ ಯುವ ಜಿಲ್ಲಾಧಿಕಾರಿ ಪೃಥ್ವಿ ಮುಂದೆ ನಡೆಯುವುದಿಲ್ಲ. ಗಣಿಧಣಿಗಳ ಬೆದರಿಕೆ, ಬಡಾಯಿಗೆ ಬಗ್ಗುವುದಿಲ್ಲ. ತನ್ನ ಅಧಿಕಾರದ ಪರಿಧಿಯಲ್ಲಿ ಗಣಿಧಣಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುತ್ತಾರೆ.

ಯುವ ಜಿಲ್ಲಾಧಿಕಾರಿಯಾಗಿ ಪುನೀತ್ ಚುರುಕಾದ ಅಭಿನಯ ನೀಡಿದ್ದಾರೆ. ಸತ್ವಭರಿತ ಕತೆಗೆ ಬಿಗಿ ನಿರೂಪಣೆಯಿದೆ. ಚಿತ್ರದಲ್ಲಿ ಎಲ್ಲೂ ಸಾಯಿಕುಮಾರ್ ಅವರ ಪೊಲೀಸ್ ಸ್ಟೋರಿಗಳ ಒಂದೇ ಒಂದು ಎಳೆಯೂ ಮರುಕಳಿಸಿಲ್ಲ.ಅಷ್ಟೋಂದು ನೀಟಾಗಿ ತೆರೆಗೆ ತಂದಿದ್ದಾರೆ ಜಾಕಬ್ ವರ್ಗೀಸ್. ಪಿ.ಸತ್ಯ ಅವರ ಛಾಯಾಗ್ರಹಣ ನವೀನ ರೀತಿಯಲ್ಲಿದೆ.

ಬಳ್ಳಾರಿ ಜಿಲ್ಲಾಧಿಕಾರಿ ಪೃಥ್ವಿಯನ್ನು ಮುಗಿಸುವ ಫೈಟ್ ನ ಮೂಲಕ ಚಿತ್ರ ಆರಂಭವಾಗುತ್ತದೆ. ಬಳಿಕ ಫ್ಲ್ಯಾಶ್ ಬ್ಯಾಕ್ ನಲ್ಲಿ ಕತೆ ಬಳ್ಳಾರಿ ಕಲುಷಿತ ರಾಜಕೀಯಕ್ಕೆ ಹೊರಳುತ್ತದೆ. ಪ್ರೀತಿ, ಪ್ರೇಮ ಮರಸುತ್ತುವ ವರಸೆಗಳು ಚಿತ್ರದಲ್ಲಿಲ್ಲ. ಪ್ರೇಮದ ನಿರೂಪಣೆ ಸಹ ಅಷ್ಟೆ ನೇರ ದಿಟ್ಟ. ''ನಿಮ್ಮನ್ನು ಇಷ್ಟಪಟ್ಟಿದ್ದೇನೆ. ಮದುವೆಯಾಗಬೇಕೆಂದಿದ್ದೇನೆ, ಯೋಚಿಸಿ ಯಾವುದಕ್ಕೂ ಉತ್ತರಿಸಿ'' ಹೀಗೆ ನೇರವಾಗಿ ಹೇಳುವ ನಾಯಕಿಯಾಗಿ ಪಾರ್ವತಿ (ಪಾರ್ವತಿ ಮೆನನ್) ಸಹಜ ಅಭಿನಯ ನೀಡಿದ್ದಾರೆ.

ಈ ಚಿತ್ರದಲ್ಲಿ ಪಾರ್ವತಿ ಅವರ ಕನ್ನಡ ಬಹಳಷ್ಟು ಫಳಗಿದೆ. 'ಮಿಲನ' ಬಳಿಕ ಮತ್ತೊಮ್ಮೆ ತಾವು ಯಶಸ್ವಿ ಜೋಡಿ ಎಂಬುದು 'ಪೃಥ್ವಿ'ಯಲ್ಲಿ ಸಾಬೀತಾಗಿದೆ. ಯುವ ದಂಪತಿಗಳಾಗಿ ಪಾರ್ವತಿ ಮತ್ತು ಪುನೀತ್ ಸಹಜ ಅಭಿನಯ ನೀಡಿದ್ದಾರೆ. ಚಿತ್ರಕತೆಯಲ್ಲಿ ಖಾಸಗಿ ಹಾಗೂ ಸಾಮಾಜಿಕ ಬದುಕುಗಳೆರಡಕ್ಕೂ ಅಷ್ಟೇ ಒತ್ತು ನೀಡಲಾಗಿದೆ.

ಬಿಗಿಯಾದ ನಿರೂಪಣೆ, ಸತ್ವಭರಿತ ಕತೆಯ ಜೊತೆಗೆ ಮಂಜು ಮಾಂಡವ್ಯ ಅವರ ಸಂಭಾಷಣೆ ಪರಿಣಾಮಕಾರಿಯಾಗಿದೆ. ಕೆಲವು ಸ್ಯಾಂಪಲ್ಲುಗಳು, ''ಬಳ್ಳಾರಿಗೆ ಭಗವಂತ ಬಂದ್ರು ಬದಲಾಗಬೇಕು, ಕನಸು ಎಂದರೆ ನಿದ್ದೆಯಲ್ಲಿ ಕಾಣುವುದಲ್ಲ ಗುರಿಮುಟ್ಟಲು ಮಾಡುವ ಪ್ರಯತ್ನ,ಮುಖ್ಯಮಂತ್ರಿ ಸತ್ರು ಅಂತ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಇದೇನು ಆಂಧ್ರ ಪ್ರದೇಶ ಅಲ್ಲ ಕರ್ನಾಟಕ''.

ಯುವ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ಸಂಗೀತ ಆಪ್ತವಾಗಿದೆ.ಒಟ್ಟು ಆರು ಹಾಡುಗಳಲ್ಲಿ ಮೂರು ಹಾಡುಗಳು ಬಳ್ಳಾರಿ ಬಿರುಬಿಸಿಲಿನಲ್ಲಿ ತಂಪೆರೆದಂತಿವೆ.ತಾಂತ್ರಿಕವಾಗಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಅಲ್ಲಲ್ಲಿ ಗಮನಕ್ಕೆ ಬಾರದಷ್ಟು ಕೆಲವೊಂದು ಸಣ್ಣ ತಾಂತ್ರಿಕ ದೋಷಗಳನ್ನು ಮನ್ನಿಸಬಹುದು. ಉದಾ: ಬಾಂಬ್ ಇಟ್ಟು 'ಪೃಥ್ವಿ' ಬೈಕನ್ನು ವಿರೊಧಿಗಳು ಚಿಂದಿ ಮಾಡುತ್ತಾರೆ. ಈ ಘಟನೆಯಲ್ಲಿ ಯಾರಿಗೂ ಏನೂ ತೊಂದರೆಯಾಗುವುದಿಲ್ಲ.ಹೀಗಿದ್ದುಕೊಂಡೂ ಪೃಥ್ವಿ ಆಂಬುಲೆನ್ಸ್ ಗೆ ಫೋನು ಮಾಡುತ್ತಾರೆ. ಬಾಂಬ್ ಸ್ಫೋಟದಲ್ಲಿ ಬೈಕ್ ನಾಶವಾಗಿದ್ದರೂ ಮತ್ತೆ ಮನೆ ಮುಂದೆ ಕಾಣಿಸಿಕೊಳ್ಳುತ್ತದೆ.

ಬಳ್ಳಾರಿಯ ಗಣಿಧಣಿಯಾಗಿ, ರಾಜಕಾರಣಿಯಾಗಿ ಅವಿನಾಶ್ ಗಮನಸೆಳೆಯುತ್ತಾರೆ. ಪುನೀತ್ ಪೋಷಕರಾಗಿ ಶ್ರೀನಿವಾಸಮೂರ್ತಿ, ಪದ್ಮಜಾರಾವ್ ಅಭಿನಯ ತಕ್ಕಮಟ್ಟಿಗಿದೆ. ಸಾಧುಕೋಕಿಲ ಹಾಸ್ಯ ಅನ್ನುವುದಕ್ಕಿಂತಲೂ ಜೋಕ್ಸ್ ಚೆನ್ನಾಗಿವೆ. ಖಳ ನಟನ ಪಾತ್ರದಲ್ಲಿ ಜಾನ್ ಕುಕ್ಕಿನ್ ಗಮನಾರ್ಹ ಅಭಿನಯ ನೀಡಿದ್ದಾರೆ. ಬಳ್ಳಾರಿಯ ದರ್ಪ, ದೌರ್ಜನ್ಯ ಅವರು ಆವಾಹಿಸಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಕೇವಲ ನಿರ್ದೇಶಕರ ನಟ ಮಾತ್ರವಲ್ಲ ನಿರ್ಮಾಪಕರ ಡಾರ್ಲಿಂಗ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

ಬಳ್ಳಾರಿಯಲ್ಲಿ ಇಂದು ಏನು ನಡೆಯುತ್ತಿದೆ.ಹದಗೆಟ್ಟ ರಾಜಕೀಯ ವ್ಯವಸ್ಥೆ, ಗಣಿ ಮಾಫಿಯಾ, ಇದ್ದಕ್ಕಿದ್ದಂತೆ ಜನ ನಾಪತ್ತೆಯಾಗುವುದು, ಬಳ್ಳಾರಿಗೆ ಹೊಸಬರು ಅಡಿಯಿಟ್ಟರೆ ಸಾಕು ಅವರ ಬಗ್ಗೆ ಮಾಹಿತಿ ರವಾನಿಸುವ ಇನ್ ಫಾರ್ಮರ್ಸ್, ಕಂತೆಕಂತೆ ಹಣ ಕೊಟ್ಟು ಮಾಧ್ಯಮಗಳ ಬಾಯಿಗೆ ಬೀಗ ಜಡಿಯುವುದು, ಕಡಕ್ ಜಿಲ್ಲಾಧಿಕಾರಿಗಳ ಎತ್ತಂಗಡಿ ಹೀಗೆ... ಬಳ್ಳಾರಿ ಮುಂದೊಂದು ದಿನ ಹಂಪೆ, ವಿಜಯನಗರ ಸಾಮ್ರಾಜ್ಯಗಳ ಅವಶೇಷಗಳಂತೆ ಉಳಿದುಹೋಗುತ್ತದೆ. ಗಣಿಧಣಿಗಳ ಕಪಿಮುಷ್ಠಿಯಿಂದ ಗಣಿಗಾರಿಕೆ ಸರ್ಕಾರದ ಪಾಲಾಗಬೇಕು ಎಂಬುದು ಚಿತ್ರದ ಸಂದೇಶ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada