»   »  ಪ್ರೀತಿಗಾಗಿ ನಂದ ಹರಿಸಿದ ರಕ್ತ'ಕಾವ್ಯ'

ಪ್ರೀತಿಗಾಗಿ ನಂದ ಹರಿಸಿದ ರಕ್ತ'ಕಾವ್ಯ'

Posted By:
Subscribe to Filmibeat Kannada

ಕಾಲೇಜನ್ನು ಜಸ್ಟ್ ಮುಗಿಸಿ ಕಾಲೇಜಿನಲ್ಲೇ ಕ್ಯಾಂಟೀನ್ ಇಟ್ಟು ಕಾಫಿ, ತಿಂಡಿ ಸಪ್ಲೈ ಮಾಡುತ್ತ ಕಾಲೇಜಿನ ಹುಡುಗಿ ಕಾವ್ಯ(ಸಂಧ್ಯಾ)ಳನ್ನು ಲವ್ ಮಾಡುವ ನಂದ ಅಂದರೆ ಶಿವರಾಜ್ ಕುಮಾರ್ ಅವರನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಳ್ಳುವುದು... ಮೈ ಗಾಡ್! ಶಿವರಾಜ್ ತಮ್ಮ ವಯಸ್ಸಿಗೆ ತಕ್ಕಂಥ, ಅನುಭವಕ್ಕೆ ತಕ್ಕಂಥ, ಇಮೇಜಿಗೆ ತಕ್ಕಂಥ ಪಾತ್ರಗಳನ್ನು ಇನ್ನು ಮೇಲಾದರೂ ಆಯ್ದುಕೊಳ್ಳುವುದು ಕೇವಲ ಉತ್ತಮ ಮಾತ್ರವಲ್ಲ ಅನಿವಾರ್ಯ ಕೂಡ.

* ಪ್ರಸಾದ ನಾಯಿಕ

ದೃಶ್ಯ 1 : ಭೂಗತ ಲೋಕದ ಡಾನ್ ಒಬ್ಬ ತನ್ನ ಪಾಲಿಗೆ ಕಂಟಕವಾಗಿರುವ ನಂದನ ಹಿಂದೆ ತನ್ನ ಜನರನ್ನು ಛೂ ಬಿಟ್ಟಿರುತ್ತಾನೆ. ನಂದನಿಗೆ ಇನ್ನೊಂದು ಭೂಗತ ದೊರೆಯ ಬೆಂಬಲ. ಮುಂದೇನು ಮಾಡಬೇಕೆಂದು ಗೊತ್ತಾಗದೆ ಇಬ್ಬಂದಿಯಲ್ಲಿರುವ ನಂದನಿಗೆ "ಜನ ರಕ್ಷಣೆಗೆಂದು ಪೊಲೀಸರ ಮೊರೆ ಹೋಗುತ್ತಾರೆ. ಪೊಲೀಸರೇ ಭಕ್ಷಕರಾದಾಗ ಭೂಗತ ದೊರೆಯ ರಕ್ಷಣೆ ಕೇಳುತ್ತಾರೆ. ಭೂಗತ ದೊರೆಯೂ ಹಿಂದೆ ಬಿದ್ದಾಗ ಮಚ್ಚು ಹಿಡಿಯಲೇಬೇಕಾಗುತ್ತದೆ" ಎಂದು ನಂದನ ಸ್ನೇಹಿತ 'ಬುದ್ಧಿವಾದ' ಹೇಳುತ್ತಾನೆ. ಅದಕ್ಕೆ ನಂದನ ಪ್ರಾಣದಂತಿರುವ ಸ್ವಂತ ಅಕ್ಕಳೂ 'ಹೌದು ನಂದ ಹೌದು' ಎಂದು ಬೆನ್ನು ತಟ್ಟುತ್ತಾಳೆ.

ದೃಶ್ಯ 2 : ಭೂಗತ ದೊರೆಗಳಿಗೇ ದಾದಾ ಆಗಿರುವ ಬೆಂಗಳೂರು ಪೊಲೀಸ್ ಕಮಿಷನರ್ ಮುಂದೆ ಕುಳಿತಿರುತ್ತಾನೆ. ಪ್ರಜೆಗಳ ರಕ್ಷಣೆ ಮಾಡಬೇಕಾಗಿರುವ ಪೊಲೀಸ್ ಅಧಿಕಾರಿಯೇ ಜನಸಾಮಾನ್ಯನನ್ನು ನಿರ್ನಾಮ ಮಾಡಲು ನಿಂತರೆ ಹೇಗೆ ಅಂತ ಕೊಲೆ, ಸುಲಿಗೆ ಮಾಡಿಯೇ ಭೂಗತ ಲೋಕವನ್ನು ಆಳುವ ದಾದಾ ಪೊಲೀಸ್ ಕಮಿಷನರಿಗೆ ಬುದ್ಧವಾದ ಹೇಳುತ್ತಾನೆ. ಪೊಲೀಸ್ ಕಮಿಷನರ್ ಮರುಮಾತಾಡದೇ ತಲೆ ಆಡಿಸುತ್ತಿರುತ್ತಾನೆ.

ದೃಶ್ಯ 3 : ಅದೇ ದಾದಾ ತನ್ನ ಬಂಟನಿಗೆ ಹಣ, ಮನೆ ನೀಡಿ 'ಮರ್ಯಾದೆ'ಯ ಜೀವನ ಕಲ್ಪಿಸಿಕೊಟ್ಟಿರುತ್ತಾನೆ. ಆದರೆ, ಆ ಬಂಟ ದಾದಾನಿಗೇ ಮೋಸ ಮಾಡುತ್ತಾನೆ. ಇದನ್ನು ತಿಳಿದ ಬಂಟನ ಹೆಂಡತಿ ತನ್ನ ಪುಟ್ಟ ಮಗ ಮತ್ತು ದಾದಾನ ಎದುರಿಗೇ ಗಂಡನನ್ನು ಪಿಸ್ತೂಲು ತೆಗೆದುಕೊಂಡು ಶೂಟ್ ಮಾಡಲು ಪ್ರಯತ್ನಿಸುತ್ತಾಳೆ.

ನಂದ ಚಿತ್ರದ ಕಥೆ ಏನು ಎತ್ತ ಅಂತ ತಿಳಿಸಲು ಈ ಮೂರು ದೃಶ್ಯಗಳೇ ಸಾಕು. ಇದು ಭೈಯಾ, ಭೈಯಾಗಳ ಕಥೆ, ಮದುವೆ ವಯಸ್ಸು ಮೀರಿದ ಅಕ್ಕ ತಮ್ಮನ ಕಥೆ, ನಾಯಕಿಯ ಪ್ರೀತಿಗಾಗಿ ನಾಯಕ ರೌಡಿಗಳ ರುಂಡ ಚೆಂಡಾಡುವ ಕಥೆ, ಇಡೀ ಪೊಲೀಸ್ ಇಲಾಖೆಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಭೂಗತ ದೊರೆಗಳ ಕಥೆ... ಹಾಗೆಂದು ಭೂಗತ ದೊರೆಗಳ ಕೈಗೆ ಅಕಸ್ಮಾತಾಗಿ ಸಿಕ್ಕು ವಿಲವಿಲ ಒದ್ದಾಡುವ ನಾಯಕನ ಕಥೆಯಂತೂ ಅಲ್ಲವೇ ಅಲ್ಲ...

ಇನ್ನೂ ಮುಂದಿನ ಕಥೆ ಹೇಳಲು ಹೋದರೆ ಕೆಂಪು ಅಕ್ಷರಗಳಲ್ಲಿ ಬರೆಯಬೇಕಾದೀತು... ಬರೆದರೆ ಅಕ್ಷರಗಳಿಗೂ ರಕ್ತ ಅಂಟಿಕೊಂಡೀತು!

ಕಥೆಯನ್ನು ಮಿರಿಮಿರಿ ಮುರುಗುವ ದೇಹದಾರ್ಢ್ಯವನ್ನು ತೋರಿಸಿರುವ ಮಾಹೀನ್ ಬರೆದಿದ್ದಾರೆ. ಅವರೇ ನಿರ್ಮಾಪಕರು ಕೂಡ. ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದವರು ಆರ್ ಅನಂತರಾಜು! ಕಥೆ, ಚಿತ್ರಕಥೆ, ನಿರ್ದೇಶನದ ಬಗ್ಗೆ ಬರೆಯುವುದು ವ್ಯರ್ಥ.

ಶಿವ ಶಿವ! : ನಿರ್ಮಾಪಕರ ಹಣೆಬರಹ ಏನೇ ಇರಲಿ ಈ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಬೇಕಿತ್ತಾ? ಸಾಲು ಸಾಲು ಚಿತ್ರಗಳು ಸೋತು ಯಶಸ್ಸೆಂಬುದೇ ಮರೀಚಿಕೆಯಾಗಿರುವಾಗ ಇಂಥ ಚಿತ್ರವನ್ನು ಶಿವರಾಜ್ ಆರಿಸಿಕೊಳ್ಳುವ ಅಗತ್ಯವೇನಿತ್ತು? ಮಚ್ಚು ಹಿಡಿದ ಚಿತ್ರಗಳೆಲ್ಲವೂ 'ಜೋಗಿ'ಯ ಯಶಸ್ಸು ತಂದು ಕೊಡುವುದಿಲ್ಲ ಎಂಬುದನ್ನು ಶಿವರಾಜ್ ಅರಿತುಕೊಳ್ಳಬೇಕು. ಚಿತ್ರದಲ್ಲಿ ಶಿವರಾಜ್ ಗಿಂತ ಹೆಚ್ಚು ಮಿಂಚಿರುವುದು ಮಚ್ಚಿನ ಝಳಪು ಎಂಬುದು ಅತಿಶಯೋಕ್ತಿಯಲ್ಲ.

ಕಾಲೇಜನ್ನು ಜಸ್ಟ್ ಮುಗಿಸಿ ಕಾಲೇಜಿನಲ್ಲೇ ಕ್ಯಾಂಟೀನ್ ಇಟ್ಟು ಕಾಫಿ, ತಿಂಡಿ ಸಪ್ಲೈ ಮಾಡುತ್ತ ಕಾಲೇಜಿನ ಹುಡುಗಿ ಕಾವ್ಯ(ಸಂಧ್ಯಾ)ಳನ್ನು ಲವ್ ಮಾಡುವ ನಂದ ಅಂದರೆ ಶಿವರಾಜ್ ಕುಮಾರ್ ಅವರನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಳ್ಳುವುದು... ಮೈ ಗಾಡ್! ಶಿವರಾಜ್ ತಮ್ಮ ವಯಸ್ಸಿಗೆ ತಕ್ಕಂಥ, ಅನುಭವಕ್ಕೆ ತಕ್ಕಂಥ, ಇಮೇಜಿಗೆ ತಕ್ಕಂಥ ಪಾತ್ರಗಳನ್ನು ಇನ್ನು ಮೇಲಾದರೂ ಆಯ್ದುಕೊಳ್ಳುವುದು ಕೇವಲ ಉತ್ತಮ ಮಾತ್ರವಲ್ಲ ಅನಿವಾರ್ಯ ಕೂಡ.

ತನ್ನ ಮ್ಯಾನರಿಸಂನಿಂದಲೇ ನಗೆಯ ಅಲೆ ಎಬ್ಬಿಸುವ ಶರಣ್ ಮಾತ್ರ ಸಹ್ಯ. ಅವರ ಕೈಗೆ ಪುಣ್ಯಕ್ಕೆ ನಿರ್ದೇಶಕರು ಮಚ್ಚು ನೀಡಿಲ್ಲ. ರಂಗಾಯಣ ರಘು ಅತಿರೇಕದ ಅಭಿನಯ ಇಲ್ಲಿಯೂ ಮುಂದುವರಿದಿದೆ. ಸುರಸುಂದರಾಂಗ ಮಿಥುನ್ ತೇಜಸ್ವಿ ಪಾತ್ರದಲ್ಲಿ ಯಾವ ತೇಜಸ್ಸೂ ಇಲ್ಲ. ಅವಿನಾಶ್, ಶರತ್ ಲೋಹಿತಾಶ್ವ, ವನಿತಾವಾಸು ಜಸ್ಟ್ ಪಾಸು. ಆಮದು ನಾಯಕಿ ಸಂಧ್ಯಾ ಮಾತ್ರ ನಪಾಸು. ಅವರಲ್ಲಿ ನಟನೆಯ ಗಂಧವಿಲ್ಲವೋ, ನಟನೆಯನ್ನು ತೆಗೆಯುವ ತಾಕತ್ತು ನಿರ್ದೇಶಕರಿಗಿಲ್ಲವೋ ಶಿವನೇ ಬಲ್ಲ.

ಗಮನಿಸಿ : ಚಿತ್ರ ಬಿಡುಗಡೆಯಾದ ಮೊದಲ ಪ್ರದರ್ಶನದಲ್ಲಿಯೇ ಜಯನಗರದ ಐನಾಕ್ಸ್ ಥಿಯೇಟರಿನಲ್ಲಿ ಇದ್ದದ್ದು ಮೂವತ್ತು ಹೆಚ್ಚೆಂದರೆ ಮೂವತ್ತೈದು ಜನ ಮಾತ್ರ. ಅವರಲ್ಲಿ ಕಾಲು ಭಾಗದಷ್ಟು ಜನ ಮಧ್ಯದಲ್ಲಿಯೇ ಜಾಗ ಖಾಲಿ ಮಾಡಿದರು. ಇನ್ನೂ ಹೆಚ್ಚಿನ ವಿವರಣೆ ಬೇಕಿಲ್ಲವೆಂದು ಅಂದುಕೊಳ್ಳುತ್ತೇನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada