»   »  ಹುಚ್ಚರ ಪ್ರೀತಿಯ ಮೆಚ್ಚಿದವನೇ ಜಾಣ!

ಹುಚ್ಚರ ಪ್ರೀತಿಯ ಮೆಚ್ಚಿದವನೇ ಜಾಣ!

Posted By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಒಬ್ಬ ರಾಜ ಇರುತ್ತಾನೆ. ಅವನು ಉದಯ ಟಿವಿ ನೋಡುತ್ತಾನೆ.ಪಕ್ಕದಲ್ಲಿ ಒಂದು ಕೊಕ್ಕರೆ ಇರುತ್ತದೆ. ಆಗ ಹಾಲಿನವನೊಬ್ಬ ಬರುತ್ತಾನೆ. ಅದೇ ಹೊತ್ತಿಗೆ ನೆರೆ ಪರಿಹಾರ ನಿಧಿಯವರು ಬರುತ್ತಾರೆ. ಬಚ್ಚಲು ಮನೆಯಲ್ಲಿ ನೀರು ಸುರಿದ ಅನುಭವ. ಮತ್ತೆ ಮಳೆ. ಈ ಮಧ್ಯೆ ಚಿತ್ರಾನ್ನದ ಘಮಘಮ. ಪಕ್ಕದ ಮನೆಯ ನಾಯಿಮರಿ ಕುಯ್ ಕುಯ್ ಎನ್ನುತ್ತದೆ. ರೈಲಿನಲ್ಲಿ ಚುಕುಬುಕು ಸದ್ದು. ಎಲ್ಲಾ ಮುಗಿದು ಇನ್ನೇನು ಕ್ಲೈಮ್ಯಾಕ್ಸ್ ಶುರುವಾಗಬೇಕು, ಕೋರ್ಟ್‌ನಲ್ಲಿ ಅಪರಾಧಿಗೆ ಶಿಕ್ಷೆಯಾಗುತ್ತದೆ... ಎಲ್ಲಾ ಕತ್ಲು ಕತ್ಲು ಕತ್ಲು...

ಓದಿ ಶಾಕ್ ಆಯಿತಾ? ಹಿ ಹಿ ಹೀಗೊಂದು ಹೊಸ ಅನುಭವ ಆಗಬೇಕಾ? ಹಾಗಾದರೆ ಮ್ಯಾಡ್‌ಲವ್ ನೋಡಿ, ನೋಡ್ತಾ ನೋಡ್ತಾ ಮೆದುಳಿನ ನರಗಳ ಸುತ್ತ ಹುಚ್ 1ಎನ್1 ಆದ ಅನುಭವ. ಇಬ್ಬರ ಕಿಲಕಿಲ ನಗು, ನಗುವಿನಲ್ಲೇ ಅಳು, ಗೋಳು, ಓಳು ಬರಿ ಓಳು... ಐ ಲವ್ ಯು, ಯು ಲವ್ ಮಿ, ಎಕ್ಸ್‌ಕ್ಯೂಸ್ ಮಿ, ಜಿಮ್ಮಿ, ಗುಮ್ಮಿ, ಮಮ್ಮಿ , ರಮ್ಮಿ ಎನ್ನುವ ನಾಯಕ ನಾಯಕಿ. ಮದುವೆಗೆ ಬ್ರಹ್ಮರಾಕ್ಷಸನಂತೆ ಅಡ್ಡ ಬರುವ ಅಪ್ಪ. ನಾನ್ ಮದ್ವೆ ಆದ್ರೆ
ರಮ್ಮೀನೇ ಎನ್ನುವ ಹೀರೊ. ಇನ್ನೇನು ಎಲ್ಲಾ ಮುಗಿದು, ಕುಂಬಳಕಾಯಿ ಒಡೆಯಬೇಕು ಎನ್ನುವ ಹೊತ್ತಿಗೆ ವಿಷ ಕುಡಿದು ತಣ್ಣಗೆ ಮಲಗುವ ಹಿರೋಯಿನ್. ಆಗ ಮೆಂಟಲ್ ಮಂಜನಾಗಿ ಗೋರಿ ಮುಂದೆ ಕುಳಿತು-ಗೋರಿ ತೇರಾ ಗಾಂವ್ ಬಡಾ ಪ್ಯಾರಾ ಎನ್ನುವ ಈತ... ಅಲ್ಲಿಗೆ
ಮ್ಯಾಡ್ ಫಾರ್ ಈಚ್ ಅದರ್.

ನಿರ್ದೇಶಕ ತೇಜ ಇಲ್ಲಿ ಹುಚ್ಚು ಪ್ರೀತಿಯ ಕತೆಯೊಂದಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ತಲೆ ತುಂಬಾ ಕೂದಲನ್ನೇ ತುಂಬಿಕೊಂಡಿರುವ ನಾಯಕ, ಮುಖದ ತುಂಬಾ ಮೇಕಪ್ ಲೇಪಿಸಿಕೊಂಡಿರುವ ನಾಯಕಿಯನ್ನು ಹಾಕಿಕೊಂಡು ಪ್ರೇಕ್ಷಕರ ಜೇಬನ್ನು ತುಂಡುಮಾಡಿ, ಕತ್ರಿಗುಪ್ಪೆ ರಸ್ತೆ ಮಧ್ಯೆ
ಬಿಸಾಡಿದ್ದಾರೆ. ಇಲ್ಲಿ ಹಾಸ್ಯ ಕಣ್ಣೀರಿನ ಜತೆ ಬೆಸೆದಿದೆ. ಸೆಂಟಿಮೆಂಟ್ ಎಂಬ ಪಾಶುಪತಾಸ್ತ್ರ ಜನರಿಗೆ ದಿಗ್ಬಂಧನ ಹಾಕುತ್ತದೆ. ಅಳು ಬರುತ್ತದೆ. ಬರಿಸುತ್ತದೆ. ಭರಿಸಲಾರದ ನಷ್ಟದಲ್ಲೂ ಕಷ್ಟ ಬಂದರೆ ಹೇಗಿರುತ್ತೋ ಅದೇಥರನಾದ ?ಲಿಂಗು. ಹೀರೊ ದ್ವಿತೀಯಾರ್ಧದಲ್ಲಿ ನಾಯಕಿಯ
ಶವವನ್ನು ಗೋರಿಯಿಂದ ಅಗೆದು ತೆಗೆಯುತ್ತಿದ್ದರೆ ಆ ಆಂಜನೇಯ ಹೃದಯ ಬಗೆದುಕೊಳ್ಳುವ ಚಿತ್ರ ಕಣ್ಣ ಮುಂದೆ. ಬಗೆ ಬಗೆ ಧಗೆ ಹಗೆ ನಗೆ ಬುಗ್ಗೆ. ಉಘೇ ಉಘೇ ಮ್ಯಾಡ್‌ಲವ್. ಜೈ ದೇವದಾಸ-ಅನಾರ್ಕಲಿ, ಪಾರು-ಸಲೀಮ...

ಎಲ್.ಎನ್. ಗೂಚಿ ಸಂಗೀತದಲ್ಲಿ ಎರಡು ಹಾಡುಗಳು ಢಂ ಢಂ ದಶಗುಣಂ. ಉಳಿದದ್ದು ಮೆಲೋಡಿ ಬೆಳೆ, ಟ್ರ್ಯಾ- ಜಡಿ ಮಳೆ. ಕ್ಯಾಮೆರಾ ಕಣ್ಣಲ್ಲಿ ಎಲ್ಲೆಲ್ಲೂ ಕತ್ತಲೆ ದಾರಿ ದೂರ. ಆಂಗಲ್ಲು ಇಲ್ಲ, ಫೋಕಸ್ಸೂ ಇಲ್ಲ. ಪೋಷಕ ವರ್ಗ ಅದ್ದೂರಿತನಯಾಗಿಯೇ ಇದೆ. ಬ್ಯಾಂಕ್
ಜನಾರ್ದನ್, ಕಿಲ್ಲರ್ ವೆಂಕಟೇಶ್, ಪ್ರಮೀಳಾ ಜೋಷಾಯ್ , ಪದ್ಮಾವಾಸಂತಿ ಅವರು ಇವರು ಎಲ್ಲಾ ಇದ್ದಾರೆ. ತಮ್ಮ ಕೆಲಸಕ್ಕೆ ವಂಚನೆ ಮಾಡಿಲ್ಲ. ಆದರೆ ಹೋಗ್ತಾ ಹೋಗ್ತಾ ಅವರು ಏನು ಮಾಡುತ್ತಿದ್ದಾರೆ, ಏಕೆ ಹಾಗೆ ಆಡುತ್ತಿದ್ದಾರೆ, ಹಾಡುತ್ತಿದ್ದಾರೆ ಎಂಬ ಪ್ರಶ್ನೆಯೇ
ಭೂತಾಕಾರವಾಗುತ್ತದೆ!

ಸಾಹಿತಿ ದೊಡ್ಡರಂಗೇಗೌಡರು ಕನ್ನಡ ಚಿತ್ರರಂಗದಲ್ಲಿ ಪೋಷಕ ನಟರಿಗೆ ಕೊರತೆ ಇದೆ ಎಂಬ ಮಾತಿಗೆ ಉತ್ತರವಾಗಿದ್ದಾರೆ. ಇರುವುದೆಲ್ಲವ ಬಿಟ್ಟು ಬೇರೆ ಭಾಷೆ ಕಲಾವಿದರೆಡೆ ತುಡಿಯುವುದೇ ಜೀವನ ಎನ್ನುವ ಕನ್ನಡ ನಿರ್ಮಾಪಕರು ಒಮ್ಮೆ ಗೌಡರ ಹಾಗೂ ಅವರ ಪಾತ್ರವನ್ನಷ್ಟೇ ನೋಡಬೇಕು. ಅದೇನೇ ಇರಲಿ, ಮ್ಯಾಡ್‌ಲವ್ ಕನ್ನಡ ಚಿತ್ರರಂಗದ ಇತಿಹಾಸ ಪುಟದಲ್ಲಿ ಒಂಥರಾ ಹುಚ್ಚ ಹೊಸ ಪ್ರಯತ್ನ. ಇಂಥ ಚಿತ್ರ ಹಿಂದೆ ಬಂದಿಲ್ಲ. ಮುಂದೆ ಬರುತ್ತೊ ಇಲ್ಲವೋ ಗೊತ್ತಿಲ್ಲ. ಜೈ ಹುಚ್ಚರಾಯ, ಜೈ ಕರ್ನಾಟಕ...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada