»   »  ಹತ್ತು ನಿಮಿಷವೂ ಬೋರ್ ಹೊಡೆಸದ ಯಾರದು?

ಹತ್ತು ನಿಮಿಷವೂ ಬೋರ್ ಹೊಡೆಸದ ಯಾರದು?

By: *ದೇವಶೆಟ್ಟಿ ಮಹೇಶ್
Subscribe to Filmibeat Kannada

ದಟ್ಟ ಕಾಡು. ಬೆಂಗಳೂರಿನ ಟ್ರಾಫಿಕ್ ಜಾಮ್ ಥರಸಾಲಾಗಿ ನಿಂತ ಮರಗಳು. ಕತ್ತಲೆಯನ್ನೇ ಮೀರಿಸುವ ಕತ್ತಲು. ಅಲ್ಲೊಂದು ದೈತ್ಯ ಬಂಗಲೆ. ಕಿಟಾರ್ ಕಿರುಚಾಟ. ಗೂಬೆಗಳ ಕಚ್ಚಾಟ. ದೆವ್ವಗಳ ತುಂಟಾಟ. ಅಹೋರಾತ್ರಿ ಅಲ್ಲಿಗೆ ಒಂದಷ್ಟು ಮಂದಿ ಬರುತ್ತಾರೆ. ಬಂದವರು ಹೋದ ಹಾದಿಯಲ್ಲಿ ಬೂದಿಯಾಗುತ್ತಾರೆ. ಮತ್ತಷ್ಟು ಮಂದಿ ಮಾಯವಾಗುತ್ತಾರೆ. ಎಲ್ಲಿಗೆ ಹೋದರು?

ಹೋದವರು ಏನಾದರು? ಏನೇನೋ ಆಗಲು ಏನು ಕಾರಣ? ಈ ಎಲ್ಲಾ ಪ್ರಶ್ನೆಯ ಹಿಂದೆ ಹೊರಟರೆ ಸಿಗುವ ಉತ್ತರ ಯಾರದು? ಹೀಗೊಂದು ನವಿರಾದ ನವಿರೇಳಿಸುವ ಚಿತ್ರಕತೆ ಹೆಣೆದಿದ್ದಾರೆ ನಿರ್ದೇಶಕ ಶ್ರೀನಿವಾಸ ಕೌಶಿಕ್. ಇಡೀ ಸಿನಿಮಾ ಹತ್ತು ನಿಮಿಷವೂ ಬೋರ್ ಹೊಡೆಸುವುದಿಲ್ಲ. ದೃಶ್ಯದಿಂದ ದೃಶ್ಯಕ್ಕೆ ಹಲವು ತಿರುವುಗಳು. ಕೊನೆ ದೃಶ್ಯದವರೆಗೂ ಕೊಲೆಗಾರನನ್ನು ಕಲೆ ಹಾಕುವುದು ಕಷ್ಟಸಾಧ್ಯ. ಇವನ ಮೇಲೆಅನುಮಾನಿಸುವ ಹೊತ್ತಿಗೆ ಅವನುವಿಚಿತ್ರವಾಗಿ ಆಡಲು ಶುರು ಮಾಡುತ್ತಾನೆ.

ಇದೆಂಥ ವಿಚಿತ್ರ ಎನ್ನುವ ಹೊತ್ತಿಗೆ ಚಿತ್ರಕತೆ ಮತ್ತೊಂದು ಮಜಲಿಗೆ ತಿರುಗಿಕೊಳ್ಳುತ್ತದೆ.ನಿಜವಾದ ಕೊಲೆಗಾರ ಗೊತ್ತಾಗುವ ಹೊತ್ತಿಗೆ ಪ್ರೇಕ್ಷಕ ಕೈ ಬೆರಳು ಕಚ್ಚಿಕೊಳ್ಳುವ ಹಂತ ತಲುಪಿರುತ್ತಾನೆ. ಇದಕ್ಕೆ ಕಾರಣ ಕತೆ. ನಿರ್ಮಾಪಕಿ ಲೀಲಾವತಿ ಇಲ್ಲಿ ನಿಜವಾದ ಮಿಸ್ ಕಲಾವತಿ, ಕತೆಗಾರ್ತಿ. ಒಂದು ಸಣ್ಣ ಎಳೆ ಇಟ್ಟುಕೊಂಡು, ಅದಕ್ಕೆ ಒಂದಷ್ಟು ಸೆಂಟಿಮೆಂಟ್, ಮತ್ತಷ್ಟು ಕಚಗುಳಿ, ಬೆವರಿಳಿಸುವ ಬಳುವಳಿ... ಒಂದು ಕತೆಯಲ್ಲಿ ನಾಯಕನೇ ನಿರ್ಮಾಪಕನಾದರೆ ಅವನಿಗೆ ಸಿಗುವ ಬಿಲ್ಡಪ್ ಏನು ಅಂತ ಮತ್ತೆ ಹೇಳಬೇಕಿಲ್ಲ. ಪ್ರತೀ ಫ್ರೇಮ್‌ನಲ್ಲೂ ಆತ ತಾನು ಕಾಣಬೇಕು ಎಂದು ಹರ ಹರ ಸಾಹಸ ಮಾಡುತ್ತಾನೆ.

ಆದಷ್ಟು ಕ್ಯಾಮೆರಾವನ್ನು ಮುಖಕ್ಕೇ ಇಡುವಂತೆ ನಿರ್ದೇಶಕರಿಗೆ ಮೊದಲೇ ಅಲಿಖಿತ ಸಿದ್ಧಾಂತ ಮಾಡಿಕೊಂಡಿರುತ್ತಾನೆ. ಆದರೆ ಇಲ್ಲಿ ಹಾಗಾಗಿಲ್ಲ. ನಿರ್ಮಾಪಕ ಕಮ್ ನಾಯಕ ವಿನೋದ್‌ರಾಜ್ ಮೊದಲಾರ್ಧ ಮುಗಿಯುವ ಹೊತ್ತಿಗೆ ಬರುತ್ತಾರೆ.ಅಲ್ಲಿಯವರೆಗೆ ಮಂಜು, ಪವನ್, ನಟರಾಜು ಮೊದಲಾದಹುಡುಗರ ಜತೆ ಸೇರಿ ಲೀಲಾವತಿ ಕತೆಯ ವೇಗಕ್ಕೆ ನಾಗಾಲೋಟ ನೀಡುತ್ತಾರೆ. ಇದು ಖಂಡಿತಾ ನಾಯಕನ ಕತೆಯಲ್ಲ. ಕತೆಯ ಕತೆ. ಅದು ಏನನ್ನು ಕೇಳುತ್ತದೆಯೋ ಅಷ್ಟನ್ನು ಮಾತ್ರ ಇಲ್ಲಿ ತೋರಿಸಲಾಗಿದೆ. ರಹಸ್ಯ ಬೇಧಿಸುವ ಪೊಲೀಸ್ ಆಫೀಸರ್ ಆಗಿ ನಾಯಕ ಬರುವ ಹೊತ್ತಿಗೆ ಐದು ಹುಡುಗರು ಮನಸ್ಸಿಗೆ ಹತ್ತಿರವಾಗಿಬಿಡುತ್ತಾರೆ. ಸದಾಶಿವ ಬ್ರಹ್ಮಾವರ್ ನಟನೆಯಲ್ಲಿ ಅನುಭವ ಹಾಗೂ ಪಕ್ವತೆ ಎದ್ದುಕಾಣುತ್ತದೆ.

ಹಾಡುಗಳು ಹಾಗೂ ಸಂಭಾಷಣೆಯಲ್ಲಿ ಹೊಸತನ ಇಲ್ಲದಿದ್ದರೂ ಪ್ರೇಕ್ಷಕನ ಗಮನ ಘಟನೆಗಳ ಕಡೆ ಕೇಂದ್ರಿತವಾಗುತ್ತದೆ. ಕೆಲವು ಕಡೆ ವಿನೋದರಾಜ್ ಫೈಟ್, ಡ್ಯಾನ್ಸ್, ಆಕ್ಷನ್ ಎಲ್ಲವನ್ನೂ ಮಾಡುತ್ತಾರೆ. ಅದು ಪಡ್ಡೆ ಹುಡುಗರ ಪಾಲಿಗೆ ಪಂಚಾಮೃತ. ಅದೇ ರೀತಿ ಲೀಲಾವತಿಯವರೂ ನಟನೆಯಲ್ಲಿ ಎತ್ತಿದ ಕೈ. ಭಾವಪೂರ್ಣ ಅಭಿನಯ, ಗಮನ ಸೆಳೆಯುವ ಹಾವಭಾವದಿಂದ ಲೀಲಾವತಿಯವರು ಮತ್ತೆ ಮುದ ನೀಡುತ್ತಾರೆ. ನಾಯಕಿ ಅಶ್ವಿನಿ ದ್ವಿತೀಯಾರ್ಧದ ನಂತರ ಬಂದು, ಮೈ ಮಾಟ ಮಂತ್ರ ಮಾಡಿ, ಮೋಡದ ಮರೆಯಲ್ಲಿ ಮಾಯವಾಗುತ್ತಾರೆ. ಅವರ ಎಂಟ್ರಿ ಎಲ್ಲೋ ಒಂದು ಕಡೆ ಅನಗತ್ಯ ಎನಿಸಿದರೂ ಗ್ಲ್ಯಾಮರ್ ಇಲ್ಲದಿದ್ದರೆ ಹೇಗೆ ಹೇಳಿ ಸ್ವಾಮಿ?

ಒಟ್ಟಾರೆ ಕನ್ನಡದ ಮಟ್ಟಿಗೆ ಯಾರದು ಒಂದು ಭಿನ್ನ ಯತ್ನ. ಇತ್ತೀಚೆಗೆ ಇಂಥದ್ದೊಂದು ಗುಣಮಟ್ಟದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಬಂದಿರಲಿಲ್ಲ. ಈಗ ಬಂದಿದೆ. ನೋಡಿ, ನೋಡಿ ಒಮ್ಮೆ ಥ್ರಿಲ್ ಆಗಲು ಯಾರೊಬ್ಬ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ!

ಆಚಾರ್ಯ ಹೀರೋ ಭವ...
ಛಾಯಾಗ್ರಾಹಕ ನಾಗೇಶ್ ಆಚಾರ್ಯ ಇಡೀ ಚಿತ್ರದ ಸೂತ್ರಧಾರ. ಮಂದ ಬೆಳಕಿನಲ್ಲಿ ಕತ್ತಲನ್ನು ತೋರಿಸುವ ಪರಿ, ದಟ್ಟಕಾಡಿನ ಮಧ್ಯೆ ಕ್ಯಾಮೆರಾ ಕಣ್ಣಲ್ಲಿ ದಟ್ಟ ಕಾಡನ್ನು ಸೆರೆ ಹಿಡಿಯುವ ಪರಿ ಖುಷಿ ಕೊಡುತ್ತದೆ. ಕನ್ನಡದಲ್ಲಿ ವೈಪರ್ ಕ್ಯಾಮೆರಾ ಬಳಕೆ ಕಡಿಮೆ. ಅಂಥದ್ದೊಂದು ಡಿಜಿಟಲ್ ಕ್ವಾಲಿಟಿಯನ್ನು ಬಳಸಲಾಗಿದೆ. ಇದರ ಬಳಕೆಯಿಂದ ಹೊಸ ಹೊಸ ಪ್ರಯೋಗ ಮಾಡಬಹುದು. ಅನಗತ್ಯ ದೃಶ್ಯಗಳನ್ನು ಸ್ಥಳದಲ್ಲೇ ಕಿತ್ತು ಬಿಸಾಡಬಹುದು. ಅದನ್ನು ಯೋಗ್ಯವಾಗಿ ಬಳಸುವಲ್ಲಿ, ಚಿತ್ರಕ್ಕೆ ಹೊಸ ರೂಪ ಕೊಡುವಲ್ಲಿ ಆಚಾರ್ಯ ಗೆದ್ದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada