For Quick Alerts
  ALLOW NOTIFICATIONS  
  For Daily Alerts

  ಅನಾಥರು : ರೀಮೇಕ್ ಮಾಡಿದ್ರೂ ಹೀಗೇ ಮಾಡಬೇಕು!

  By * ದೇವಶೆಟ್ಟಿ ಮಹೇಶ್
  |

  Darshan and Upendra in Anatharu
  ಅನಾಥರು ಚಿತ್ರದ ಈ ಕತೆಯಲ್ಲಿ ಏನಿದೆ ಎಂದು ನೀವು ಕೇಳಬಹುದು. ಇದು ಕೇಳುವ ಕತೆಯಲ್ಲ, ನೋಡುವ ಕತೆ. ಸಾಮಾನ್ಯ ಕತೆಯೊಂದನ್ನು ಅಸಾಮಾನ್ಯ ಎನ್ನುವಂತೆ ಮಾಡುವುದು ಚಿತ್ರಕತೆ ಮತ್ತು ಪಾತ್ರಗಳ ಗಟ್ಟಿತನ.

  ಸತ್ಯಾ.. ಕೊಡು..'ಗೆಳೆಯನನ್ನು ಕೊಂದವನ ಮುಂದೆ ನಿಂತು ಉಪ್ಪಿ ಆಡುವುದು ಇದೊಂದೇ ಮಾತು. ಇಡೀ ಚಿತ್ರದಲ್ಲಿ ಉಪ್ಪಿಗೆ ಇರುವುದು ಇದೊಂದೇ ಡೈಲಾಗ್. ಮಾತಿಲ್ಲದ ಉಪ್ಪಿಯನ್ನು ಹೇಗೆ ಒಪ್ಪಿಕೊಳ್ಳುವುದು? ಮಾತಿನಿಂದಲೇ ಇದುವರೆಗೆ ಎಲ್ಲರ ಮನ ಗೆದ್ದ ಉಪ್ಪಿ ಮಾತೇ ಇಲ್ಲದೆ ಏನು ಮಾಡಲು ಸಾಧ್ಯ? ಅದು ಹೇಗೆ ಆ ಪಾತ್ರಕ್ಕೆ ಹೊಂದುತ್ತಾರೆ? ಇಂಥ ಅನುಮಾನವಿದ್ದರೆ ಅದನ್ನು ಪಕ್ಕಕ್ಕೆ ಇಡಿ. ಇದು ಉಪ್ಪಿ ಬದುಕಿನ ಮೈಲುಗಲ್ಲು.

  ಇಲ್ಲಿಯವರೆಗೆ ಸ್ಟಾರ್ ಆಗಿದ್ದ ಉಪ್ಪಿ ಮೊದಲ ಬಾರಿಗೆ ಕಲಾವಿದ ಎನ್ನಿಸುವಂಥ ಪಾತ್ರ ಮಾಡಿದ್ದಾರೆ. ಉಹುಂ.. ಆ ಪಾತ್ರವೇ ತಾವಾಗಿದ್ದಾರೆ. ಕೆಂಚು ಕೂದಲು, ಉಬ್ಬು ಹುಳುಕು ಹಲ್ಲು, ಉಸಿರು ಬಿಟ್ಟರೆ ಸಿಂಹದ ಗುಟುರು, ಆ ಕಣ್ಣು, ಕಪಟ ಇಲ್ಲದ ಮನಸು, ತಿರುಗಿ ಬಿದ್ದರೆ ಎದುರಿದ್ದವರು ಆಕಾಶ ನೋಡುವುದೇ ಲೇಸು...

  ಸ್ಮಶಾನದಲ್ಲಿ ಹುಟ್ಟಿ ಬೆಳೆದ ಹುಡುಗ ಅನಿವಾರ್ಯವಾಗಿ ಪಟ್ಟಣ್ಣಕ್ಕೆ ಬರುತ್ತಾನೆ. ಗಾಂಜಾ ಮಾರುವಾಕೆಗೆ ಹತ್ತಿರವಾಗುತ್ತಾನೆ. ಆಕೆ ಆತನನ್ನು ಗಾಂಜಾ ಬೆಳೆಯುವವನ ಬಳಿ ಕೆಲಸಕ್ಕೆ ಬಿಡುತ್ತಾಳೆ. ಪೊಲೀಸರ ಕೈಗೆ ಸಿಕ್ಕುಬಿದ್ದು ಜೈಲು ಸೇರುತ್ತಾನೆ. ಸಣ್ಣಪುಟ್ಟ ಮೋಸ ಮಾಡುತ್ತ ಹೊಟ್ಟೆ ಹೊರೆದು ಕೊಳ್ಳುವ ದರ್ಶನ್ ಅಲ್ಲಿ ಆತನ ಜತೆಯಾಗುತ್ತಾನೆ. ಹೊರಬಂದವರು ಒಂದೆಡೆ ಸೇರುತ್ತಾರೆ. ದಿಕ್ಕಿಲ್ಲದ ಅನೇಕ ಮಕ್ಕಳು ಈ ಮನೆಯಲ್ಲಿ ಒಂದಾಗಿ ಬಾಳುತ್ತಿರುತ್ತಾರೆ... ಹೀಗೆ ಕತೆ ಸಾಗುತ್ತದೆ.

  ಈ ಕತೆಯಲ್ಲಿ ಏನಿದೆ ಎಂದು ನೀವು ಕೇಳಬಹುದು. ಇದು ಕೇಳುವ ಕತೆಯಲ್ಲ, ನೋಡುವ ಕತೆ. ಸಾಮಾನ್ಯ ಕತೆಯೊಂದನ್ನು ಅಸಾಮಾನ್ಯ ಎನ್ನುವಂತೆ ಮಾಡುವುದು ಚಿತ್ರಕತೆ ಮತ್ತು ಪಾತ್ರಗಳ ಗಟ್ಟಿತನ.

  ಅದಕ್ಕೆ ತಕ್ಕಂತೆ ಹೆಣೆದಿರುವ ದೃಶ್ಯ ಸಂಯೋಜನೆ. ನೀವು ಇದುವರೆಗೆ ನೋಡದ ಉಪ್ಪಿಯನ್ನು ನೋಡುತ್ತೀರಿ. ಚಿತ್ರದುದ್ದಕ್ಕೂ ಮಾತಿಲ್ಲದೆ ಉಭಿನಯದಿಂದ ತಮ್ಮ ಸಾಮರ್ಥ್ಯ ಏನೆಂದು ತೋರಿಸಿದ್ದಾರೆ. ಓಡುವ ಪರಿ, ಸಿಂಹದಂತೆ ಹೂಂಕರಿಸುವ ಗತ್ತು, ಮೊದಲ ಸಲ ಕಣ್ಣೀರಿಡುವ ಶೈಲಿ, ಕಣ್ಣಿನಲ್ಲೇ ನೋವು, ಪ್ರೀತಿ, ದುಃಖ, ಅಸಹನೆ ತೋರಿಸುವ ಜಬರ್ ದಸ್ತು ನಟನೆ ನೋಡಿಯೇ ಅನುಭವಿಸಬೇಕು. ಕೊನೆಯ ಹತ್ತು ನಿಮಿಷ ನೀವು ಥೇಟರ್ ನಲ್ಲಿ ಕುಳಿತಿರುವುದು ಅರಿವಿಗೆ ಬರದಿದ್ದರೆ ಉಪ್ಪಿ ಅಭಿನಯಕ್ಕೆ ಸಲಾಂ ಹೇಳಿ. ವರ್ಷಕ್ಕೆ ಒಂದಾದರೂ ಇಂಥ ಪಾತ್ರಗಳಲ್ಲಿ ಕಾಣಿಸಲಿ ಎಂದು ಎಲ್ಲಾದರೂ ಸಿಕ್ಕರೆ ಹೇಳಿ.

  ಇನ್ನು ದರ್ಶನ್ ಬಗ್ಗೆ ಕೆಮ್ಮಂಗಿಲ್ಲ ಬಿಡಿ. ಮೊದಲ ಬಾರಿಗೆ ಮಾತು ಮಾತು ಮಾತು... ಮಾತಿನಿಂದಲೇ ಮನೆ ಕಟ್ಟುವ ಪಾತ್ರಕ್ಕೆ ದರ್ಶನ್ ಜೀವ ತುಂಬಿದ್ದಾರೆ. ನಗಿಸುವುದೇ ಧರ್ಮ ಎಂಬಂತೆ ಪಾತ್ರ ನಿರ್ವಹಿಸಿದ್ದಾರೆ. ಕೈಯಲ್ಲಿ ಮಚ್ಚು ಹಿಡಿಯದಿದ್ದರೂ ಮೆಚ್ಚಿಸುತ್ತಾರೆ. ಮಕ್ಕಳು ಕೆಟ್ಟರೆ ಒದರುವ ಅವ್ವನಂತೆ, ಹತ್ತಿರದ ಜೀವ ಸತ್ತರೆ ತಾನೇ ಸತ್ತಂತೆ ಅಳುವ ಅಕ್ಕನಂತೆ, ಹೊಟ್ಟೆಪಾಡಿಗಾಗಿ ಏನೋ ಕೆಲಸ ಮಾಡುವ ಹುಡುಗಿಯಾಗಿ ಸಾಂಘವಿ ವಂಡರ್ ಫುಲ್. ರಾಧಿಕಾ ಕೂಡ ಹಿಂದೆ ಬಿದ್ದಿಲ್ಲ. ಜಗಳಗಂಟಿಯಾಗಿ ಜಿದ್ದಿಗೆ ಬಿದ್ದು ಹೊಡೆದಾಡುವ ಬಜಾರಿಯಾಗಿ ಈಕೆ ಅಂದಕಾಲತ್ತಿಲ್ ಮಂಜುಳಾ.

  ಅಂದ ಹಾಗೆ, ಇದು ತಮಿಳಿನ ಪಿತಾಮಗನ್ ಚಿತ್ರದ ರೀಮೇಕ್. ಆದರೆ, ಸಾಧು ಕೋಕಿಲಾ ಒಂದೊಳ್ಳೆ ಚಿತ್ರವನ್ನು ಅಷ್ಟೇ ನಿಯತ್ತಾಗಿ, ನೀಟಾಗಿ ಕನ್ನಡಕ್ಕೆ ತಂದಿದ್ದಾರೆ. ರೀಮೇಕ್ ಮಾಡಿದರೂ ಇಂಥ ಚಿತ್ರವನ್ನು ಹೀಗೇ ಮಾಡಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ. ರೀಲು ಸುತ್ತುವ ಕೆಲಸ ಮಾಡಿಲ್ಲ. ಯಾಕೆಂದರೆ ಪ್ರತಿ ಫ್ರೇಮನಲ್ಲೂ ಸುರಿಸಿದ ಬೆವರು, ಪಟ್ಟ ಶ್ರಮ ಕಣ್ಣಿಗೆ ಹೊಡೆಯುತ್ತದೆ. ಗಾಂಜಾ ತೋಟದ ಸನ್ನಿವೇಶಗಳು ಕನ್ನಡಕ್ಕೆ ಹೊಸತು. ಹಾಗೇ ಸ್ಮಶಾನದ ದೃಶ್ಯಗಳೂ ಕೂಡ.

  ಸಂಗೀತ, ಹಾಡು, ಕಲಾ ನಿರ್ದೇಶನ, ಕೃಷ್ಣಕುಮಾರ್ ಕ್ಯಾಮೆರಾ ಕೆಲಸ.. ಯಾವುದರಲ್ಲೂ ಕೊರತೆ ಇಲ್ಲ. ಆದರೆ, ಒಂದು ಮಾತು, ಇಂಥ ಕೊರತೆಯಿಲ್ಲದಂತೆ ಮಾಡಿದ್ದು ನಿರ್ಮಾಪಕ ಮುನಿರತ್ನಂ. ಎಲ್ಲರಿಗೂ ಸೇರಿಸಿ ಇವರಿಗೊಂದು ಅಭಿನಂದನೆ ತಿಳಿಸಿ. ಮಾಡಿದ ಕೆಲಸಕ್ಕೆ ಬೆಲೆ ಸಿಗುತ್ತದೆ. ಜೀವಕ್ಕೆ ಬೆಚ್ಚನೆ ಸಮಾಧಾನ.. ಅದು ನಿಮಗೂ ಸಿಗಬೇಕಾದರೆ ಮೊದಲು ಅನಾಥರು ಮನೆಗೆ ಓಡಿ..

  Thursday, May 19, 2011, 15:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X