For Quick Alerts
  ALLOW NOTIFICATIONS  
  For Daily Alerts

  'ಯಾರದು?' ಯಾಕೆ ನೋಡಬೇಕು?

  By *ಎಚ್. ಆನಂದರಾಮ ಶಾಸ್ತ್ರಿ
  |

  ಚಿತ್ರ ಚೆನ್ನಾಗಿದೆ, ನಾನು ನೋಡಿ ಆನಂದಿಸಿದೆ, ನೀವೂ ಯಾಕೆ ನೋಡಬಾರದು ಎಂದು ಆನಂದರಾಮ ಶಾಸ್ತ್ರೀ ಕೇಳುತ್ತಾರೆ ಮತ್ತು ಚಿತ್ರ ವಿಮರ್ಶೆ ಮಾಡುತ್ತಾರೆ.

  "ಯಾರದು?" ಕನ್ನಡ ಚಲನಚಿತ್ರ ನೋಡಿ ಈ ಲೇಖನ ಬರೆಯುತ್ತಿದ್ದೇನೆ. 125 ನಿಮಿಷಗಳ ಈ ಚಿತ್ರ ನೋಡುತ್ತಿರುವಾಗ ಪ್ರೇಕ್ಷಕನಿಗೆ ಒಂದು ನಿಮಿಷವೂ ಬೋರೆನಿಸುವುದಿಲ್ಲ. ರಹಸ್ಯಮಯ ಕಥಾವಸ್ತು, ಕುತೂಹಲ ಕೆರಳಿಸುತ್ತ ಸಾಗುವ ಚಿತ್ರಕಥೆ, ಚುರುಕಾದ ಸಂಕಲನ (ಎಡಿಟಿಂಗ್), ಅದ್ಭುತ ಛಾಯಾಗ್ರಹಣ ಮತ್ತು ಎಲ್ಲ ಪಾತ್ರಗಳ ನೈಜ ಅಭಿನಯ ಇವು ಪ್ರೇಕ್ಷಕನನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತವೆ.

  ಸ್ವಲ್ಪಮಟ್ಟಿಗೆ "ಶ್!" ಚಿತ್ರದ ಮಾದರಿಗೆ ಹೋಲಿಸಬಹುದಾದರೂ "ಯಾರದು?" ಚಿತ್ರವು "ಶ್!" ಚಿತ್ರಕ್ಕಿಂತ ಹೆಚ್ಚು ರೋಮಾಂಚನ (ಥ್ರಿಲ್) ನೀಡುತ್ತದೆ. ಚಿತ್ರಕಥೆ-ಸಂಕಲನ-ಛಾಯಾಗ್ರಹಣಗಳಲ್ಲಿ "ಶ್!"ಗಿಂತ ಮೇಲ್ಮಟ್ಟದ ಚಿತ್ರ ಇದಾಗಿದೆ.

  ನನಗೆ ಬೇಸರ ತಂದ ಸಂಗತಿಯೆಂದರೆ, ಕನ್ನಡ ಚಿತ್ರಪ್ರೇಮಿಯು ಒಂದು ಸಲ ನೋಡಲು ಖಂಡಿತ ಅರ್ಹವಾಗಿರುವ ಈ ಚಿತ್ರಕ್ಕೆ ಬೆಂಗಳೂರಿನ ಹೃದಯಭಾಗದ ಕಪಾಲಿ ಚಿತ್ರಮಂದಿರದಲ್ಲಿ ನಾಲ್ಕನೆಯ ದಿನವೇ ನಿರೀಕ್ಷಿತ ಸಂಖ್ಯೆಯ ಪ್ರೇಕ್ಷಕರಿರಲಿಲ್ಲ! ನಾನು ಕಣ್ಣಾರೆ ಕಂಡಂತೆ ಅರ್ಧಪಾಲಿಗಿಂತ ಹೆಚ್ಚು ಆಸನಗಳು ಖಾಲಿ ಉಳಿದಿದ್ದವು! ಅದೇವೇಳೆ, ಸನಿಹದ ಮೂರ‍್ನಾಲ್ಕು ಚಿತ್ರಮಂದಿರಗಳು ಪ್ರೇಕ್ಷಕರಿಂದ ಗಿಜಿಗುಟ್ಟುತ್ತಿದ್ದುದನ್ನೂ ನಾನು ಗಮನಿಸಿದೆ. ಆ ಚಿತ್ರಮಂದಿರಗಳಲ್ಲಿ ಓಡುತ್ತಿದ್ದ ಚಿತ್ರಗಳೆಲ್ಲ ಪ್ರೀತಿ-ಪ್ರಣಯದ ಚಿತ್ರಗಳಾಗಿದ್ದವು!

  ಬಹುತೇಕ ಪ್ರೇಕ್ಷಕರಿಗೆ, ಅದರಲ್ಲೂ ಯುವ ಪ್ರೇಕ್ಷಕರಿಗೆ ಪ್ರೀತಿ ಪ್ರಣಯದ ಚಿತ್ರಗಳು ಬಲು ಇಷ್ಟ, ಸಹಜವೇ. ಆದರೆ, ಸಿಹಿ ಇಷ್ಟವೆಂದು ಸದಾಕಾಲ ಬರೀ ಸಿಹಿಯನ್ನೇ ತಿನ್ನುತ್ತ ಕೂಡುವುದೇ? ಇತರ ರುಚಿಗಳನ್ನೂ ಸವಿಯುವುದು ಬೇಡವೆ? ಬರೀ ಸಿಹಿಯನ್ನೇ ತಿನ್ನತೊಡಗಿದರೆ ಕ್ರಮೇಣ ಆ ಸಿಹಿಯ ಸವಿಯೂ ಬಡ್ಡೆನಿಸತೊಡಗುವುದಿಲ್ಲವೆ? ಉಪ್ಪು-ಹುಳಿ-ಖಾರ ಹೊಂದಿ ಖಡಕ್ಕಾಗಿರುವ ಖಾದ್ಯದ ಸೊಗಸಿದೆಯಲ್ಲಾ, ಅದೇನು ಕಮ್ಮಿ ಸೊಗಸೇ? ಅಂಥ ಖಾದ್ಯವನ್ನು ಸವಿದವರಿಗಷ್ಟೇ ಆ ಸೊಗಸು ಗೊತ್ತು. ಅಂಥ ಒಂದು ಖಡಕ್ ಖಾದ್ಯದ ಸೊಗಡನ್ನು ಸವಿಯಲಿಕ್ಕಾದರೂ "ಯಾರದು?" ಚಿತ್ರವನ್ನು ನೋಡಬೇಕು.

  ಇಂಥದೇ ಚಿತ್ರವನ್ನು ರಾಮ್‌ಗೋಪಾಲ್ ವರ್ಮಾ (ಹಿಂದಿಯಲ್ಲಿ) ತಯಾರಿಸಿದಾಗ ನಾವು ಮುಗಿಬಿದ್ದು ನೋಡುತ್ತೇವೆ. ಕನ್ನಡವೆಂದಕೂಡಲೇ, "ಏನು ಮಹಾ ಇದ್ದೀತು", ಎಂಬ ಭಾವನೆಯೇ? ಅಂಥ ಭಾವನೆ ನಿಮ್ಮಲ್ಲಿದ್ದರೆ ಅದನ್ನು ಸುಳ್ಳಾಗಿಸುತ್ತದೆ "ಯಾರದು?" ಚಿತ್ರ.

  ಲೀಲಾವತಿ ಮತ್ತು ವಿನೋದ್ ರಾಜ್ ಬಹಳ ನಿರೀಕ್ಷೆ ಇಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆ ತಾಯಿ-ಮಗನ ಬಗ್ಗೆ ಒಂದು ಮಾತು ಹೇಳಬೇಕಾಗುತ್ತದೆ. ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆದು, ತಿರುಗಿ ಸಮಾಜಕ್ಕೆ ವಿಶೇಷ ಕಾಣಿಕೆಯೇನನ್ನೂ ನೀಡದೆ, ಪ್ರಚಾರ-ಪ್ರಸಿದ್ಧಿಗಳ ಜೊತೆಗೆ ಮೋಜು-ಮಜಾಗಳ ಇಂದ್ರಲೋಕದಲ್ಲಿ ತೇಲುತ್ತಿರುವ ಹಲವು ಹೀರೊಗಳ ನಡುವೆ ಇಲ್ಲೊಬ್ಬ ವಿನೋದ್ ರಾಜ್ ತನ್ನ ತಾಯಿ ಲೀಲಾವತಿಯವರೊಡಗೂಡಿ ಗ್ರಾಮೀಣ ಪ್ರದೇಶದಲ್ಲಿ ಕೃಷಿಕ ವೃತ್ತಿ ಸಾಗಿಸುತ್ತ, ಬಂದ ದುಡಿಮೆಯಲ್ಲಿ ಬಡವರಿಗಾಗಿ ಉಚಿತ ಆಸ್ಪತ್ರೆಯೊಂದನ್ನು ನಿರ್ಮಿಸಿದ್ದಾನೆ.

  ಇದೀಗ ಆ ಹಿರಿಯ ಕಲಾವಿದೆಯೊಡಗೂಡಿ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಶ್ರದ್ಧೆಯಿಂದ ತಯಾರಿಸಿ ಪ್ರೇಕ್ಷಕನಿಗೊಪ್ಪಿಸಿದ್ದಾನೆ. ಪ್ರೇಕ್ಷಕ ಕೊಡುವ ಕಾಸಿಗಂತೂ "ಯಾರದು?" ಚಿತ್ರವು ಮೋಸ ಖಂಡಿತ ಮಾಡುವುದಿಲ್ಲ. ಹೀಗಿರುವಾಗ, ಕನ್ನಡದ ಮೇರು ಕಲಾವಿದೆ ಲೀಲಾವತಿಯವರಿಗೆ ಗೌರವ ಮತ್ತು ಪ್ರೋತ್ಸಾಹ ನೀಡುವ ಆಶಯದಿಂದ, "ಯಾರದು?" ಚಿತ್ರತಂಡದ ಶ್ರದ್ಧಾಪೂರ್ವಕ ಯತ್ನವನ್ನು ಪುರಸ್ಕರಿಸುವ ಉದ್ದೇಶದಿಂದ ಮತ್ತು ವಿಭಿನ್ನ ಅನುಭವವೊಂದನ್ನು ಹೊಂದುವ ದೃಷ್ಟಿಯಿಂದ ಪ್ರತಿಯೊಬ್ಬ ಕನ್ನಡ ಚಿತ್ರರಸಿಕನೂ ತನ್ನ ಜೀವನದಲ್ಲೊಂದು ಸಲ ನಲವತ್ತೈವತ್ತು ರೂಪಾಯಿ ಹಣವನ್ನು ಮತ್ತು ಎರಡೂವರೆ ಗಂಟೆ ಸಮಯವನ್ನು ವ್ಯಯಿಸಲು ಸಾಧ್ಯವಿಲ್ಲವೆ?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X