»   » ಶಿಶಿರ : ಮಂಜು' ಸರಿಯಿತು, ಮುತ್ತು ಸುರಿಯಿತು!

ಶಿಶಿರ : ಮಂಜು' ಸರಿಯಿತು, ಮುತ್ತು ಸುರಿಯಿತು!

By: * ವಿನಾಯಕ ರಾಮ್
Subscribe to Filmibeat Kannada
Shishira hero Yashas
ಒಬ್ಬ ಹುಂಬ ಇನ್ನೊಬ್ಬ ಹುಂಬನ ಮುಂದೆ ಚಾಲೆಂಜ್ ಮಾಡುತ್ತಾನೆ: ನಾನು ಅಮವಾಸ್ಯೆ ರಾತ್ರಿ ಒಬ್ಬನೇ ಸ್ಮಶಾನಕ್ಕೆ ಹೋಗಿ, ಅಲ್ಲಿರುವ ಸಮಾಧಿಯೊಂದಕ್ಕೆ ಕಬ್ಬಿಣದ ಮೊಳೆ ಹೊಡೆದು ಬರುತ್ತೀನಿ. ನೂರು ರೂ. ಬೆಟ್ಸ್!

ಸರಿ, ಹೋಗ್ತಾನೆ. ಬಿಕೋ ಎಂಬ ಸುಡುಗಾಡಿನಲ್ಲಿ, ಬೆಚ್ಚಿ ಬೀಳಿಸುವ ಚಳಿಯಲ್ಲಿ, ಒಬ್ಬನೇ... ಮುಖದ ತುಂಬಾ ಬೆವರು. ಕಷ್ಟಪಟ್ಟು ಮೊಳೆ ಹೊಡೆಯುತ್ತಾನೆ. ಸುತ್ತಿಗೆಯ ಲಾಸ್ಟ್ ಪಂಚ್‌ಗೆ ಎದೆ ಢವಢವ... ಚಾಲೆಂಜ್‌ನಲ್ಲಿ ಗೆದ್ದೇಬಿಟ್ಟೆ ಎಂಬ ಖುಷಿಯಲ್ಲಿ ಸಡನ್ನಾಗಿ ಹಿಂದೆ ತಿರುಗುತ್ತಾನೆ. ಅಷ್ಟೇ... ಯಾರೋ ಹಿಡಿದು, ಎಳೆದ ಅನುಭವ. ದಪ್ ಅಂತ ಅಲ್ಲೇ ಬೀಳುತ್ತಾನೆ. ಯಾಕೆ ಗೊತ್ತಾ? ಆತ ಮೊಳೆ ಹೊಡೆಯುವ ತರಾತುರಿಯಲ್ಲಿ ಚಳಿಗೆ ಹೊದ್ದಿದ್ದ ಶಾಲಿನ ತುದಿಯನ್ನು ಸೇರಿಸಿ, ಹೊಡೆದಿರುತ್ತಾನೆ!
**
ಇದು ಶಿಶಿರ ಚಿತ್ರದ ಕತೆಯಲ್ಲ. ಅದೇ ತಾಳಕ್ಕೆ ಹೊಂದುವ ಕತೆ. ಇದೇ ಥರದ ಕತೆ ಶಿಶಿರದಲ್ಲಿದೆ. ಮನಸ್ಸಿಗೆ ಮುಟ್ಟುವ ಕಲ್ಪನೆ. ಮನಸ್ಸಿನ ಇನ್ನೊಂದು ಭಾವದ ಜತೆ ಬೆಸೆದುಕೊಳ್ಳುವ ನಿರೂಪಣೆ. ನಿರ್ದೇಶಕ ಮಂಜು ಸ್ವರಾಜ್ ಮೊದಲ ಯತ್ನದಲ್ಲೇ ರಾಮ್ ಗೋಪಾಲ್ ವರ್ಮಾ ಹಾರರ್ ಚಿತ್ರಗಳಿಗೇ ಸವಾಲು ಹಾಕಿದ್ದಾರೆ. ಅದಕ್ಕೂ ಮೀರಿದ, ಭಿನ್ನ ಅನುಭವ ನೀಡುವ ಸಿನಿಮಾ ಮಾಡಿದ್ದಾರೆ.

ಕತೆ ಹಾಗೂ ಸನ್ನಿವೇಶಗಳಿಗೆ ತಕ್ಕಂತಿರುವುದು ಸಿನಿಮಾದ ಸೂತ್ರ-ಪಾತ್ರಧಾರಿ ಯಶಸ್. ಮೈ ನವಿರೇಳಿಸುವಂತೆ ನಟಿಸಿ, ಬೆಚ್ಚಿ ಬೀಳಿಸುತ್ತಾರೆ. ಒಂದೊಂದು ದೃಶ್ಯದಲ್ಲೂ ಒಂದೊಂದು ಮ್ಯಾನರಿಸಂ, ಭಯ ಮಿಶ್ರಿತ ಎದೆಗಾರಿಕೆ, ಆ ಕಣ್ಣಿನ ಲುಕ್ಕು, ಝಲಕ್ಕು ಎಲ್ಲವೂ ವರ್ಣಮಯ, ವರ್ಣನಾಮಯ!

ಪ್ರೇಮಾ ರೀ ಎಂಟ್ರಿ ವಿಶೇಷವಾಗಿದೆ. ಕೆಲವು ಹೊಸ ರೂಪ, ಭಾವದ ಪಾತ್ರಗಳು ಕೊನೆತನಕ ಕಾಡುತ್ತವೆ. ಹೊಸ ಹುಡುಗ ಅಜನೀಶ್ ಲೋಕನಾಥ್ ಸಂಗೀತ ಹಾಗೂ ರೀರೆಕಾರ್ಡಿಂಗ್ ಮೆಚ್ಚಲೇಬೇಕು. ಪ್ರತೀ ಹಂತದಲ್ಲೂ ಅದು ಪ್ರೇಕ್ಷಕರನ್ನು ಹಿಡಿದು ಕೂಡಿಸುತ್ತದೆ. ಸುರೇಶ್‌ಬಾಬು ಕ್ಯಾಮೆರಾ ಕೈಚಳಕ ನಿಜಕ್ಕೂ ಭಯ ಹುಟ್ಟಿಸುತ್ತದೆ. ಕತ್ತಲಲ್ಲೇ ಆಡಿರುವ ಆಟ ಬಲು ಬೊಂಬಾಟ...

ಒಟ್ಟಾರೆ ಶಿಶಿರ ಮೂಲಕ ಹೊಸ ವರ್ಷ ಹೊಸ ಟ್ರೆಂಡ್‌ನ ಪ್ರೇಕ್ಷಕರು ಹುಟ್ಟಿಕೊಂಡರೆ ಆಶ್ಚರ್ಯವಿಲ್ಲ. ಮಂಜು, ನಾಗತಿಹಳ್ಳಿ ಚಂದ್ರಶೇಖರ್ ಶಿಷ್ಯ ಎನ್ನುವುದು ಪ್ರೂವ್ ಆದರೆ ಸೋಜಿಗವಿಲ್ಲ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada