For Quick Alerts
  ALLOW NOTIFICATIONS  
  For Daily Alerts

  ವೀರ ಪರಂಪರೆ; ಪ್ರೇಕ್ಷಕರಿಗೆ ಬಲವಂತ ಮಾಘ ಸ್ನಾನ

  By * ರಾಜೇಂದ್ರ ಚಿಂತಾಮಣಿ
  |

  ಹಳ್ಳಿಗಳಲ್ಲಿ ಇನ್ನೂ ಈ ರೀತಿಯ ಸಂಸ್ಕೃತಿ, 'ಪರಂಪರೆ' ಉಳಿದಿದೆಯಾ? ಊರ ಗೌಡನೊಬ್ಬನಿಗೆ ಇಡೀ ಸರಕಾರವನ್ನೇ ನಡುಗಿಸುವ ತಾಕತ್ತು ಇರುತ್ತದೆಯೇ? ಗೌಡನ ಮಾತನ್ನು ಮೀರಿ ಅಡ್ದ ಬಂದರೆ ಹೆಣಗಳು ತರಗೆಲೆಗಳಂತೆ ಬೀಳುತ್ತವೆ. ಊರ ಗೌಡನಿಗೆ ವಯಸ್ಸಾದಂತೆ ಕಂಡರೂ ಹೊಡೆದಾಟಕ್ಕೆ ನಿಂತರೆ ಮಾತ್ರ ಟಗರಿನಂತೆ ಕಾದಾಡುತ್ತಾರೆ. ಈಗಷ್ಟೇ ತೆರೆಕಂಡಿರುವ 'ವೀರ ಪರಂಪರೆ' ಚಿತ್ರವನ್ನು ನೋಡಿದಾಗ ಕಲಾ ಸಾಮ್ರಾಟ್ ಎಸ್ ನಾರಾಯಣ್ ಹಳಸಲು ಅನ್ನವನ್ನು ಮೃಷ್ಟಾನ್ನದಂತೆ ಬಡಿಸಿದ್ದಾರೆ ಅನ್ನಿಸುತ್ತದೆ.

  ಊರಿಗೆ ಒಬ್ಬನೇ ಗೌಡ ಅವನೇ ವರದೇಗೌಡ(ಅಂಬರೀಷ್). ಆತನ ಮಾತೆಂದರೆ ಲಕ್ಷ್ಮಣ ರೇಖೆಯಿದ್ದಂತೆ. ಕಣ್ಬಿಟ್ಟರೆ ಎದುರಾಳಿ ಭಸ್ಮ. ಆತನೊಂದಿಗೆ ಕೈಜೋಡಿಸಿದರೆ ಸ್ನೇಹಜೀವಿ. ಊರಿಗೆ ಉಪಕಾರಿ ಊರವರಿಗೆ ಪರೋಪಕಾರಿ. ತಲೆತಲಾಂತರದಿಂದ ಬಂದಂತಹ ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಬಂದ 'ವೀರ ಪರಂಪರೆ' ಅದು. ಆ ಪರಂಪರೆಯ ಯಜಮಾನನೇ ವರದೇಗೌಡ.

  ಈ ವೀರಪರಂಪರೆಯನ್ನು ಮುಂದುವರೆಸಿಕೊಂಡು ಬರುವ ಜವಾಬ್ದಾರಿಗೆ ತೇಜ (ಸುದೀಪ್) ಕೂಡ ಹೆಗಲು ಕೊಟ್ಟಿರುತ್ತಾರೆ. ಈತ ವರದೇಗೌಡನ ಸಾಕುಮಗ. ತೇಜನ ತಂದೆ(ಶೋಭರಾಜ್) ಸತ್ತ ಬಳಿಕ ಆತನಿಗೆ ಅಪ್ಪ ಅಮ್ಮ ಎಲ್ಲವೂ ವರದೇಗೌಡ. ಹೊಡಿಬಡಿದಾಟದಲ್ಲಿ ತೇಜನದು ಎತ್ತಿದ್ದ ಕೈ. ಎದುರಾಳಿಗಳನ್ನು ಮಣ್ಣು ಮುಕ್ಕಿಸಲು ವರದೇಗೌಡನ ಒಂದು ಕಣ್ಸನ್ನೆ ಸಾಕು.

  ಅಂಬರೀಷ್ ಬಹಳ ವರ್ಷಗಳ ನಂತರ ಪೂರ್ಣಪ್ರಮಾಣದ ಪಾತ್ರದಲ್ಲಿ ಕಾಣಿಸಿದ್ದಾರೆ. ಈ ಪಾತ್ರದಲ್ಲಿ ಅಂಥಹ ವಿಶೇಷವೇನು ಎದ್ದು ಕಾಣುವುದಿಲ್ಲ. ಅದೇ ಗಿರಿಜಾ ಮೀಸೆ,ಅದೇ ದಿಗ್ಗಜರು ಸ್ಟೈಲು. ಪಾತ್ರದಲ್ಲಾಗಲಿ, ಕತೆಯಲ್ಲಾಗಲಿ ಹೊಸತನವಿಲ್ಲ. ಈಗಾಗಲೇ ಈ ರೀತಿಯ ಕತೆಗಳು ಸಾಕಷ್ಟು ಬಂದಿವೆ. ಆ ಸಾಲಿಗೆ 'ವೀರಪರಂಪರೆ' ಮತ್ತೊಂದು ಸೇರ್ಪಡೆ ಅಷ್ಟೆ.

  ಬಹುಶಃ ಎಸ್ ನಾರಾಯಣ್ ಅವರು ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ, ಸಂಗೀತ, ಸಾಹಿತ್ಯ ಹೀಗೆ ಸಮಸ್ತವನ್ನು ಒಬ್ಬರೇ ವಹಿಸಿಕೊಂಡ ಕಾರಣವೋ ಏನೋ ಚಿತ್ರ ಪ್ರೇಕ್ಷಕನಿಗೆ ಬಲವಂತ ಮಾಘ ಸ್ನಾನದಂತಿದೆ. ಹಾಗಂತ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಅಂಶಗಳೇನು ಇಲ್ಲ ಎನ್ನುವಂತಿಲ್ಲ. ಚಿತ್ರದ ಒಂದೆರಡು ಹಾಡುಗಳು ಚೆನ್ನಾಗಿವೆ.

  "ತಂಗಾಳಿಯಂತೆ ಹಾರಿ ಹೋದೆನು"...ಹಾಗೂ "ನನ್ನ ಮಣ್ಣಿದು..." ಹಾಡು ಗಳು ನೆನಪಿನಲ್ಲಿ ಉಳಿಯುತ್ತವೆ. ಉಳಿದಂತೆ ಐಂದ್ರಿತಾ ರೇ ನಟನೆಯಾಗಲಿ, ಥಳುಕು ಬಳುಕು ಯಾವುದೂ ಗಮನಸೆಳೆಯುವುದಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪಾತ್ರ. ಸಂಭಾಷಣೆಗಿಂತ ಹೊಡೆದಾಟಕ್ಕೆ ಹೆಚ್ಚಾಗಿ ಮೀಸಲಾದ ಪಾತ್ರ ಸುದೀಪ್ ಅವರದು. ಎದುರಾಳಿಯನ್ನು ಬಟ್ಟೆ ಒಗೆದಂತೆ ಸದೆಬಡಿದಿದ್ದಾರೆ ಸುದೀಪ್.

  ಎಸ್ ನಾರಾಯಣ್ ಕತೆಯನ್ನು ಸಿಕ್ಕಾಪಟ್ಟೆ ಎಳೆದಾಡಿ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸಿದ್ದಾರೆ. ಈ ಎಳೆದಾಟದ ನಡುವೆ ಶರಣ್ ಅವರ ನಗೆಗುಳಿಗೆ ಕೊಂಚ ರಿಲ್ಯಾಕ್ಸ್ ಕೊಡುತ್ತವೆ. ವಿಜಯಲಕ್ಷ್ಮಿ ಸಿಂಗ್ ಅವರು ಗರತಿ ಗೌರಮ್ಮನಾಗಿ, ಗಯ್ಯಾಳಿ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಭಾವನಾತ್ಮಕ ಸನ್ನಿವೇಷಗಳಲ್ಲಿ ಸುದೀಪ್ ಮತ್ತು ಅಂಬರೀಷ್ ಪೈಪೋಟಿಗೆ ಬಿದ್ದಂತೆ ಅಭಿನಯಿಸಿರುವುದು ಎದ್ದು ಕಾಣುವ ಅಂಶ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X