»   » ಕಥೆಯೇ ಇಲ್ಲದ ಕುರುಡು 'ಕಾಂಚಾಣ' ಚಿತ್ರ ವಿಮರ್ಶೆ

ಕಥೆಯೇ ಇಲ್ಲದ ಕುರುಡು 'ಕಾಂಚಾಣ' ಚಿತ್ರ ವಿಮರ್ಶೆ

Posted By: * ಶ್ರೀರಾಮ್ ಭಟ್
Subscribe to Filmibeat Kannada

ಕಾಂಚಾಣಕ್ಕೆ ಕಥೆಯೇ ಇಲ್ಲ. ಹಾಗಿದ್ದರೆ ಗಟ್ಟಿಯಾದ ಚಿತ್ರಕಥೆ ಇರಬೇಕು ಎಂದು ನೀವಂದುಕೊಂಡರೆ ಅದೂ ಸುಳ್ಳು. ಹಾಗಿದ್ದರೆ ಇನ್ನೇನಿದೆ ಎಂದರೆ ಸಂಬಂಧವಿಲ್ಲದ ಸನ್ನಿವೇಶಗಳಿವೆ ಅಷ್ಟೇ. ಅದಕ್ಕೆ ಪಾತ್ರಧಾರಿಗಳಾಗಿ ಒಂದಷ್ಟು ನಟರು, ನಟಿಯರು. ಹಾಗೆ ಬಂದು ಹೀಗೆ ಹೋಗುವ ಪೋಷಕ ನಟರು. ಸಿದ್ಧತೆ ಇಲ್ಲದೇ ಸಿನಿಮಾ ಮಾಡಿದರೆ ಹೇಗಿರುತ್ತದೆ ಎಂಬುದಕ್ಕೆ ಕಾಂಚಾಣ ಸಲೀಸು ಸಾಕ್ಷಿ.

'ಕಾಂಚಾಣ' ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಶ್ರೀ ಗಣೇಶ್ ಎಂಬ ನಿರ್ದೇಶಕರಿದ್ದಾರೆ ಎಂಬುದೇ ಸಮಾಧಾನದ ಸಂಗತಿ. ಈ ಸಿನಿಮಾದಲ್ಲಿ 'ಕಾಂಚಾಣವೇ ಎಲ್ಲದಕ್ಕೂ ಮೂಲ. ದುಡ್ಡೇ ದೊಡ್ಡಪ್ಪ. ಅದಕ್ಕಾಗಿ ವಾಮಮಾರ್ಗಕ್ಕೂ ಜನ ಇಳಿಯುತ್ತಾರೆ' ಎಂಬುದನ್ನು ಹೇಳಬೇಕಿತ್ತು ಎನಿಸುತ್ತದೆ. ಆದರೆ ಅದನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಸಂಪೂರ್ಣ ವಿಫಲರಾಗಿದ್ದಾರೆ.

ದಾರವೇ ಇಲ್ಲದ ಗಾಳಿಪಟವಾಗಿದೆ ಕಾಂಚಾಣ. ಕಥೆಯೇ ಇಲ್ಲದ ಸಿನಿಮಾ ಕನಿಷ್ಠ ಚಿತ್ರಕಥೆಯೂ ಇಲ್ಲದೇ ಗೊಂದಲದ ಗೂಡಾಗಿದೆ. ಸಂಭಾಷಣೆಯನ್ನು ಸೇರಿಸಿ ದೃಶ್ಯ ಮಾಧ್ಯಮದೊಂದಿಗೆ ಬೆಸೆದ ದೊಂಬರಾಟ ಈ ಕಾಂಚಾಣ ಎಂದರೆ ಸತ್ಯ ಹರಿಶ್ಚಂದ್ರನ ಬಾಯಿಂದ ಬಂದ ಮಾತು ಎಂದುಕೊಳ್ಳಲೇಬೇಕು. ನಿರ್ದೆಶಕರು ಬೇಸರಿಸಿಕೊಂಡರೆ ಮುಂದೆ ಒಳ್ಳೆಯ ಸಿನಿಮಾ ಮಾಡುವ ಅವಕಾಶಕ್ಕೂ ಕಲ್ಲು. ಆಸಕ್ತಿ ಉಳಿಸಿಕೊಂಡು ಇನ್ನೊಂದು ಒಳ್ಳೆಯ ಸಿನಿಮಾ ಕೊಡಬಹುದು ಅಲ್ಲವೇ?

ಒಳ್ಳೆಯ ಹಾಸ್ಯಚಿತ್ರ ಆಗಬಹುದಾಗಿದ್ದ ಸಿನಿಮಾ ಅತ್ತ ಕಾಮಿಡಿಗೂ ಒಗ್ಗದೇ ಇತ್ತ ಟ್ರಾಜಿಡಿಗೂ ಸಿಗದೇ ಒದ್ದಾಡಿ ಸಾಯುವುದನ್ನು ಪ್ರೇಕ್ಷಕ ನೋಡಿ ಎದ್ದು ಬರಬೇಕಾಗಿದೆ. ಹಣ ಇರುವ ನಿರ್ಮಾಪಕರು ಅದನ್ನು ಖಾಲಿ ಮಾಡಲು ಇಂತಹ ಸಿನಿಮಾ ಮಾಡಬಹುದೆಂಬ ಐಡಿಯಾ ಇಲ್ಲಿ ಸಿಗುವುದು ಗ್ಯಾರಂಟಿ. ಜಾಹೀರಾತು ನಿರ್ದೇಶಕರು ಸಿನಿಮಾ ನಿರ್ದೇಶಕರಾಗಲು ಇಷ್ಟು ಸಾಕು ಅಂದುಕೊಂಡಿರಬಹುದು. ಮಾಡಿದ ಮೇಲೆ ಒಮ್ಮೆ ಕೂಡ ನೋಡದೇ ಬಿಡುಗಡೆ ಮಾಡಿದರೆ ಹೇಗೆ?

ಇನ್ನು ಕಥೆ, ಚಿತ್ರಕಥೆ ಇಲ್ಲದ ಸಿನಿಮಾ ಬಗ್ಗೆ ಹೇಳುವುದೇನು? ಸಂಬಂಧಗಳಿಲ್ಲದ ದೃಶ್ಯಗಳಲ್ಲಿ ಯಾವುದನ್ನು ಹೇಳುವುದು? ಎಲ್ಲಾ ದೃಶ್ಯಗಳನ್ನು ಇಲ್ಲಿಯೇ ಹೇಳಿದರೆ ಹೋಗಿ ನೋಡುವುದೇನು? ತಬಲಾ ನಾಟಿಯವರ ಸಂಭಾಷಣೆ ಹಳಸಲು ಹಾಗೂ ಗೊಜಲು. ತೆಲುಗು, ತಮಿಳು ಸಿನಿಮಾಗಳಲ್ಲಿ ಬಂದು ಹೋಗಿರುವ ಹಾಸ್ಯಚಟಾಕಿಗಳ ಪಡಿಯಚ್ಚಿನ ನೆರಳು.

ಇನ್ನು ಪ್ರಮುಖ ಪಾತ್ರದಾರಿಗಳ ಬಗ್ಗೆ ಹೇಳಲೇಬೇಕು. ದಿಗಂತ್ ಚಿತ್ರದ ನಾಯಕ. ರಾಗಿಣಿ ನಾಯಕಿ. ಕಿರಣ್ ಎರಡನೇ ನಾಯಕ ಅಲ್ಲ, ಮಧ್ಯಂತರದ ಮೇಲೆ ಬರುವ ಇನ್ನೊಬ್ಬ ನಾಯಕ. ತಬಲಾ ನಾಣಿ ಹಾಗೂ ನೀನಾಸಂ ಸತೀಶ್ ನಾಯಕನ ಗೆಳೆಯರು. ಆದರೆ ಮೂವರಿಗೂ ಒಂದೇ ರೀತಿಯ ಉದ್ಯೋಗ. ರಾಗಿಣಿ, ದಿಗಂತ್ ಪ್ರೇಯಸಿ ಆಗಿರುವುದರಿಂದ ಚಿತ್ರದ ನಾಯಕಿ. ಅಥವಾ ದಿಗಂತ್ ರಾಗಿಣಿಯ ಪ್ರಿಯತಮ ಆಗಿರುವುದರಿಂದ ನಾಯಕ ಎಂದಾದರೂ ಸರಿಯೇ.

ದಿಗಂತ್ ಅಭಿನಯ ಸಲೀಸು, ಮಾಮೂಲು. ಅವರಿಗೆ ಈ ತರಹದ್ದು ಅಭಿನಯ ಅಲ್ಲ, ಅಭ್ಯಾಸ ಎನ್ನಿಸುವಷ್ಟು ಲೀಲಾಜಾಲತೆ ಮೆರೆದಿದ್ದಾರೆ. ಕಿರಣ್, ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ದೇವರು ಕೊಟ್ಟ ಧ್ವನಿಯ ಪ್ರಯೋಜನ ತೆಗೆದುಕೊಂಡರೆ ಕಿರಣ್, ಪ್ರಶಸ್ತಿಯಲ್ಲಯೇ ಪಲ್ಲಂಗ ಮಾಡಿಸಿಕೊಳ್ಳಬಹುದು. ರಾಗಿಣಿ ಇಲ್ಲದಂತೆ ಇದ್ದಾರೆ. ನೀನಾಸಂ ಸತೀಶ್ ಹಾಗೂ ತಬಲಾ ನಾಣಿ ನಟನೆ ಓಕೆ, ಆದ್ರೆ ಸಿನಿಮಾ ತುಂಬ ಯಾಕೆ?

ಮುಖ್ಯಮಂತ್ರಿ ಚಂದ್ರು ಈಗಿನ ಮುಖ್ಯಮಂತ್ರಿ ಸದಾನಂದ ಗೌಡರ ಪ್ರತಿನಿಧಿ, ಇದ್ದಾರೆ ಅಷ್ಟೇ. ಸಂಬಂಧವೇ ಇಲ್ಲದ ಪಾತ್ರಧಾರಿಗಳಾಗಿ ಇದ್ದಾರೆ, ಮಿತ್ರ, ಟೆನ್ನಿಸ್ ಕೃಷ್ಣ ಹಾಗೂ ಬಿರಾದಾರ್. ಭೂಗತ ಲೋಕಕ್ಕೇ ಅವಮಾನ ಎನಿಸುವ ಇನ್ನೊಂದಿಷ್ಟು ಪಾತ್ರಧಾರಿಗಳು. ನಟನಟಿಯರನ್ನು ಗುಡ್ಡೆ ಹಾಕಿಕೊಂಡರೆ ಅದು ಕನ್ನಡ ಸಿನಿಮಾ ಅಂತ ಯಾರು ಶ್ರೀಗಣೇಶ್ ಅವರಿಗೆ ಹೇಳಿದರೋ!

ಸಾಹಿತ್ಯ, ಹಾಡುಗಳು ಥಿಯೇಟರ್ ಸೀಟಿನಿಂದೆದ್ದ ಮೇಲೆ ನೆನಪಾದರೆ ಹೇಳಿ. ಹಿನ್ನಲೆ ಸಂಗೀತದ ಬಗ್ಗೆ ಹೇಳಲೇಬಾರದು. ಇಲ್ಲಿ 'ಕಿರುತೆರೆ' ಸಿನಿಮಾದ ಒಂದು ಭಾಗವೇ ಆಗಿರುವುದರಿಂದಲೋ ಏನೋ ಕ್ಯಾಮೆರಾ ಕೆಲಸ ಹಾಗೇ ಇದೆ. ಸಂಕಲನ ಆಗಿರುವುದು ಸಂಶಯ. ಒಂದು ಹಾಡಿನಲ್ಲಿ ಸೋನು ನಿಗಮ್ ಧ್ವನಿ ಕೇಳಬಹುದು. ಇನ್ನೇನಾದರೂ ಉಳಿದಿದ್ದರೆ ನೋಡಿ ಆನಂದಿಸಿ...

ನೋಡಿ ಬಂದ ಮೇಲೆ ಕೊನೆಯಲ್ಲಿ ಅನ್ನಿಸುವುದಿಷ್ಟು. ಇಷ್ಟಕ್ಕೂ ಇಂತಹ ಚಿತ್ರವನ್ನು ಯಾರಿಗೆ ಯಾಕೆ ಮಾಡಬೇಕು ಅನ್ನಿಸಿತೋ! ಇದಕ್ಕೆ ನಿರ್ದೇಶಕರು ಬೇಕಿತ್ತೇ ಎಂಬ ಪ್ರಶ್ನೆಗೆ ಉತ್ತರ ಹೇಳಲು ವಿಶ್ವೇಶ್ವರಯ್ಯನವರು ಬೇಕಾಗಿಯೇ ಇಲ್ಲ. ಕೆಲವೊಂದು ಸನ್ನಿವೇಶ ನಗೆ ತರಿಸುತ್ತದೆ ಎಂಬುದನ್ನು ಬಿಟ್ಟರೆ ಪ್ರೇಕ್ಷಕ ಕೊಟ್ಟ ಕಾಂಚಾಣಕ್ಕೆ ಬೆಲೆಯೇ ಸಿಗುವುದಿಲ್ಲ. ಬೇಂದ್ರೆಯವರ 'ಕುರುಡು ಕಾಂಚಾಣ' ಹಾಡು ನೆನಪಾದರೆ ಹಾಡಿಬಿಡಿ.

English summary
This is Kannada movie Kanchana review. Diganth, Ragini Dwivedi, Tabla Nani, Satish, Kiran, Mithra and others are in the cast. Sri Ganesh directed movie kanchana. Unfortunately it has to say this is not worth to watch. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada