»   » ವಿಮರ್ಶೆ: 'ಮಠ' ಗುರುಗಳ 'ಎರಡನೇ ಸಲ' ಸಖತ್ ನಾಟಿ

ವಿಮರ್ಶೆ: 'ಮಠ' ಗುರುಗಳ 'ಎರಡನೇ ಸಲ' ಸಖತ್ ನಾಟಿ

Posted By:
Subscribe to Filmibeat Kannada

'' ಕೆಟ್ಟ ಮಗ ಇರ್ತಾನೆ, ಆದ್ರೆ ಕೆಟ್ಟ ತಾಯಿ ಇರುವುದಿಲ್ಲ. ತಾವು ಕಷ್ಟ ಪಟ್ಟರು ಪರವಾಗಿಲ್ಲ, ತಮ್ಮ ಮಕ್ಕಳು ಸುಖವಾಗಿರಬೇಕು ಎಂಬುದು ಎಲ್ಲಾ ತಾಯಂದಿರ ಮಹಾದಾಸೆ. ಇದರ ಜೊತೆಗೆ ಮಕ್ಕಳು ತಮ್ಮ ತಾಯಿಯನ್ನ ಕೊನೆವರೆಗೂ ಜೊತೆಯಲ್ಲಿಟ್ಟುಕೊಂಡು ಸಂತೋಷವಾಗಿರಿಸಿಕೊಳ್ಳಬೇಕು ಎಂಬ ಸಣ್ಣ ಸ್ವಾರ್ಥ. ಇದೇ ಅಂಶವನ್ನ ಒಂದು ನವಿರಾದ ಪ್ರೇಮಕಥೆಯೊಂದಿಗೆ ಬಿಂಬಿಸಿರುವ ಕಥೆಯೇ 'ಎರಡನೇ ಸಲ''

Rating:
3.5/5

ಚಿತ್ರ : ಎರಡನೇ ಸಲ
ಕಥೆ-ನಿರ್ದೇಶನ : ಗುರುಪ್ರಸಾದ್
ಚಿತ್ರಕಥೆ-ಸಂಭಾಷಣೆ: ಗುರು ಪ್ರಸಾದ್
ನಿರ್ಮಾಣ : ಯೋಗೇಶ್ ನಾರಾಯಣ್ (ಮೊದಲ ಸಲ)
ಛಾಯಾಗ್ರಹಣ: ಸಾಮ್ರಾಟ್ ಅಶೋಕ್ ಗೌತಮ್
ಸಂಗೀತ : ಅನೂಪ್ ಸೀಳಿನ್
ತಾರಾಗಣ : ಧನಂಜಯ್, ಸಂಗೀತಾ ಭಟ್, ಲಕ್ಷ್ಮಿ, ಅವಿನಾಶ್, ಕಿರಿಕ್ ಕೀರ್ತಿ, ಪದ್ಮಜ ರಾವ್ ಮತ್ತು ಇತರರು
ಬಿಡುಗಡೆ : ಮಾರ್ಚ್ 3, 2017

ತಾಯಿ-ಮಗ ಮತ್ತು ಪ್ರೇಯಸಿ

ಒಂದೇ ಮನೆಯಲ್ಲಿ ವಾಸ ಮಾಡುವ ತಾಯಿ-ಮಗ ಮತ್ತು ಪ್ರೇಯಸಿ ನಡುವೆ ನಡೆಯುವ ಕಥೆಯೇ 'ಎರಡನೇ ಸಲ'. ತಾಯಿಗೆ ಮಗನ ಮೇಲೆ ನಂಬಿಕೆ, ಮಗನಿಗೆ ಪ್ರೇಯಸಿ ಮೇಲೆ ಪ್ರೀತಿ. ಹೀಗಿರುವಾಗ, ತಾಯಿಯ ನಂಬಿಕೆಯನ್ನ ಉಳಿಸಿಕೊಳ್ಳಬೇಕು, ಪ್ರೇಯಸಿಯ ಪ್ರೀತಿಯನ್ನ ಗಳಿಸಬೇಕು ಎಂಬುದರ ನಡುವೆ ನಾಯಕನ ಹೋರಾಟ. ಮಗ ಇಬ್ಬರ ವಿಶ್ವಾಸವನ್ನ ಗೆಲ್ಲುತ್ತಾನ? ಎಂಬುದು ಕುತೂಹಲ.

ಬೋಲ್ಡ್ ಸ್ಟೋರಿ

ನಾಯಕ (ಧನಂಜಯ್) ಮತ್ತು ನಾಯಕಿ (ಸಂಗೀತಾ ಭಟ್) ನಡುವಿನ ಬೋಲ್ಡ್ ಲವ್ ಸ್ಟೋರಿ 'ಎರಡನೇ ಸಲ' ಚಿತ್ರದ ಪ್ರಮುಖ ಆಕರ್ಷಣೆ. ಧನಂಜಯ್ ಮತ್ತು ಸಂಗೀತಾ ಭಟ್ ಇಬ್ಬರು ಕೂಡ ಪಾತ್ರಗಳು ಎನ್ನುವುದನ್ನ ಮರೆತು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಚೆನ್ನಾಗಿ ವರ್ಕೌಟ್ ಆಗಿದೆ.

'ಗುರು' ಪ್ರಸಾದ್ ಸ್ಟೈಲ್ ಸಿನಿಮಾ

ಚಿತ್ರದಲ್ಲಿ ಕಥೆಯನ್ನ ಹುಡುಕುವುದು ಕಷ್ಟ. ಯಾಕಂದ್ರೆ ಇಲ್ಲಿ ಕಥೆ ಇಲ್ಲ. ನಾಲ್ಕು ಬಗೆಯ ಪ್ರೇಮಿಗಳ ಪಾತ್ರವನ್ನ ಸೃಷ್ಟಿಸಿ, ಇಡೀ ಚಿತ್ರವನ್ನ ಅವರ ಮುಖಾಂತರವೇ ತೆಗೆದುಕೊಂಡು ಹೋಗಿದ್ದಾರೆ ನಿರ್ದೇಶಕರು. ಇಡೀ ಸಿನಿಮಾ ಡೈಲಾಗ್ ಗಳ ಸುರಿಮಳೆಯಿಂದ ತುಂಬಿದೆ. ದ್ವಂದ್ವಾರ್ಥ ಶೈಲಿಯ ಸಂಭಾಷಣೆಗೆ ಒತ್ತು ನೀಡಿದ್ದರೂ, ಅದು ಅವಶ್ಯಕತೆಗಿಂತ ಮೀರಿಲ್ಲ. ಉಳಿದಂತೆ ಡೈಲಾಗ್ ಗಳು ಪಂಚಿಗ್ ಆಗಿರುವುದರಿಂದ ಜನರಿಗೆ ಇಷ್ಟವಾಗುತ್ತೆ.

ಮನಮುಟ್ಟುವ ಸಂದೇಶ

ಟ್ರೈಲರ್ ನೋಡಿ, ಇದೊಂದು ನಾಟಿ ಲವ್ ಸ್ಟೋರಿ ಎಂದು ಅಂದುಕೊಂಡಿದ್ದರೇ ಅದು ತಪ್ಪು. ನಾಟಿ ಲವ್ ಸ್ಟೋರಿಯಲ್ಲಿ ಮನಮುಟ್ಟುವಂತಹ ತಾಯಿ ಸೆಂಟಿಮೆಂಟ್ ಚಿತ್ರದಲ್ಲಿದೆ. ಚಿತ್ರದಲ್ಲಿ ಎಷ್ಟು ಬೇಕೋ ಅಷ್ಟು ರಂಜಿಸುವ ನಿರ್ದೇಶಕರು, ಅಂತಿಮವಾಗಿ ಹೃದಯ ಮುಟ್ಟುವ ಸಂದೇಶವನ್ನ ನೀಡಿ ಗಮನ ಸೆಳೆಯುತ್ತಾರೆ.

ಧನಂಜಯ್ ಅಭಿನಯ ಹೇಗಿದೆ?

ಸ್ಪೆಷಲ್ ಹುಡುಗನ ಮತ್ತೊಂದು ಸ್ಪೆಷಲ್ ಪರ್ಫಾಮೆನ್ಸ್ ಎನ್ನಬಹುದು. ಇಲ್ಲಿ ಹೀರೋಯಿಸಂ ಇಲ್ಲ. ಅಭಿನಯಕ್ಕೆ ಮಾತ್ರ ಜಾಗ. ಲವರ್ ಬಾಯ್ ಪಾತ್ರದ ಜೊತೆಗೆ ಪ್ರೀತಿಯ ಅಮ್ಮನಿಗೆ, ಸಜ್ಜನ ಗುಣವುಳ್ಳ ಮಗನಾಗಿ ಧನಂಜಯ್ ಉತ್ತಮವಾಗಿ ಅಭಿನಯಿಸಿದ್ದಾರೆ. ಡೈಲಾಗ್, ಆಕ್ಟಿಂಗ್, ಫೈಟ್ ಮೂಲಕ ಧನಂಜಯ್ ಇಷ್ಟವಾಗುತ್ತಾರೆ.

ಸಂಗೀತಾ ಭಟ್

ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಗೀತಾ ಭಟ್ ಚಿತ್ರದಲ್ಲಿ ಹೆಚ್ಚು ಆಕರ್ಷಣೆ ಆಗಿದ್ದಾರೆ. ಡಿ-ಗ್ಲಾಮರ್ ಪಾತ್ರವಾದ್ರೂ, ಹೆಚ್ಚು ಬೋಲ್ಡ್ ಆಗಿ ಪಾತ್ರ ನಿರ್ವಹಿಸಿರುವ ಸಂಗೀತಾ ಭಟ್ ಎಲ್ಲೂ ರಾಜಿ ಆಗದೆ ಅಭಿನಯಿಸಿದ್ದಾರೆ. 'ಎರಡನೇ ಸಲ' ಚಿತ್ರದಲ್ಲಿ ಸಂಗೀತಾ ಭಟ್ ಪಾತ್ರಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು.

ಉಳಿದವರು ಹೇಗೆ....

ಧನಂಜಯ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಷ್ಮಿ ಅವರ ನಟನೆ ಅದ್ಭುತ. ತಾಯಿಯ ಪಾತ್ರಕ್ಕೆ ತಕ್ಕ ಅಭಿನಯ. ನಾಯಕಿಯ ತಾಯಿ ಪಾತ್ರದಲ್ಲಿ ಪದ್ಮಜ ರಾವ್ ಬಣ್ಣ ಹಚ್ಚಿದ್ದು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಕಿರಿಕ್ ಕೀರ್ತಿ, ಅವಿನಾಶ್ ಸೇರಿದಂತೆ ಎಲ್ಲರೂ ಉತ್ತಮ ಸಾಥ್ ಕೊಟ್ಟಿದ್ದಾರೆ.

ಗುರು ಪ್ರಸಾದ್ ನಿರ್ದೇಶನ?

ನಿರ್ದೇಶಕ ಗುರು ಪ್ರಸಾದ್, 'ಡೈರೆಕ್ಟರ್ ಸ್ಪೆಷಲ್', 'ಮಠ', 'ಎದ್ದೇಳು ಮಂಜುನಾಥ' ಮತ್ತೊಂದು ವಿಭಿನ್ನವಾದ ಸಿನಿಮಾ ನೀಡಿದ್ದಾರೆ. ಗುರು ಪ್ರಸಾದ್ ಅವರ ಸಿನಿಮಾ ಶೈಲಿ ಒಂದೇ ಆದ್ರೂ, ಪ್ರೆಸೆಂಟೇಷನ್ ಚೆನ್ನಾಗಿದೆ. ನೋಡುಗರಿಗೆ ಸಿನಿಮಾ ಬೋರ್ ಎನ್ನಿಸುವುದಿಲ್ಲ. ಹಾಗಾಗಿ, ನಿರ್ದೇಶಕರ ಜಾಣ್ಮೆ ಮೆಚ್ಚುವಂತಹದ್ದು.

ಅನೂಪ್ ಸೀಳಿನ್ ಸಂಗೀತ

ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಹಾಡುಗಳು ಕಿವಿಗೆ ಇಂಪಾಗಿದೆ. ಥಿಯೇಟರ್ ನಿಂದ ಹೊರಬಂದ ಮೇಲೂ ಪ್ರೇಕ್ಷಕರ ಬಾಯಲ್ಲಿ 'ಪ್ರೇಮ ಕುರುಡು' ಸಾಹಿತ್ಯ ಗುನುಗುತ್ತದೆ.

ಎಂಟರ್ ಟೈನ್ಮೆಂಟ್ ಪಕ್ಕಾ!

'ಎರಡನೇ ಸಲ' ಚಿತ್ರ 'ಮೊದಲ ಸಲ'ವೇ ಮೋಡಿ ಮಾಡುತ್ತೆ. ಇದು ಕೇವಲ ಕ್ಲಾಸ್ ಅಥವಾ ಮಾಸ್ ಪ್ರೇಕ್ಷಕರು ಎನ್ನದೇ ಎಲ್ಲರೂ ನೋಡಬಹುದಾದ ಚಿತ್ರ. ಅಭಿಮಾನಿ ದೇವರುಗಳು ಇಷ್ಟ ಪಡುವ ಎಂಟರ್ ಟೈನ್ಮೆಂಟ್ ಚಿತ್ರದಲ್ಲಿದೆ.

English summary
Kannada Actor Dhananjay Starrer 'Eradane Sala' Movie Has hit the Screens today (March 3rd). The Movie is Directed by Guru Prasad. Here is the complete Review of 'Eradane Sala'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada