»   » 'ಅಂಬರ' ವಿಮರ್ಶೆ: ಅತಳ, ವಿತಳ, ಸುತಳ, ಪಾತಾಳ

'ಅಂಬರ' ವಿಮರ್ಶೆ: ಅತಳ, ವಿತಳ, ಸುತಳ, ಪಾತಾಳ

By: ಉದಯರವಿ
Subscribe to Filmibeat Kannada

ಈ ಚಿತ್ರಕ್ಕೆ ಯಾಕಾದ್ರು ಬಂದ್ನೋ!? ಬೇರೆ ಸಿನಿಮಾಗಾದ್ರೂ ಹೋಗಿದ್ರೆ ಚೆನ್ನಾಗಿರ್ತಿತ್ತು ಅನ್ನಿಸುತ್ತದೆ. ಸ್ವಲ್ಪ ಟೈಂ ಪಾಸ್ ಆದ್ರೂ ಆಗುತ್ತಿತ್ತು. 'ಅಂಬರ' ಚಿತ್ರ ನೋಡಿದ ಮೇಲೆ ಈ ರೀತಿಯ ಪ್ರಶ್ನೆಗಳು ಬಂದೇ ಬರುತ್ತವೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ.

ಒಂದು ಚಿತ್ರಕ್ಕೆ ಏನು ಬೇಕು ಅವೆಲ್ಲವೂ 'ಅಂಬರ' ಚಿತ್ರದಲ್ಲಿವೆ. ಆದರೆ ಯಾವುದು ಎಷ್ಟೆಷ್ಟು ಪ್ರಮಾಣದಲ್ಲಿರಬೇಕು ಎಂಬುದೇ ಇಲ್ಲಿನ ಕೊರತೆ. ಸಾರಿಗೆ ಉಪ್ಪು, ಖಾರ ಹೆಚ್ಚು ಕಡಿಮೆಯಾದರೆ ಹೇಗೆ ರುಚಿಕೆಡುತ್ತದೋ ಅದೇ ರೀತಿ 'ಅಂಬರ' ಚಿತ್ರದ ಪರಿಸ್ಥಿತಿಯೂ ಆಗಿದೆ.

ಚಿತ್ರದ ಕಥೆ ಶುರುವಾಗುವುದೇ ಕೊನೆಕೊನೆಗೆ. ಅಲ್ಲಿಯವರೆಗೂ ನಿರ್ದೇಶಕರು ಇಲ್ಲದ ಕಥೆಯನ್ನು ಸುಖಾಸುಮ್ಮನೆ ಎಳೆದಾಡಿದ್ದಾರೆ. ಚಿತ್ರದ ಮೊದಲರ್ಧ ಕಾಲೇಜಿನಲ್ಲೇ ಗಿರಕಿ ಹೊಡೆಯುತ್ತದೆ. ದ್ವಿತೀಯಾರ್ಧದಿಂದ ಕಥೆ ಚುರುಕಾಗಿ ಸಾಗುತ್ತದೆ. ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತಾ ಕೊನೆ ಕೊನೆಗೆ ಊಹೆಗೂ ನಿಲುಕದಂತಾಗುತ್ತದೆ.

Rating:
2.0/5

ಚಿತ್ರ: ಅಂಬರ
ನಿರ್ಮಾಪಕರು: ಬಿ.ಆರ್.ಆನಂದ್ ರಾಜ್
ಕಥೆ, ಚಿತ್ರಕಥೆ, ನಿರ್ದೇಶನ: ಸೇನ್ ಪ್ರಕಾಶ್
ಸಂಗೀತ: ಅಭಿಮಾನ್ ರಾಯ್
ಛಾಯಾಗ್ರಹಣ: ಸಿನಿಟೆಕ್ ಸೂರಿ
ಸಂಭಾಷಣೆ: ನಾಗರಾಜ್ ಕೋಟೆ ಮತ್ತು ಶಂಕರ್ ನಾರಾಯಣ್
ಸಂಕಲನ: ಆರ್.ಡಿ.ರವಿ
ಸಾಹಸ: ಡಿಫರೆಂಟ್ ಡ್ಯಾನಿ
ಪಾತ್ರವರ್ಗ: ಯೋಗೇಶ್, ಭಾಮಾ, ರಾಮಕೃಷ್ಣ, ಜೈ ಜಗದೀಶ್, ಸುಧಾ ಬೆಳವಾಡಿ, ವಿಶ್ವ, ಸಾಧುಕೋಕಿಲ, ಬ್ಯಾಂಕ್ ಜನಾರ್ಧನ್, ಹರೀಶ್ ರಾಜ್, ತಿಲಕ್ ಶೇಖರ್, ವಿನಾಯಕ ಜೋಶಿ ಮುಂತಾದವರು.

ಇಷ್ಟಕ್ಕೂ ಚಿತ್ರಕ ಕಥೆ ಏನೆಂದರೆ...

ಭೂಮಿಗಿಂತ ದೊಡ್ಡದು ಆಕಾಶ (ಅಂಬರ), ಅದಕ್ಕಿಂತಲೂ ದೊಡ್ಡದು ಪ್ರೀತಿ ಎಂಬುದೇ ಚಿತ್ರದ ಸಂದೇಶ. ಇಷ್ಟಕ್ಕೂ ಚಿತ್ರಕ ಕಥೆ ಏನೆಂದರೆ ಇದೊಂದು ಕಾಲೇಜು ಲವ್ ಸ್ಟೋರಿ. ಬಿ.ಎಸ್ಸಿ ಸ್ಟುಡೆಂಟ್ ಅಜಯ್ (ಯೋಗೀಶ್) ಹಾಗೂ ಕಾಮರ್ಸ್ ವಿದ್ಯಾರ್ಥಿನಿ ಅರುಂಧತಿ (ಭಾಮಾ) ನಡುವೆ ಲವ್ ಸ್ಟೋರಿ ಏಕಮುಖ ಸಂಚಾರದಲ್ಲೇ ಸಾಗುತ್ತದೆ.

ಒನ್ ವೇಯಲ್ಲೇ ಸಾಗುವ ಲವ್ ಸ್ಟೋರಿ

ಅವಳನ್ನು ಕಂಡರೆ ಅವನಿಗಿಷ್ಟ. ಆದರೆ ಬಾಯ್ಬಿಟ್ಟು ಹೇಳಲ್ಲ. ಅವಳಿಗೂ ಅಷ್ಟೇ ಅವನೆಂದರೆ ಇಷ್ಟ. ಅವಳೂ ಬಾಯಿ ಬಿಟ್ಟು ಹೇಳಲ್ಲ. ಇಬ್ಬರೂ ಒಬ್ಬರನ್ನೊಬ್ಬರೂ ಮಾತನಾಡದಂತೆ ಒಳಗೊಳಗೆ ಪ್ರೇಮಿಸುತ್ತಾರೆ. ಇವರಿಬ್ಬರ ಬಾಳಿನಲ್ಲಿ ಖಳನಟನಾಗಿ ತಿಲಕ್ ಆಗಮಿಸುತ್ತಾರೆ. ದಕ್ಷಿಣದಿಂದ ಕಥೆ ಉತ್ತರದ ಕಡೆಗೆ ಸಾಗುತ್ತದೆ.

ಪ್ರೇಕ್ಷಕನ ಪರಿಸ್ಥಿತಿಯೂ ನಡುನೀರೇ ಗತಿ

ಅಲ್ಲಿ ಒಂದಷ್ಟು ಹೊಡೆದಾಟ ಬಡಿದಾಟ. ಬಳಿಕ ನಾಯಕ ನಟ ಗಂಗಾನದಿ ಪಾಲು. ಕಡೆಗೆ ಇಬ್ಬರೂ ಒಂದಾಗುತ್ತಾರಾ, ನಾಯಕ ನಟ ಏನಾಗುತ್ತಾನೆ. ನಾಯಕಿ ಪರಿಸ್ಥಿತಿ ಏನು ಎಂದು ಗೊತ್ತಾಗುವಷ್ಟರಲ್ಲಿ ಪ್ರೇಕ್ಷಕನ ಪರಿಸ್ಥಿತಿಯೂ ನಡುನೀರಿನಲ್ಲಿ ಸಿಕ್ಕಿಕೊಂಡಂತಾಗಿರುತ್ತದೆ.

ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಕೆಲವು

ಚಿತ್ರದಲ್ಲಿ ಸ್ವಲ್ಪ ಸಮಾಧಾನ ತರುವ ಅಂಶಗಳೆಂದರೆ ಸಿನಿಟೆಕ್ ಸೂರಿ ಅವರ ಛಾಯಾಗ್ರಹಣ, ಅಭಿಮಾನ್ ರಾಯ್ ಅವರ ಸಂಗೀತ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ಸನ್ನಿವೇಶಗಳು. ಸಾಹಸ ಸನ್ನಿವೇಶಗಳಲ್ಲಿ ಯೋಗಿ ಲೀಲಾಜಾಲವಾಗಿ ತೊಡಗಿಕೊಂಡಿದ್ದಾರೆ. ಆದರೆ ಅವರ ಹಾವಭಾವಗಳಲ್ಲಿ ಇನ್ನೂ ಸಾಕಷ್ಟು ಸುಧಾರಿಸಬೇಕಾಗಿದೆ.

ಸೇನ್ ಪ್ರಕಾಶ್ ನಿರ್ದೇಶನ ಹೇಗಿದೆ?

ಸೇನ್ ಪ್ರಕಾಶ್ ಅವರು ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿರುವ ಕಾರಣ ಇಲ್ಲೂ ಅದರ ನೆರಳು ಕಾಣುತ್ತದೆ. ಕಥೆ ಧಾರಾವಾಹಿಯಂತೆಯೇ ಸಾಗುತ್ತದೆ. ಯೋಗಿ ಅವರನ್ನು ಕಾಲೇಜು ಯುವಕನಂತೆ ತೋರಿಸುವಷ್ಟಕ್ಕೆ ಮಾತ್ರ ಅವರು ಯಶಸ್ಸು ಸಾಧಿಸಿದ್ದಾರೆ.

ಕಲಾವಿದರ ಪಾತ್ರಗಳ ಬಗ್ಗೆ

ಚಿತ್ರದಲ್ಲಿ ಸಾಕಷ್ಟು ಹಿರಿಯ ಕಿರಿಯ ಕಲಾವಿದರಿದ್ದಾರೆ. ಭಾಮಾ ಅವರದು ತೀರಾ ಕಾಡುವಂತಹ ಪಾತ್ರವಾಗೇನು ಉಳಿದಿಲ್ಲ. ರಾಮಕೃಷ್ಣ, ಜೈಜಗದೀಶ್, ಸುಧಾಬೆಳವಾಡಿ ಅವರ ಪೋಷಕ ಪಾತ್ರಗಳಲ್ಲಿ ಅಂತಹ ವಿಶೇಷವೇನು ಇಲ್ಲ. ಇನ್ನು ಹರೀಶ್ ರಾಜ್ ಲೆಕ್ಕಕ್ಕುಂಟು ಆಟಕ್ಕಿಲ್ಲ. ಉಳಿದಿದ್ದರಲ್ಲಿ ತಿಲಕ್ ಶೇಖರ್ ಹಾಗೂ ವಿನಾಯಕ ಜೋಶಿ ಗಮನಸೆಳೆಯುತ್ತಾರೆ.

ಟೆಕ್ನಿಕಲ್ ಅಂಶಗಳ ಕುರಿತು

ಅಭಿಮಾನ್ ರಾಯ್ ಅವರ ಸಂಗೀತದ ಹಾಡುಗಳು ಎರಡು ಹಾಡುಗಳು ಇಂಪಾಗಿವೆ. ಉಳಿದ ಹಾಡುಗಳು ನೆನಪಿನಲ್ಲಿ ಉಳಿಯುವುದು ಕಷ್ಟ. ಸಿನಿಟೆಕ್ ಸೂರಿ ಅವರ ಛಾಯಾಗ್ರಹಣ ಸತ್ವವಿಲ್ಲದ ಕಥೆಗೆ ಒಂಚೂರು ಜೀವ ತರುತ್ತದೆ.

ಹಾಸ್ಯರಸ ಸರಿಯಾಗಿ ಅರೆಯಲು ಸಾಧ್ಯವಾಗಿಲ್ಲ

ಚಿತ್ರದಲ್ಲಿ ಸಾಕಷ್ಟು ಕಾಮಿಡಿ ಕಲಾವಿದರಿದ್ದರೂ ಹಾಸ್ಯರಸವನ್ನು ಸರಿಯಾಗಿ ಅರೆಯಲು ಸಾಧ್ಯವಾಗಿಲ್ಲ. ಉಳಿದಿದ್ದರಲ್ಲಿ ಅಲ್ಪಸ್ವಲ್ಪ ನಗಿಸುವಲ್ಲಿ ಸಾಧುಕೋಕಿಲ ಗೆದ್ದಿದ್ದಾರೆ. ಇನ್ನು ವಿಶ್ವ ನಗಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಪ್ರೇಕ್ಷಕರು ಮಾತ್ರ ಜಪ್ಪಯ್ಯ ಅಂದ್ರು ನಗಲ್ಲ ಎಂದು ತೀರ್ಮಾನಿಸಿದಂತಿತ್ತು.

ಕಟ್ಟೆ ಕಡೆಯ ಮಾತು

ಕೊನೆಯದಾಗಿ ಈ ಥಿಯೇಟರ್ ನಲ್ಲಿ ಕೇಳಿಬಂದ ಒಂದೇ ಒಂದು ಮಾತು. ಚಿತ್ರ ನೋಡುತ್ತಿರುವಷ್ಟು ಹೊತ್ತೂ ಅಯ್ಯೋ ಮ್ಯಾಚ್ ಏನಾಯಿತು. ಸಚಿನ್ ತೆಂಡೂಲ್ಕರ್ ಔಟಾದನೇ ಇಲ್ಲವೇ. ಎಷ್ಟು ಹೊಡೆದ ಎಂಬ ಬಗ್ಗೆಯೇ ಬ್ಯಾಕ್ ಸೀಟಿನ ಕೆಲ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಉಳಿದ ಪ್ರೇಕ್ಷಕರ ಪರಿಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿರಲಿಲ್ಲ.

English summary
Loose Mada Yogesh and Bhama lead Kannada film Ambara review, it is an Outdated treatment. The movie tastelessly written and monstrously executed director Sen Prakash has penned the story and screenplay. Slow pace in the first half. Watch the movie only if you are Yogish's fan or else avoid it.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada