ಟೋಪಿವಾಲ ವಿಮರ್ಶೆ; ಉಪೇಂದ್ರ ಮ್ಯಾಜಿಕ್ ಮಿಸ್
ಆದರೆ ಆ ದುಡ್ಡು ತರಬೇಕಾದರೆ ಸೀಕ್ರೆಟ್ ಕೋಡ್ ಬೇಕಲ್ಲಾ. ಆ ಕೋಡಿನ ಹುಡುಕಾಟದಲ್ಲಿ ಉಪೇಂದ್ರ ಭ್ರಷ್ಟಾಚಾರದ ಹಲವು ಮುಖಗಳನ್ನು ಅನಾವರಣಗೊಳಿಸುತ್ತಾ ಸಾಗುತ್ತಾರೆ. ಕೋಡು, ಸಬ್ ಕೋಡು, ಕೀ ಕೋಡ್ ಹುಡುಕುತ್ತಾ ಪ್ರೇಕ್ಷಕರಿಗೆ ಇನ್ನೇನೋ ಹೇಳುತ್ತಾರೋ ಎಂದು ಆಸೆ ಹುಟ್ಟಿಸುತ್ತಾ ಸಾಗುತ್ತಾರೆ.
ಆದರೆ ಕಡೆಯವರೆಗೂ ಕಾದ ಪ್ರೇಕ್ಷಕನಿಗೆ ನಿರಾಸೆ ತಪ್ಪಿದ್ದಲ್ಲ. ಏಕೆಂದರೆ ಕಥೆ ಏನೋ ಚೆನ್ನಾಗಿದೆ. ಆದರೆ ಅದರ ನಿರೂಪಣೆಯಲ್ಲಿ ಎಡವಿದ್ದಾರೆ. ಸರಳವಾಗಿ ಹೇಳಬೇಕಾದದ್ದನ್ನು ಉಪೇಂದ್ರ ಡಿಫರೆಂಟ್ ಆಗಿ ಹೇಳಲು ಹೋಗಿ ಪ್ರೇಕ್ಷಕರ ಸಹನೆಗೆ ಸವಾಲೊಡ್ಡಿದ್ದಾರೆ.
ಚಿತ್ರ: ಟೋಪಿವಾಲ
ನಿರ್ಮಾಪಕ: ಕೆ.ಪಿ.ಶ್ರೀಕಾಂತ್
ಸಂಭಾಷಣೆ, ನಿರ್ದೇಶನ: ಶ್ರೀನಿ
ಸಂಗೀತ: ವಿ ಹರಿಕೃಷ್ಣ
ಛಾಯಾಗ್ರಹಣ: ಶ್ರೀಶ ಕೂದುವಳ್ಳಿ
ಕಥೆ, ಚಿತ್ರಕಥೆ: ಉಪೇಂದ್ರ
ಪಾತ್ರವರ್ಗ: ರಂಗಾಯಣ ರಘು, ಭಾವನಾ, ಮೈತ್ರಿಯಾ, ಬಿರಾದಾರ್, ರವಿಶಂಕರ್, ಅಚ್ಯುತ ಕುಮಾರ್, ರಾಜು ತಾಳಿಕೋಟೆ ಮುಂತಾದವರು.
ಕಥೆ, ಚಿತ್ರಕಥೆ ಓಕೆ, ನಿರ್ದೇಶನ?
ಕಥೆ, ಚಿತ್ರಕಥೆ ಉಪೇಂದ್ರ ಅವರದೇ ಆದರೂ ಅದನ್ನು ತೆರೆಗೆ ತರುವಲ್ಲಿ ನಿರ್ದೇಶಕ ಶ್ರೀನಿ ವಿಫಲವಾಗಿದ್ದಾರೆ. ಆದರೆ ನಿರ್ದೇಶಕರು ಉಪೇಂದ್ರ ಅವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿರುವುದು ಗಮನಾರ್ಹ ಅಂಶ. ಇಲ್ಲದಿದ್ದರೆ ಇದು ಮತ್ತೊಂದು ಉಪ್ಪಿ ಚಿತ್ರವಾಗುತ್ತಿತ್ತು. ಅಷ್ಟರ ಮಟ್ಟಿಗೆ ಚಿತ್ರ ಓಕೆ.
ಸಂಭಾಷಣೆಯಲ್ಲೂ ಕಿಕ್ ಮಿಸ್
ಸಂಭಾಷಣೆಯಲ್ಲೂ ಏನು ಅಂತಹ ಕಿಕ್ ಇಲ್ಲ. ಚಿತ್ರದ ಮೊದಲರ್ಧ ಹಳಿತಪ್ಪಿದೆ. ದ್ವಿತೀಯಾರ್ಧದಲ್ಲಿ ಅದನ್ನು ಹಳಿಗೆ ತರುವ ಪ್ರಯತ್ನ ಮಾಡಲಾಗಿದೆ. ಕಥೆ ಕಡೆಗೆ ಟ್ರ್ಯಾಕ್ ಗೆ ಬರುತ್ತದಾದರೂ ಅಷ್ಟೊತ್ತಿಗೆ ಪ್ರೇಕ್ಷಕರ ತಾಳ್ಮೆ ತಳಕಚ್ಚಿರುತ್ತದೆ.
ಹೊಸತನವಿಲ್ಲದ ಸಂಗೀತ, ಛಾಯಾಗ್ರಹಣ
ತಾಂತ್ರಿಕವಾಗಿ ಚಿತ್ರ ಸುಮಾರಾಗಿದೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಹೊಸತನವಿಲ್ಲ. ಯೋಗರಾಜ್ ಭಟ್, ಉಪೇಂದ್ರ, ಎಂ.ಎಸ್. ಶ್ರೀನಿವಾಸ್ ಅವರ ಸಾಹಿತ್ಯ ಪರ್ವಾಗಿಲ್ಲ.
ಉಪೇಂದ್ರ ಅಭಿನಯ ಬಸಕ್!
ಉಪೇಂದ್ರ ಎಂದಿನಂತೆ 'ಬಸಕ್' (ಚಿತ್ರದಲ್ಲಿ ಅವರ ಹೆಸರು) ಅಭಿನಯ ನೀಡಿದ್ದಾರೆ. ಭಾವನಾ, ಮೈತ್ರಿಯಾ ಪೈಪೋಟಿಗೆ ಬಿದ್ದಂತೆ ಅಭಿನಯದಲ್ಲಿ ಹಿಂದಿಂದೆ ಸರಿದಿದ್ದಾರೆ. ಇದ್ದುದರಲ್ಲಿ ರಾಮಾಯಣ ರಘುವಾಗಿ ರಂಗಾಯಣ ರಘು ಗಮನಸೆಳೆಯುತ್ತಾರೆ.
ಒಟ್ಟಾರೆಯಾಗಿ ಉಪೇಂದ್ರ ಮ್ಯಾಜಿಕ್ ಮಿಸ್
ಉಳಿದಂತೆ ರವಿಶಂಕರ್ (ಸರ್ಕಾರ್ ಪಾತ್ರ), ಬಿರಾದಾರ್, ಅಚ್ಯುತ ಕುಮಾರ್ (ಲೋಕಾಯುಕ್ತ ಲೋಕಿ), ರಾಜು ತಾಳಿಕೋಟೆ ಪಾತ್ರಗಳು ಸಾಂದರ್ಭಿಕವಾಗಿ ಮೂಡಿಬಂದಿವೆ. ಒಟ್ಟಾರೆಯಾಗಿ ಹೇಳಬೇಕು ಉಪೇಂದ್ರ ಮ್ಯಾಜಿಕ್ ಮಿಸ್ ಆಗಿದೆ.
ಕಡೆಯತನಕ ಕಾದು ಕಾದು ಸುಸ್ತಾದ ಪ್ರೇಕ್ಷಕ
ಕಥೆ ಆಗ ಬದಲಾಗುತ್ತದೆ, ಈಗ ಟರ್ನ್ ತಗೊಳ್ಳುತ್ತದೆ, ಫಸ್ಟ್ ಆಫ್ ಹೀಗಾಯ್ತು, ಬಹುಶಃ ಸೆಕೆಂಡ್ ಆಫ್ ಕಥೆ ಬೇರೆನೇ ಇರುತ್ತದೆ ಎಂದು ಪ್ರೇಕ್ಷಕರ ನಿರೀಕ್ಷಿಸುತ್ತಾನೆ. ಆದರೆ ಕಡೆಗೂ ಅವನ ನಿರೀಕ್ಷೆ ನಿಜವಾಗಲ್ಲ. ಚಿತ್ರದಲ್ಲಿನ ಕಟ್ಟ ಕಡೆಯ ಸಂದೇಶ ಏನೆಂದರೆ "ತಲೆ ಇಲ್ಲದವರಿಗಲ್ಲ ಪ್ರಜಾಪ್ರಭುತ್ವ" ಎಂಬುದು.


Click it and Unblock the Notifications











