For Quick Alerts
  ALLOW NOTIFICATIONS  
  For Daily Alerts

  ಶರಣ್ 'V' ಚಿತ್ರ ವಿಮರ್ಶೆ: ಫುಲ್ ಕ್ವಾಟ್ರು ಕಾಮಿಡಿ

  By Rajendra
  |

  ಕಾಮಿಡಿ ಚಿತ್ರಗಳು ಎಂದರೆ ಕೇವಲ ಡಬಲ್ ಮೀನಿಂಗ್ ಡೈಲಾಗ್ ಗಳ ಸಿನಿಮಾ ಎಂಬ ಹೊಸ ಅರ್ಥ ಹುಟ್ಟಿಕೊಂಡಿದೆ. ಒಂದಷ್ಟು ಪ್ರೇಕ್ಷಕರು ಈ ರೀತಿಯ ಸಂಭಾಷಣೆಯನ್ನೇ ನಿರೀಕ್ಷಿಸಿ ಹೋಗುತ್ತಾರೆ. ಆದರೆ ಬಹಳಷ್ಟು ಮಂದಿ ಬಯಸುವುದು ಅಪ್ಪಟ ಹಾಸ್ಯವನ್ನು. ಶರಣ್ ಅಭಿನಯದ 'V' ಸಿಂಬಲ್ (ವಿಕ್ಟರಿ) ಅಂತಹ ಪ್ರೇಕ್ಷಕರಿಗೆ ಖಂಡಿತ ನಿರಾಶೆ ಮಾಡುವುದಿಲ್ಲ.

  ಮ್ಯಾರೇಜ್ ಬ್ರೋಕರ್ ಚಂದ್ರು (ಶರಣ್) ಹಾಗೂ ಪೊಲೀಸ್ ಕಮೀಷನರ್ ರಾಜೇಂದ್ರ (ಅವಿನಾಶ್) ಅವರ ಮಗಳು ಪ್ರಿಯಾ (ಅಸ್ಮಿತಾ ಸೂದ್) ನಡುವಿನ ಲವ್ ಸ್ಟೋರಿ ಇದು. ಇಬ್ಬರೂ ಒಬ್ಬರನ್ನೊಬ್ಬರು ಪ್ರೇಮಿಸಿ ಬಳಿಕ ಪೋಷಕರ ಬಳಿ ಮದುವೆ ಪ್ರಸ್ತಾಪ ಇಟ್ಟು ಮದುವೆಯಾಗುತ್ತಾರೆ.

  ಆದರೆ ಮೊದಲ ರಾತ್ರಿಯೇ ಚಂದ್ರು ಮತ್ತು ಪ್ರಿಯಾ ನಡುವೆ ಸಣ್ಣ ಜಗಳ ನಡೆಯುತ್ತದೆ. ಅದಕ್ಕೆ ಕಾರಣವಾಗುವುದು ಪ್ರಿಯಾ ಸ್ನೇಹಿತೆಯೊಬ್ಬಳು ಅನಾಮಿಕ ಹೆಸರಲ್ಲಿ ಕಳುಹಿಸುವ ಉಡುಗೊರೆ. ಗಿಫ್ಟ್ ಬಾಕ್ಸ್ ನಲ್ಲಿ ಕಾಂಡೋಮ್ ಗಳು ಹಾಗೂ ಚಂದ್ರುನ ಕೆಲವು ರಾಸಲೀಲೆ ಫೋಟೋಗಳಿರುತ್ತವೆ.

  Rating:
  3.5/5

  ಚಿತ್ರ: 'V' (ವಿಕ್ಟರಿ)

  ನಿರ್ಮಾಣ: ಎಸ್ಆರ್ಎಸ್ ಮೀಡಿಯಾ ವಿಷನ್

  ನಿರ್ದೇಶನ: ನಂದಕಿಶೋರ್

  ಛಾಯಾಗ್ರಹಣ: ಶೇಖರ್ ಚಂದ್ರ

  ಸಂಗೀತ: ಅರ್ಜುನ್ ಜನ್ಯ

  ಕಥೆ, ಚಿತ್ರಕಥೆ: ಎಂ.ಎಸ್.ಶ್ರೀನಾಥ್

  ಸಂಭಾಷಣೆ: ಪ್ರಶಾಂತ್

  ಕಲೆ: ಮೋಹನ್ ಬಿ.ಕೆರೆ

  ನೃತ್ಯ ಸಂಯೋಜನೆ: ಇಮ್ರನ್, ಮುರಳಿ, ಧನ್ ಕುಮಾರ್

  ತಾರಾಗಣ: ಶರಣ್, ಅಸ್ಮಿತಾ ಸೂದ್, ತಬ್ಲಾ ನಾಣಿ, ರವಿಶಂಕರ್, ಅವಿನಾಶ್, ಸಾಧುಕೋಕಿಲ, ರಮೇಶ್ ಭಟ್, ಗಿರಿಜಾ ಲೋಕೇಶ್, ಕೀರ್ತಿ ರಾಜ್, ಕುರಿಗಳು ಪ್ರತಾಪ್, ಮುಂತಾದವರು.

  ಮೊದಲ ರಾತ್ರಿಯೇ ಚಂದ್ರು ಕನಸು ಭಗ್ನ

  ಮೊದಲ ರಾತ್ರಿಯೇ ಚಂದ್ರು ಕನಸು ಭಗ್ನ

  ಈ ವಿಚಾರವಾಗಿ ಇಬ್ಬರ ನಡುವೆ ವಾದ ವಿವಾದ ಜಗಳ ನಡೆದು ಮೊದಲ ರಾತ್ರಿಯೇ ಚಂದ್ರು ಕನಸು ಭಗ್ನವಾಗುತ್ತದೆ. ಇಬ್ಬರೂ ಬೇರ್ಪಡುತ್ತಾರೆ. ಮೊದಲ ರಾತ್ರಿಯೇ ಪ್ರೀತಿಸಿ ಮದುವೆಯಾದ ಹುಡುಗಿ ಈ ರೀತಿ ಕೈಕೊಟ್ಟಳಲ್ಲಾ ಎಂಬ ಬೇಸರದಲ್ಲಿ ಚಂದ್ರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ಈ ಆತ್ಮಹತ್ಯೆ ದೃಶ್ಯಗಳಲ್ಲೂ ಅವರು ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ನಗಿಸುತ್ತಾರೆ.

  ಆತ್ಮಹತ್ಯೆಗೆ ಮುಂದಾಗುವ ನಾಯಕ ನಟ

  ಆತ್ಮಹತ್ಯೆಗೆ ಮುಂದಾಗುವ ನಾಯಕ ನಟ

  ಆತ್ಮಹತ್ಯೆಗೆ ನಿರ್ಮಾಣ ಹಂತದ ದೊಡ್ಡ ಕಟ್ಟಡದ ಕಂಬಿಗಳನ್ನು ಹಿಡಿದು ಹತ್ತುತ್ತಿರಬೇಕಾದರೆ ಎಲ್ಲರೂ ಅಯ್ಯೋ ಕೋತಿರಾಮ ಇಲ್ಲೂ ಏನೋ ಸಾಹಸ ಮಾಡುತ್ತಿದ್ದಾನೆ ಎಂದೇ ತಿಳಿಯುತ್ತಾರೆ. ಈ ರೀತಿಯ ದೃಶ್ಯಗಳು ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಕಥೆ ಕಾಮಿಡಿಯಾಗಿ ಸಾಗುತ್ತದೆ.

  'ವಿ' ಸಿಂಬಲ್ ಗೆ ಎರಡು ಅರ್ಥ

  'ವಿ' ಸಿಂಬಲ್ ಗೆ ಎರಡು ಅರ್ಥ

  ಚಿತ್ರದಲ್ಲಿ ಹಲವಾರು ಟ್ವಿಸ್ಟ್ ಗಳು ಹಾಗೂ ಟರ್ನ್ ಗಳು ಇವೆ. ದ್ವಿತೀಯಾರ್ಧಕ್ಕೆ ಬರುತ್ತಿದ್ದಂತೆ ಶರಣ್ ದ್ವಿಪಾತ್ರಾಭಿನಯ ಶುರುವಾಗುತ್ತದೆ. ಅಲ್ಲೇ 'V' ಸಿಂಬಲ್ ಗೆ ಎರಡು ಎಂಬ ಹೊಸ ಅರ್ಥ ಸಿಗುತ್ತದೆ. ಕಡೆಗೆ ಇಬರಿಬ್ಬರು ಪ್ರೇಕ್ಷಕರ ಮನಗೆದ್ದು ವಿಕ್ಟರಿ ಅರ್ಥ ಪಡೆದುಕೊಳ್ಳುತ್ತದೆ.

  ನಂದಕಿಶೋರ್ ನಿರ್ದೇಶನ ಸೂಪರ್ ಫಾಸ್ಟ್

  ನಂದಕಿಶೋರ್ ನಿರ್ದೇಶನ ಸೂಪರ್ ಫಾಸ್ಟ್

  ಚಿತ್ರದ ಮೊದಲರ್ಧ ಸಂಪೂರ್ಣ ಹಾಸ್ಯಮಯವಾಗಿ ಸಾಗಿದರೆ ದ್ವಿತೀಯಾರ್ಧದಲ್ಲಿ ಹಾಸ್ಯದ ಜೊತೆಗೆ ಕಥೆಯೂ ಸಾಗುತ್ತದೆ. ನಂದಕಿಶೋರ್ ಅವರ ನಿರ್ದೇಶನ ಅಡೆತಡೆಯಿಲ್ಲದ ಸೂಪರ್ ಫಾಸ್ಟ್ ಟ್ರೈನ್ ನಂತೆ ಸಾಗುತ್ತದೆ. ಇದಕ್ಕೆ ಇಂಜಿನಂತೆ ಕೆಲಸ ಮಾಡಿರುವುದು ಶ್ರೀನಾಥ್ ಅವರ ಕಥೆ, ಚಿತ್ರಕಥೆ ಹಾಗೂ ಪ್ರಶಾಂತ್ ಅವರ ಸಂಭಾಷಣೆ.

  ಪ್ರಶಾಂತ್ ಸಂಭಾಷಣೆಗೆ ಹೆಚ್ಚು ಮಾರ್ಕ್ಸ್

  ಪ್ರಶಾಂತ್ ಸಂಭಾಷಣೆಗೆ ಹೆಚ್ಚು ಮಾರ್ಕ್ಸ್

  ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಪ್ರಶಾಂತ್ ಅವರ ಸಂಭಾಷಣೆ ಹೆಚ್ಚು ಮಾರ್ಕ್ಸ್ ಪಡೆದುಕೊಳ್ಳುತ್ತದೆ. ಅರ್ಜುನ್ ಜನ್ಯ ಅವರ ಸಂಗೀತ ಇನ್ನೊಂದು ಹಂಡ್ರಡ್ ಕ್ಯಾಂಡಲ್ ಬಲ್ಬ್ ಇದ್ದಂತೆ. ಖಾಲಿ ಕ್ಟಾಟ್ರು ಬಾಟ್ಲಿಯಂಗೆ ಲೈಫು ಸಾಂಗ್ ಚಿತ್ರದ ಪ್ರಮುಖ ಆಕರ್ಷಣೆ. ಕಣ್ಣ ಮಿಂಚೆ ಹಾಗೂ ಓನೆ ಓನೆ ಹಾಡುಗಳು ಇಂಪಾಗಿವೆ.

  ರೊಮ್ಯಾನ್ಸ್, ಆಕ್ಷನ್ ನಲ್ಲೂ ಕಾಮಿಡಿ

  ರೊಮ್ಯಾನ್ಸ್, ಆಕ್ಷನ್ ನಲ್ಲೂ ಕಾಮಿಡಿ

  ಈ ಚಿತ್ರದ ಮೂಲಕ ಶರಣ್ ಕನ್ನಡದ ಹೊಸ ತರಹದ ಕಾಮಿಡಿ ನಾಯಕ ನಟನಾಗಿ ಹೊರಹೊಮ್ಮಿದ್ದಾರೆ. ಕಾಮಿಡಿ ಜೊತೆಗೆ ಅವರ ಆಕ್ಷನ್, ರೊಮ್ಯಾನ್ಸ್, ಫೈಟಿಂಗ್ ಸನ್ನಿವೇಶಗಳು ಅಷ್ಟೇ ಕಾಮಿಡಿಯಾಗಿವೆ. ಇನ್ನು ನಾಯಕಿ ಅಸ್ಮಿತಾ ಸೂದ್ ಅವರು ಪ್ರಿಯಾ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಎಲ್ಲೂ ಅವರು ಪರಭಾಷಾ ತಾರೆ ಎಂಬ ಭಾವನೆ ಬರುವುದಿಲ್ಲ.

  ರಾಗಿಣಿ ಸ್ಪೆಷನ್ ಸಾಂಗ್ ಬೇಕಿತ್ತಾ?

  ರಾಗಿಣಿ ಸ್ಪೆಷನ್ ಸಾಂಗ್ ಬೇಕಿತ್ತಾ?

  ಚಿತ್ರದಲ್ಲಿ ಎಲ್ಲಾ ಮಸಾಲೆ ಅಂಶಗಳನ್ನು ಸೇರಿಸಬೇಕು ಎಂಬ ಉದ್ದೇಶದಿಂದಲೋ ಏನೋ ರಾಗಿಣಿ ಸ್ಪೆಷಲ್ ಸಾಂಗ್ ಇದೆ. ಈ ಹಾಡು ಅಗತ್ಯವಿರಲಿಲ್ಲ ಅನ್ನಿಸುತ್ತದೆ. ಆದರೆ ಈಗ ಸ್ಪೆಷಲ್ ಸಾಂಗ್ ಕಡ್ಡಾಯ ಎಂಬಂತಾಗಿ ಇದನ್ನು ತುರುಕಲಾಗಿದೆ.

  ಜೂಟಾಟ ಚಿತ್ರದ ಒಂದು ಸನ್ನಿವೇಶ

  ಜೂಟಾಟ ಚಿತ್ರದ ಒಂದು ಸನ್ನಿವೇಶ

  ಇನ್ನು ಚಿತ್ರದಲ್ಲಿನ ಒಂದು ಸನ್ನಿವೇಶ 'ಜೂಟಾಟ' ಚಿತ್ರದ ಒಬ್ಬರ ಹಿಂದೆ ಒಬ್ಬರು ಕರೆಂಟ್ ಹಿಡಿದುಕೊಳ್ಳುವ ಸನ್ನಿವೇಶವೂ ಇದೆ. ಇದರ ಬದಲು ಬೇರೆ ಏನಾದರೂ ಹೊಸತನ್ನು ತಂದಿದ್ದರೆ ಚೆನ್ನಾಗಿರುತ್ತಿತ್ತು. ಉಳಿದಂತೆ ಚಿತ್ರ ಹೊಟ್ಟೆ ತುಂಬ ನಗಿಸುತ್ತದೆ.

  ಸಾಧು ಗೌಡನಾಗಿ ಸಾಧು ಕೋಕಿಲ ಕಿಲಕಿಲ

  ಸಾಧು ಗೌಡನಾಗಿ ಸಾಧು ಕೋಕಿಲ ಕಿಲಕಿಲ

  ಕಿವುಡನಾಗಿ ತಬ್ಲಾ ನಾಣಿ ಅವರು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರೆ. ಅವರ ಪತ್ನಿ ಪಾತ್ರದಲ್ಲಿ ನಟಿಸಿರುವ ಲಲಿತಾ ಅವರು ಇಡೀ ಚಿತ್ರದಲ್ಲಿ ತಮ್ಮ ಮುಖವನ್ನೇ ತೋರಿಸದಂತೆ ಕಾಣಿಸಿಕೊಂಡಿರುವುದು ವಿಶೇಷ. ಇನ್ನು ಚಿತ್ರದಲ್ಲಿ ಶರಣ್ ಅವರಷ್ಟೇ ನಕ್ಕು ನಲಿಸುವುದು ಸಾಧು ಗೌಡ ನಾಗಿ ಸಾಧು ಕೋಕಿಲ. ಇವರಿಬ್ಬರಿಗೆ ಕುರಿ ಪ್ರತಾಪ್ ಸಾಥ್ ನೀಡಿದ್ದಾರೆ.

  ಎಲ್ಲಾ ಪಾತ್ರಗಳು ಅಚ್ಚುಕಟ್ಟಾಗಿವೆ

  ಎಲ್ಲಾ ಪಾತ್ರಗಳು ಅಚ್ಚುಕಟ್ಟಾಗಿವೆ

  ಉಳಿದಂತೆ ರವಿಶಂಕರ್, ಅವಿನಾಶ್, ಗಿರಿಜಾ ಲೋಕೇಶ್, ರಮೇಶ್ ಭಟ್, ಕೀರ್ತಿ ರಾಜ್ ಅವರ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಶರಣ್ ಅವರ ಹಾವಭಾವ ಹಾಗೂ ಅವರ ಮ್ಯಾನರಿಸಂಗೆ ತಕ್ಕಂತೆ ಇಮ್ರಾನ್ ಹಾಗೂ ಮುರಳಿ ನೃತ್ಯ ಸಂಯೋಜನೆ ಮಾಡಿರುವುದು ಗಮನಸೆಳೆಯುವ ಅಂಶ.

  ಖಂಡಿತ ನೋಡುವಂತಹ ಚಿತ್ರ

  ಖಂಡಿತ ನೋಡುವಂತಹ ಚಿತ್ರ

  ಕಾಮಿಡಿ ಭರಾಟೆಯಲ್ಲಿ ಶೇಖರ್ ಚಂದ್ರ ಛಾಯಾಗ್ರಹಣ ಗಮನಕ್ಕೇ ಬಾರದಂತೆ ಮಿಕ್ಸ್ ಆಗಿದೆ. ಗಂಡ ಹೆಂಡತಿ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಅನುಮಾನಕ್ಕೆ ಎಡೆಮಾಡಿಕೊಡದಂತೆ ಸಾಗಿದರೆ ಮಾತ್ರ ದಾಂಪತ್ಯ ಸೊಗಸಾಗಿರುತ್ತದೆ ಎಂಬುದೇ ಚಿತ್ರದ ಮೆಸೇಜ್. ಈ ಸಣ್ಣ ಸಂದೇಶವನ್ನು ಹಾಸ್ಯಮಯವಾಗಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾ ಹೇಳಿದ್ದಾರೆ. ಕಾಮಿಡಿ ಚಿತ್ರಗಳನ್ನು ಬಯಸುವ ಪ್ರತಿಯೊಬ್ಬರು ಖಂಡಿತ ನೋಡುವಂತಹ ಚಿತ್ರ.

  English summary
  Actor Sharan and Asmita Sood lead Kannada film 'V' (Victory) review. Nanda Kishore directed movie takes lots of twists and turns all in a comical ways is the film all about. The dialogues by Prashanth is first rate. Sharan's Victory is a sure shot hit. Go, enjoy the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X