»   » 'ಆಟಗಾರ'ನ ಆಟಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

'ಆಟಗಾರ'ನ ಆಟಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

Posted By:
Subscribe to Filmibeat Kannada

'ಪ್ರಚಂಡ ಕುಳ್ಳ' ದ್ವಾರಕೀಶ್ ನಿರ್ಮಾಣದ 49ನೇ ಚಿತ್ರ 'ಆಟಗಾರ'. ಚಿರಂಜೀವಿ ಸರ್ಜಾ, ಮೇಘನಾ ರಾಜ್, ಪಾರುಲ್ ಯಾದವ್, ರವಿಶಂಕರ್ ಸೇರಿದಂತೆ ಸ್ಯಾಂಡಲ್ ವುಡ್ ನ 10 ತಾರೆಯರು ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ಇದು.

ಕೆ.ಎಂ.ಚೈತನ್ಯ ನಿರ್ದೇಶಿಸಿರುವ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾಗಿರುವ 'ಆಟಗಾರ' ಈ ವಾರ ಅದ್ದೂರಿಯಾಗಿ ರಿಲೀಸ್ ಆಗಿದೆ. 'ಆಟಗಾರ'ನ ಆಟ ನೋಡಿ, ಕ್ಲೈಮ್ಯಾಕ್ಸ್ ವರೆಗೂ ಪ್ರೇಕ್ಷಕರಂತೂ ಸೀಟ್ ತುದಿಯಲ್ಲಿ ಕೂತಿದ್ದರು. [ದ್ವೀಪದ ನಡುವೆ 'ಆಟಗಾರನ' ನೋಟ ಚೆನ್ನ, ಎಲ್ಲವೂ ಇಲ್ಲಿ ವಿಭಿನ್ನ]


ಬರೀ ಲವ್ ಸ್ಟೋರಿ, ರೌಡಿಸಂ ಸಿನಿಮಾಗಳೇ ಟ್ರೆಂಡ್ ಆಗಿರುವ ಈಗಿನ ಕಾಲದಲ್ಲಿ ಕೊಂಚ ವಿಭಿನ್ನ ಕಥಾಹಂದರ ಇರುವ 'ಆಟಗಾರ' ಚಿತ್ರದ ಬಗ್ಗೆ ವಿಮರ್ಶಕರು ಏನು ಹೇಳ್ತಾರೆ.?


'ಆಟಗಾರ'ನ ಆಟಕ್ಕೆ ಕನ್ನಡದ ಜನಪ್ರಿಯ ದಿನ ಪತ್ರಿಕೆಗಳು ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......


ಬಿಗಿಯಾದ 'ಆಟ' - ಪ್ರಜಾವಾಣಿ

ಸುಂದರವಾದ, ಆದರೆ ನಿರ್ಜನವಾಗಿರುವ ಆ ದ್ವೀಪದಲ್ಲಿ ಹತ್ತು ಜನರು, ಒಂದು ಆಟ. ಅದರ ಉದ್ದೇಶ ಟಿವಿ ಚಾನೆಲ್‌ಗಾಗಿ ನಡೆಯುವ ರಿಯಾಲಿಟಿ ಷೊ. ನಾಲ್ಕು ಜನರು ನಿಗೂಢವಾಗಿ ಹೆಣವಾಗುತ್ತಾರೆ. ಗೃಹಬಂಧನದಲ್ಲಿ ಇರುವವರು ಅಲ್ಲಿದ್ದ ಟಿವಿಯಲ್ಲಿ ಮೊದಲ ಎಪಿಸೋಡ್ ನೋಡುತ್ತಿದ್ದಂತೆ ಬೆಚ್ಚಿ ಬೀಳುತ್ತಾರೆ. ಷೊ ದಲ್ಲಿ ಕಾಣಿಸುವವರೇ ಬೇರೆ! ಅಲ್ಲಿಗೆ, ತಾವು ಯಾವುದೋ ಜಾಲದಲ್ಲಿ ಸಿಲುಕಿರುವುದು ಖಚಿತವಾಗುತ್ತದೆ. ಹೊರ ಜಗತ್ತನ್ನು ಸಂಪರ್ಕಿಸುವ ಅವರ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತವೆ. ‘ಆಟಗಾರ'ನೂ ನಾಪತ್ತೆ! ಕ್ಷಣಕ್ಷಣಕ್ಕೂ ಕುತೂಹಲದ ತಿರುವು ಪಡೆದುಕೊಳ್ಳುವ ‘ಆಟಗಾರ' ಒಂದು ರೋಚಕ ಕಥಾನಕ. ಅನ್ಯಾಯ, ದಬ್ಬಾಳಿಕೆಗೆ ಬಲಿಯಾದವರು ಕಾನೂನನ್ನು ಕೈಯಲ್ಲಿ ತೆಗೆದುಕೊಂಡು ಸೇಡು ತೀರಿಸಿಕೊಳ್ಳುವ ಕಥಾನಕವನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಜೋಡಿಸಿದ್ದಾರೆ ನಿರ್ದೇಶಕ ಕೆ.ಎಂ.ಚೈತನ್ಯ. - ಆನಂದತೀರ್ಥ ಪ್ಯಾಟಿ


'ಆಟಗಾರ': ಕುತೂಹಲ ಹುಟ್ಟಿಸುವ ಆಟ - ವಿಜಯ ಕರ್ನಾಟಕ

ಇತ್ತೀಚೆಗೆ ಸ್ಯಾಂಡಲ್ ವುಡ್‌ನಲ್ಲಿ ರೆಗ್ಯುಲರ್ ಸಿನಿಮಾಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಅದಕ್ಕಾಗಿಯೇ ಗಾಂಧಿನಗರದ ಸಿದ್ಧ ಸೂತ್ರಗಳನ್ನು ಪಕ್ಕಕ್ಕಿಟ್ಟು ಒಂದಷ್ಟು ನಿರ್ದೇಶಕರು ಹೊಸ ರೀತಿಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಆ ವರ್ಗಕ್ಕೆ ಆಟಗಾರ ಚಿತ್ರ ಸೇರುತ್ತದೆ. ಇಲ್ಲಿ ಗ್ಲಾಮರ್ ಹುಡುಗಿಯರಿದ್ದರೂ ಧುತ್ತನೆ ಐಟಂ ಸಾಂಗ್ ಬರುವುದಿಲ್ಲ. ಹೀರೋಗೆ ಬಿಲ್ಡ್ ಅಪ್ ಕೊಡಲು ಖಳನಾಯಕರು ಸುಖಾಸುಮ್ಮನೇ ನೆಲಕ್ಕೆ ಬೀಳುವುದಿಲ್ಲ. ಇಲ್ಲಿ ನಾಯಕ ಕೂಡ ಅಸಹಾಯಕ. ಆತ ಕೂಡ ಗನ್ ಶಾಟ್‌ಗೆ ಹೆದರಿ ಮನೆ ಸೇರಿಕೊಳ್ಳುತ್ತಾನೆ! ಒಂದು ದ್ವೀಪದಲ್ಲಿರುವ ಹತ್ತು ಜನ ಒಬ್ಬೊಬ್ಬರಾಗಿ ಯಾಕೆ ಕೊಲೆಯಾಗುತ್ತಾರೆ? ಯಾರು ಕೊಲೆ ಮಾಡುತ್ತಾರೆ ಎಂಬುದೇ ಕತೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಹನೀಯ ಎಂದೇ ಹೇಳಬಹುದು. - ಎಚ್.ಮಹೇಶ್


ಚೈತನ್ಯಪೂರ್ಣ ರಿಯಾಲಿಟಿ ಶೋನ ಥೇಟರಲ್ಲಿ ನೋಡ್ರೀ ಒಂದ್ಸಲ! - ಉದಯವಾಣಿ

ಕನ್ನಡಕ್ಕೆ ಒಳ್ಳೆಯ ಚಿತ್ರಗಳನ್ನು ಕೊಡುತ್ತಲೇ ಬಂದಿರುವ ನಿರ್ದೇಶಕ ಚೈತನ್ಯ ಈ ಸಲ ನಮ್ಮ ಸುತ್ತಮುತ್ತಲ ಕ್ರೂರ ರಿಯಾಲಿಟಿಯನ್ನು ಒಂದು ರಿಯಾಲಿಟಿ ಚೌಕಟ್ಟಿನೊಳಗೆ ತಂದಿದ್ದಾರೆ. ಸುಳಿವೇ ಸಿಗದ ಕೊಲೆ ಸರಣಿಯನ್ನು ರೋಚಕತೆಯೊಂದಿಗೆ, ರಿಯಾಲಿಟಿ ಶೋ ಜೊತೆಗೆ, ಪಾಪಪ್ರಜ್ಞೆಯೂ ಇಲ್ಲದಂತೆ ಮನುಷ್ಯ ಮಾಡುವ ಅಪರಾಧಗಳನ್ನು ಜೋಡಿಸಿ ಬಡಿಸಿದ್ದಾರೆ. ಪ್ರತಿಭಾವಂತ ಕಲಾವಿದರ ದಂಡು, ದಂಡಿದಂಡಿ ತಿರುವುಗಳು, ಕ್ಷಣಕ್ಷಣಕ್ಕೂ ಹೆಚ್ಚುವ ಕುತೂಹಲ, ಇವರನ್ ಬಿಟ್ಟು, ಅವರನ್ ಬಿಟ್ಟು ಅವರ್ಯಾರು ಅನ್ನೋ ಆಟಗಾರರ ಶೋಧದೊಂದಿಗೆ ಇಡೀ ಸಿನಿಮಾವನ್ನು ನಿರ್ದೇಶಕರು ಥ್ರಿಲ್ಲರ್‌ ಆಗಿಸಿದ್ದಾರೆ. ಮತ್ತೆ ಮತ್ತೆ ರಿಪೀಟ್ ಆಗುವ ವಿಶಿಲ್ ಸದ್ದು, ಇಡೀ ಕತೆಯನ್ನು ಸುತ್ತುವರಿಯುವ ನಿಗೂಢತೆ, ಭೀತಿ ಹುಟ್ಟಿಸುವ ನಿರ್ಜನ ದ್ವೀಪ, ದೊಡ್ಡ ಕಣ್ಣುಗಳ ರಾವಣ ಗೊಂಬೆ, ನಿಗೂಢವಾಗಿ ಓಡಾಡುವ ಡಾಕ್ಟರ್‌, ಒಬ್ಬರಿಗೊಬ್ಬರ ಮಧ್ಯೆ ಹುಟ್ಟಿಕೊಳ್ಳುವ ಅನುಮಾನ, ಸಾವು ಹತ್ತಿರವಾಗುತ್ತಲೇ ಪರಸ್ಪರರ ಸಂಬಂಧದಲ್ಲಾಗುವ ಬದಲಾವಣೆಗಳು- ಇವೆಲ್ಲವನ್ನೂ ನಿರ್ದೇಶಕರು ಸಮರ್ಥವಾಗಿ ಕಟ್ಟಿದ್ದಾರೆ. - ವಿಕಾಸ್ ನೇಗಿಲೋಣಿ


ಅಸಲಿ ಆಟ, ಭಿನ್ನ ನೋಟ, ವೇಗದ ಓಟ, ಜೀವನ ಪಾಠ - ಕನ್ನಡಪ್ರಭ

ಒಂದು ಕೋಟಿ ಬಹುಮಾನದ ಟಿವಿ ವಾಹಿನಿಯೊಂದರ ಪ್ರಖ್ಯಾತ ರಿಯಾಲಿಟಿ ಕಾರ್ಯಕ್ರಮ 'ಆಟಗಾರ'ದಲ್ಲಿ ಭಾಗವಹಿಸಲು ಪತ್ರಕರ್ತ (ಅಚ್ಚುತ್ ಕುಮಾರ್), ವೈದ್ಯ (ಪ್ರಕಾಶ್ ಬೆಳವಾಡಿ) ಶಾಲಾ ಪ್ರಾಂಶುಪಾಲೆ (ಅನು ಪ್ರಭಾಕರ್) ಅಡುಗೆ ಭಟ್ಟ (ಸಾಧುಕೋಕಿಲಾ), ಖ್ಯಾತ ನಟಿ (ಪರುಲ್ ಯಾದವ್), ಗ್ಲ್ಯಾಮರ್ ನಟಿ (ಮೇಘನಾ ರಾಜ್), ಹಳ್ಳಿ ಹುಡುಗಿ (ಪಾವನಾ), ವನ್ಯಮೃಗ ಸಂರಕ್ಷಕಿ (ಆರೋಹಿತಾ ಗೌಡ), ಫ್ಯಾಷನ್ ಫೋಟೋಗ್ರಾಫರ್ (ಬಾಲಾಜಿ ಮನೋಹರ್) ಮತ್ತು ಸ್ಲಂ ಹುಡುಗ ಹಾಗೂ ಡ್ರಗ್ ಕಳ್ಳಸಾಗಾಣಿಕೆದಾರ (ಚಿರಂಜೀವಿ ಸರ್ಜಾ) ಯಾರು ನೆಲೆಸದ ಒಂದು ನಿಗೂಢ ದ್ವೀಪಕ್ಕೆ ತೆರಳುತ್ತಾರೆ. ಒಂದು ರಾತ್ರಿ ಕಳೆದ ನಂತರ ಆ ಗೃಹ ಸ್ಮಶಾನವಾಗಿ ಮಾರ್ಪಟ್ಟು ಒಬ್ಬೊಬ್ಬರೇ ಸಾವಿಗೀಡಾಗಿ ಉಳಿದವರಲ್ಲಿ ಭಯ, ಸಂಶಯ ಮೂಡುತ್ತಾ ಹೋಗುತ್ತದೆ. ಅವರು ನಿಜವಾದ ಅಸಲಿ ಆಟಕ್ಕೆ ಬಂದಿದ್ದಾರೆಯೇ? ಅವರಿಗೆ ಉಳಿಗಾಲ ಇದೆಯೇ? - ಗುರುಪ್ರಸಾದ್


English summary
K.M.Chaitanya directorial Chiranjeevi Sarja, Meghana Raj starrer Kannada Movie 'Aatagara' has received thumps up from the critics. Here is the collection of reviews from leading Kannada News Papers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada