Don't Miss!
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- News
Traffic Violation: ಎರಡೇ ದಿನದಲ್ಲಿ 13.8 ಕೋಟಿ ರೂ.ದಂಡ ಸಂಗ್ರಹ, ತೆರವಾದ ಪ್ರಕರಣಗಳ ವಿವರ ಇಲ್ಲಿದೆ
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರ ವಿಮರ್ಶೆ: ಫಲಿಸಿತು 'ಅಭಿನೇತ್ರಿ' ಪೂಜಾಫಲ
"ಏನೂಂದ್ರೆ ನಿಮ್ಮ ಜೊತೆ ಬಾಳೋಕೆ ಒಂದೇ ಒಂದು ಅವಕಾಶ ಕೊಡಬೇಕಿತ್ತು. ರೀ ನಿಮ್ಗೆ ಒಂದು ವಿಷಯ ಗೊತ್ತಾ ಕಾವೇರಿ ಹುಚ್ಚಿ. ಅವಳ ಗಂಡ ಆಫೀಸ್ ನಲ್ಲಿ ಯಾರನ್ನೋ ಇಟ್ಕೊಂಡುಬಿಟ್ಟಿದ್ದಾನಂತೆ, ಇನ್ನೇನಾಗುತ್ತೆ..." ಎಂಬ ಜನಪ್ರಿಯ ಸಂಭಾಷಣೆ ಯಾವ ಸಿನಿಮಾದು ಎಂಬುದು ಎಲ್ಲ ಚಿತ್ರರಸಿಕರಿಗೆ ಗೊತ್ತಿರುವುದೆ.
ಮಿನುಗುತಾರೆ ಕಲ್ಪನಾ ಅಭಿನಯದ 'ಶರಪಂಜರ' (1971) ಚಿತ್ರದ ಕೆಲವು ಸನ್ನಿವೇಶಗಳು, 'ಎರಡು ಕನಸು' ಚಿತ್ರದ "ತಂನಂ ತಂನಂ ಮನಸು ಮಿಡಿಯುತಿದೆ..." ಹಾಡು ಚಿತ್ರದಲ್ಲಿ ಮೂಡಿಬಂದಿರುವುದರಿಂದ ಈ ಚಿತ್ರ ಯಾವ ತಾರೆಗೆ ಸಂಬಂಧಿಸಿದ್ದು ಎಂಬುದನ್ನು ಎಲ್ಲರೂ ಸುಲಭವಾಗಿ ಊಹಿಸಬಹುದು. [ಪೂಜಾಗಾಂಧಿ ಸಂದರ್ಶನ]
ಆದರೆ ಪೂಜಾಗಾಂಧಿ ಮಾತ್ರ ಈ ಕಥೆ ಕಲ್ಪನಾ ಅವರದೇ ಎಂದು ಎಲ್ಲೂ ಹೇಳದೆ ಪ್ರೇಕ್ಷಕರನ್ನು ಕಾಡುವಂತೆ ಮಾಡುತ್ತಾರೆ. ಇದೊಂದು ಕಾಲ್ಪನಿಕ ಕಥೆಯಾದರೂ ಪೂಜಾಗಾಂಧಿ ಮೈಮೇಲೆ ಕಲ್ಪನಾ ಆವಾಹಿಸಿಕೊಂಡಂತೆ ಅಭಿನಯಿಸಿದ್ದಾರೆ. ಎಪ್ಪತ್ತು, ಎಂಬತ್ತರ ದಶಕದ ತಾರೆಯೊಬ್ಬರ ಕಥೆ ಇದು.

ಕಲಾವಿದೆಯ ಕನಸು ಕಾಣುವ ಶರತ್ ಲತಾ
ಕಲಾವಿದೆಯಾಗಬೇಕು ಎಂದು ಕನಸು ಕಾಣುವ ಶರತ್ ಲತಾ (ಪೂಜಾಗಾಂಧಿ) ಮುಂದೆ ಖ್ಯಾತ ನಟಿಯಾಗುತ್ತಾಳೆ. ಇದು ಮಿನುಗುತಾರೆ ಕಲ್ಪನಾ ಅವರ ಮೂಲ ಹೆಸರೂ ಹೌದು. ಇದಕ್ಕಾಗಿ ಸಾಕಷ್ಟು ಕಷ್ಟನಷ್ಟ ಎದುರಿಸಬೇಕಾಗುತ್ತದೆ. ಇನ್ನೇನು ಎಲ್ಲವೂ ಮುಗಿದೇ ಹೋಯಿತು ಎಂಬಂತಹ ಸನ್ನಿವೇಶದಲ್ಲಿ ಅದೃಷ್ಟ ಬಾಗಿಲು ತೆರೆಯುತ್ತದೆ. ಅಲ್ಲಿಂದ ಬೆಳ್ಳಿತೆರೆ ಮೇಲೆ ನಂದಾ ಆಗಿ ಲತಾ ಬದಲಾಗುತ್ತಾಳೆ.

ಸೇಡುತೀರಿಸಿಕೊಳ್ಳುವ ನಂದಾ
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲಿ ಕೊಡೆ ಹಿಡಿದರಂತೆ ಎಂಬ ಮಾತು ನಂದಾ ಬಾಳಿನಲ್ಲಿ ಅಕ್ಷರಶಃ ನಿಜವಾಗುತ್ತದೆ. ತಾನು ಬೆಳ್ಳಿಪರದೆ ಬೆಳಗುವುದಕ್ಕೂ ಮುನ್ನ ತನ್ನನ್ನು ಹೀಯಾಳಿಸಿದ, ನಿಂದಿಸಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾಳೆ.

ಕಡೆಗೆ ರಂಗಭೂಮಿಗೆ ಮರಳುವ ತಾರೆ
ಹಣ, ಅಂತಸ್ತು, ಐಶ್ವರ್ಯ, ಜನಪ್ರಿಯತೆಗಳ ಜೊತೆಗೆ ನಂದಾ ಅವರಲ್ಲಿ ಅಹಂಭಾವ, ದರ್ಪ ದೌಲತ್ತುಗಳೂ ಸೇರಿಕೊಳ್ಳುತ್ತವೆ. 'ಅಮರತಾರೆ' ನಂದಾ ಅವರ ಜನಪ್ರಿಯತೆ ಬರುಬರುತ್ತಾ ತಳಕಚ್ಚುತ್ತದೆ. ಅವಕಾಶಗಳಿಲ್ಲದೆ ಕಡೆಗೆ ರಂಗಭೂಮಿಗೆ ಮರಳಬೇಕಾಗುತ್ತದೆ.

ಮಧ್ಯಂತರದ ಬಳಿಕ ಹೊಸ ತಿರುವು
ತಾರೆಯೊಬ್ಬಳ ಏಳುಬೀಳಿನ ಕಥೆ ಹೀಗೆ ಸಾಗಿಹೋಗುತ್ತದೆ. ಆಕೆಯ ಬಾಳಿನಲ್ಲಿ ಗಟಿಗೇರಿ ಗಂಗರಾಜು (ರವಿಶಂಕರ್) ಆಗಮನವಾಗಿ ಹೊಸ ತಿರುವು ಪಡೆದುಕೊಳ್ಳುತ್ತದೆ. ಲಜ್ಜೆ ಬಿಟ್ಟು ತನ್ನನ್ನು ಮದುವೆಯಾಗುವಂತೆ ಕಾಡುತ್ತಾಳೆ ನಂದಾ. ಪ್ರೀತಿಗೆ ಕರಗಿ ನಂದಾರನ್ನು ಗಂಗರಾಜು ವರಿಸುತ್ತಾನೆ. ಮುಂದಿನದೆಲ್ಲವೂ ದುರಂತ.

ವಿವಾದಾತೀತ 'ಅಭಿನೇತ್ರಿ'
ನೈಜಕಥೆಯೊಂದನ್ನು ಯಾವುದೇ ವಿವಾದಗಳಿಲ್ಲದಂತೆ, ಬಹಳ ಸೂಕ್ಷ್ಮವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಸತೀಶ್ ಪ್ರಧಾನ್. ಕಥೆಯ ವಿಚಾರದಲ್ಲಿ ಅವರು ಸಾಕಷ್ಟು ಜಾಗ್ರತೆ ವಹಿಸಿರುವುದನ್ನು ಕಾಣಬಹುದು. ತಾರೆ ಎಂದ ಮೇಲೆ ಆಕೆಯ ಸಂಬಂಧಗಳು, ಗಾಸಿಪ್ ಗಳು ಇದ್ದದ್ದೇ. ಇದನ್ನು ಎಲ್ಲೂ ತಾಳ ತಪ್ಪದಂತೆ ತೆರೆಗೆ ತಂದಿದ್ದಾರೆ ನಿರ್ದೇಶಕರು.

ಪುಟ್ಟಣ್ಣ ಕಣಗಾಲ್ ರನ್ನು ನೆನಪಿಸುವ ಶಿವಯ್ಯ
ಇನ್ನು ಗಟಿಗೇರಿ ಗಂಗರಾಜು ಅವರ ಪಾತ್ರವೂ ಅಷ್ಟೇ. ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ನಿಲ್ಲುತ್ತದೆ. ಇನ್ನು ಆಗಿನ ಕಾಲದ ಖ್ಯಾತ ನಿರ್ದೇಶಕ ಶಿವಯ್ಯ (ಅತುಲ್ ಕುಲಕರ್ಣಿ) ಪಾತ್ರವನ್ನು ಅಳೆದುತೂಗಿ ವಿವಾದತೀತವಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕರು. ಶಿವಯ್ಯ ಪಾತ್ರ ಪುಟ್ಟಣ್ಣ ಕಣಗಾಲ್ ರನ್ನು ನೆನಪಿಸುತ್ತದೆ. 'ಅಭಿನೇತ್ರಿ' ನಂದಾ ಪಾತ್ರದ ಮುಂದೆ ಅವೆಲ್ಲವೂ ಅಷ್ಟಾಗಿ ಗಮನಕ್ಕೂ ಬರುವುದೂ ಇಲ್ಲ.

ಗಮನಸೆಳೆಯುವ ಎಪ್ಪತ್ತು, ಎಂಬತ್ತರ ದಶಕದ ಕಾಸ್ಟ್ಯೂಮ್ಸ್
ಎಪ್ಪತ್ತು, ಎಂಬತ್ತರ ತಾರೆಯ ಗೆಟಪ್, ಅಂದಿನ ಕಾಸ್ಟ್ಯೂಮ್ಸ್ ಗಳನ್ನು ತೆರೆಗೆ ತಂದಿರುವ ರೀತಿ ಗಮನಸೆಳೆಯುವ ಅಂಶಗಳಲ್ಲಿ ಒಂದು. ಸಂಭಾಷಣೆ ಅಲ್ಲಲ್ಲಿ ಸ್ವಲ್ಪ ಕೃತಕವಾಯಿತು ಎನ್ನಿಸಿದರೂ ಒಟ್ಟಾರೆ ಚಿತ್ರ ಅದನ್ನು ಮರೆಮಾಚುತ್ತದೆ.

ಪೂಜಾಗಾಂಧಿ ಭಾಗ್ಯದ ಬಾಗಿಲು ತೆರೆದರೂ ಅಚ್ಚರಿಯಿಲ್ಲ
ಇನ್ನು ಚಂದ್ರಶೇಖರ್ ಅವರ ಕ್ಯಾಮೆರಾ ಕಣ್ಣು ನಂದಾ ಪಾತ್ರದ ಅಂದಚೆಂದಗಳನ್ನು ಸೆರೆಹಿಡಿಯುಲ್ಲಿ ಯಶಸ್ವಿಯಾಗಿದೆ. ಕೆ.ಎ.ಪ್ರಕಾಶ್ ಅವರ ಸಂಕಲನ ಸಲೀಸಾಗಿ ಸಾಗಿಹೋಗಿದೆ. ಮನೋಮೂರ್ತಿ ಅವರ ಸಂಗೀತ ಇಂಪಾಗಿದ್ದರೂ ಅಷ್ಟಾಗಿ ಕಾಡುವಂತೇನು ಇಲ್ಲ. 'ಅಭಿನೇತ್ರಿ'ಯ ದುರಂತ ನಾಯಕಿಯಾಗಿ ಪೂಜಾಗಾಂಧಿ ಗೆದ್ದಿದ್ದಾರೆ. ಈ ಚಿತ್ರದಿಂದ ಪೂಜಾಗಾಂಧಿ ಭಾಗ್ಯದ ಬಾಗಿಲು ತೆರೆದರೂ ಅಚ್ಚರಿಯಿಲ್ಲ. ಈ ಚಿತ್ರವನ್ನ ಒಮ್ಮೆ ನೋಡಬಹುದು.