For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: 'ಅಂಜದ ಗಂಡು' ಸೂಪರ್ ಕಲಾ

  By ಉದಯರವಿ
  |

  ಇಪ್ಪತ್ತೈದು ವರ್ಷಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಖುಷ್ಬು ಜೋಡಿಯಾಗಿ 'ಅಂಜದ ಗಂಡು' ಚಿತ್ರದಲ್ಲಿ ಅಭಿನಯಿಸಿದ್ದರು. ಅಲ್ಲಿ ರವಿಚಂದ್ರನ್ ಮಾತೆತ್ತಿದರೆ ಕಾರು, ಕಿಟಕಿ ಗಾಜುಗಳನ್ನು "ಪೀಸ್ ಪೀಸ್" ಮಾಡುತ್ತಿದ್ದರು. ಇನ್ನು ಖುಷ್ಬು ಸಹ ಅಷ್ಟೇ ಜಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದರು.

  ಆದರೆ ಪ್ರದೀಪ್ ರಾಜ್ ನಿರ್ದೇಶನದ 'ಅಂಜದ ಗಂಡು' ಚಿತ್ರದಲ್ಲಿ ನೀನಾಸಂ ಸತೀಶ್ ಪೀಸ್ ಪೀಸ್ ಎನ್ನುವುದೂ ಇಲ್ಲ, ಇಲ್ಲಿನ ನಾಯಕಿ ಕೂಡ ಜಂಭದ ಕೋಳಿಯೂ ಅಲ್ಲ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಎಲ್ಲೂ ಹೋಲಿಕೆ ಕಾಣುವುದಿಲ್ಲ. ಕೇವಲ ಟೈಟಲ್ ನಲ್ಲಷ್ಟೇ ಸಾಮತ್ಯೆ ಇರುವುದು ಎಂಬುದು ಚಿತ್ರ ನೋಡಿದ ಮೇಲೆ ಅನ್ನಿಸುತ್ತದೆ.

  ಎರಡು ವರ್ಷಗಳ ಬಳಿಕೆ ತನ್ನ ಊರಿಗೆ ಬರುವ ಸಂತುನನ್ನು (ನೀನಾಸಂ ಸತೀಶ್) ನೋಡಿ ಆತನ ಗೆಳೆಯರು ಅಯ್ಯೋ ತಿರುಗಾ ಬಂದ್ಯಾ, ಇನ್ನೇನು ಎಡವಟ್ಟು ಮಾಡ್ತಾನೋ ಎಂದು ಓಡಿಹೋಗುತ್ತಾರೆ. ಅಲ್ಲಿಂದ ಕಥೆ ಫ್ಲ್ಯಾಶ್ ಬ್ಯಾಕ್ ಗೆ ಮರಳುತ್ತದೆ. ಸಂತು ಯಾನೆ ಸಂತೋಷ್ ಕಥೆ ಎರಡು ವರ್ಷ ಹಿಂದಕ್ಕೆ ಸರಿಯುತ್ತದೆ.

  Rating:
  3.0/5

  ಚಿತ್ರ: ಅಂಜದ ಗಂಡು

  ನಿರ್ಮಾಣ: ಇಂದ್ರಜಾಲ್ ಮೂವೀಸ್, ಶರತ್ ಕಂಬೈನ್ಸ್

  ಚಿತ್ರಕಥೆ, ಸಂಭಾಷಣೆ, ನಿರ್ದೇಶನ: ಪ್ರದೀಪ್ ರಾಜ್

  ಸಂಗೀತ: ಡಿ ಇಮಾಮ್

  ಛಾಯಾಗ್ರಹಣ: ರಮೇಶ್

  ತಾರಾಗಣ: ನೀನಾಸಂ ಸತೀಶ್, ಸುಭಿಕ್ಷಾ (ಹೊಸ ಪರಿಚಯ), ನಾಗಾಭರಣ, ಸುಮನ್, ಚಿಕ್ಕಣ್ಣ, ರಾಜು ತಾಳಿಕೋಟೆ, ಹೊನ್ನವಳ್ಳಿ ಕೃಷ್ಣ ಮುಂತಾದವರು.

  ಸಂತು ಪ್ರೀತಿಗೆ ಹಳದಿ ಸಿಗ್ನಲ್ ಕೊಡುವ ಗೀತಾ

  ಸಂತು ಪ್ರೀತಿಗೆ ಹಳದಿ ಸಿಗ್ನಲ್ ಕೊಡುವ ಗೀತಾ

  ಬೆಟ್ಟೇಗೌಡರ (ಸುಮನ್) ಏಕೈಕ ಮಗಳು ಗೀತಾಳನ್ನು (ಸುಭಿಕ್ಷಾ) ಸಂತು ಪ್ರೀತಿಸುತ್ತಿರುತ್ತಾನೆ. ಆದರೆ ಅವನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಡದಿದ್ದರೂ ಹಳದಿ ಸಿಗ್ನಲ್ ಕೊಟ್ಟಿರುತ್ತಾಳೆ ಗೀತಾ. ಆದರೆ ತನ್ನ ಗೆಳೆಯರ ಬಳಿ ಮಾತ್ರ ಅವಳು ತನ್ನನ್ನು ಬಿಟ್ಟು ಒಂದೇ ಒಂದು ಕ್ಷಣವೂ ಇರಲ್ಲ ಎಂದು ಬಿಲ್ಡಪ್ ಕೊಡುತ್ತಿರುತ್ತಾನೆ ಸಂತು.

  ಮದುವೆ ನಿಶ್ಚಯದ ಬಳಿಕ ಟ್ರ್ಯಾಕ್ ಬದಲಿಸುವ ಕಥೆ

  ಮದುವೆ ನಿಶ್ಚಯದ ಬಳಿಕ ಟ್ರ್ಯಾಕ್ ಬದಲಿಸುವ ಕಥೆ

  ಗೀತಾಳಿಗೆ ಮದುವೆ ನಿಶ್ಚಯವಾದ ಮೇಲೆ ಸಂತು ನೇರವಾಗಿ ಅವಳ ಕೈಹಿಡಿದು ಮದುವೆಯಾಗು ಎಂದು ಕೇಳಿಯೇ ಬಿಡುತ್ತಾನೆ. ಅಲ್ಲಿಂದ ದಿಕ್ಕು ಬದಲಾಯಿಸುವ ಕಥೆ ಮತ್ತೆ ಟ್ರ್ಯಾಕ್ ಗೆ ಬರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

  ಕಡೆಗೆ ಸಂತೂಗೆ ಗೀತಾ ಸಿಗುತ್ತಾಳಾ?

  ಕಡೆಗೆ ಸಂತೂಗೆ ಗೀತಾ ಸಿಗುತ್ತಾಳಾ?

  ಒಂದು ಕಡೆ ಮನೆತನದ ಗೌರವ ಇನ್ನೊಂದು ಕಡೆ ತನ್ನನ್ನು ಪ್ರೀತಿಸುವ ಹುಡುಗ. ಕಡೆಗೆ ಸಂತೂಗೆ ಗೀತಾ ಸಿಗುತ್ತಾಳಾ, ತನ್ನ ಮನಸ್ಸು ಬದಲಾಯಿಸುಕೊಳ್ಳುತ್ತಾಳಾ ಎಂಬುದೇ ಚಿತ್ರದ ಕಥಾವಸ್ತು. ಇದನ್ನು ತೆರೆಯ ಮೇಲೆ ನೋಡಿಯೇ ಆನಂದಿಸಿ.

  ನೀನಾಸಂ ಸತೀಶ್ ಮನಮಿಡಿಯುವ ಅಭಿನಯ

  ನೀನಾಸಂ ಸತೀಶ್ ಮನಮಿಡಿಯುವ ಅಭಿನಯ

  ಸಂತು ಪಾತ್ರದಲ್ಲಿ ನೀನಾಸಂ ಸತೀಶ್ ಅವರದು ಮನಮಿಡಿಯುವ ಅಭಿನಯ. ಅವರ ಹಾವಭಾವ, ತರಲೆ ದೃಶ್ಯಗಳು ಪ್ರೇಕ್ಷಕರನ್ನು ನಕ್ಕು ನಲಿಸುತ್ತವೆ. ಇನ್ನು ಸುಭಿಕ್ಷಾ ಅವರದು ಒಂಚೂರು ಗಂಭೀರ ಪಾತ್ರ ಅನ್ನಿಸಿದರೂ ಬಹುತೇಕ ನ್ಯಾಯ ಸಲ್ಲಿಸಿದ್ದಾರೆ. ಕಣ್ಣಲ್ಲೇ ಕುಂಟಾಬಿಲ್ಲೆ ಆಡದಿದ್ದರೂ ಕಣ್ಣಾಮುಚ್ಚಾಲೆಯಂತೂ ಆಡುತ್ತಾರೆ. ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಇದು ಅವರಿಗೆ ಚೊಚ್ಚಲ ಕನ್ನಡ ಚಿತ್ರ.

  ಚಿಕ್ಕಣ್ಣ ಕಾಮಿಡಿಗೆ ಪ್ರೇಕ್ಷಕರು ಸುಸ್ತು

  ಚಿಕ್ಕಣ್ಣ ಕಾಮಿಡಿಗೆ ಪ್ರೇಕ್ಷಕರು ಸುಸ್ತು

  ಇನ್ನು ಚಿಕ್ಕಣ್ಣ ಕಾಮಿಡಿಗೆ ಪ್ರೇಕ್ಷಕರು ಸುಸ್ತಾಗುತ್ತಾರೆ. ರಾಜು ತಾಳಿಕೋಟೆ ಅವರು ತೊಟ್ಟಿಮನೆ ಪಾತ್ರದಲ್ಲಿ ನಗಿಸುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ಬಹಳ ದಿನಗಳ ಬಳಿಕ ಕನ್ನಡದಲ್ಲಿ ಕಾಣಿಸಿಕೊಂಡಿರುವ ಸುಮನ್ ಮೀಸೆ ತಿರುವುತ್ತಾ ಗಂಭೀರವಾಗಿ ಕಾಣಿಸುತ್ತಾರೆ. ಸಂತು ತಂದೆಯಾಗಿ ನಾಗಾಭರಣ ಅವರದು ಗಮನಾರ್ಹ ಪಾತ್ರ.

  ಚಿತ್ರದ ಸಂಭಾಷಣೆಗೆ ಹೆಚ್ಚು ಅಂಕ

  ಚಿತ್ರದ ಸಂಭಾಷಣೆಗೆ ಹೆಚ್ಚು ಅಂಕ

  ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಸಂಭಾಷಣೆಗೆ ಹೆಚ್ಚು ಅಂಕ ಸಿಗುತ್ತದೆ. ಮೊದಲರ್ಧದಲ್ಲಿರುವ ವೇಗ ದ್ವಿತೀಯಾರ್ಧದಲ್ಲಿ ಕೊಂಚ ಕಡಿಮೆಯಾದಂತೆ ಭಾಸವಾಗುತ್ತದೆ ಆದರೂ ಕಡೆಕಡೆಗೆ ಟ್ರ್ಯಾಕ್ ಗೆ ಮರಳುತ್ತದೆ. ಚಿತ್ರದಲ್ಲಿನ ಕಾಮಿಡಿ ಸನ್ನಿವೇಶಗಳು ಇನ್ನೊಂದು ಪ್ಲಸ್ ಪಾಯಿಂಟ್.

  ಕಣ್ಮನ ಸೆಳೆಯುವ ರಮೇಶ್ ಛಾಯಾಗ್ರಹಣ

  ಕಣ್ಮನ ಸೆಳೆಯುವ ರಮೇಶ್ ಛಾಯಾಗ್ರಹಣ

  ಈ ಹಿಂದೆ 'ಕಿರಾತಕ' ಚಿತ್ರ ನಿರ್ದೇಶಿಸಿದ್ದ ಪ್ರದೀಪ್ ರಾಜ್ ಅವರು ಈ ಬಾರಿಯೂ ಗೆದ್ದಿದ್ದಾರೆ. ಚಿತ್ರಕಥೆ, ಸಂಭಾಷಣೆ ಮೇಲೂ ಹಿಡಿತ ಸಿಕ್ಕಿರುವುದರಿಂದ ಎಲ್ಲೂ ಗೊಂದಲಕ್ಕೆ ಆಸ್ಪದ ನೀಡದಂತೆ ತೆರೆಗೆ ತಂದಿದ್ದಾರೆ. ರಮೇಶ್ ಅವರ ಛಾಯಾಗ್ರಹಣ ಕಣ್ಮನ ಸೆಳೆಯುತ್ತದೆ. ಮಡಿಕೇರಿಯ ನಯನಮನೋಹರ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಅವರ ಕ್ಯಾಮೆರಾ ಕೈಚಳಕ ಎದ್ದುಕಾಣುತ್ತದೆ.

  ಹಾಯಾಗಿ ನೋಡಬಹುದಾದ ಚಿತ್ರ

  ಹಾಯಾಗಿ ನೋಡಬಹುದಾದ ಚಿತ್ರ

  ಡಿ ಇಮಾನ್ ಅವರ ಸಂಗೀತದ ಎರಡು ಹಾಡುಗಳು ಕೇಳುವಂತಿವೆ. ಚಿತ್ರದಲ್ಲಿ ಒಂದು ಅನಗತ್ಯ ಹಾಡು, ದ್ವಿತೀಯಾರ್ಧದಲ್ಲಿ ಒಂದಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದರೆ 'ಅಂಜದ ಗಂಡು' ಚಿತ್ರ ಇನ್ನಷ್ಟು ಸೊಗಸಾಗಿರುತ್ತಿತ್ತು. ಆದರೂ ಹಾಯಾಗಿ ನೋಡಬಹುದಾದ ಚಿತ್ರ.

  English summary
  Kannada movie Anjada Gandu review. Sathish Neenasam and Subhiksha lead movie has some good comic moments and makes entertaining viewing. If you are in the mood for fun and have some spare time, join 'Anjada Gandu' on this joy ride.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X