For Quick Alerts
ALLOW NOTIFICATIONS  
For Daily Alerts

  ಸಯಾಮಿ ಅವಳಿಗಳ ವಿಶಿಷ್ಟ ಕಥೆಯ ಚಿತ್ರ 'ಚಾರುಲತಾ'

  |

  Rating:
  3.5/5
  ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಕನ್ನಡದ 'ಪ್ರಚಂಡ ಕುಳ್ಳ' ನಟ, ನಿರ್ಮಾಪಕ ಬಿ ಎಸ್ ದ್ವಾರಕೀಶ್ ನಿರ್ಮಾಣದ 'ಚಾರುಲತಾ' ಚಿತ್ರಕ್ಕೆ ಉತ್ತಮ ಓಪನಿಂಗ್ ದೊರೆತಿದೆ. ಕಾರಣ, ಈ ಮೊದಲು ಅವರು ನಿರ್ಮಿಸಿದ್ದ 'ವಿಷ್ಣುವರ್ಧನ' ಚಿತ್ರ ಸೂಪರ್ ಸಕ್ಸಸ್ ದಾಖಲಿಸಿತ್ತು. ಅದನ್ನು ನಿರ್ದೇಶಿಸಿದ್ದ ಪಿ ಕುಮಾರ್ ಅವರೇ ಈ 'ಚಾರುಲತಾ' ಚಿತ್ರದ ನಿರ್ದೇಶಕರೂ ಆಗಿರುವುದರಿಂದ ಸಹಜವಾಗಿಯೇ ಬಹಳಷ್ಟು ನಿರೀಕ್ಷೆ ಮನೆ ಮಾಡಿತ್ತು. ಜೊತೆಗೆ ರಾಷ್ಟ್ರ ಪ್ರಶಸ್ತಿ ವಿಜೇತೆ, ನಟಿ ಪ್ರಿಯಾಮಣಿ ಈ ಚಿತ್ರದ ನಾಯಕಿ.

  ಈ ಎಲ್ಲಾ ಕಾರಣಗಳಿಂದ ಈ 'ಚಾರುಲತಾ' ಚಿತ್ರಕ್ಕಾಗಿ ಕಾಯುತ್ತಿದ್ದ ಪ್ರೇಕ್ಷಕರಲ್ಲಿ ಬಹಳಷ್ಟು ಮಂದಿ ಇಂದು ಮೊದಲ ಪ್ರದರ್ಶನಕ್ಕೇ ಥಿಯೇಟರಿಗೆ ಲಗ್ಗೆ ಇಟ್ಟಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕರಿಗೆ ನಿರಾಸೆಯಾಗಿಲ್ಲ. 'ಚಾರುಲತಾ' ಚಿತ್ರ ಪಕ್ಕಾ ಕಮರ್ಷಿಯಲ್ ಚಿತ್ರವಲ್ಲದಿದ್ದರೂ ಗಟ್ಟಿಯಾದ ಕಥೆ, ಚಿತ್ರಕಥೆ ಹಾಗೂ ನಿರೂಪಣೆಯಿಂದ ಪ್ರೇಕ್ಷಕರನ್ನು ಸೆಳೆಯಲು ಸಮರ್ಥವಾಗಿದೆ. 'ಥಾಯ್' ಭಾಷೆಯ 'ಅಲೋನ್' ಚಿತ್ರದ ರೀಮೇಕ್ ಆಗಿರುವ ಈ ಕನ್ನಡದ 'ಚಾರುಲತಾ', ಥಾಯ್ ಮೂಲದ ಚಿತ್ರವಾಗಿದ್ದರೂ ಪ್ರಪಂಚದೆಲ್ಲಡೆ ಸಲ್ಲಬಲ್ಲ ವಿಶಿಷ್ಟ ಕಥೆ ಹೊಂದಿದೆ.

  ಸಯಾಮಿ ಅವಳಿಗಳು ಮಾತ್ರವಲ್ಲದೇ ದೇಹದ ಹೊಟ್ಟೆ ಭಾಗದಲ್ಲಿ ಒಬ್ಬರಿಗೊಬ್ಬರು ಬೆಸೆದುಕೊಂಡಿರುವ ಹೆಣ್ಣುಮಕ್ಕಳಿಬ್ಬರ ಜೀವನಕ್ಕೆ ಸಂಬಂಧಿಸಿದ ಕಥೆಯಿದು. ದೇಹ ಎರಡಾಗಿದ್ದರೂ ಬೇರೆಬೇರೆಯಾಗಿ ಬಾಳಲಾರದ ಈ ಜೀವಗಳು ಪ್ರತಿಯೊಂದು ಚಟುವಟಿಕೆಗೂ ಒಬ್ಬರನೊಬ್ಬರು ಅವಲಂಬಿಸಿರುತ್ತಾರೆ. ಆದರೆ ಮನಸ್ಸು ಮಾತ್ರ ಒಂದೇ ರೀತಿ ಯೋಚಿಸುವುದಲ್ಲದೇ ಕಾರ್ಯವನ್ನೂ ಮಾಡುವುದರಿಂದ ಈ ಇಬ್ಬರ ಮಧ್ಯೆ ಹೋಲಿಸಲು ಅಸಾಧ್ಯವಾದ ಅನ್ಯೋನ್ಯತೆ ಕಂಡುಬರುತ್ತದೆ. ಆದರೆ ಈ ಸಯಾಮಿ ಅವಳಿ ಮಕ್ಕಳು ಬೆಳೆದು 20 ವರ್ಷಕ್ಕೆ ಕಾಲಿಡುತ್ತಿದ್ದಂತೆ ಇಬ್ಬರೂ ಒಂದೇ ಹುಡುಗನ ಪ್ರೀತಿಯಲ್ಲಿ ಬೀಳುತ್ತಾರೆ. ಅಲ್ಲಿಂದ ಮುಂದಕ್ಕೆ ಈ ಅವಳಿಗಳ ಜೀವನ ಯಾವ ತಿರುವು ಪಡೆಯುತ್ತದೆ ಎಂಬುದೇ ಚಿತ್ರದ ಕಥೆಯ ತಿರುಳು.

  ನಿರ್ದೇಶನದ ಬಗ್ಗೆ: ಮೂಲ ಚಿತ್ರದ ಕಥೆಯನ್ನು ಇಲ್ಲಿಯ ಪರಿಸರಕ್ಕೆ, ಪ್ರೇಕ್ಷಕರಿಗೆ ಅದರಲ್ಲೂ ವಿಶೇಷ ಎಂಬಂತೆ ಸಂಪೂರ್ಣ 'ಸೌತ್ ಇಂಡಿಯಾ'ಕ್ಕೇ ಹೊಂದುವಂತೆ ಮಾಡಬೇಕಾದ ಜವಾಬ್ದಾರಿ ನಿರ್ದೇಶಕ ಪಿ ಕುಮಾರ್ ಅವರಿಗಿತ್ತು. ಅವರು ಅದನ್ನು ಸಮರ್ಥವಾಗಿ ನಿರೂಪಿಸಲು ಸಾಕಷ್ಟು ಶ್ರದ್ಧೆ, ಶ್ರಮ ವಹಿಸಿದ್ದಾರೆ. ಕೆಲವೊಂದು ಪಾತ್ರ ಹಾಗೂ ದೃಶ್ಯಗಳ ಜೋಡಣೆಯಲ್ಲಿ ಎಡವಿದ್ದು ಬಿಟ್ಟರೆ ಚಿತ್ರಕಥೆ ಹಾಗೂ ನಿರೂಪಣೆಯಲ್ಲಿ ನಿರ್ದೇಶಕರು ಬಿಗಿ ಹಿಡಿತ ಸಾಧಿಸಿದ್ದಾರೆ. ಲೊಕೋಶನ್ ಗಳ ಆಯ್ಕೆ ಹಾಗೂ ದೃಶ್ಯಗಳ ಜೋಡಣೆಯಲ್ಲಿ ಸಾಕಷ್ಟು ಗಮನಹರಿಸಿ ಒಂದೊಳ್ಳೆಯ ಚಿತ್ರ ನೀಡುವ ನಿರ್ದೇಶಕರ ಉದ್ದೇಶವನ್ನು ಮೆಚ್ಚಲೇಬೇಕು.

  ಯೋಗಾನಂದ ಮುದ್ದಾನ್ ಅವರ ಸಂಭಾಷಣೆ ಕೂಡ ಚಿತ್ರಕ್ಕೆ ಉತ್ತಮ ಸಾಥ್ ನೀಡಿದೆ. ಅತ್ಯವಶ್ಯಕವಾಗಿದ್ದ ಛಾಯಾಗ್ರಹಣ ಮತ್ತು ಸಂಗೀತ ಕೂಡ ಚಿತ್ರಕ್ಕೆ ದಕ್ಕಿರುವುದು ನಿರ್ದೇಶಕರ ಪರಿಶ್ರಮಕ್ಕೆ ಪರಿಪೂರ್ಣತೆ ಒದಗಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದ ಜೀವಾಳವೇ ಆಗಿರುವ ನಾಯಕಿ ಪಾತ್ರಧಾರಿ ಪ್ರಿಯಾಮಣಿ ಆಯ್ಕೆಯೇ ನಿರ್ದೇಶಕ ಜಾಣ್ಮೆಗೆ ಸಾಕ್ಷಿ ಎಂಬಂತಿದೆ. ಜೊತೆಗೆ ಚಿತ್ರಕ್ಕೆ ಬೇಕಾದ ತಾಂತ್ರಿಕ ವರ್ಗಗಳ ಆಯ್ಕೆಯಲ್ಲೂ ನಿರ್ದೇಶಕರು ತಮ್ಮ ಕೈಚಳಕ ಮೆರೆದಿದ್ದಾರೆ. ಆದರೆ 'ಚಾರುಲತಾ'ಗೆ 'ಅತ್ಯುತ್ತಮ ಚಿತ್ರ' ಎಂಬ ಹೆಗ್ಗಳಿಕೆ ಸಾಧ್ಯತೆಯನ್ನು ನಿರ್ದೇಶಕರು ಮಿಸ್ ಮಾಡಿಕೊಂಡಿದ್ದಾರೆ, ಕಾರಣ, ನಂಬಿಕೆ ಮತ್ತು ಮೂಢನಂಬಿಕೆಗಳ ಮಧ್ಯೆ ಪ್ರೇಕ್ಷಕರಿಗೆ ಗೊಂದಲ ಸೃಷ್ಟಿಸಿಬಿಟ್ಟಿದ್ದಾರೆ.

  ಕಲಾವಿದರು ಹಾಗೂ ತಾಂತ್ರಿಕ ಬಳಗದ ಬಗ್ಗೆ: ಚಿತ್ರದ ಶೀರ್ಷಿಕೆ 'ಚಾರುಲತಾ (ಚಾರು+ಲತಾ)' ಆಗಿದ್ದು ಸಯಾಮಿ ಅವಳಿಗಳ ಪಾತ್ರಧಾರಿ ಪ್ರಿಯಾಮಣಿ 'ಚಾರು' ಹಾಗೂ 'ಲತಾ' ಪಾತ್ರಗಳಲ್ಲಿ ಗಮನಾರ್ಹವಾಗಿ ಅಭಿನಯಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಈಗಾಗಲೇ ತಾವೊಬ್ಬ ಪ್ರತಿಭಾವಂತ ಕಲಾವಿದೆ ಎಂಬುದನ್ನು ಸಮರ್ಥವಾಗಿ ನಿರೂಪಿಸಿರುವ ಪ್ರಿಯಾಮಣಿ, ಬಾಲಿವುಡ್ ಪ್ರೇಕ್ಷಕರನ್ನೂ ತಲುಪಿ ಬಂದವರು. ಪಾತ್ರದಲ್ಲಿ ಎಲ್ಲಾ ಕಡೆ ಸಂಪೂರ್ಣ ತಲ್ಲೀನತೆ ಕಾಯ್ದುಕೊಂಡಿರುವ ಪ್ರಿಯಾ, ಆಕ್ಟಿಂಗ್, ಫೈಟಿಂಗ್ ಎಲ್ಲದರಲ್ಲೂ ಸೂಪರ್. ನಾಯಕಿ ಪ್ರಧಾನ ಚಿತ್ರದಲ್ಲಿನ ನಾಯಕಿನಟಿಯಾಗಿ ತಮ್ಮ ಪಾತ್ರದ ಮೂಲಕ ಇಡೀ ಚಿತ್ರವನ್ನು ಆವರಿಸಿರುವ ಪ್ರಿಯಾಮಣಿ ನಟನೆ ಬಗ್ಗೆ ಎರಡು ಮಾತಿಲ್ಲ.

  ಇನ್ನು ಪ್ರಿಯಾಮಣಿ ಪ್ರಿಯತಮನಾಗಿ ಕಾಣಿಸಿಕೊಂಡಿರುವ ಸ್ಕಂದ, ಪ್ರಿಯಾಮಣಿ ಅಮೋಘ ಅಭಿನಯ ಹಾಗೂ ಅನುಭವಗಳ ಎದುರು ನಿಂತಿದ್ದೇ ಹೆಚ್ಚು! ಹೊಸಬರು ಎಂಬ ವಿನಾಯತಿ ನೀಡದಿದ್ದರೂ ನಟ ಸ್ಕಂದ, ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಆದರೆ ಪ್ರಿಯಾಮಣಿ ಸರಿಸಮನಾದ ಪಾತ್ರವಾಗಲೇ ಅಭಿನಯವಾಗಲೀ ಸ್ಕಂದ ಅವರದಲ್ಲ. ಇನ್ನು ಪೋಷಕ ಪಾತ್ರಗಳಲ್ಲಿ ಅಭಿನಯಿಸಿರುವ ಶರಣ್ಯಾ ಪೊನ್ ವಣ್ಣನ್, ಸೀತಾ, ಸಾಯಿ ಶಶಿ ಹಾಗೂ ಆರತಿ ಎಲ್ಲರೂ ತಮ್ಮತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಆದರೆ ರವಿಶಂಕರ್ 'ಸ್ವಾಮೀಜಿ' ಪಾತ್ರ ಚಿತ್ರದಲ್ಲಿ ಅನಗತ್ಯ ಎನಿಸುವುದಲ್ಲದೇ ಅವರಿಗಿರುವ ಪ್ರತಿಭೆಗೆ ಅದು ಏನೇನೂ ಅಲ್ಲವೆನಿಸಿ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತದೆ.

  ಸುಂದರ್ ಸಿ ಬಾಬು ಹಿನ್ನೆಲೆ ಸಂಗೀತ 'ಚಾರುಲತಾ' ಚಿತ್ರದ ಹೈಲೈಟ್ಸ್ ಗಳಲ್ಲೊಂದು. ಹಾಡುಗಳು ಓಕೆ ಎನ್ನುವಂತಿದ್ದರೂ 'ಹಾರರ್' ಹಾಗೂ 'ಸಸ್ಪೆನ್ಸ್' ಮಿಶ್ರಣದ ಈ ಚಿತ್ರಕ್ಕೆ ಹಿನ್ನಲೆ ಸಂಗೀತ ಅತ್ಯದ್ಭುತ ಎನ್ನುವಂತಿದೆ. ಜೊತೆಗೆ ಎಂ ವಿ ಪನ್ನೀರ್ ಸೆಲ್ವಂ ಛಾಯಾಗ್ರಹಣಕ್ಕೂ ಇದೇ ಮಾತು ಅನ್ವಯಿಸುತ್ತದೆ. ಸಂಗೀತ ಮತ್ತು ಛಾಯಾಗ್ರಹಣ ಈ ಚಿತ್ರದ ಬ್ಯಾಕ್ ಬೋನ್ ಆಗಿದ್ದು ತಮಗೊಪ್ಪಿಸಿದ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿವೆ. ಇನ್ನು ಡಾನ್ ಮ್ಯಾಕ್ಸ್ ಸಂಕಲನವೂ ಚೆನ್ನಾಗಿದೆ ಎನ್ನುವುದರೊಂದಿಗೆ ತಾಂತ್ರಿಕ ವರ್ಗವು 'ಟೀಮ್ ಸ್ಪಿರಿಟ್' ಪ್ರದರ್ಶಿಸಿದೆ ಎನ್ನಲೇಬೇಕು.

  ಒಟ್ಟಿನಲ್ಲಿ 'ವಿಷ್ಣುವರ್ಧನ' ಚಿತ್ರದ ಮೂಲಕ ಒಂದಾಗಿದ್ದ ದ್ವಾರಕೀಶ್ ಹಾಗೂ ಪಿ ಕುಮಾರ್ ಜೋಡಿ ಈ 'ಚಾರುಲತಾ' ಚಿತ್ರದ ಮೂಲಕ ಇನ್ನೊಂದು ಒಳ್ಳೆಯ ರೀಮೇಕ್ ಚಿತ್ರವನ್ನು ಕನ್ನಡದ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಈ ಚಿತ್ರದ ಮೂಲಕ ಪ್ರಿಯಾಮಣಿ ಅಮೋಘ ನಟನೆಯ ಚಿತ್ರವೊಂದು ಅವರ ಅಭಿಮಾನಿಗಳ ಪಾಲಿಗೆ ಸಿಕ್ಕಿದೆ. ಅವಳಿ ಮಕ್ಕಳ ಮನಮುಟ್ಟುವ ಕಥೆಯ ಉತ್ತಮ ಚಿತ್ರವೊಂದು ಚಿತ್ರರಂಗದ ಐವತ್ತು ವರ್ಷಗಳ ಪಯಣದಲ್ಲಿರುವ ದ್ವಾರಕೀಶ್ ನಿರ್ಮಾಣ ಹಾಗೂ ಪಿ ಕುಮಾರ್ ನಿರ್ದೇಶನದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಹೀಗೆ ನಾಲ್ಕು ಭಾಷೆಗಳ ತೆರೆಗಳಲ್ಲಿ ಪ್ರದರ್ಶನವಾಗುತ್ತಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರಿಯಾಮಣಿ ನಟನೆಗೆ ಪ್ರೇಕ್ಷಕರು 'ಫುಲ್' ಫಿದಾ ಆಗಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  South Indian fame Actress Priyamani Lead Role 'Charulatha' movie Released today, on 21st September 2012 in Kannada, Telugu, Tamil and Malayalam. This is Remake of 'Thai' Language movie titled 'Alone.'Actor, Producer B S Dwarakish produced this movie for P Kumar Direction. Read this Movie Review for the more..

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more