»   » ಚಿತ್ರ ವಿಮರ್ಶೆ: ರಾಕಿಂಗ್ ಸ್ಟಾರ್ ಯಶ್ 'ಗಜಕೇಸರಿ'

ಚಿತ್ರ ವಿಮರ್ಶೆ: ರಾಕಿಂಗ್ ಸ್ಟಾರ್ ಯಶ್ 'ಗಜಕೇಸರಿ'

By: ಉದಯರವಿ
Subscribe to Filmibeat Kannada

ಸಾಮಾನ್ಯವಾಗಿ ಕೇಳಿಬರುವ ಮಾತು ಎಂದರೆ ನಿರ್ದೇಶಕರ ಕಣ್ಣು ಛಾಯಾಗ್ರಾಹಕ ಎಂಬುದು. ಆದರೆ ಛಾಯಾಗ್ರಾಹಕನಲ್ಲೂ ಒಬ್ಬ ನಿರ್ದೇಶಕನಿರುತ್ತಾನೆ. ಅವನಿಗೂ ಆಕ್ಷನ್ ಕಟ್ ಹೇಳುವ ಚಾನ್ಸ್ ಸಿಕ್ಕಿದರೆ ತೆರೆಯ ಮೇಲೆ ಏನೆಲ್ಲಾ ಚಿತ್ತಾರ ಬಿಡಿಸಬಹುದು ಎಂಬುದಕ್ಕೆ ಮುಂಗಾರು ಮಳೆ ಕೃಷ್ಣ ಅವರೇ ಸಾಕ್ಷಿ. ಚೊಚ್ಚಲ ನಿರ್ದೇಶನದಲ್ಲಿ ಅವರು ನಿರೀಕ್ಷೆಗೂ ಮೀರಿ ಭರವಸೆ ಹುಟ್ಟಿಸಿದ್ದಾರೆ.

ಚಿತ್ರ ಆರಂಭದಿಂದಲೂ ಒಂದೇ ವೇಗವಾಗಿ ಓಡುತ್ತದೆ. ಅಲ್ಲಲ್ಲಿ ಪ್ರೇಕ್ಷಕರನ್ನು ತಡೆದು ನಿಲ್ಲಿಸಿ ಕಾಡಿನ ಸೌಂದರ್ಯವನ್ನು ಕಣ್ಣಿಗೆ ರಾಚುತ್ತದೆ. ಮುಂದೆ ಮುಂದೆ ಸಾಗಿದಂತೆ ಇತಿಹಾಸದ ಪುಟಗಳನ್ನು ತೆರೆಯುತ್ತದೆ. ಕಥೆ 360 ವರ್ಷಗಳ ಹಿಂದಕ್ಕೆ ಹೊರಳುತ್ತದೆ.

ಗಜಕೇಸರಿ ಯೋಗದಲ್ಲಿ ಹುಟ್ಟಿದ ಕೃಷ್ಣ (ಯಶ್) ಮುಂದಿನ ಮಠಾಧಿಪತಿ ಎಂದು ಮಠಾಧ್ಯಕ್ಷರು (ಅನಂತನಾಗ್) ಹೇಳುತ್ತಾರೆ. ಆದರೆ ಅರಿಷಡ್ವರ್ಗಗಳನ್ನು ಬಿಟ್ಟು ಸಂನ್ಯಾಸಿಯಾಗಲು ಕೃಷ್ಣ ಒಪ್ಪಲ್ಲ. ಇದಕ್ಕೆ ಪರಿಹಾರವಾಗಿ ಆನೆಯನ್ನು ಮಠಕ್ಕೆ ತಪ್ಪು ಕಾಣಿಕೆಯಾಗಿ ಕೃಷ್ಣ ಕೊಡಬೇಕಾಗುತ್ತದೆ.

Rating:
4.0/5

ಚಿತ್ರ: ಗಜಕೇಸರಿ
ನಿರ್ಮಾಪಕರು: ಜಯಣ್ಣ - ಭೋಗೇಂದ್ರ
ನಿರ್ದೇಶನ: ಎಸ್.ಕೃಷ್ಣ
ಛಾಯಾಗ್ರಹಣ: ಸತ್ಯ ಹೆಗಡೆ
ಸಂಗೀತ: ವಿ.ಹರಿಕೃಷ್ಣ
ಸಂಕಲನ: ದೀಪು ಎಸ್ ಕುಮಾರ್
ಪಾತ್ರವರ್ಗ: ಯಶ್, ಅಮೂಲ್ಯಾ, ಅನಂತ ನಾಗ್, ಶ್ರೀನಿವಾಸ ಪ್ರಭು, ರಂಗಾಯಣ ರಘು, ಅಶೋಕ್, ಶಿವರಾಂ, ಸಾಧುಕೋಕಿಲ, ಪ್ರಭಾಕರ್, ಜಾನ್ ವಿಜಯ್, ಶಬಾಸ್ ಖಾನ್, ಮಂಡ್ಯ ರಮೇಶ್, ಗಿರಿಜಾ ಲೋಕೇಶ್ ಮುಂತಾದವರು.

ಆನೆ ಹುಡುಕಲು ಹೋದ ಕೃಷ್ಣನ ಕಥೆ

ಒಂದು ಆನೆಯನ್ನು ಸುಲಭವಾಗಿ ಮಠಕ್ಕೆ ಕೊಟ್ಟು ಸ್ವಾಮೀಜಿ ಆಗುವುದರಿಂದ ಪಾರಾಗಬೇಕು ಎಂದು ಹೊರಡುವ ಕೃಷ್ಣನಿಗೆ ಏನೆಲ್ಲಾ ಘಟನೆಗಳು, ಸನ್ನಿವೇಶಗಳು ಎದುರಾಗುತ್ತವೆ ಎಂಬುದನ್ನು ತೆರೆಯ ಮೇಲೆ ನೋಡುವುದೇ ಚೆಂದ.

ಎಲ್ಲ ವರ್ಗದ ಪ್ರೇಕ್ಷಕರ ಚಿತ್ರವಿದು

ರಿಮೇಕ್ ಚಿತ್ರಗಳ ಭರಾಟೆಯಲ್ಲಿ ಸ್ವಂತಿಕೆಯ ಅದ್ದೂರಿ ಚಿತ್ರಗಳನ್ನೂ ಎಲ್ಲ ಪ್ರೇಕ್ಷಕ ವರ್ಗಕ್ಕೂ ಇಷ್ಟವಾಗುವಂತೆ ತೆಗೆಯಬಹುದು ಎಂಬುದನ್ನೂ ಜಯಣ್ಣ ಭೋಗೇಂದ್ರ ನಿರೂಪಿಸಿದ್ದಾರೆ. ಅವರಿಗೂ 'ಗಜಕೇಸರಿ' ಯೋಗ ಕೂಡಿಬಂದಂತಿದೆ. ಪ್ರಕಾಶ್ ರೈ ಅವರ ಹಿನ್ನೆಲೆ ಧ್ವನಿ ಚಿತ್ರಕ್ಕೆ ಇನ್ನೊಂದು ಆಯಾಮ ತಂದುಕೊಟ್ಟಿದೆ.

ನಿರ್ದೇಶಕರಿಗೆ ಹೆಚ್ಚಿನ ಅಂಕ

ಗಜಕೇಸರಿ ಚಿತ್ರದಲ್ಲಿ ಇಂತಹದ್ದು ಕಡಿಮೆ ಎಂಬಂತಿಲ್ಲ. ಎಲ್ಲವೂ ಒಂದು ಕೈ ಜಾಸ್ತಿಯೇ ಇದೆ. ಹಾಸ್ಯ, ಸಾಹಸ, ಹಾಡು, ಕುಣಿತ ಎಲ್ಲವನ್ನು ಸಮ ಪ್ರಮಾಣದಲ್ಲಿ ತೂಗಿಸಿಕೊಂಡು ಹೋಗಿದ್ದಾರೆ ಕೃಷ್ಣ. ಹೆಚ್ಚಿನ ಅಂಕ ಪಡೆಯುವುದು ನಿರ್ದೇಶಕರೇ.

ಚಿತ್ರ ಎಲ್ಲೂ ಟ್ರ್ಯಾಕ್ ತಪ್ಪಿಲ್ಲ

ಅಮೂಲ್ಯಾ ಮತ್ತು ಯಶ್ ನಡುವಿನ ರೊಮ್ಯಾಂಟಿಕ್ ಸನ್ನಿವೇಶಗಳು ಸ್ವಲ್ಪ ಕಡಿಮೆಯಾಯಿತು ಎಂಬುದನ್ನು ಹೊರತುಪಡಿಸಿದರೆ ಚಿತ್ರ ಎಲ್ಲೂ ಟ್ರ್ಯಾಕ್ ತಪ್ಪಿಲ್ಲ.

ಪವರ್ ಫುಲ್, ಪಂಚಿಂಗ್ ಡೈಲಾಗ್ ಗಳು

ಗಜಕೇಸರಿ ಚಿತ್ರದ ಪ್ಲಸ್ ಪಾಯಿಂಟ್ ಗಳಲ್ಲಿ ಪವರ್ ಫುಲ್, ಪಂಚಿಂಗ್ ಡೈಲಾಗ್ ಗಳದ್ದು ಇನ್ನೊಂದು ವರಸೆ. ಸ್ಯಾಂಪಲ್ ಗೆ ಹೇಳಬೇಕು ಎಂದರೆ...ಹುಲಿ ಬೇಟೆಗೆ ಹೋದ್ರು, ಬೇಟೆನೇ ಹುಲಿ ಹತ್ತಿರ ಬಂದ್ರೆ ಎದೆ ಬಗೆಯೋಗು ಹುಲಿನೇ. ಈ ರೀತಿಯ ಸಾಕಷ್ಟು ಡೈಲಾಗ್ ಗಳು ಪ್ರೇಕ್ಷಕರ ಶಿಳ್ಳೆಗೆ ಪಾತ್ರವಾಗುತ್ತವೆ.

ಎರಡು ಭಿನ್ನ ಶೇಡ್ ಗಳಲ್ಲಿ ಯಶ್

ಚಿತ್ರದಲ್ಲಿ ಯಶ್ ಅವರು ಎರಡು ಭಿನ್ನ ಶೇಡ್ ಗಳಲ್ಲಿ ಕಾಣಿಸುತ್ತಾರೆ. ಮೊದಲು ಕೃಷ್ಣನಾಗಿ ಆ ಬಳಿಕ ಬಾಹುಬಲಿಯಾಗಿ ಅವರ ಪಾತ್ರವನ್ನು ಬಲು ಎತ್ತರಕ್ಕೆ ಕೊಂಡೊಯ್ಯುತ್ತದೆ. ಎರಡೂ ಗೆಟಪ್ ಗಳಿಗೆ ಶೇಕಡ ನೂರರಷ್ಟು ನ್ಯಾಯ ಸಲ್ಲಿಸಿದ್ದಾರೆ ಯಶ್.

ಅದ್ಭುತ ಮೇಕಿಂಗ್ ಚಿತ್ರ

ಅದರಲ್ಲೂ ಬಾಹುಬಲಿ ಪಾತ್ರದಲ್ಲಿ ಅವರು ಗಜಪಡೆ ನಾಯಕನಾಗಿ, ಕತ್ತಿವರಸೆ, ಯುದ್ಧ ಸನ್ನಿವೇಶಗಳಲ್ಲಿ ಸಾಕಷ್ಟು ಬೆವರು ಹರಿಸಿರುವುದನ್ನು ಕಾಣಬಹುದು. ತೆಲುಗಿನ 'ಮಗಧೀರ' ಚಿತ್ರದ ಮುಂದೆ 'ಗಜಕೇಸರಿ' ಚಿತ್ರವನ್ನು ನಿವಾಳಿಸಿ ತೆಗೆಯುವಷ್ಟರ ಮಟ್ಟಿಗೆ ಮೇಕಿಂಗ್ ಅದ್ಭುತ.

ಕಾಡಿನ ಚಿಲಿಪಿಲಿ ಜೊತೆಗೆ ಅಮೂಲ್ಯ ಚೆಲ್ಲಾಟ

ಇನ್ನು ಅಮೂಲ್ಯಾ ಅವರದು ಕಾಡನ್ನು ಅಭ್ಯಸಿಸಲು ಬಂದ ಹುಡುಗಿಯ ಪಾತ್ರ. ಮೀರಾಳಾಗಿ ಅವರು ಇಲ್ಲಿ ಸ್ವಲ್ಪ ಮೆಚ್ಯೂರ್ಡ್ ಆಗಿ ಕಾಣುತ್ತಾರೆ. ಸ್ವಲ್ಪ ಸೀರಿಯಸ್ ಆಗಿ ಅಧ್ಯಯನ ಮಾಡುವ ಹುಡುಗಿಯಂತೆ ಕಂಡರೂ ಕೊನೆಕೊನೆಗೆ ಕಾಡಿನ ಚಿಲಿಪಿಲಿ ಜೊತೆಗೆ ಚೆಲ್ಲಾಟ, ತುಂಟಾಟ ಇದ್ದೇ ಇದೆ.

ಮಠದ ಪೀಠಾಧ್ಯಕ್ಷರಾಗಿ ಅನಂತ್ ನಾಗ್

ಮಠದ ಪೀಠಾಧ್ಯಕ್ಷರಾಗಿ ಅನಂತ್ ನಾಗ್ ಅವರ ಪಾತ್ರಕ್ಕೆ ಎರಡೂ ಕೈಗಳನ್ನೆತ್ತಿ ಮುಗಿಯಲೇಬೇಕು. ಅವರ ಶಿಷ್ಯರಾಗಿ ಮಂಡ್ಯ ರಮೇಶ್ ಅವರು ಗಮನಸೆಳೆಯುತ್ತಾರೆ. ಯಶ್ ಅವರಿಗೆ ತಾಯಿಯಾಗಿ ಗಿರಿಜಾ ಲೋಕೇಶ್ ಅವರು ಚಿತ್ರದಲ್ಲಿದ್ದಾರೆ.

ಖಳನಟನಾಗಿ ಜಾನ್ ವಿಜಯ್ ಮಿಂಚು

ಶ್ರೀಲಂಕಾದಿಂದ ಬಂದ ರಾವಣ ನಾನು ಎಂದು ತಮ್ಮ ಕಣ್ಣುಗಳಲ್ಲೇ ಕೊಲ್ಲುವ ಖಳನಟನಾಗಿ ಜಾನ್ ವಿಜಯ್ ಚಿತ್ರದಲ್ಲಿ ಮಿಂಚಿದ್ದಾರೆ. ಪ್ರಭಾಕರ್, ಶಬಾಸ್ ಖಾನ್, ಅಶೋಕ್, ಶಿವರಾಂ ಮುಂತಾದವರ ಪಾತ್ರಗಳು ಗಮನಾರ್ಹ.

ನಕ್ಕು ನಲಿಸುವ ಕಾಮಿಡಿ ಬ್ರದರ್ಸ್

ಸಾಧು ಕೋಕಿಲ ಹಾಗೂ ರಂಗಾಯಣ ರಘು ಅವರ ಕಾಂಬಿನೇಷನ್ ಇಲ್ಲಿ ಚೆನ್ನಾಗಿ ವರ್ಕ್ ಔಟ್ ಆಗಿದ್ದು ಕಚಗುಳಿ ಇಡುತ್ತವೆ. ಅರಣ್ಯಾಧಿಕಾರಿಯಾಗಿ ರಘು ಅವರದು ಒಂದು ವರಸೆಯಾದರೆ, ಬುಡಕಟ್ಟು ಜನರ ಹಾಡಿಯಲ್ಲಿ ಸಾಧು ಅವರದು ಇನ್ನಷ್ಟು ತಮಾಷೆ ಇದೆ.

ತಪ್ಪದೆ ನೋಡಬೇಕಾದ ಚಿತ್ರ

ಸತ್ಯ ಹೆಗಡೆ ಅವರ ಕ್ಯಾಮೆರಾ ವರ್ಕ್ ಹಾಗೂ ವಿ ಹರಿಕೃಷ್ಣ ಅವರ ಸಂಕಲನ ಚಿತ್ರವನ್ನು ಇನ್ನಷ್ಟು ಅಂದವಾಗಿಸಿವೆ. ಬಹಳ ದಿನಗಳ ನಂತರ ಒಂದು ಅದ್ದೂರಿ ಸ್ವಮೇಕ್ ಚಿತ್ರ ಬಂದಿದೆ. ಪ್ರೇಕ್ಷಕರು ಏನು ನಿರೀಕ್ಷಿಸುತ್ತಾರೋ ಅದಕ್ಕಿಂತಲೂ ಹೆಚ್ಚಿಗೆ ಚಿತ್ರದಲ್ಲಿದೆ. ತಪ್ಪದೆ ನೋಡಬೇಕಾದ ಚಿತ್ರ

English summary
Kannada movie Gajakesari review. In short, brilliant entertainer, the movie encompasses some of the best commercial elements that Kannada audience have seen in the recent past. Must watch movie.
Please Wait while comments are loading...