For Quick Alerts
  ALLOW NOTIFICATIONS  
  For Daily Alerts

  'ನಾಗರಹಾವಿ'ನ ಬುಸುಗುಡುವಿಕೆಗೆ ವಿಮರ್ಶಕರ ಪ್ರತಿಕ್ರಿಯೆ ಏನು?

  By Suneetha
  |

  ಕನ್ನಡ ಚಿತ್ರರಂಗದಲ್ಲಿ ಟ್ರೈಲರ್ ಮೂಲಕ ಸಂಚಲನ ಮೂಡಿಸಿ, ಎಲ್ಲಾ ಸಿನಿ ಪ್ರಿಯರಲ್ಲೂ ಭಾರಿ ನಿರೀಕ್ಷೆ ಮೂಡಿಸಿದ್ದ 'ನಾಗರಹಾವು' ಕೊನೆಗೂ ನಿನ್ನೆ (ಅಕ್ಟೋಬರ್ 14) ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಂಡಿದೆ.

  ಚಿತ್ರದ ಮೊದಲಾರ್ಧ ಸ್ವಲ್ಪ ನಿಧಾನ ಅನ್ನೋದು ಬಿಟ್ಟರೆ, ಇನ್ನುಳಿದಂತೆ ಎರಡನೇ ಭಾಗದಲ್ಲಿ ಗ್ರಾಫಿಕ್ಸ್ ಗಳಿಂದ ಕಣ್ಣಿಗೆ ಹಬ್ಬ. ಜೊತೆಗೆ ಕ್ಲೈಮ್ಯಾಕ್ಸ್ ನಲ್ಲಿ 9 ನಿಮಿಷಗಳಲ್ಲಿ ವಿಷ್ಣುದಾದಾ ಅವರನ್ನು ಕಣ್ತುಂಬಿಕೊಳ್ಳೋದು ಚೆಂದ ಎನ್ನುತ್ತಾರೆ ಸಿನಿಮಾ ನೋಡಿದವರು.['ನಾಗರಹಾವು' ವಿಮರ್ಶೆ: ಡಾ.ವಿಷ್ಣುವರ್ಧನ್ 201 ನಾಟೌಟ್]

  'ಅರುಂಧತಿ' ಖ್ಯಾತಿಯ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡಿರುವ 'ನಾಗರಹಾವು' ಚಿತ್ರದಲ್ಲಿ ರಮ್ಯಾ ಅವರು ನಾಗಿಣಿ ಪಾತ್ರದಲ್ಲಿ ಸಖತ್ ಹೈಲೈಟ್ ಆಗಿದ್ದರು. ಅದ್ಧೂರಿ ಬಜೆಟ್ ನ ಈ ಚಿತ್ರಕ್ಕೆ ವಿಮರ್ಶಕರು ಕೂಡ ಭಿನ್ನ-ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

  ರಮ್ಯಾ, ದಿಗಂತ್, ಸಾಯಿ ಕುಮಾರ್ ಮತ್ತು ವಿಷ್ಣು ವರ್ಧನ್ ಅವರು ಕಾಣಿಸಿಕೊಂಡಿದ್ದ 'ನಾಗರಹಾವು' ಚಿತ್ರಕ್ಕೆ ವಿಮರ್ಶಕರು ಏನಂತಾರೆ ಅನ್ನೋದನ್ನು ನೋಡೋಣ ಬನ್ನಿ....

  'ವಿಷ್ಣುವಿನ ನಾಗ ಸ್ಮರಣೆ' -ವಿಜಯ ಕರ್ನಾಟಕ

  'ವಿಷ್ಣುವಿನ ನಾಗ ಸ್ಮರಣೆ' -ವಿಜಯ ಕರ್ನಾಟಕ

  ಅನೇಕ ಕಾರಣಗಳಿಂದಾಗಿ ಚಿತ್ರವು ವಿಶೇಷ ಅನಿಸುತ್ತದೆ. ಆಯ್ದುಕೊಂಡಿರುವ ಕತೆಯು ಕಾಲ್ಪನಿಕದ್ದಾದರೂ, ಅದನ್ನು ನಿಜ ಎನ್ನುವಂತೆ ಗ್ರಾಫಿಕ್ಸ್ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಆಗಾಗ್ಗೆ ಕಾಣಿಸಿಕೊಳ್ಳುವ ಗ್ರಾಫಿಕ್ಸ್ ಕುಸುರಿ ಮತ್ತು ವಿಷ್ಣುವರ್ಧನ್ ಅವರ ಮರುಸೃಷ್ಟಿ ನಾಗರಹಾವಿಗೆ ಜೀವ ತುಂಬಿದೆ. ವಿಷ್ಣುವರ್ಧನ್‌ಗಾಗಿ ಹಾಡೊಂದನ್ನು ಅರ್ಪಿಸಿದ್ದಾರೆ ನಿರ್ದೇಶಕರು. ಆ ಹಾಡಿನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಕತೆಗೂ ಆ ಹಾಡಿಗೂ ಸಂಬಂಧವಿಲ್ಲದೇ ಇದ್ದರೂ, ಅಭಿಮಾನಿಗಳ ಖುಷಿಗಾಗಿ ಕುಣಿದಂತಿದೆ ದರ್ಶನ್. ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದು ರಮ್ಯಾ. ಮಾನಸ ಮತ್ತು ನಾಗಲಿಕಾ ಎನ್ನುವ ಎರಡು ಪಾತ್ರಗಳನ್ನು ಅವರಿಲ್ಲಿ ನಿರ್ವಹಿಸಿದ್ದಾರೆ. ಎರಡೂ ಪಾತ್ರಗಳಲ್ಲೂ ಅವರದ್ದು ಮನೋಜ್ಞ ನಟನೆ. ನಿಜಕ್ಕೂ ರಮ್ಯಾ ಮೋಹಕ ತಾರೆಯಂತೆ ಕಂಗೊಳಿಸಿದ್ದಾರೆ. ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳುವ ವಿಷ್ಣುವರ್ಧನ್ ನಿಜಕ್ಕೂ 'ಸಾಹಸ ಸಿಂಹ'ನಂತೆಯೇ ಘರ್ಜಿಸಿದ್ದಾರೆ. ರೇಟಿಂಗ್: 3/5 -ಶರಣು ಹುಲ್ಲೂರು.[ವಿಷ್ಣುವರ್ಧನ್ ರವರ 'ನಾಗರಹಾವು' ಚಿತ್ರಕ್ಕೆ ತಮಿಳುನಾಡಿನಲ್ಲಿ ಬ್ರೇಕ್]

  'ಕಚ್ಚಿದ್ದಕ್ಕಿಂತ ಬುಸುಗುಟ್ಟಿದ್ದೇ ಹೆಚ್ಚು' -ವಿಜಯವಾಣಿ

  'ಕಚ್ಚಿದ್ದಕ್ಕಿಂತ ಬುಸುಗುಟ್ಟಿದ್ದೇ ಹೆಚ್ಚು' -ವಿಜಯವಾಣಿ

  ನಿರೀಕ್ಷಿಸಿದಷ್ಟು ತೃಪ್ತಿ ಸಿಗದಿದ್ದರೆ ಅದು ನಿರೀಕ್ಷೆ ಇಟ್ಟುಕೊಂಡವರ ತಪ್ಪಾ ಅಥವಾ ನಿರೀಕ್ಷೆ ಸೃಷ್ಟಿಸಿದವರ ತಪ್ಪಾ? ‘ನಾಗರಹಾವು' ಚಿತ್ರ ನೋಡಿದ ನಂತರ ಅನೇಕರಿಗೆ ಮೂಡಿರಬಹುದಾದ ಪ್ರಶ್ನೆ ಇದು. ಬಹುಕೋಟಿ (?) ರೂ. ಬಜೆಟ್​ನಲ್ಲಿ ವಿಷ್ಣುವರ್ಧನ್ ಅವರನ್ನು ಪುನಃ ತೆರೆಮೇಲೆ ಮೂಡಿಸಲಿದ್ದಾರೆ ಎಂಬ ಸುದ್ದಿಯೇ ಅಭಿಮಾನಿಗಳಲ್ಲಿ ಕುತೂಹಲ ಚಿಗುರೊಡೆಯುವಂತೆ ಮಾಡಿತ್ತು. ಆದರೆ ಚಿತ್ರದಲ್ಲಿ ಕೆಲವೇ ನಿಮಿಷಗಳಷ್ಟು ಹೊತ್ತು ಮಾತ್ರ ಮಿಂಚುವ ‘ಸಾಹಸಸಿಂಹ'ನ ಪಾತ್ರ ನೋಡಿದಾಗ ಖುಷಿಯ ಜತೆ ಬೇಸರವೂ ಆಗುತ್ತದೆ. ಇಷ್ಟಕ್ಕಾಗಿ ಅಷ್ಟೆಲ್ಲ ಖರ್ಚು ಮಾಡಬೇಕಿತ್ತಾ ಎಂಬ ಪ್ರಶ್ನೆಯೂ ಮೂಡುತ್ತದೆ. ಅಪಾರ ಶಕ್ತಿಯನ್ನು ಹೊಂದಿರುವ ಒಂದು ಕಳಶ, ಅದಕ್ಕೆ ಕಾವಲಿರುವ ಒಂದು ಕುಟುಂಬ, ಅವರ ಬೆನ್ನೆಲುಬಾಗಿ ನಿಂತಿರುವ ಒಬ್ಬಳು ನಾಗದೇವತೆ, ಕಳಶವನ್ನು ವಶಪಡಿಸಿಕೊಳ್ಳಲು ಆಗಾಗ ದಾಳಿ ಮಾಡುವ ದುಷ್ಟಶಕ್ತಿಗಳು... ಇವೇ ಮೊದಲಾದ ಸಿದ್ಧಸೂತ್ರ ಗಳನ್ನಿಟ್ಟುಕೊಂಡು ಕಥೆ ಹೆಣೆದಿದ್ದಾರೆ ನಿರ್ದೇಶಕರು. ಏನನ್ನೂ ಪ್ರಶ್ನಿಸದೆ ಸಿನಿಮಾ ಆಸ್ವಾದಿಸಿದರೆ ಮಾತ್ರ ಈ ಹಾವಿನ ಪ್ರಸಂಗ ಇಷ್ಟವಾಗುತ್ತದೆ. ರೇಟಿಂಗ್: 6/10.

  'ಹೆಡೆ ಮುರಿದ ಹಾವು' -ಪ್ರಜಾವಾಣಿ

  'ಹೆಡೆ ಮುರಿದ ಹಾವು' -ಪ್ರಜಾವಾಣಿ

  ತೆಲುಗಿನ ಕೋಡಿ ರಾಮಕೃಷ್ಣ ಅವರ ನಿರ್ದೇಶನದ ‘ನಾಗರಹಾವು' ಅವರ ಎಂದಿನ ಶೈಲಿಯ ಸಿನಿಮಾಗಳ ಸಾಲಿಗೆ ಸೇರುವ, ದುರ್ಬಲ ಕಥೆಯ ಚಿತ್ರ. ಇಂತಹ ಫ್ಯಾಂಟಸಿ ಕಥೆಯೊಂದನ್ನು ಸೃಷ್ಟಿಸುವಾಗ, ಪುರಾಣ ಕಥನಗಳ ತಳಹದಿಯ ಸಮರ್ಪಕ ಬಳಕೆಯೂ ಮುಖ್ಯ. ಆದರೆ ಕಥೆಯ ಮೇಲೆ ಬಿಗಿಹಿಡಿತವಿಲ್ಲದ ನಿರ್ದೇಶಕರು ಫ್ಯಾಂಟಸಿಯ ಹೆಸರಿನಲ್ಲಿ ಚಿತ್ರದುದ್ದಕ್ಕೂ ಅಪಸವ್ಯಗಳನ್ನು ಸೃಷ್ಟಿಸಿದ್ದಾರೆ. ಗ್ರಾಫಿಕ್ಸ್‌ನಲ್ಲಿ ಕಾಣಿಸುವ ರೋಚಕತೆ ಕಥೆಯ ಮೂಲದಲ್ಲಿ ಕಾಣಸಿಗುವುದಿಲ್ಲ. ಲೋಪಗಳಿಗೆ ತೇಪೆಹಚ್ಚಲು ತಾರಾನಟರ ವರ್ಚಸ್ಸನ್ನು ಬಳಸಿಕೊಳ್ಳಲಾಗಿದೆ. ಆರಂಭದಲ್ಲಿ ನಟ ದರ್ಶನ್‌ ಹಾಡೊಂದರಲ್ಲಿ ಕುಣಿದಿರುವುದು ಚಿತ್ರಕ್ಕೆ ಲಾಭವೇನೂ ಆಗಿಲ್ಲ. ವಿಷ್ಣುವರ್ಧನ್‌ ಅವರ ಗ್ರಾಫಿಕ್‌ ಸೃಷ್ಟಿ ನಿರೀಕ್ಷೆ ಮೂಡಿಸಿದಷ್ಟು ಪರಿಣಾಮಕಾರಿಯಾಗಿಲ್ಲ. ‘ಅರುಂಧತಿ' ಮುಂತಾದ ಚಿತ್ರಗಳಲ್ಲಿ ಗ್ರಾಫಿಕ್ಸ್‌ ಅನ್ನು ಸಮರ್ಥವಾಗಿ ಬಳಸುವುದರ ಜತೆಗೆ, ಕೊನೆಯವರೆಗೂ ಕುತೂಹಲ ಉಳಿಸಿಕೊಳ್ಳುವ ಕಥೆ ಹೊಸೆದಿದ್ದ ರಾಮಕೃಷ್ಣ ಇಲ್ಲಿ ನಿರಾಸೆ ಮೂಡಿಸಿದ್ದಾರೆ. - ಎಂ.ಎಸ್ ಅಮಿತ್.

  'ಹಾವಿನ ರೋಷ, ಗ್ರಾಫಿಕ್ಸ್ ವೇಷ, ಮಿಕ್ಕ 9 ನಿಮಿಷ' -ಕನ್ನಡ ಪ್ರಭ

  'ಹಾವಿನ ರೋಷ, ಗ್ರಾಫಿಕ್ಸ್ ವೇಷ, ಮಿಕ್ಕ 9 ನಿಮಿಷ' -ಕನ್ನಡ ಪ್ರಭ

  ಈ 'ನಾಗರಹಾವು' ಕೆರೆ ಹಾವಂತೂ ಅಲ್ಲ. ಹಾಗಂತ ಹೆಬ್ಬಾವು ಕೂಡ ಅಲ್ಲವೇ ಅಲ್ಲ. ಇವೆರಡರ ನಡುವಿನ ಸಾಧಾರಣ ಹಾವು! ಹಾಗಾದರೆ 'ಗ್ರಾಫಿಕ್ಸ್ ವಿಷ್ಣು', ನಾಗಿಣಿ ಅವತಾರದ ರಮ್ಯಾ ಮೋಡಿ ಮಾಡಿಲ್ಲವೇ?' ಎಂದರೆ ಉತ್ತರಿಸುವುದು ಕಷ್ಟ. ಗ್ರಾಫಿಕ್ಸ್ ಹಾವು, ರಮ್ಯಾ ಡ್ಯಾನ್ಸು, ವಿಷ್ಣು ಫೈಟು ನಿಮಗೆ ಖುಷಿ ಕೊಡಬಹುದು. ಯಾಕೆಂದರೆ ಇದು ಹೊಸತು ಮತ್ತು ಹಳೆಯದರ ಸಮ್ಮಿಲನ. ಧಾರಾವಾಹಿ ಎಪಿಸೋಡ್ ಗಳಂತೆ ಕಟ್ ಆಗುವ ನಿರೂಪಣೆಯೇ ಚಿತ್ರದ ಮುಖ್ಯ ಕೊರತೆ. 'ನಾಗರಹಾವು' ನೋಡಿದಾಗ ಒಳ್ಳೆಯ ಊಟ, ಆದರೂ ಯಾಕೋ ರುಚಿ ಕೆಟ್ಟಿದೆಯಲ್ಲ ಎಂಬ ಭಾವ ಮೂಡುತ್ತದೆ. ರೇಟಿಂಗ್: 2/5. -ಆರ್ ಕೇಶವಮೂರ್ತಿ.

  'ನಾಗಾಲೋಟದ ರಮ್ಯಕತೆಗೆ ಮಾಂತ್ರಿಕತೆಯ ದಿವ್ಯಸ್ಪರ್ಶ!' -ಉದಯವಾಣಿ

  'ನಾಗಾಲೋಟದ ರಮ್ಯಕತೆಗೆ ಮಾಂತ್ರಿಕತೆಯ ದಿವ್ಯಸ್ಪರ್ಶ!' -ಉದಯವಾಣಿ

  ಸಾವಿರಾರು ವರುಷಗಳ ಇತಿಹಾಸವಿರುವ ಅದ್ಭುತ ಶಕ್ತಿ ಹೊಂದಿರುವ ಕಳಶವೊಂದನ್ನು ಕಬಳಿಸಲು ಪುರಾಣ ಕಾಲದಲ್ಲಿ ರಾಕ್ಷಸರು ಹೊಡೆದಾಡುತ್ತಾ ಬಂದರೆ ಈ ಕಾಲದಲ್ಲಿ ವಿಲನ್ ಗಳು ಆ ಕಳಶವನ್ನು ತಮ್ಮದಾಗಿಸಿಕೊಳ್ಳಲು ಏನೇನೋ ಸ್ಕೆಚ್ ಗಳನ್ನು ಹಾಕುತ್ತಾರೆ. ಪುರಾಣ ಕಾಲದಲ್ಲಿ ಕಳಶವನ್ನು ನಾಗನಿಕ ರಕ್ಷಿಸಿಕೊಂಡು ಬರುತ್ತಾಳೆ. ಸಾಯುವ ಕೊನೆ ಗಳಿಗೆಯಲ್ಲಿ ಆಕೆ, ಎಷ್ಟೇ ಜನುಮವಿದ್ದರೂ ಈ ಕಳಶವನ್ನು ನಿಮ್ಮ ಪಾಲಾಗಲು ಬಿಡುವುದಿಲ್ಲ ಎಂದು ಶಪಥ ಮಾಡಿ ಸಾಯುತ್ತಾಳೆ. ಈಗ ವಿಲನ್ ಗಳಿಂದ ಆ ಕಳಶವನ್ನು ರಕ್ಷಿಸುವವರು ಯಾರು? ನಾಗನಿಕ ಹುಟ್ಟಿ ಬರುತ್ತಾಳಾ? ಎಂಬ ಕುತೂಹಲವಿದ್ದರೆ ನೀವು 'ನಾಗರಹಾವು' ಸಿನಿಮಾ ನೋಡಬಹುದು. -ರವಿ ಪ್ರಕಾಶ್ ರೈ.

  English summary
  Kannada movie 'Nagarahavu' Critics Review. Kannada Actress Ramya, Kannada Actor Diganth, Dr Vishnuvardhan starrer 'Nagarahavu' has received mixed response from the critics. Here is the collection of reviews by Top News Papers of Karnataka. The movie is directed by Kodi Ramakrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X