For Quick Alerts
  ALLOW NOTIFICATIONS  
  For Daily Alerts

  ಶರಣ್ 'ಶರಣಾರ್ಥಿಗಳ' Rambo ಚಿತ್ರ ವಿಮರ್ಶೆ

  By ಶ್ರೀರಾಮ್ ಭಟ್
  |

  Rating:
  3.0/5
  ಕನ್ನಡದ ಜನಪ್ರಿಯ ಹಾಸ್ಯನಟರಲ್ಲಿ ಒಬ್ಬರಾದ ಶರಣ್, ತಮ್ಮ ನಾಯಕತ್ವ ಹಾಗೂ ನಿರ್ಮಾಣದಲ್ಲಿ 'ರಾಂಬೋ (Rambo)' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಮುಖ್ಯವಾಗಿ ಪೋಷಕ ಹಾಗೂ ಹಾಸ್ಯ ಪಾತ್ರಗಳ ಮೂಲಕ ಇದುವರೆಗೂ '99' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಶರಣ್ ಅವರಿಗೆ ಈ Rambo ಚಿತ್ರ '100' ನೆ ಚಿತ್ರ. ಇಷ್ಟು ದಿನ ಬೇರೆ ನಾಯಕರ ಚಿತ್ರಗಳಲ್ಲಿ ನಟಿಸುತ್ತಿದ್ದ ಶರಣ್, ಈಗ ಈ ಚಿತ್ರದ ನಾಯಕರಾಗಿರುವುದರಿಂದ ಇದು ಸಂಪೂರ್ಣ ಶರಣ್ ಚಿತ್ರವೆಂಬ ಹೆಗ್ಗಳಿಕೆ ಬೇರೆ. ಈ ಎಲ್ಲಾ ಕಾರಣಗಳಿಂದ ಈ ಚಿತ್ರಕ್ಕೆ ಸಾಕಷ್ಟು ನಿರೀಕ್ಷೆ ಇತ್ತು.

  Rambo ಚಿತ್ರವನ್ನು ಸಂಪೂರ್ಣ 'ಶರಣ್'ಮಯ ಮಾಡಲು ನಿರ್ದೇಶಕ ಎಂಎಸ್ ಶ್ರೀನಾಥ್ ಹರಸಾಹಸ ಪಟ್ಟಿದ್ದಾರೆ. ಜೊತೆಗೆ ಶರಣ್ ಸ್ನೇಹಿತ ತಬಲಾ ನಾಣಿಯವರ ಪಾತ್ರಕ್ಕೂ ನ್ಯಾಯ ಒದಗಿಸುವ ಜವಾಬ್ಧಾರಿ ಬೇರೆ ನಿರ್ದೇಶಕರ ಹೆಗಲ ಮೇಲಿತ್ತು. ಅದನ್ನು ನಿರ್ವಹಿಸುವಲ್ಲಿ ತಕ್ಕಮಟ್ಟಿಗೆ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಚಿತ್ರವನ್ನು ನಾಯಕ ಕೇಂದ್ರೀಕೃತ ಮಾಡಿ ಶರಣ್ ಅವರನ್ನು ಕನ್ನಡದ ನಾಯಕನಟರ ಸಾಲಿನಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರೇಕ್ಷಕರು ಕೈಬಿಡದಿದ್ದರೆ ಆ ಪ್ರಯತ್ನ ಫಲ ನೀಡಬಹುದು.

  ಕಥೆಯಲ್ಲಿ ಯಾವುದೇ ಹೊಸತನ ಕಂಡುಬರದಿದ್ದರೂ ನಿರೂಪಣೆಯಲ್ಲಿ ಹೊಸತನ ಹಾಗೂ ತಾಜಾತನ ಎರಡೂ ಇದೆ. ಪಕ್ಕಾ ಪೋಲಿ (420) ನಾಯಕ ಕೃಷ್ಣ, ಅವರಿಗಿಂತ ಎರಡುಪಟ್ಟು ಹೆಚ್ಚು ಪೋಲಿಯಾಗಿರುವ (840..?) ಸೋದರ ಮಾವನನ್ನು ಸೇರಿಕೊಂಡು ಜೀವನದಲ್ಲಿ ಹೇಗೆ ಹಳ್ಳಹಿಡಿಯುತ್ತಾರೆ ಹಾಗೂ ಕೊನೆಯಲ್ಲಿ ಅದರಿಂದ ಹೇಗೆ ಬಿಡುಗಡೆ ಬಯಸುತ್ತಾರೆ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ. ಈ ಕಥೆಯನ್ನು ಶರಣ್ ಅವರಿಗೆ ಹೊಂದಿಕೆಯಾಗುವಂತೆ ಹೆಣೆದು ಚಿತ್ರಕಥೆಯೆಂಬ ಹೆಸರಿಟ್ಟು ಅದಕ್ಕೆ ಹಾಸ್ಯ, ಸೆಂಟಿಮೆಂಟ್ ಆಧಾರಿತ ಪಾತ್ರಗಳ ಮೂಲಕ ಹೆಸರಾಂತ ಕಲಾವಿದರನ್ನು ಬಳಸಿಕೊಂಡು ಬುದ್ಧಿವಂತಿಕೆ ಬಳಸಿ ನಿರೂಪಣೆ ಮಾಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

  ನಿರ್ದೇಶಕರ ಈ ಪ್ರಯತ್ನವೋನೋ ಸರಿ, ಆದರೆ ಅದರಲ್ಲಿ ಸಂಪೂರ್ಣ ಯಶಸ್ವಿಯಾಗಲು ಬೇಕಾದ ಗಟ್ಟಿತನವಿರುವ ಕಥೆ ಬರೆಯಲು ಅವರಿಗೆ ಸಾಧ್ಯವಾಗಿಲ್ಲ. ಶರಣ್ ಅವರಿಗೆ ಇರುವ ಇಮೇಜ್ ನಲ್ಲೇ ಕಥೆ ಬರೆಯಲು ಹೋಗಿ ಎಡವಿಬಿದ್ದಿದ್ದಾರೆ ನಿರ್ದೇಶಕರು. ಆದರೆ ಬಿದ್ದಿದ್ದು ಗೊತ್ತಾಗದಂತೆ ಎದ್ದು ಚಿತ್ರಕಥೆ, ಸಂಭಾಷಣೆ ಹಾಗೂ ನಿರೂಪಣೆ ಮೂಲಕ ನಿರ್ದೇಶಕರು ಈ ಚಿತ್ರವನ್ನು ಪ್ರೇಕ್ಷಕರು ನೋಡುವಂತೆ ಸಹನೀಯವಾಗಿಸಿದ್ದಾರೆ. ಹೀಗಾಗಿ, ಕಥೆ ಕೊರತೆಯನ್ನು ಚಿತ್ರ ತುಂಬಲಾಗದಿದ್ದರೂ ನಿರೂಪಣೆ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಲು ಶತಪ್ರಯತ್ನ ಮಾಡಲಾಗಿದ್ದು. ಫಲ ಪ್ರೇಕ್ಷಕರ ಕೈಯಲ್ಲಿದೆ ಎನ್ನಲೇಬೇಕು.

  ಚಿತ್ರದ ಕೊನೆಯಲ್ಲಿ ಈ ಚಿತ್ರಕ್ಕೆ 'Rambo' ಎಂದು ಹೆಸರಿಟ್ಟಿರುವುದಕ್ಕೆ ಅರ್ಥ ಗೋಚರಿಸುತ್ತದೆ. ಆದರೆ ಪ್ರೇಕ್ಷಕರನ್ನು ಸೆಳೆಯುವಂತ ಆಕರ್ಷಕ ಶೀರ್ಷಿಕೆ ಮೊದಲು ಹುಡುಕಿ ನಂತರ ಅದಕ್ಕೆ ಚಿತ್ರದಲ್ಲಿ ನ್ಯಾಯ ಒದಗಿಸುವ ನಿರ್ದೇಶಕರ ಪ್ರಯತ್ನ ಸ್ಪಷ್ಟವಾಗಿದೆ. ಆದರೆ 'ಹಂದಿ'ಗೆ (ವರಾಹ) ಆ ಹೆಸರಿಟ್ಟಿರುವ ಪ್ರಯತ್ನ ಸ್ವಲ್ಪ 'ಹಾಸ್ಯಾಸ್ಪದ' ಎನಿಸುವುದರ ಜೊತೆಗೆ ಅದೊಂದು ಪ್ರಯತ್ನವಾಗಿಯಷ್ಟೇ ಉಳಿದಿದೆ.

  ಪ್ರೇಕ್ಷಕರು ಮನರಂಜನೆಗೆಂದೇ ಚಿತ್ರಮಂದಿರಕ್ಕೆ ಹೋಗದಿದ್ದರೂ ಮನರಂಜನೆಗೆ ಸಿದ್ಧವಿದ್ದಾರೆ ಎಂಬುದಂತೂ ಸತ್ಯ. ಆದರೆ, ಅದಕ್ಕೆ ನಿರ್ದೇಶಕರೂ ರೆಡಿಯಾಗಬೇಕು. ಆ ಪ್ರಯತ್ನವೇನೋ ಕಂಡುಬಂದಿದೆ. ಆದರೆ.., ಫಲಿತಾಂಶ? ಕಾದು ನೋಡಲೇಬೇಕು ಎಂಬಂತಾಗಿದೆ. ಒಟ್ಟಿನಲ್ಲಿ ಶರಣ್ ಅವರ ಅಭಿಮಾನಿಗಳೆಲ್ಲರೂ ಮನೆಬಿಟ್ಟು ಚಿತ್ರಮಂದಿರಕ್ಕೆ ಹೆಜ್ಜೆ ಹಾಕಿದರೆ ಚಿತ್ರ ಯಶಸ್ವಿಯಾಗುವುದು ಖಂಡಿತ. ಹಾಗಾಗಬಹುದೇ ಎಂಬುದಷ್ಟೇ ಸದ್ಯಕ್ಕಿರುವ ಪ್ರಶ್ನೆ!

  ಕಲಾವಿದರು ಹಾಗೂ ತಂತ್ರಜ್ಞರ ಕುರಿತು: ನಾಯಕ ಕೃಷ್ಣ ಪಾತ್ರಧಾರಿ ಶರಣ್ ಈ ಚಿತ್ರಕ್ಕೆ ನಿರ್ಮಾಪಕರೂ ಆಗಿರುವುದರಿಂದ ಚಿತ್ರದಲ್ಲಿ ಸರ್ವ ರೀತಿಯಲ್ಲೂ ತಮ್ಮ 'ಓನರ್'ಶಿಪ್ ಉಳಿಸಿಕೊಂಡಿದ್ದಾರೆ. ಇತ್ತ ನಾಯಕನಿಗಿರುವ 'ಗತ್ತು', 'ದೌಲತ್ತು' ಹಾಗೂ ಅತ್ತ ತಮ್ಮ ಇಮೇಜಿಗಿರುವ 'ಸವಲತ್ತು' ಎರಡನ್ನೂ ತಮ್ಮ ಅಭಿನಯದಲ್ಲಿ ಬೆರೆಸಿಕೊಂಡು ಚಿತ್ರವನ್ನು 'ಶರಣ್'ಮಯ ಮಾಡಿಕೊಂಡಿದ್ದಾರೆ. ಚಿತ್ರದ ತುಂಬಾ ಲವಲವಿಕೆ ಕಾಯ್ದುಕೊಂಡಿರುವ ಶರಣ್, ಎಂದಿನ ತಮ್ಮ ಡೈಲಾಗ್ ಡೆಲಿವರಿ ಹಾಗೂ ಅಭಿನಯದಿಂದ ಪ್ರೇಕ್ಷಕರ ಪ್ರಶಂಸೆ ಗಿಟ್ಟಿಸುವುದು ಗ್ಯಾರಂಟಿ. ಶರಣ್ ಜೊತೆಯಾಗಿರುವ ತಬಲಾ ನಾಣಿ (ಸಂದರ್ಶನ) ಕೂಡ ಶರಣ್ ಅವರಿಗೆ ಸಖತ್ ಸ್ಪರ್ಧೆ ನೀಡುವಂತೆ ನಟಿಸಿದ್ದಾರೆ. ಇಬ್ಬರ 'ಕೆಮೆಸ್ಟ್ರಿ' ಫುಲ್ ವರ್ಕೌಟ್ ಆಗಿದೆ.

  ನಾಯಕಿ ರೇವತಿ ಪಾತ್ರಧಾರಿ ಮಾಧುರಿ ಅಭಿನಯಕ್ಕೆ ಚಿತ್ರದಲ್ಲಿ ಸ್ಕೋಪ್ ಇಲ್ಲ. ಕೊಟ್ಟ ಪಾತ್ರದಲ್ಲಿ ಅವರ ನಟನೆ ಪರವಾಗಿಲ್ಲ. ಮಿಕ್ಕಂತೆ ಚಿತ್ರದಲ್ಲಿರುವ ಕಲಾವಿದರುಗಳಾದ ರಂಗಾಯಣ ರಘು, ಸಾಧುಕೋಕಿಲಾ ಹಾಗೂ ಉಮೇಶ್ , ದೀಪಾ ಅವರೆಲ್ಲರದೂ ಚಿತ್ರದಲ್ಲಿ ಅಂತಹ ಪ್ರಮುಖ ಪಾತ್ರವೇನಲ್ಲ. ಅವರವರ ಪಾತ್ರಗಳಿಗೆ ನ್ಯಾಯ ಒದಗಿಸುವುದರಲ್ಲಿ ಯಾರೂ ಹಿಂದೆಬಿದ್ದಿಲ್ಲ. ಶರಣ್ ತಾಯಿಯಾಗಿ ನಟಿಸಿರುವ ಉಮಾಶ್ರೀಯವರದು ಎಂದಿನಂತೆ ಮನಮುಟ್ಟುವ ಅಭಿನಯ. ಶರಣ್ ಆಪ್ತಸ್ನೇಹಿತ ಗೋಲ್ಡನ್ ಸ್ಟಾರ್ ಗಣೇಶ್, ತೆರೆ ಮೇಲೆ ಬರದಿದ್ದರೂ 'ಗಾಡ್' ಗಣೇಶನ ಮೂಲಕ ತಮ್ಮ ಧ್ವನಿ ನೀಡಿ ಗೆಳೆಯನಿಗೆ 'ಸಾಥ್' ನೀಡಿದ್ದಾರೆ.

  ಅರ್ಜುನ್ ಜನ್ಯಾ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಚೆನ್ನಾಗಿವೆ. 'ಮನೆ ತಂಕ ಬಾರೇ...' ಹಾಗೂ 'ಜಯಾ ಜಾಯಾ ಜಾಕೆಟ್ಟು...' ಹಾಡುಗಳು ತೆರೆಯಲ್ಲಿ ಬಂದಾಗ ಕುಳಿತಿರುವ ಪ್ರೇಕ್ಷಕರು ಕಾಲುಗಳು ಅಲ್ಲೇ ಅಲ್ಲಾಡುತ್ತವೆ. ಬಾಯಿ ಕೂಡ ಹಾಡನ್ನು ಗುನುಗಿಸಿ ಮನೆಗೆ ಹೋದಮೇಲೂ ನೆನಪಿಸಿಕೊಳ್ಳುವಂತಿದೆ. ಈಗಾಗಲೇ ಹಿಟ್ ಆಗಿರುವ ಆ ಹಾಡುಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಇನ್ನು ಕೃಷ್ಣ ಛಾಯಾಗ್ರಹಣ ಹಾಗೂ ಕೆಎಂ ಪ್ರಕಾಶ್ ಸಂಕಲನ ಚೆನ್ನಾಗಿದೆ.

  English summary
  Kannada comedy actor Sharan's 'Rambo' Movie is a comedy plus sentiment combination with some commercial elements. Read the more for this movie in this Review. MS Shrinath Directed this and Sharan and Atlanta Nagendra are the Producers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X