»   » ಕನ್ನಡ ಚಿತ್ರದ ವಿಮರ್ಶೆ ಪಾಕ್ ವೆಬ್‌ಸೈಟ್‌ನಲ್ಲಿ!

ಕನ್ನಡ ಚಿತ್ರದ ವಿಮರ್ಶೆ ಪಾಕ್ ವೆಬ್‌ಸೈಟ್‌ನಲ್ಲಿ!

Posted By:
Subscribe to Filmibeat Kannada

ಭಾಷೆಯ ಬಗ್ಗೆ ಅಭಿಮಾನ ಇರುವವರಿಗೆ, ಕಲೆಯ ಕುರಿತು ಅಪಾರ ಆಸಕ್ತಿ ಇರುವವರಿಗೆ ಭಾಷೆ ಅಥವಾ ಕಲೆಯ ಕುಲ, ಗೋತ್ರ, ಜಾತಿ, ಪಂಗಡಗಳ ಕುರಿತು ಯಾವುದೇ ಪೂರ್ವಗ್ರಹವಿರುವುದಿಲ್ಲ. ಎಲ್ಲಿಯ ಪಾಕಿಸ್ತಾನ? ಎಲ್ಲಿಯ ಕನ್ನಡ ಚಿತ್ರ? ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನಿದು ಸ್ನೇಹ ಸಂಬಂಧ?

ಇಂತಹ ವಿದ್ಯಮಾನ ನಡೆಯುವುದು ನಿಜಕ್ಕೂ ಅಪರೂಪ. ಪಾಕಿಸ್ತಾನದ ಚಿತ್ರಗಳಿರಲಿ, ಪಕ್ಕದ ರಾಜ್ಯದ ಚಲನಚಿತ್ರದ ಬಗ್ಗೆ ನಾಲ್ಕಾರು ಪದಗಳನ್ನು ಬರೆದರೆ ಗುರ್ ಎನ್ನುತ್ತೇವೆ. ಆದರೆ, ಆದೇ ಅನ್ಯ ಭಾಷಿಕರು ನಮ್ಮ ಭಾಷೆಯ ಬಗ್ಗೆ, ಕನ್ನಡ ಚಿತ್ರದ ಬಗ್ಗೆ ಹೊಗಳಿ ಬರೆದರೆ ಹೆಮ್ಮೆಯಿಂದ ಬೀಗುತ್ತೇವೆ.


ಈಗ ಸುದ್ದಿಯಲ್ಲಿರುವುದು ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ, ಆಸ್ಕರ್ ರೇಸಿನಿಂದ ಔಟ್ ಆಗಿರುವ, ಸಾರ್ವಜನಿಕರಿಂದಲೇ ಹೂಡಿಕೆ ಆಗಿರುವ ವಿಶಿಷ್ಟ ಬಗೆಯ ಕನ್ನಡ ಚಿತ್ರ 'ಲೂಸಿಯಾ' ಕರ್ನಾಟಕದಿಂದ ಹೊರಗೆ ಪ್ರಶಂಸೆಗೊಳಗಾಗಿದೆ. ಅದು ಆಗಿರುವುದು ನೆರೆಯ ರಾಜ್ಯಗಳಲ್ಲಲ್ಲ, ಭಾರತದ ಶತ್ರು ಎಂದೇ ಬಿಂಬಿತವಾಗಿರುವ ಪಾಕಿಸ್ತಾನ ವೆಬ್ ಸೈಟ್ ನಲ್ಲಿ!

ಪಾಕಿಸ್ತಾನದ ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವೆಬ್ ಸೈಟ್ 'ಲೂಸಿಯಾ' ಚಿತ್ರದ ವಿಮರ್ಶೆಯನ್ನು ಪ್ರಕಟಿಸಿದೆ. ಚಿತ್ರದ ತಿರುಳು, ಹೊಸತನ ನೀಡಬೇಕೆಂಬ ನಿರ್ದೇಶಕ ಪವನ್ ಕುಮಾರ್ ಅವರ ತುಡಿತ, ಕ್ಲಿಷ್ಟಕರ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ ನೀನಾಸಂ ಸತೀಶ್ ಅವರ ಅಭಿನಯ, ಪೂರ್ಣಚಂದ್ರ ತೇಜಸ್ವಿಯ ಫುಟ್ ಟ್ಯಾಪಿಂಗ್ ಸಂಗೀತ, ಕಚಗುಳಿ ಇಡುವ ಹಾಡುಗಳು ಚಿತ್ರವನ್ನು ನೋಡುವಂತೆ ಪ್ರೇರೇಪಿಸುತ್ತವೆ ಎಂದು ಬರೆದಿದೆ.

ಕನ್ನಡ ಚಿತ್ರದ ವಿಮರ್ಶೆ ವಿದೇಶಿ ವೆಬ್ ಸೈಟಲ್ಲಿ ಬಂದಿದೆ ಎನ್ನುವುದಕ್ಕಿಂತ, ಕನ್ನಡ ಚಿತ್ರವನ್ನು ಅಂತಾರಾಷ್ಟ್ರೀಯವಾಗಿ ಗುರುತಿಸಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಲೂಸಿಯಾ ಚಿತ್ರ ನೋಡುಗನ್ನು ಸೆಳೆಯುವುದು ಮಾತ್ರವಲ್ಲ, ಚರ್ಚೆಗೆ ನೋಡುಗರನ್ನು ಎಳೆಯುತ್ತದೆ ಎಂದು ವಿಮರ್ಶಿಸಲಾಗಿದೆ.

ಇದೇ ಲೂಸಿಯಾ ತಂಡ ಈಗ ಇನ್ನೊಂದು ವಿನೂತನ ಪ್ರಯತ್ನಕ್ಕೆ ಇಳಿದಿದೆ. ಪ್ರಶಂಸೆಗೊಳಗಾಗಿರುವ ಈ ಚಿತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗಿದೆ. http://www.hometalkies.com/lucia/watch/ ವೆಬ್ ಸೈಟ್ ಬಳಸಿ, ಲಾಗಿನ್ ಆಗಿ ಚಿತ್ರವನ್ನು ವೀಕ್ಷಕರು ನೋಡಬಹುದಾಗಿದೆ. ಆದರೆ, ಈ ಸೇವೆ ಎನ್ಆರ್‌ಐಗಳಿಗೆ ಮಾತ್ರ ಲಭ್ಯ.

ಈ ಸಂಗತಿಯನ್ನು ಒನ್ಇಂಡಿಯಾದ ಗಮನಕ್ಕೆ ತಂದ ಓದುಗರಾದ ಕೇಶವ್ ಅವರಿಗೆ ಧನ್ಯವಾದಗಳು.

English summary
Pakistan website The Express Tribune has published the review of much acclaimed Kannada movie Lucia, which is funded by public. It is nice to know that a Kannada movie is appreciated by website in rival country. Language, movies have no barrier.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada