For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಸಸ್ಪೆನ್ಸ್, ಹಾರರ್ 'ಸಂಯುಕ್ತ-2'

  By ಡಾ.ರಾಘವೇಂದ್ರ ಮೋಕ್ಷಗುಂಡಂ
  |
  ವಿಮರ್ಶೆ: ಸಸ್ಪೆನ್ಸ್, ಹಾರರ್ 'ಸಂಯುಕ್ತ-2' | Samyuktha-2 Reviews | Filmibeat Kannada

  ಮೆಡಿಕಲ್ ಕಾಲೇಜ್ ನಲ್ಲಿ ಪ್ರತಿ ವರ್ಷ ಒಂದೇ ದಿನಾಂಕದಂದು ಯಾರೋ ಒಬ್ಬರು ಕಾಣೆಯಾಗುತ್ತಿರುತ್ತಾರೆ. ಇದರ ಹಿಂದೆ ಇರುವ ಮರ್ಮ, ಅತೀಂದ್ರಿಯ ಶಕ್ತಿಯ ಕೈವಾಡ ಭೇದಿಸಲು 3 ಜನ ಮೆಡಿಕಲ್ ಸ್ಟೂಡೆಂಟ್ಸ್ ಮತ್ತು ಒಬ್ಬ ಪ್ರೊಫೆಸರ್ ಮುಂದಾಗುತ್ತಾರೆ. ಈ ಪ್ರಯತ್ನದಲ್ಲಿ ಅವರು ಎದುರಿಸುವ ಸಮಸ್ಯೆಗಳು ಮತ್ತು ತಿಳಿದುಕೊಳ್ಳುವ ಅನೂಹ್ಯ ಸತ್ಯಗಳು ಚಿತ್ರದ ಕಥಾ ಹಂದರವಾಗಿರುತ್ತದೆ.

  ನಿರ್ಮಾಣ ಸಂಸ್ಥೆ - ಎಮ್ ಸಿರಿ ಕ್ರಿಯೇಷನ್ಸ್.

  ನಿರ್ಮಾಪಕ - ಡಾ.ಮಂಜುನಾಥ್.

  ನಿರ್ದೇಶಕ - ಅಭಿರಾಮ್

  ಕಥೆ- ಚಿತ್ರಕಥೆ-ಸಂಭಾಷಣೆ-ಡಾ.ಮಂಜುನಾಥ್ ಮತ್ತು ಅಭಿರಾಮ್. ಸಂಗೀತ ಮತ್ತು ಸಾಹಿತ್ಯ- ಕೆ.ಎಸ್.ರವಿಚಂದ್ರ.

  ಛಾಯಾಗ್ರಹಣ- ರಾಜಶೇಖರ್.

  ತಾರಾಗಣ - ಚೇತನ್ ಚಂದ್ರ, ಪ್ರಭು ಸೂರ್ಯ, ಸಂಜಯ್, ಐಶ್ವರ್ಯ, ಡಾ.ಮಂಜುನಾಥ್, ದೇವರಾಜ್, ತಬಲ ನಾಣಿ, ಸ್ಪರ್ಶ ರೇಖಾ ಮತ್ತಿತರರು.

  ವರ್ಗ - ಹಾರರ್, ಸಸ್ಪೆನ್ಸ್.

  ಓಟದ ಸಮಯ - 2 ಘಂಟೆ 8 ನಿಮಿಷ.

  ಸೆನ್ಸಾರ್ - ಪ್ರಮಾಣೀಕರಣ- " U "

  ಫಿಲ್ಮಿಬೀಟ್ ವಾಲ್ಯುಯೇಷನ್ - 67/100. ಫಸ್ಟ್ ಕ್ಲಾಸ್.

  ವಿಮರ್ಶಕರು- ಡಾ.ರಾಘವೇಂದ್ರ ಮೋಕ್ಷಗುಂಡಂ.

  'ಸಂಯುಕ್ತ' ಅನ್ನುವ ಟೈಟಲ್ ಕೇಳುತ್ತಿದ್ದ ಹಾಗೆ ಪ್ರೇಕ್ಷಕನಿಗೆ ಥಟ್ ಅಂತ ಮನಸ್ಸಿಗೆ ಬರುವುದು 1988ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 5ನೇ ಚಿತ್ರ ಸಂಯುಕ್ತ. ಸಸ್ಪೆನ್ಸ್- ಥ್ರಿಲ್ಲರ್ ವರ್ಗಕ್ಕೆ ಸೇರಿದ ಆ ಚಿತ್ರ ಅವತ್ತಿನ ಮಟ್ಟಿಗೆ ಸಾಕಷ್ಟು ಸಂಚಲನವನ್ನು ಉಂಟು ಮಾಡಿತ್ತು.

  ಸತತ ಹ್ಯಾಟ್ರಿಕ್ ಗೆಲುವು ಸಾಧಿಸಿದ ಮೇಲೆ ಶಿವ ಮೆಚ್ಚಿದ ಕಣ್ಣಪ್ಪದಂತಹ ಭಕ್ತಿ ಪ್ರಧಾನ ಚಿತ್ರದ ಸೋಲಿನ ನಿರಾಶೆಯ ನಂತರ ಬಂದ ಸಂಯುಕ್ತ ಶಿವಣ್ಣನಿಗೆ ಬೌನ್ಸ್ ಬಾಕ್ ಸೂಪರ್ ಹಿಟ್ ಸಿನಿಮಾ ಆಗಿತ್ತು. ಅದೇ ಶೀರ್ಷಿಕೆಯೊಂದಿಗೆ ಈಗ 2017ರಲ್ಲಿ ಸಂಯುಕ್ತ -2 ತೆರೆ ಕಂಡಿದೆ. ಸಹಜವಾಗಿಯೇ ಈ ಚಿತ್ರವನ್ನು 88ರ ಸಂಯುಕ್ತ ಜೊತೆ ಪ್ರೇಕ್ಷಕ ಹೋಲಿಸಿ ನೋಡುತ್ತಾನೆ. ಸಾಮಾನ್ಯ ಅಂಶಗಳ ಕಡೆ ಗಮನ ಹರಿಸಿದ್ದಾದರೆ. ಎರಡೂ ಚಿತ್ರಗಳಲ್ಲಿ ಮೂರು ಪ್ರಧಾನ ಪಾತ್ರಧಾರಿಗಳಿರುತ್ತಾರೆ.

  ಸಂಯುಕ್ತ 1ರಲ್ಲಿ ಶಿವಣ್ಣ, ಬಾಲರಾಜ್, ಗುರುದತ್. 'ಸಂಯುಕ್ತ-2'ರಲ್ಲಿ ಚೇತನ್ ಚಂದ್ರ, ಸಂಜಯ್, ಪ್ರಭುಸೂರ್ಯ. ಎರಡೂ ಸಸ್ಪೆನ್ಸ್-ಹಾರರ್-ಥ್ರಿಲ್ಲರ್ ವರ್ಗಕ್ಕೆ ಸೇರಿದ ಚಿತ್ರಗಳು. ಎರಡೂ ಚಿತ್ರಗಳಲ್ಲಿ ಮಾನವ ತರ್ಕಕ್ಕೆ ಮೀರಿದ ಸಂಘಟನೆಗಳನ್ನು ಭೇದಿಸಲು ನಾಯಕ ಹೋರಾಡುತ್ತಾನೆ. ಹೋಲಿಕೆ ಇಲ್ಲಿಗೇ ನಿಲ್ಲುತ್ತದೆ. 'ಸಂಯುಕ್ತ-2' ಚಿತ್ರದ ಪೂರ್ತಿ ವಿಮರ್ಶೆ ಮುಂದೆ ಓದಿ....

  ಕಥೆ ಸಾರಾಂಶ

  ಕಥೆ ಸಾರಾಂಶ

  ಸಂಯುಕ್ತ -2 ಕಥೆಯ ಬಗ್ಗೆ ಹೇಳುವುದಾದರೆ, ಮೆಡಿಕಲ್ ಕಾಲೇಜ್ ಒಂದರಲ್ಲಿ ಪ್ರತಿ ವರ್ಷ ನವೆಂಬರ್ 27ರಂದು ಒಬ್ಬ ವ್ಯಕ್ತಿ ಕಾಣೆಯಾಗುತ್ತಿರುತ್ತಾರೆ. ಕಾಣೆಯಾದ ವ್ಯಕ್ತಿಗಳ ಸುಳಿವು ಸೂಚನೆಗಳು ಯಾರಿಗೂ ಸಿಕ್ಕಿರುವುದಿಲ್ಲ. ಅಮೇರಿಕದಲ್ಲಿರುವ ಕಾಪ್ಟನ್ ಭಗತ್ ಈ ರಹಸ್ಯವನ್ನು ತಿಳಿಯಲು ಇಂಡಿಯಾದಲ್ಲಿರುವ ಆಫೀಸರ್ ಒಬ್ಬರಿಗೆ ಕಾಲ್ ಮಾಡುವ ದ್ರಶ್ಯದಿಂದ ಚಿತ್ರ ಶುರು ಆಗುತ್ತೆ. ಅಲ್ಲಿಂದ ಭಾರತಕ್ಕೆ ಬಂದ ಆತ ಈ ಮೆಡಿಕಲ್ ಕಾಲೇಜ್ ಮಿಸ್ಟರಿ ಬಗ್ಗೆ ಸುದೀರ್ಘ ಸಂಶೋಧನೆ ನಡೆಸಿರುವ ಚೀಫ್ ಎಡಿಟರ್ ಒಬ್ಬರ ಬಳಿಗೆ ಬರುತ್ತಾನೆ. ವಿಶ್ವವಾಣಿ ಪತ್ರಿಕೆಯ ರೂವಾರಿ ವಿಶ್ವೇಶ್ವರ್ ಭಟ್ ತಮ್ಮ ರಿಯಲ್ ಐಡೆಂಟಿಟಿಯಲ್ಲೇ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದ ಓಟಕ್ಕೆ ಭಟ್ಟರನ್ನು ಪಾತ್ರವನ್ನಾಗಿಸುವ ನಿರ್ದೇಶಕರ ತಂತ್ರ ಕಥೆಗೆ ಗಾಂಭೀರ್ಯವನ್ನು ತಂದುಕೊಡುತ್ತದೆ. ಭಟ್ಚರ ಮೂಲಕ ಮುಂದಿನ ಕಥೆ ಅನಾವರಣವಾಗುತ್ತ ಹೋಗುತ್ತದೆ.

  ಮಿಸ್ಟರಿ 'ಸಂಯುಕ್ತ'

  ಮಿಸ್ಟರಿ 'ಸಂಯುಕ್ತ'

  ಕಾಲೇಜ್ ಸ್ಟೂಡೆಂಟ್ ಪಾತ್ರದಲ್ಲಿ ಸಂಜಯ್, ಪ್ರಭು ಸೂರ್ಯ, ಐಶ್ವರ್ಯ ಚಿತ್ರರಂಗಕ್ಕೆ ಪರಿಚಯವಾಗುತ್ತಾರೆ. ಈಗಾಗಲೇ ಪ್ರೇಕ್ಷಕರಿಗೆ ಪರಿಚಿತರಾಗಿರುವ ಚೇತನ್ ಚಂದ್ರ ಒಂದು ಲೆಕ್ಕದಲ್ಲಿ ಮೈನ್ ಹೀರೋ ಆಗಿ ಎಂಟ್ರಿ ಕೊಡುತ್ತಾರೆ. ಕಾಲೇಜ್ ಹಿಂದಿನ ಕಾಡಲ್ಲಿರುವ ಬಂಗಲೆ ರಹಸ್ಯ ತಿಳಿಯುವ ಕುತೂಹಲದಿಂದ ನಾಯಕಿ ಆಗಾಗ ಮಾಯವಾಗುತ್ತಿರುತ್ತಾಳೆ. ಒಂದು ಹಂತದಲ್ಲಿ ಅವಳ ವಿಲಕ್ಷಣ ವರ್ತನೆಗೆ ದೆವ್ವದ ಪ್ರಭಾವ ಇರಬಹುದಾ ಎಂಬ ಅನುಮಾನ ನೋಡುಗರಲ್ಲಿ ಮೂಡುತ್ತದೆ. ಈ ಮಿಸ್ಟರಿಯನ್ನು ಬ್ರೇಕ್ ಮಾಡಲು ಸ್ನೇಹಿತರೆಲ್ಲ ಟೂರ್ ನೆಪದಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತಾರೆ.

  ಕುತೂಹಲಕಾರಿ ಚಿತ್ರಕಥೆ

  ಕುತೂಹಲಕಾರಿ ಚಿತ್ರಕಥೆ

  ಕಾಲೇಜ್ ಛೇರ್ಮನ್ ಆಗಿ ದೇವರಾಜ್, ಅನಾಟಮಿ ಪ್ರೊಫೆಸರ್ ಆಗಿ ತಬಲ ನಾಣಿ ಕೆಲವೇ ದ್ರಶ್ಯಗಳಿಗೆ ಸೀಮಿತವಾಗುತ್ತಾರೆ. ಇದರ ಮಧ್ಯೆ ಸೈಕಾಲಜಿ ಪ್ರೊಫೆಸರ್ ಭಗತ್ ನಿಂದ ಈ ರಹಸ್ಯ ಬೇಧಿಸುವ ಪ್ರಯತ್ನ ಮತ್ತೊಂದು ಕಡೆ ನಡೆಯುತ್ತಿರುತ್ತದೆ. ರಾತ್ರಿ ಮಲಗುವಾಗಲೂ ಮೇಕಪ್ ಹಾಕಿಕೊಂಡೇ ಇರುವ ನಾಯಕಿ, ಫಾರ್ಚೂನರ್ ಕಾರಿನಲ್ಲಿ ಮಿಸ್ಟರಿ ಸಾಲ್ವ್ ಮಾಡಲು ಬರುವ ಪ್ರೊಫೆಸರ್ ಪಾತ್ರ ನಿರೂಪಣೆ ವಾಸ್ತವಕ್ಕೆ ದೂರ ಅನಿಸುತ್ತದೆ. ಇಂಥ ಸಣ್ಣ, ಸಣ್ಣ ಆಭಾಸಗಳ ಮಧ್ಯದಲ್ಲೂ ಚಿತ್ರ ತನ್ನ ಬಿಗಿ ನಿರೂಪಣೆಯನ್ನು ಕಾಯ್ದುಕೊಳ್ಳುತ್ತದೆ.

  ಮೊದಲಾರ್ಧದಲ್ಲಿ ಟ್ವಿಸ್ಟ್

  ಮೊದಲಾರ್ಧದಲ್ಲಿ ಟ್ವಿಸ್ಟ್

  ಇದ್ದಕ್ಕಿದ್ದ ಹಾಗೇ ಮಾಯವಾದ ನಾಯಕಿಯನ್ನು ಹುಡುಕುತ್ತ ಅವಳ ಸ್ನೇಹಿತರೆಲ್ಲರೂ ಪಾಳು ಬಿದ್ದ ಬಂಗಲೆಯನ್ನು ಸೇರಿದಾಗ ಅಲ್ಲಿನ ಸನ್ನಿವೇಶ ನೋಡಿ ಶಾಕ್ ಆಗುತ್ತಾರೆ. ಅದೇನೆಂದು ಪ್ರೇಕ್ಷಕರು ಚಿತ್ರಮಂದಿರದಲ್ಲೇ ನೋಡಿ ತಿಳಿದುಕೊಳ್ಳಬೇಕು. ಈ ಸನ್ನಿವೇಶವನ್ನು ಇಂಟರ್ವಲ್ ಬ್ಲಾಕ್ ಆಗಿ ಬಳಸಿಕೊಂಡಿರುವ ನಿರ್ದೇಶಕರ ಪ್ರತಿಭೆ ನಿಜಕ್ಕೂ ಮೆಚ್ಚಿವಂತಿದೆ. ಇಂಟರ್ವಲ್ ಗೆ ಮುಂಚಿನ ಕೊನೆಯ ಸೀನ್ ಮತ್ತು ಇಂಟರ್ವಲ್ ನಂತರದ ಮೊದಲ ಸೀನ್ ಉಪೇಂದ್ರ ನಿರ್ದೇಶನದ ಶ್ ಚಿತ್ರವನ್ನು ನೆನಪಿಗೆ ತರುತ್ತದೆ.

  ಸೆಕೆಂಡ್ ಹಾಫ್ ಆರಂಭ

  ಸೆಕೆಂಡ್ ಹಾಫ್ ಆರಂಭ

  ಸೆಕೆಂಡ್ ಹಾಫ್ ನಲ್ಲಿ ಹಲವಾರು ಪಾತ್ರಗಳ ಮತ್ತೊಂದು ಶೇಡ್ ಗೋಚರವಾಗುತ್ತದೆ. ಚಿತ್ರ ಇನ್ನೇನು ಕ್ಲೈಮಾಕ್ಸ್ ಗೆ ಬಂತು ಅನ್ನುವಾಗ ಅತಿ ಮುಖ್ಯ ಪಾತ್ರಧಾರಿ, ಮೈನ್ ವಿಲನ್ ಎಂಟ್ರಿ ಕೊಡುತ್ತಾನೆ. ಇಲ್ಲಿಯವರೆಗೂ ನಡೆದ ಎಲ್ಲ ಸಾವುಗಳಿಗೆ, ವಿಚಿತ್ರ ಸಂಘಟನೆಗಳಿಗೆ ಖಳನಾಯಕನಿಗಿರುವ ಇಂಡಿಯನ್ ಆರ್ಮಿ ಮೇಲಿನ ಅಭಿಮಾನ ಮತ್ತು ದೇಶಭಕ್ತಿಯೇ ಕಾರಣ ಎಂಬ ಸಮರ್ಥನೆಯನ್ನು ನಿರ್ದೇಶಕರು ಈ ಹಂತದಲ್ಲಿ ನಮ್ಮ ಮುಂದಿಡುತ್ತಾರೆ. ಇದನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಕಾದು ನೋಡಬೇಕಷ್ಟೇ.

  ಕಲಾವಿದರು ಅಭಿನಯದ ಹೇಗಿದೆ?

  ಕಲಾವಿದರು ಅಭಿನಯದ ಹೇಗಿದೆ?

  ಒಂದು ಒಳ್ಳೆಯ ಉದ್ದೇಶವನ್ನು ಸಾಧಿಸಲು ಕೆಟ್ಟ ದಾರಿ ಆಯ್ಕೆ ಮಾಡಿಕೊಂಡರೂ ತಪ್ಪಿಲ್ಲ ಎಂಬುದು ಸಂಯುಕ್ತ-2 ಚಿತ್ರದ ಬಾಟಮ್ ಲೈನ್ ಆಗಿ ರಿಜಿಸ್ಟರ್ ಆಗುತ್ತದೆ. ನಟನೆಯ ವಿಷಯಕ್ಕೆ ಬರುವುದಾದರೆ, ಹೊಸ ನಟರಾದ ಸಂಜಯ್ ಮತ್ತು ಪ್ರಭು ಸೂರ್ಯ ಲವಲವಿಕೆಯಿಂದ ನಟಿಸಿದ್ದಾರೆ. ನಟನೆಯಲ್ಲಿ ಇನ್ನಷ್ಟು ತರಬೇತಿ, ಪೂರ್ವ ಸಿದ್ಧತೆ ಬೇಕು. ಮೊದಲ ಸಿನಿಮಾ ಆದ್ದರಿಂದ ಸ್ವಲ್ಪ ರಿಯಾಯಿತಿ ಇರುತ್ತದೆ. ಡಾ.ಮಂಜುನಾಥ್ ಈ ಚಿತ್ರದ ನಿರ್ಮಾಪಕ, ಸಂಭಾಷಣೆಗಾರ, ಕಥೆಗಾರನೂ ಆಗಿ ವಿಲನ್ ಪಾತ್ರದಲ್ಲೂ ನಟಿಸಿದ್ದಾರೆ. ಸಹಜವಾಗೇ ವಿಲನ್ ಪಾತ್ರವನ್ನು ಪಾಸಿಟಿವ್ ಆಗಿ ತೋರಿಸುವ ಪ್ರಯತ್ನವನ್ನೂ ಕೊನೆಯಲ್ಲಿ ಮಾಡುತ್ತಾರೆ. ನಟನೆಗಿಂತ ತಮ್ಮ ಬಾಡಿ ಬಿಲ್ಡಿಂಗ್ ಮತ್ತು ವಿಭಿನ್ನವಾದ ಧ್ವನಿಯಿಂದ ಹೆಚ್ಚು ಮನಸ್ಸಿನಲ್ಲಿ ನಿಲ್ಲುತ್ತಾರೆ. ಅನುಭವಿ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡಿದರೆ ಇಂಡಸ್ಟ್ರಿಗೆ ಮತ್ತೊಬ್ಬ ಒಳ್ಳೆ ಖಳನಟನಾಗುವ ಎಲ್ಲ ಸಾಧ್ಯತೆಗಳೂ ಇದೆ.

  ತಾಂತ್ರಿಕವಾಗಿ ಸಂಯುಕ್ತ 2

  ತಾಂತ್ರಿಕವಾಗಿ ಸಂಯುಕ್ತ 2

  ಸಂಭಾಷಣೆ ಚಿತ್ರದ ಓಟಕ್ಕೆ ತಕ್ಕಂತಿದ್ದು ಸನ್ನಿವೇಶಗಳನ್ನು ಮುಂದೆ ನಡೆಸುವ ಸ್ಟೀರಿಂಗ್ ಆಗಿ ಕೆಲಸ ಮಾಡುತ್ತದೆ. ಆತ್ಮ ಎಂದರೆ ಬ್ರೈನ್ ನಲ್ಲಿ ನಡೆಯೋ ಕೆಮಿಕಲ್ ರಿಯಾಕ್ಷನ್ ಎಂದು ಪ್ರೊಫೆಸರ್ ಗೆ ಉತ್ತರಿಸುವ ನಾಸ್ತಿಕ ನಾಯಕನ ಡೈಲಾಗ್, ಕುರಿ ತಲೆ ತಗ್ಗಿಸೋದು ಎರಡೇ ಸಲ, ಒಂದು ಆಹಾರ ತಿನ್ನೋವಾಗ, ಇನ್ನೊಂದು ಆಹಾರ ಆಗೋವಾಗ ಎನ್ನುವ ಒಂದಷ್ಟು ಡೈಲಾಗ್ ಗಳು ಪ್ರೇಕ್ಷಕನಿಗೆ ಮುದ ನೀಡುತ್ತದೆ. ರಾಜಶೇಖರ್ ಛಾಯಾಗ್ರಹಣ ಚೆನ್ನಾಗಿದೆ. ನೈಟ್ ಸೀನ್ ಗಳಲ್ಲಿ ಅವರ ಕೈಚಳಕ ಎದ್ದು ಕಾಣುತ್ತದೆ. ಹಾರರ್ - ಸಸ್ಪೆನ್ಸ್ ಚಿತ್ರಗಳಲ್ಲಿ ಸಾಹಿತ್ಯ-ಸಂಗೀತ ಏನಿದ್ದರೂ ಕಥೆಯ ಮಧ್ಯದಲ್ಲಿ ಬರುವ ಟೆನ್ಶನ್ ರಿಲೀವರ್ ಗಳಾಗಿರುತ್ತವೆ. ಈ ಚಿತ್ರದಲ್ಲೂ ಅಷ್ಚೇ. 4 ಹಾಡುಗಳು ಸಂದರ್ಭಕ್ಕೆ ತಕ್ಕಂತೆ ಬರುತ್ತವೆ. ಟೈಟಲ್ ಟ್ರಾಕ್ ಮತ್ತೆ ಮೆಲುಕುಹಾಕುವಂತಿದೆ.

  ಕೊನೆಯ ಮಾತು

  ಕೊನೆಯ ಮಾತು

  ನವೆಂಬರ್ ನಲ್ಲಿ ಬರುವುದು ಮಾಘ ಮಾಸ ಅಲ್ಲ, ಕಾರ್ತಿಕ ಮಾಸ ಎಂಬ ಸಾಮಾನ್ಯ ಜ್ಞಾನದ ಕೊರತೆ ಸಂಭಾಷಣೆಗಾರರಲ್ಲಿ ಎದ್ದು ಕಾಣುತ್ತದೆ. ಕಾಸ್ಮಟಾಲಜಿಸ್ಚ್ ಮತ್ತು ಡೆರ್ಮಟಾಲಜಿಸ್ಟ್ ಆಗಿ ರೇಖಾ ಕಥೆಗೆ ಮುಖ್ಯ ತಿರುವು ಮತ್ತು ಹೊಸ ತರದ ಸ್ಪರ್ಶವನ್ನು ಕೊಡುತ್ತಾರೆ. ದೇವರಾಜ್ ಮತ್ತು ತಬಲ ನಾಣಿಯನ್ನು ನಿರ್ದೇಶಕರು ಇನ್ನೂ ಸಮರ್ಥವಾಗಿ ಬಳಸಿಕೊಳ್ಳಬಹುದಿತ್ತು.ಕೆಲವು ಸಣ್ಣ,ಸಣ್ಣ ತಪ್ಪುಗಳ ನಡುವೆಯೂ ಸಂಯುಕ್ತ -2 ಪ್ರೇಕ್ಷಕನಿಗೆ ಮನರಂಜನೆ ಕೊಡುವುದರಲ್ಲಿ ಗೆಲ್ಲುತ್ತದೆ. ಒಂದು ಸಲ ನೋಡಿ ಎಂಜಾಯ್ ಮಾಡಲು ಅಡ್ಡಿಯಿಲ್ಲ.

  English summary
  Chetan Chandra Starrer kannada movie samyuktha 2 film review. ಚೇತನ್ ಚಂದ್ರ, ಪ್ರಭು ಸೂರ್ಯ, ಐಶ್ವರ್ಯ ಸಿಂಧೋಗಿ ಅಭಿನಯದ 'ಸಂಯುಕ್ತ-2' ಚಿತ್ರದ ವಿಮರ್ಶೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X