»   » ಚಿತ್ರ ವಿಮರ್ಶೆ: 'ಶಿವಂ' ಸರ್ವಂ ಉಪೇಂದ್ರ ಮಯಂ

ಚಿತ್ರ ವಿಮರ್ಶೆ: 'ಶಿವಂ' ಸರ್ವಂ ಉಪೇಂದ್ರ ಮಯಂ

Posted By:
Subscribe to Filmibeat Kannada

'ಸೂಪರ್ ರಂಗ' ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ 'ಶಿವಂ'. ರೀಮೇಕ್ ಹಾಗೂ ಸ್ವಮೇಕ್ ಚಿತ್ರಗಳ ನಡುವೆ ಒಂದಷ್ಟು ಅಂತರ ಕಾಪಾಡಿಕೊಂಡು ಗೆಲುವಿನ ಜೋಕಾಲಿಯಲ್ಲಿ ಜೀಕುತ್ತಿರುವ ಉಪೇಂದ್ರ ಈ ಬಾರಿ ಸ್ವಲ್ಪ ಡಿಫರೆಂಟ್ ಚಿತ್ರವನ್ನೇ ಕೊಟ್ಟಿದ್ದಾರೆ.

ಆದರೆ ಕಥೆಯಲ್ಲಿ ಹೇಳಿಕೊಳ್ಳುವಂತಹ ಹುರುಳಿಲ್ಲ. ಬರೀ ಕಮರ್ಷಿಯಲ್ ಅಂಶಗಳಿಂದ ತುಂಬಿ ತುಳುಕುವಂತೆ ಮಾಡಿದ್ದಾರೆ ನಿರ್ದೇಶಕ ಶ್ರೀನಿವಾಸ್ ರಾಜು. ಸಾಮಾನ್ಯವಾಗಿ ಉಪ್ಪಿ ಚಿತ್ರಗಳೆಂದರೆ ಸಂಭಾಷಣೆಗೆ ಹೆಚ್ಚಿನ ಒತ್ತು ಇರುತ್ತದೆ. ಆದರೆ 'ಶಿವಂ' ಚಿತ್ರದಲ್ಲಿ ಉಪೇಂದ್ರ ಅವರ ಗೆಟಪ್ಪಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. [ರಿಯಲ್ ಸ್ಟಾರ್ ಉಪೇಂದ್ರಗೆ ಕಲ್ಲು ಎಸೆದವರಾರು?]

ಪರಮೇಶ್ವರ ಭಟ್ಟ (ಶ್ರೀನಿವಾಸಮೂರ್ತಿ) ಎಂಬ ಅರ್ಚಕರ ಮನೆತನದ ಕಥೆ ಇದು. ತಲೆತಲಾಂತರದಿಂದ ಪೂರ್ವಿಕರಿಂದ ಬಂದಂತಹ ಪುರಾತನ ಶಿವನ ದೇವಾಲಯದ ಉತ್ಸುವಾರಿ ನೋಡಿಕೊಂಡು ಬರುತ್ತಿರುತ್ತದೆ ಭಟ್ಟರ ಮನೆತನ. ಆದರೆ ಆ ಪುರಾತನ ದೇವಾಲಯ ಹಾಗೂ ಅದರ ಆಸ್ತಿಪಾಸ್ತಿ ಕಬಳಿಸಲು ದುಷ್ಟರ ಕೂಟವೊಂದು ಹೊಂಚು ಹಾಕಿ ಸಂಚು ಮಾಡುತ್ತಿರುತ್ತದೆ.

Rating:
3.0/5

ಚಿತ್ರ: ಶಿವಂ
ನಿರ್ಮಾಪಕರು: ಡಾ.ಸಿ.ಆರ್. ಮನೋಹರ್
ಕಥೆ, ಚಿತ್ರಕಥೆ, ನಿರ್ದೇಶನ: ಶ್ರೀನಿವಾಸ್ ರಾಜು
ಸಂಗೀತ: ಮಣಿಶರ್ಮ
ಛಾಯಾಗ್ರಹಣ: ವೆಂಕಟ್ ಪ್ರಸಾದ್
ಸಂಕಲನ: ವಿನೋದ್ ಮನೋಹರ್
ಸಂಭಾಷಣೆ: ಗುರುರಾಜ್ ಎಂ ದೇಸಾಯಿ
ಪಾತ್ರವರ್ಗ: ಉಪೇಂದ್ರ, ರಾಗಿಣಿ ದ್ವಿವೇದಿ, ಸಲೋನಿ, ಶ್ರೀನಿವಾಸಮೂರ್ತಿ, ಗೀತಾ, ಭವ್ಯಾ, ದೊಡ್ಡಣ್ಣ, ಸಿ.ಆರ್.ಗೋಪಿ, ಶಿವರಾಂ, ರವಿಶಂಕರ್, ಮಕರಂದ್ ದೇಶಪಾಂಡೆ, ಲಕ್ಷ್ಮಣ್, ಶರತ್ ಲೋಹಿತಾಶ್ವ, ಗೌರೀಶ್ ಅಕ್ಕಿ, ಮುನಿ, ಕಿಟ್ಟಿ ಮುಂತಾದವರು.

ಆಸೆಗೆ ತಣ್ಣೀರೆರಚುವ ಹಿರಿಮಗ

ತನ್ನ ಬಳಿಕ ಈ ದೇವಾಲಯದ ಉತ್ಸುವಾರಿ ಹಿರಿಮಗನಿಗೆ (ಗೌರೀಶ್ ಅಕ್ಕಿ) ಒಪ್ಪಿಸಬೇಕು ಎಂಬುದು ಪರಮೇಶ್ವರ ಭಟ್ಟರ ಆಸೆ. ಆದರೆ ಆ ಆಸೆಗೆ ತಣ್ಣೀರೆರಚುತ್ತಾನೆ ಹಿರಿಮಗ. ಅಜ್ಜ ಹಾಕಿದ ಆಲದ ಮರಕ್ಕೆ ನಾನು ನೇಣು ಹಾಕಿಕೊಳ್ಳಬೇಕೇನು ಎಂದು ಹೇಳಿ ತಾನು ಅರ್ಚಕ ಕೆಲಸ ಮಾಡಲ್ಲ ಎಂದು ಖಂಡತುಂಡವಾಗಿ ಹೇಳಿಬಿಡುತ್ತಾನೆ.

ಡಿಫರೆಂಟ್ ಗೆಟಪ್ ನಲ್ಲಿ ಬಸವಣ್ಣ ಎಂಟ್ರಿ

ಇದೇ ಕೊರಗಿನಲ್ಲಿ ತಂದೆ ಕೊನೆಯುಸಿರೆಳೆಯುತ್ತಾರೆ. ಆಗ ಆ ದೇವಾಲಯ ಕಬಳಿಸಲು ಮುಂದಾಗುತ್ತಾರೆ ದುಷ್ಟರು. ಬೋಳು ತಲೆ, ಹಣೆಯಲ್ಲಿ ವಿಭೂತಿ, ರುದ್ರಾಕ್ಷಿ ಮಾಲೆ ತೊಟ್ಟು ಎಂಟ್ರಿ ಕೊಡುತ್ತಾನೆ ಭಟ್ಟರ ಕಿರಿಮಗ ಬಸವಣ್ಣ. ನಿನಗೇನು ಅರ್ಹತೆ ಇದೆ ಎಂದು ಪ್ರಶ್ನಿಸುವ ಪಂಡಿತರಿಗೆ ಸಂಸ್ಕೃತ, ವೇದ, ಆಗಮಶಾಸ್ತ್ರದ ಎಲ್ಲಾ ಪ್ರಶ್ನೆಗಳಿಗೂ ಪಟಪಟ ಎಂದು ಉತ್ತರಿಸುತ್ತಾನೆ.

ಬಸವಣ್ಣನಿಗೂ ಡಾನ್ ಗೂ ಏನು ಲಿಂಕು?

ಅಲ್ಲಿ ಶಿಳ್ಳೆ ಗಿಟ್ಟಿಸಿಕೊಳ್ಳುವ ಬಸವಣ್ಣ ಮುಂದೆ ಅದೇ ಗೆಟಪ್ ನಲ್ಲಿ ಗನ್ ಹಿಡಿಯುತ್ತಾರೆ. ಮಾಫಿಯಾ ಡಾನ್ ಅಮಾನುಲ್ಲಾ ಖಾನ್ ನನ್ನು (ರವಿಶಂಕರ್) ದೇವಾಲಯದ ಮುಂದೆಯೇ ಮಟಾಶ್ ಮಾಡುತ್ತಾನೆ. ಈ ಮಾಫಿಯಾ ಡಾನ್ ಗೂ ಬಸವಣ್ಣನಿಗೂ ಏನು ಲಿಂಕು ಎಂಬುದನ್ನು ನೀವು ತೆರೆಯ ಮೇಲೆ ನೋಡಿದರೇನೇ ಚೆಂದ.

ಕಣ್ಣಿಗೆ ತಂಪೆರೆಯುವ ರಾಗಿಣಿ, ಸಲೋನಿ

ರಾಗಿಣಿ ದ್ವಿವೇದಿ ಹಾಗೂ ಸಲೋನಿ ಅವರ ಪಾತ್ರಗಳನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ನಿರ್ದೇಶಕರು ಬಹುತೇಕ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ರಾಗಿಣಿ ಐಟಂ ಪೋರಿಯಾದರೆ ಸಲೋನಿಯನ್ನು ಚಂದ್ರ ಚಕೋರಿ. ಒಟ್ಟಾರೆ ಪ್ರೇಕ್ಷಕರ ಕಣ್ಣು ಮತ್ತು ಮನಸ್ಸಿಗೆ ತಂಪೆರೆಯುವಲ್ಲಿ ಇಬ್ಬರೂ ಗೆದ್ದಿದ್ದಾರೆ.

ಬುಲೆಟ್ ಪ್ರಕಾಶ್ ಕಾಮಿಡಿ ಸುಮಾರಾಗಿದೆ

ಇನ್ನು ಮಾಫಿಯಾ ಡಾನ್ ಅಮಾನುಲ್ಲಾ ಖಾನ್ ಆಗಿ ರವಿಶಂಕರ್ ಅವರದು ಎಂದಿನ ಅಬ್ಬರದ ಅಭಿನಯ. ಬುಲೆಟ್ ಪ್ರಕಾಶ್ ಕಾಮಿಡಿ ಸುಮಾರಾಗಿದೆ. ಗೀತಾ, ದೊಡ್ಡಣ್ಣ, ಭವ್ಯಾ, ಶಿವರಾಂ, ಶರತ್ ಲೋಹಿತಾಹ್ವ, ಗೌರೀಶ್ ಅಕ್ಕಿ, ಮುನಿ, ಕಿಟ್ಟಿ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಅಘೋರಿ ಪಾತ್ರದಲ್ಲಿ ಮಕರಂದ್ ದೇಶಪಾಂಡೆ ಗಮನಸೆಳೆಯುತ್ತಾರೆ.

ಅಲ್ಲಲ್ಲಿ ಹಳಿತಪ್ಪಿದ ಸಂಭಾಷಣೆ

ಮಣಿಶರ್ಮ ಅವರ ಸಂಗೀತ ಹಾಡುಗಳು ಸ್ವಲ್ಪ ಅಬ್ಬರ ಅನ್ನಿಸಿದರೂ ವೆಂಕಟ್ ಪ್ರಸಾದ್ ಅವರ ಕ್ಯಾಮೆರಾ ವರ್ಕ್ ಅದನ್ನು ಸುಮಧುರವನ್ನಾಗಿಸಿದೆ. ಗುರುರಾಜ್ ಎಂ ದೇಸಾಯಿ ಅವರ ಸಂಭಾಷಣೆ ಅಲ್ಲಲ್ಲಿ ಹಳಿತಪ್ಪಿದೆ.

ಬಸವಣ್ಣ ಬಾಯಲ್ಲಿ ಕೆಟ್ಟ ಬೈಗುಳವೇ?

"ಬಸವಣ್ಣ, ಶಿವನ್ನ ಬಿಟ್ಟು ಬೇರೆ ಯಾರನ್ನೂ ಕಾಯಲ್ಲ. ಫಸ್ಟ್ ಬುಲೆಟ್ ನಾವೇ ಹಾರಿಸಲಿಲ್ಲ ಅಂದ್ರೆ ಉಳಿಯಕ್ಕೆ ಆಗಲ್ಲ" ಎಂಬಂತಹ ಡೈಲಾಗ್ ಗಳ ನಡುವೆ ಹಿಂದಿ ಡೈಲಾಗ್ ಗಳೂ ಇಣುಕಿದ್ದು ಅದರಲ್ಲಿ "ತೇರಿ ಮಾ ಕಿ" ಎಂಬ ಬೈಗುಳವನ್ನೂ ಪೂಜಾರಿ ಗೆಟಪ್ ನಲ್ಲಿರುವ ಉಪೇಂದ್ರ ಬಾಯಲ್ಲಿ ಹೇಳಿಸಲಾಗಿರುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಕಾಡುತ್ತದೆ.

ಟೆರ್ರರಿಸಂಗೆ ಟೆರ್ರರಿಸಂ ಉತ್ತರವೇ?

ಚಿತ್ರದಲ್ಲಿ ಕೆಲವೊಂದು ವಿವಾದಾತ್ಮಕ ಅಂಶಗಳೂ ಇಲ್ಲದಿಲ್ಲ. ಖಳನಟನಿಗೆ ಅಮಾನುಲ್ಲಾ ಖಾನ್ ಎಂದು ಹೆಸರಿಟ್ಟಿರುವುದು, "ಟೆರ್ರರಿಸಂಗೆ ಟೆರ್ರರಿಸಂ ಆನ್ಸರ್" ಎಂಬ ಎಡವಟ್ಟಿನ ಡೈಲಾಗ್ ಗಳೂ ಇವೆ. ಒಟ್ಟಾರೆ ಎರಡೂ ಮುಕ್ಕಾಲು ಗಂಟೆಗಳ ಕಾಲ ಎಲ್ಲೂ ಬೋರಾಗದಂತೆ ಚಿತ್ರವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕರು. ಒಮ್ಮೆ ನೋಡಬಹುದಾದ ಚಿತ್ರ ಎಂದಷ್ಟೇ ಹೇಳಬಹುದು.

English summary
Real Star Upendra, Saloni Aswani and Ragini Dwivedi starer Kannada movie 'Shivam' review. The Movie is definitely a onetime watch as Uppi impresses with different getups and stylish.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada