»   » ವಿಮರ್ಶೆ: 'ತರ್ಲೆ ವಿಲೇಜ್' ಅಲ್ಲ, 'ಪೋಲಿ' ವಿಲೇಜ್!

ವಿಮರ್ಶೆ: 'ತರ್ಲೆ ವಿಲೇಜ್' ಅಲ್ಲ, 'ಪೋಲಿ' ವಿಲೇಜ್!

Posted By:
Subscribe to Filmibeat Kannada

'ತಿಥಿ' ಸಿನಿಮಾದಿಂದ ಖ್ಯಾತಿ ಗಳಿಸಿಕೊಂಡ ಗಡ್ಡಪ್ಪ, ಸೆಂಚುರಿ ಗೌಡ, ಅಭಿ, ತಮ್ಮಣ್ಣ ಅಭಿನಯದ ಮತ್ತೊಂದು ಮನೋರಂಜನಾತ್ಮಕ ಚಿತ್ರ 'ತರ್ಲೆ ವಿಲೇಜ್'. ಹಳ್ಳಿ ಹೈಕ್ಳ ತರ್ಲೆ ಕಥೆಯಲ್ಲಿ ಮನರಂಜನೆಯೇ ಮೂಲ ಮಂತ್ರ. ಆದ್ರೆ, ಮುಜುಗರದ ಅನುಭವ ಮಾತ್ರ ಕಟ್ಟಿಟ್ಟಬುತ್ತಿ.

Rating:
3.0/5

ಚಿತ್ರ : ತರ್ಲೆ ವಿಲೇಜ್
ನಿರ್ದೇಶಕ : ಕೆ ಎಂ ರಘು
ನಿರ್ಮಾಪಕ : ಎಸ್ ಬಿ ಶಿವ
ಸಂಗೀತ ನಿರ್ದೇಶನ : ವೀರ ಸಮರ್ಥ್
ಸಂಭಾಷಣೆ : ಕೆ ಎಂ ರಘು
ತಾರಾಗಣ : ಗಡ್ಡಪ್ಪ, ಸೆಂಚುರಿ ಗೌಡ, ತಮ್ಮಣ್ಣ, ಅಭಿ, ಹರ್ಷಿತಾ, ಭಾಗ್ಯಶ್ರೀ, ಸೋಮು ಮತ್ತು ಇತರರು
ಬಿಡುಗಡೆ : ಡಿಸೆಂಬರ್ 16, 2016

ಕಥಾ ಹಂದರ

'ತರ್ಲೆ ವಿಲೇಜ್' ಎಂಬುದು ಒಂದು ಹಳ್ಳಿ. ಈ ಹಳ್ಳಿಗೆ ನಂಜಪ್ಪ (ಸೆಂಚುರಿ ಗೌಡ) ಗೌಡ. ಗಡ್ಡಪ್ಪ ಊರಿನ ನಾಯಕ. ತಮ್ಮಣ್ಣ ದಲ್ಲಾಳಿ, ಅಭಿ ಹುಡುಗರ ಪಾಲಿಗೆ ಬಾಸ್. ಹೀಗೆ, ಅವರವರ ಕೆಲಸ ಮಾಡ್ಕೊಂಡು ಜೀವನ ಮಾಡುತ್ತಿರುತ್ತಾರೆ. ಆದ್ರೆ, 'ತರ್ಲೆ ವಿಲೇಜ್'ನಲ್ಲಿ ಪ್ರತಿ ಹುಣ್ಣಿಮೆ ದಿನ ಒಂದೊಂದು ನಿಗೂಢ ಸಾವು ಸಂಭವಿಸುತ್ತೆ. ಇಡೀ ಸಿನಿಮಾಗೆ ಇದೇ ಸಸ್ಪೆನ್ಸ್.

'ತರ್ಲೆ'ಗಳಿಂದ ತುಂಬಿದ ವಿಲೇಜ್

ಚಿತ್ರದ ಟೈಟಲ್ ಗೆ ತಕ್ಕಂತೆ ಇಡೀ ಚಿತ್ರದ ತುಂಬ ಬರೀ ತರ್ಲೆ ಸನ್ನಿವೇಶಗಳೇ ಬರುತ್ತೆ. ಪರಸ್ತ್ರೀ ಸಹವಾಸ ಮಾಡುವ ತಮ್ಮಣ್ಣ, ಹುಡುಗಿಯರ ಜೊತೆ ಪೋಲಿಯಾಟ ಆಡುವ ಅಭಿ, ಗ್ರಾಮ ಪಂಚಾಯಿತಿ ಚುನಾವಣೆ ಬಂದಾಗ ವೋಟಿಗಾಗಿ ಮಾಡುವ ಕುತಂತ್ರಗಳು, ಊರಿನ ಎಲ್ಲ ಸಮಸ್ಯೆಗೂ ಮೂಗು ತೂರಿಸಿ ಜನರನ್ನ ಬೈಯುವ ಸೆಂಚುರಿ ಗೌಡ, ಸೆಂಚುರಿ ಗೌಡರ ಕೋಪವನ್ನ 'ಕೂಲ್ಡ್' ಮಾಡುವ ಗಡ್ಡಪ್ಪ. ಇದರ ಜೊತೆಗೆ ಭೂತ, ಪ್ರೇತ, ದೇವರು ಎಂಬ ಮೂಢನಂಬಿಕೆಗಳು. ಹೀಗೆ, ಸಾಮಾನ್ಯವಾಗಿ ಒಂದು ಊರಿನಲ್ಲಿ ಏನೆಲ್ಲಾ ನಡೆಯುತ್ತೋ ಅದನ್ನೆಲ್ಲಾ ತೆರೆಮೇಲೆ ನೈಜವಾಗಿ ತೋರಿಸಲಾಗಿದೆ.

'ಸೆಂಚುರಿ ಗೌಡ-ಗಡ್ಡಪ್ಪ'ನ ಜುಗಲ್ ಬಂದಿ

'ತರ್ಲೆ ವಿಲೇಜ್' ಚಿತ್ರದಲ್ಲಿ ಬಹುದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಸೆಂಚುರಿ ಗೌಡ ಮತ್ತು ಗಡ್ಡಪ್ಪ. ಅದರಲ್ಲೂ ಸೆಂಚುರಿ ಗೌಡರ ಸೆನ್ಸಾರ್ ಲೆಸ್ ಮಾತುಗಳು ಕೇಳುಗರಿಗೆ ಸಖತ್ ಕಿಕ್ ಕೊಡುತ್ತೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ತೆರೆ ಮೇಲೆ ಇವರಿಬ್ಬರ ದರ್ಬಾರ್ ನೋಡುವುದಕ್ಕೆ ಆಕರ್ಷಣೆಯಾಗಿದೆ.

'ತಮ್ಮಣ್ಣ'ನ ನೈಜ ಅಭಿನಯ

'ದಲ್ಲಾಳಿ' ಪಾತ್ರದಲ್ಲಿ ಕಾಣಿಸಿಕೊಂಡಿರುವ ತಮ್ಮಣ್ಣ ತಮ್ಮ ನೈಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ದಲ್ಲಾಳಿ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿರುವ ತಮ್ಮಣ್ಣ 'ತರ್ಲೆ ವಿಲೇಜ್'ನಲ್ಲಿ ಮುಖ್ಯವಾದ ಪಾತ್ರ.

'ಅಭಿ'ಯ ಪೋಲಿ ಲವ್ ಸ್ಟೋರಿ

'ತಿಥಿ' ಚಿತ್ರದ ಅಭಿ ಪಾತ್ರವನ್ನೇ ಹೋಲುವಂತಹ ಪಾತ್ರದಲ್ಲಿ ಅಭಿ ಮುಂದುವರೆದಿದ್ದಾರೆ. ಈ ಚಿತ್ರದಲ್ಲಿ ಅಭಿಗೆ ಒಂದು ಲವ್ ಸ್ಟೋರಿಯಿದೆ. ಈ ಲವ್ ಸ್ಟೋರಿಯಲ್ಲಿ 'ಪೋಲಿ' ಸಂಭಾಷಣೆಗಳೇ ಹೆಚ್ಚಾಗಿದ್ದು, ಪಡ್ಡೆ ಹೈಕ್ಳಿಗೆ ಅಮಲೇರಿಸುತ್ತೆ.

ಕಂಪ್ಲೀಟ್ ಮನೋರಂಜನೆ

'ತರ್ಲೆ ವಿಲೇಜ್' ಔಟ್ ಅಂಡ್ ಔಟ್ ಮನೋರಂಜನಾತ್ಮಕ ಸಿನಿಮಾ. ಇಲ್ಲಿ ಪ್ರೇಕ್ಷಕರನ್ನ ರಂಜಿಸುವ ಉದ್ದೇಶದಿಂದ ಯಾವುದೇ ಒಬ್ಬ ಪಾತ್ರಗಳಿಗಾಗಲಿ ಅಥವಾ ಕಥೆಗೆ ಮಾತ್ರ ಆಗಲಿ ಪ್ರಾಮುಖ್ಯತೆ ಕೊಟ್ಟಿಲ್ಲ. ಪ್ರತಿಯೊಂದು ದೃಶ್ಯದಲ್ಲೂ, ಪ್ರತಿಯೊಂದು ಪಾತ್ರಗಳಿಂದಲೂ ಉತ್ತಮ ಅಭಿನಯವನ್ನ ನೋಡಬಹುದು.

'ಪೋಲಿ' ಸಂಭಾಷಣೆ

'ತರ್ಲೆ ವಿಲೇಜ್' ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ಸಂಭಾಷಣೆ. ನೈಜ ಭಾಷೆಗೆ ಒತ್ತು ಕೊಟ್ಟಿರುವ ನಿರ್ದೇಶಕರು ಕೆಲವೊಂದು ಕಡೆ ಪಂಚಿಂಗ್ ಡೈಲಾಗ್ ಗಳ ಮೂಲಕವೂ ಗಮನ ಸೆಳೆದಿದ್ದಾರೆ. ಆದ್ರೆ, ಅತಿರೇಕದ ಕೆಲ ಸಂಭಾಷಣೆ ಪ್ರೇಕ್ಷಕರಿಗೆ ಮುಜುಗರ ಉಂಟು ಮಾಡುತ್ತೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ಮುಜುಗರ ನೀಡುವ ಸಂಭಾಷಣೆ ಚಿತ್ರದಲ್ಲಿ ಕಂಡು ಬರುತ್ತೆ.

ನಿರ್ದೇಶನ ಹೇಗಿದೆ?

ಕೆ ಎಂ ರಘು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಚೊಚ್ಚಲ ಚಿತ್ರದಲ್ಲೇ ಗಮನ ಸೆಳೆಯುತ್ತಾರೆ. ಸಿನಿಮಾ ನೋಡುತ್ತಿರುವ ಪ್ರೇಕ್ಷಕರಿಗೆ ನೈಜ ಅನುಭವವಾದಂತೆ ಚಿತ್ರಕಥೆ ಮಾಡಿದ್ದಾರೆ. ಇನ್ನೂ ತಾಂತ್ರಿಕವಾಗಿ ಸಿನಿಮಾ ಹೇಳುವುದಾದರೇ, ಚಿತ್ರದಲ್ಲಿ ಹಾಡುಗಳಿಲ್ಲ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಸಂಕಲನ ಹಾಗೂ ಛಾಯಗ್ರಹಣದಲ್ಲಿ ಮತ್ತಷ್ಟು ಕೈಚಳಕ ತೋರಬಹುದಿತ್ತು.

ಫೈನಲ್ ಸ್ಟೇಟ್ ಮೆಂಟ್

ಸ್ಯಾಂಡಲ್ ವುಡ್ ಸ್ಟಾರ್ ಗಳ ಸಿನಿಮಾಗಳ ಅಬ್ಬರದಲ್ಲಿ ಮುಳುಗಿ ಹೋಗಿರುವ ಪ್ರೇಕ್ಷಕರಿಗೆ, ಹೊಸ ರೀತಿಯ ಮನರಂಜನೆ 'ತರ್ಲೆ ವಿಲೇಜ್' ಚಿತ್ರದಲ್ಲಿದೆ. ಆದ್ರೆ, 'ತರ್ಲೆ ವಿಲೇಜ್'ನವರ ತರ್ಲೆ ಕಥೆಯನ್ನ ನೋಡುವುದಕ್ಕೆ ಸ್ನೇಹಿತರ ಜೊತೆಯಲ್ಲಿ ಹೋಗುವುದು ಉತ್ತಮ.

English summary
Kannada Movie 'Tarle Village' has hit the screens today (December 16th). Actor Channegowda, Gaddappa, Thammanna, Abhi are in the lead role. The Movie is Directed By KM Raghu. Here is the complete Review of 'Tarle Village'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada