Don't Miss!
- Sports
IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Vikrant Rona Review: ಸರಣಿ ಕೊಲೆಗಳ ನಡುವೆ 'ವಿಕ್ರಾಂತ್ ರೋಣ'ನ ಒಂಟಿ ಬೇಟೆ
'ಗರಗರಗರ ಗಗ್ಗರ ಜರ್ಭ, ತಿರನಲ್ಕುರಿ ನೆತ್ತರ ಪರ್ಭ' ಸುದೀಪ್ ಧ್ವನಿಯಲ್ಲಿ ಈ ಸಂಭಾಷಣೆ ಸಹಿತ ದೃಶ್ಯ ತೆರೆಯ ಮೇಲೆ ಮೂಡುತ್ತಿದ್ದಂತೆ ಈಗಾಗಲೇ ಅರಳಿದ ಕಣ್ಣು ಇನ್ನಷ್ಟು ಅರಳಿ ರೋಮಾಂಚನ, ಕುತೂಹಲ ತುಂಬಿದ ಭೀತಿಯೊಂದು ಮನದಲ್ಲಿ ಮೂಡುತ್ತದೆ. ಈ ಭಾವ ಸಿನಿಮಾದ ಆರಂಭದಿಂದ ಕೊನೆಯ ವರೆಗೂ ಪ್ರೇಕ್ಷಕನ ಜೊತೆಗೇ ಸಾಗುತ್ತದೆ.
ಒಂದು ಒಳ್ಳೆಯ ಕತೆಯನ್ನು ಬಿಗಿಯಾದ ಚಿತ್ರಕತೆಯನ್ನಾಗಿಸಿ ಅದನ್ನು ಸುದೀಪ್‌ರ ಮಾಸ್ ಇಮೇಜನ್ನು ಬಳಸಿಕೊಂಡು, ಅದ್ಭುತ ದೃಶ್ಯಗಳ ಮೂಲಕ ತೆರೆಯ ಮೇಲೆ ಪ್ರೆಸೆಂಟ್ ಮಾಡಿದ್ದಾರೆ 'ವಿಕ್ರಾಂತ್ ರೋಣ' ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ.
ಕಮರೊಟ್ಟು ಎಂಬ ಸುಂದರವಾದ ಊರು, ಆ ಊರಿನಲ್ಲಿ ಸರಣಿ ಕೊಲೆಗಳು, ಎಲ್ಲ ಕೊಲೆಗಳಿಗೂ ಸಾಮ್ಯತೆ, ತನಿಖೆಗೆ ಬಂದ ಪೊಲೀಸ್ ಅಧಿಕಾರಿಯ ಮಂಡೆಯನ್ನೇ ಕೊಯ್ದೊಯ್ದಿದ್ದಾರೆ. ಭಯವೇ ತುಂಬಿರುವ ಆ ಊರಿಗೆ ಭಯವೇ ಗೊತ್ತಿಲ್ಲದ ಪೊಲೀಸ್ ಅಧಿಕಾರಿ ಬರುತ್ತಾನೆ ಅವನೇ ವಿಕ್ರಾಂತ್ ರೋಣ ಅಲಿಯಾಸ್ ಡೆವಿಲ್. ಇನ್‌ಪೆಕ್ಟರ್ ವಿಕ್ರಾಂತ್ ರೋಣ ಚಾಲಾಕಿ, ಶಕ್ತಿಶಾಲಿ ಆದರೆ ಆ ಕೊಲೆಗಾರನನ್ನು ಹುಡುಕುವುದು ಸುಲಭ ಸಾಧ್ಯವಲ್ಲ.
ಸಿನಿಮಾ ಆರಂಭವಾಗುತ್ತಿದ್ದಂತೆ ಕೊಲೆಗಳ ತನಿಖೆಗೆ ಇಳಿದು ಬಿಡುತ್ತಾನೆ ವಿಕ್ರಾಂತ್ ರೋಣ, ಯೂನಿಫಾರ್ಮ್ ಧರಿಸದ, ಹೋದಲೆಲ್ಲ ತನ್ನ ಮುದ್ದಾದ ಮಗಳನ್ನು ಜೊತೆಗೆ ಕರೆದುಕೊಂಡು ಹೋಗುವ ಇನ್ಸ್‌ಪೆಕ್ಟರ್‌ಗೆ ಈ ಸರಣಿ ಕೊಲೆಗಳ ಕೇಸುಗಳ ಮೇಲೆ ಬಹಳ ಆಸಕ್ತಿ. ತೀರಾ ವೈಯಕ್ತಿಕ ಆಸಕ್ತಿ ಸಹ. ವಿಕ್ರಾಂತ್ ರೋಣನ ತನಿಖೆ ಮುಂದುವರೆದಂತೆ ಸರಣಿ ಕೊಲೆಗಳ ಒಂದೊಂದೆ ಮಾಹಿತಿ ಹೊರಬೀಳುತ್ತಾ ಹೋಗುತ್ತದೆ, ಆ ಕತೆಯ ಮುಖ್ಯ ಪಾತ್ರಗಳ ಪರಿಚಯವೂ ಪ್ರೇಕ್ಷಕನಿಗೆ ಆಗುತ್ತಾ ಸಾಗುತ್ತದೆ.

ಚುರುಕಾಗಿ ಸಾಗುವ ಕತೆ
ಸಿನಿಮಾದಲ್ಲಿ ವಿಕ್ರಾಂತ್ ರೋಣನ ಕಣ್ಣು ಯಾವ ಪಾತ್ರದ ಮೇಲೆ ಬೀಳುತ್ತದೆಯೋ ಆ ಪಾತ್ರದ ಮೇಲೆ ಅನುಮಾನ ಹುಟ್ಟುತ್ತದೆ, ವಿಕ್ರಾಂತ್ ರೋಣನಿಗೆ ಮಾತ್ರವಲ್ಲ ಪ್ರೇಕ್ಷಕನಿಗೂ ಹಲವರ ಮೇಲೆ ಅನುಮಾನ ಹುಟ್ಟುತ್ತದೆ, ಅನುಮಾನಕ್ಕೆ ಇಂಬುಕೊಡಬಲ್ಲ ಘಟನೆಗಳು ನಡೆಯುತ್ತವೆ. ಅನುಮಾನದ ಆಟ ಅದೆಷ್ಟು ಗಾಢವಾಗುತ್ತಾ ಹೋಗುತ್ತದೆಯೆಂದರೆ ಮಧ್ಯಂತರದ ವೇಳೆಗೆ ಸ್ವತಃ ವಿಕ್ರಾಂತ್ ರೋಣನ ಮೇಲೆ ಅನುಮಾನ ಶುರುವಾಗುತ್ತದೆ. ವಿಕ್ರಾಂತ್ ರೋಣನ ಮೇಲೆ ಅನುಮಾನ ಸೃಷ್ಟಿಯಾಗುವ ದೃಶ್ಯವಂತೂ ಪ್ರೇಕ್ಷಕನ ತಲೆ ತಿರುಗುವಂತೆ ಮಾಡುತ್ತದೆ. ಅಲ್ಲಿಗೆ ಸರಿಯಾಗಿ ಸಿನಿಮಾದ ಅರ್ಧ ಭಾಗ ಮುಗಿಯುತ್ತದೆ. ದ್ವಿತೀಯಾರ್ಧದಲ್ಲಿ ತನಿಖೆ ಇನ್ನಷ್ಟು ಚುರುಕುಗೊಂಡು ಪ್ರಕರಣದ ಬಗ್ಗೆ ನಿಧಾನಕ್ಕೆ ಸ್ಪಷ್ಟತೆ ದೊರಕಲು ಆರಂಭವಾಗುತ್ತದೆ. ಅಂತಿಮವಾಗಿ ನಿಜವಾದ ಕೊಲೆಗಾರ ಎದುರು ಬಂದಾಗ ಪ್ರೇಕ್ಷಕನಿಗೆ ಶಾಕ್.

ವಿಕ್ರಾಂತ್ ರೋಣನಾಗಿ ಸುದೀಪ್ ಅಬ್ಬರಿಸಿದ್ದಾರೆ
ವಿಕ್ರಾಂತ್ ರೋಣನಾಗಿ ಸುದೀಪ್ ಅಬ್ಬರಿಸಿದ್ದಾರೆ. ಅವರ ಸ್ಟೈಲ್, ಸಂಭಾಷಣೆಗಳು, ಫೈಟ್ ದೃಶ್ಯಗಳು ಅಭಿಮಾನಿಗಳು ಶಿಳ್ಳೆ ಹೊಡೆವಂತೆ ಮಾಡುತ್ತವೆ. ಎಲ್ಲ ಪಾತ್ರಗಳು ಕತೆಯ ಕಾರಣಕ್ಕೆ ಮುಖ್ಯವಾದರೂ ಲೈಮ್‌ಲೈಟ್ ಇರುವುದು ವಿಕ್ರಾಂತ್ ರೋಣ ಮೇಲೆ ಮಾತ್ರ. ನಿರೂಪ್ ಭಂಡಾರಿಯ ನಟನೆಯೂ ಚೆನ್ನಾಗಿದೆ. ನಟಿ ನೀತಾ ಅಶೋಕ್ ತಮ್ಮ ಮೊದಲ ಸಿನಿಮಾದಲ್ಲಿಯೇ ಅನುಭವಿಯಂತೆ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಮಿಲನಾ ನಾಗರಾಜ್ ಸಹ ಇದ್ದಾರೆ. ಇನ್ನು ಗಡಂಗ್ ರಕ್ಕಮ್ಮ ಹಾಡಿನಲ್ಲಿ ಮಿಂಚಿದ್ದಾರೆ ಜಾಕ್ವೆಲಿನ್ ಫರ್ನಾಂಡೀಸ್.

ಡಿಓಪಿ ವಿಲಿಯಮ್ ಕಾರ್ಯ ಅದ್ಭುತ
ಸುದೀಪ್ ಹೊರತಾಗಿಯೂ ಸಿನಿಮಾದಲ್ಲಿ ನಾಯಕರಿದ್ದಾರೆ. ಅವರೇ ಕ್ಯಾಮೆರಾಮನ್ ವಿಲಿಯಮ್ ಡೇವಿಡ್. ಕಲಾ ನಿರ್ದೇಶಕ ಶಿವಕುಮಾರ್ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್. ಮಿಲಿಯಮ್ ಡೇವಿಡ್ ಈ ಸಿನಿಮಾವನ್ನು ಸೆರೆಹಿಡಿದಿರುವ ರೀತಿ ಅದ್ಭುತ. ಸಿನಿಮಾದ ದೃಶ್ಯಗಳಲ್ಲಿ ಗುಣಮಟ್ಟ ಎದ್ದು ಕಾಣುತ್ತದೆ. 'ವಿಕ್ರಾಂತ್ ರೋಣ' ಸಿನಿಮಾವನ್ನು ವಿಶ್ಯುಲ್ ಟ್ರೀಟ್ ಅನ್ನಾಗಿಸಿದ್ದಾರೆ ವಿಲಿಯಮ್ ಡೇವಿಡ್.

ಅದ್ಭುತವಾದ ಸೆಟ್‌ಗಳನ್ನು ಹಾಕಿದ್ದಾರೆ ಕಲಾ ನಿರ್ದೇಶಕ
ಇನ್ನು ಸಿನಿಮಾದ ಬಹುತೇಕ ಚಿತ್ರೀಕರಣ ಸೆಟ್‌ಗಳಲ್ಲಿಯೇ ನಡೆದಿದ್ದು ಗ್ರೇ ಶೇಡ್ ಎದ್ದು ಕಾಣುವಂತೆ ಅದ್ಭುತವಾದ ಸೆಟ್‌ಗಳನ್ನು ಕಲಾ ನಿರ್ದೇಶಕ ಶಿವಕುಮಾರ್ ಹಾಕಿದ್ದಾರೆ. ಹಿಂದೆ ಕನ್ನಡ ಸಿನಿಮಾಗಳಲ್ಲಿ ನೋಡದ ರೀತಿಯ ಪರಿಸರವನ್ನು ಶಿವಕುಮಾರ್ ಸೃಷ್ಟಿಸಿದ್ದಾರೆ. ಕಾಡಿನ ಸೆಟ್‌ಗಳಂತೂ ನಿಜ ಕಾಡಿನ ಭಯಾನಕತೆಯನ್ನು ಮೂಡಿಸುತ್ತವೆ. ಜೊತೆಗೆ ಅಜನೀಶ್ ಲೋಕೇಶ್ ಅವರ ಹಿನ್ನೆಲೆ ಸಂಗೀತ, ಪ್ರೇಕ್ಷಕ ಕತೆಯಲ್ಲಿ ಕಳೆದು ಹೋಗುವಂತೆ ಮಾಡುತ್ತದೆ. ಹಾಡುಗಳಂತೂ ಯೂಟ್ಯೂಬ್‌ನಲ್ಲಿ ಈಗಾಗಲೇ ಹಿಟ್ ಆಗಿವೆಯಾದ್ದರಿಂದ ಅದರ ಬಗ್ಗೆ ವಿಶೇಷ ವಿವರಣೆ ಬೇಕಿಲ್ಲ.

ಜಾಣತನದಿಂದ ಚಿತ್ರಕತೆ ಹೆಣೆದಿದ್ದಾರೆ ಅನುಪ್
ಇನ್ನು ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ ಬಹಳ ಜಾಣತನದಿಂದ ಚಿತ್ರಕತೆ ಹೆಣೆದಿದ್ದಾರೆ. ಪ್ರೇಕ್ಷಕನಲ್ಲಿ ಅನುಮಾನಗೇಳುವ ರೀತಿ ಸನ್ನಿವೇಶಗಳನ್ನು ಸೃಷ್ಟಿಸಿ ಅದಕ್ಕೆ ದ್ವೀತೀಯಾರ್ಧದಲ್ಲಿ ಉತ್ತರ ಕೊಡುತ್ತಾ ಸಾಗುತ್ತಾರೆ. ಸುದೀಪ್‌ಗೇಕೆ ಪ್ರಕರಣದ ಮೇಳೆ ಅಷ್ಟೋಂದು ಕಾಳಜಿ, ಮಗಳನ್ನೇಕೆ ಕರೆದುಕೊಂಡು ಹೋಗುತ್ತಾರೆ, ಒಮ್ಮೊಮ್ಮೆ ಮಗಳನ್ನು ಒಂಟಿಯಾಗಿ ಬಿಟ್ಟು ಹೋಗಿಬಿಡುವುದೇಕೆ? ಸುದೀಪ್ ಬಳಿ ಆ ಹಳೆಯ ಶಾಲಾ ಚಿತ್ರ ಏಕಿರುತ್ತದೆ? ಇನ್ನೂ ಕೆಲವು ಇಂಥಹಾ ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರ ಸಿಗುತ್ತದೆ. ಜೊತೆಗೆ ಕೊಲೆಗಾರ ಯಾರು ಎಂಬುದಕ್ಕೂ ಉತ್ತರ ಸಿಗುತ್ತದೆ.
Recommended Video

ಗೊಂದಲ ಸೃಷ್ಟಿಸಲೆಂದೇ ಸೃಷ್ಟಿಸಿದ ದೃಶ್ಯಗಳಿವೆ
ಆದರೆ ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ವಿನಾಕರಾಣ ಅಥವಾ ಪ್ರೇಕ್ಷನನ್ನು ಗೊಂದಲಕ್ಕೆ ಸಿಕ್ಕಿಸಲೆಂದೇ ಸೃಷ್ಟಿಸಿದ್ದಾರೆ ನಿರ್ದೇಶಕ. ಸುದೀಪ್ ಕೈಗೆ ಗಾಯವಾಗಿದೆ ಎಂದು ನಾಯಕಿ ಗುರುತಿಸುತ್ತಾಳೆ ಆದರೆ ಆ ಗಾಯದ ಬಗ್ಗೆ ಸ್ಪಷ್ಟನೆ ಸಿಗುವುದಿಲ್ಲ. ಮಧ್ಯಂತರದಲ್ಲಿ ಬರುವ ಟ್ವಿಸ್ಟ್ ಕೇವಲ ಪ್ರೇಕ್ಷಕನ ದಾರಿತಪ್ಪಿಸಲು ಎನಿಸುತ್ತದೆ, ಆ ಟ್ವಿಸ್ಟ್‌ಗೆ ಕೊಡುವ ಕಾರಣಕ್ಕೆ ಲಾಜಿಕ್ ಇಲ್ಲ. ಕಾನ್ಸ್‌ಟೇಬಲ್ ಒಬ್ಬ ಕತ್ತಲಲ್ಲಿ ನಡೆದು ಹೋಗುವುದನ್ನು ನಾಯಕಿ ನೋಡುತ್ತಾಳೆ, ಆತ ಅಲ್ಲಿಗೆ ಬಂದಿದ್ದೇಕೆ? ಗೊತ್ತಿಲ್ಲ. ಪ್ರೇಕ್ಷಕನ ಮನದಲ್ಲಿ ಅನುಮಾನ ಅಥವಾ ಗೊಂದಲ ಮೂಡಿಸಲಷ್ಟೆ ಇಂಥಹಾ ಕೆಲವು ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಹಾಗೂ ಸಿನಿಮಾದ ಕ್ಲೈಮ್ಯಾಕ್ಸ್ ಇನ್ನಷ್ಟು ಪವರ್‌ಫುಲ್ ಆಗಿರಬಹುದಿತ್ತು ಎಂದೂ ಎನಿಸುತ್ತದೆ. ಆದರೆ ಸಿನಿಮಾವನ್ನು ಒಟ್ಟಾರೆಯಾಗಿ ಗಮನಿಸಿದಾಗ ಈ ಅಂಶಗಳು ನಗಣ್ಯ. ಒಟ್ಟಾರೆಯಾಗಿ 'ವಿಕ್ರಾಂತ್ ರೋಣ' ನೋಡಬೇಕಾದ ಸಿನಿಮಾ.