For Quick Alerts
  ALLOW NOTIFICATIONS  
  For Daily Alerts

  Arjun Gowda Movie Review: 'ಅರ್ಜುನ್ ಗೌಡ', ಕೊಲ್ಲೋ ಕುತೂಹಲ!

  |

  ಯೋಚನೆ ಒಳ್ಳೆಯದಿದ್ದರೆ ಮಾತ್ರ ಸಾಲದು ಆ ಯೋಚನೆಯನ್ನು ಕತೆಯ ಚೌಕಟ್ಟಿನೊಳಗೆ ಬಂಧಿಸಿ ಅದಕ್ಕೆ ಸಿನಿಮಾ ರೂಪ ನೀಡಿ ಪ್ರೇಕ್ಷಕರಿಗೆ ದಾಟಿಸುವುದು ಬಹಳ ಅವಶ್ಯಕ. ಪ್ರಜ್ವಲ್ ದೇವರಾಜ್ ನಟಿಸಿ, ಲಕ್ಕಿ ಶಂಕರ್ ನಿರ್ದೇಶನ ಮಾಡಿರುವ 'ಅರ್ಜುನ್ ಗೌಡ' ಸಿನಿಮಾದ ಆರಂಭದಲ್ಲಿ ಗಾಂಧಿ ಹತ್ಯೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರುಗಳ ಹತ್ಯೆಯ ಉಲ್ಲೇಖವನ್ನು ನಿರ್ದೇಶಕರು ಮಾಡುತ್ತಾರೆ. ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿ ನರೇಂದ್ರ ದಾಬೋಳ್ಕರ್ ಹತ್ಯೆಯ ಬಗ್ಗೆಯೂ ಮಾತನಾಡುತ್ತಾರೆ. ವ್ಯಕ್ತಿಯನ್ನು ಕೊಲ್ಲುವ ಮೂಲಕ ವಿಚಾರವನ್ನು ಕೊಲ್ಲುವ ಈ ಘಟನೆಗಳೇ ಈ ಸಿನಿಮಾ ಮಾಡಲು ಪ್ರೇರಣೆ ಎನ್ನುತ್ತಾರೆ ನಿರ್ದೇಶಕ. ಇದು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುತ್ತದೆ, ಒಂದು ಘನವಾದ ವಿಷಯವಸ್ತುವುಳ್ಳ ಸಿನಿಮಾ ನೋಡಲು ಸಿಗುತ್ತದೆ ಎಂಬ ನಿರೀಕ್ಷೆ ಮೂಡಿಸುತ್ತದೆ. ಆದರೆ ಸಿನಿಮಾ ಆರಂಭವಾದ 15 ನಿಮಿಷದಲ್ಲಿಯೇ ಈ ಸಿನಿಮಾದಲ್ಲಿ ಅಂಥ ವಿಶೇಷ ಪ್ರಯತ್ನವೇನೂ ಇಲ್ಲ ಎಂಬುದು ಗೊತ್ತಾಗಿಬಿಡುತ್ತದೆ.

  ಸಿನಿಮಾ ಆರಂಭವಾಗುವುದು ನಾಯಕ 'ಅರ್ಜುನ್ ಗೌಡ' ಮಹಿಳೆಯೊಬ್ಬಾಕೆಯನ್ನು ಶೂಟ್ ಮಾಡುವ ಮೂಲಕ. ಆ ಮಹಿಳೆ ಆತನ ತಾಯಿಯೇ! ಅರ್ಜುನ್ ಗೌಡ ತನ್ನ ತಾಯಿಯನ್ನೇ ಯಾಕೆ ಕೊಲ್ಲಲು ಯತ್ನಿಸಿದ, ಅಥವಾ ಕೊಲ್ಲುವ ಸಂದರ್ಭ ಸೃಷ್ಟಿಯಾಯಿತು, ನಿಜಕ್ಕೂ ಆತನೇ ತನ್ನ ತಾಯಿಯ ಮೇಲೆ ಗುಂಡು ಹಾರಿಸಿದನಾ? ಇತರೆ ಅಂಶಗಳು ಪ್ರೇಕ್ಷಕನಿಗೆ ಸ್ಪಷ್ಟವಾಗುವುದು ಸಿನಿಮಾದ ಅಂತ್ಯದಲ್ಲಿ. ಸಿನಿಮಾದ ಮೊದಲ ಹಾಗೂ ಕೊನೆಯ ಕಥಾ ಬಿಂದು ನಡುವೆ ಹಲವು ದೃಶ್ಯಗಳು ಬಂದು ಹೋಗುತ್ತವೆ. ಆ ದೃಶ್ಯಗಳೆಲ್ಲವೂ ನಾಯಕ ಈ ಕುಕೃತ್ಯ ಮಾಡಲು ಕಾರಣವನ್ನು ವಿವರಿಸುವ ಯತ್ನ ಮಾಡುತ್ತವೆ.

  ಹಾಗೆ ನೋಡಿದರೆ ಅರ್ಜುನ್ ಗೌಡ ತನ್ನ ತಾಯಿಯನ್ನು ಕೊಲ್ಲಲು ಯತ್ನಿಸಿದ್ದಕ್ಕೆ ಗಟ್ಟಿ ಕಾರಣವೇ ಇಲ್ಲ. ಆದರೆ ಅದನ್ನೇ ಕತೆಯ ಮುಖ್ಯ ಧಾತುವನ್ನಾಗಿಸಿಕೊಂಡು ಸಿನಿಮಾ ಹೆಣೆದಿದ್ದಾರೆ ನಿರ್ದೇಶಕ. ಮುಖ್ಯ ಎಳೆಯೇ ಪೇಲವವಾಗಿರಲು ಇತರೆ ದೃಶ್ಯಗಳು ಗಟ್ಟಿಯಾಗಿರುತ್ತವೆ ಎಂದು ಪ್ರೇಕ್ಷಕ ಊಹಿಸುವಂತಿಲ್ಲ.

  Prajwal Devaraj Starer Arjun Gowda Kannada movie review
  ಒಂದು ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಎಲ್ಲವನ್ನೂ ನಿರ್ದೇಶಕರು ಕತೆಯಲ್ಲಿ ಸೇರಿಸಿದ್ದಾರೆ. ಹೀರೋನ ಮಾಸ್ ಎಂಟ್ರಿ, ತಾಯಿ ಸೆಂಟಿಮೆಂಟ್, ಪ್ರೀತಿ, ಭಗ್ನ ಪ್ರೇಮ, ನಾಯಕ ತಿರುಗಿಬೀಳುವುದು, ಸೇಡು ತೀರಿಸಿಕೊಳ್ಳುವುದು, ಹಾಸ್ಯಕ್ಕೆ ಪ್ರತ್ಯೇಕ ಟ್ರ್ಯಾಕ್, ಒಂದು ಹೀರೋ ಇಂಟ್ರೊಡಕ್ಷನ್ ಹಾಡು, ಎರಡು ಯುಗಳ ಗೀತೆ, ಒಂದು ಎಣ್ಣೆ ಹಾಡು ಹೀಗೆ ಎಲ್ಲವೂ ಇದೆ, ಎಲ್ಲವೂ ಇದ್ದರು ಸಿನಿಮಾ ಒಟ್ಟಾರೆಯಾಗಿ ಪ್ರೇಕ್ಷಕನನ್ನು ಪೂರ್ಣವಾಗಿ ಹಿಡಿದಿಟ್ಟುಕೊಳ್ಳುವುದಿಲ್ಲ. ಪ್ರೀತಿ, ತಾಯಿ ಸೆಂಟಿಮೆಂಟ್, ಸೇಡಿನ ಕತೆ, ಹಾಸ್ಯ ಯಾವುದನ್ನೂ ಒತ್ತಿ ಹೇಳಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ಎಲ್ಲವೂ ಟಚ್ ಆಂಡ್ ಗೋ.

  ಸಿನಿಮಾದಲ್ಲಿನ ಕಲಾವಿದರು ಸಹ ತಮಗೆ ಕೊಟ್ಟ ಕೆಲಸವನ್ನು ಮುಗಿಸಿಕೊಟ್ಟಿದ್ದಾರಷ್ಟೆ. ಒಳ್ಳೆಯ ನಟನೆಯನ್ನು ನೀಡಲು ಕತೆಯೇ ಅವಕಾಶ ನೀಡದಿದ್ದಾಗ ಪ್ರಜ್ವಲ್ ದೇವರಾಜ್, ಸ್ಪರ್ಶ ರೇಖ, ಸಾಧುಕೋಕಿಲ ಅಂಥ ಪ್ರತಿಭಾನ್ವಿತರೂ ಹೆಚ್ಚಿಗೆ ಏನೂ ಮಾಡಲಾಗದು. ಆದರೂ ಪ್ರಜ್ವಲ್ ದೇವರಾಜ್, ನಾಯಕಿ ಪ್ರಿಯಾಂಕಾ ತಿಮ್ಮೇಶ್, ಸ್ಪರ್ಶ ರೇಖ, ಸಾಧು ಕೋಕಿಲ ಅವರುಗಳ ನಟನೆ ಗಮನ ಸೆಳೆಯುತ್ತದೆ.

  ಈ ಸಿನಿಮಾದಲ್ಲಿ ಸಾಧು ಕೋಕಿಲ ಅವರಿಗೆ ಎರಡು ಕೆಲಸ ನೀಡಲಾಗಿದೆ. ಹಾಸ್ಯದ ಜೊತೆಗೆ ಕಾರು ಬ್ರ್ಯಾಂಡ್ ಒಂದರ ಪ್ರಚಾರಕ್ಕೂ ಅವರನ್ನು ಬಳಸಿಕೊಳ್ಳಲಾಗಿದೆ. ಹಾಸ್ಯ ದೃಶ್ಯಗಳ ಮೇಲೆ ನಿರ್ದೇಶಕರು ಹೆಚ್ಚಿನ ಗಮನ ವಹಿಸಿದಂತಿಲ್ಲ. ಹೇಗಾದರು ಮಾಡಿ, ಏನಾದರೂ ಮಾತನಾಡಿ ಒಟ್ಟಿನಲ್ಲಿ ನಗಿಸಿ ಎಂದು ನಟರಿಗೇ ಜವಾಬ್ದಾರಿ ಬಿಟ್ಟಂತಿದೆ. ನಗಿಸಲು ಸಾಧು ಕೋಕಿಲ ಶಕ್ತಿಮೀರಿ ಯತ್ನಿಸಿದ್ದಾರೆ ಎಂದಷ್ಟೆ ಹೇಳಬಹುದು.

  ಸಿನಿಮಾದ ಹಾಡುಗಳು ಚೆನ್ನಾಗಿವೆ. ಕೆಲವಂತೂ ಗುನುಗುವಂತಿವೆ. ಎಣ್ಣೆ ಹಾಡು ಇತ್ತೀಚಿನ ಬಹುತೇಕ ಮಾಸ್ ಸಿನಿಮಾಗಳಲ್ಲಿ ಸಾಮಾನ್ಯ ಎಂಬಂತಾಗಿ, ಕ್ಲೀಷೆ ಎನಿಸಿಕೊಳ್ಳುತ್ತಿದೆ. ಕ್ಯಾಮೆರಾ ಕೆಲಕ್ಕೆ ವಿಶೇಷ ಮೆನ್ಷನ್ ಅಗತ್ಯವೇನಿಲ್ಲ. ಆದರೆ ಫೈಟ್‌ಗಳು ಚೆನ್ನಾಗಿವೆ. ಪ್ರಜ್ವಲ್ ಸಹ ಫೈಟ್‌ ದೃಶ್ಯಗಳಲ್ಲಿ ಮಿಂಚುತ್ತಾರೆ. ಹಿನ್ನೆಲೆ ಸಂಗೀತವೂ ಪರ್ವಾಗಿಲ್ಲ. ಕೋಟಿ ನಿರ್ಮಾಪಕ ರಾಮು ಅವರ ನಿರ್ಮಾಣದ ಕೊನೆಯ ಸಿನಿಮಾ ಎಂಬ ಪ್ರೀತಿಯಿಂದ ಒಂದು ಬಾರಿ ನೋಡಲು ಅಡ್ಡಿಯಿಲ್ಲ.

  Rating:
  2.5/5

  English summary
  Prajwal Devaraj starer Arjun Gowda Kannada movie review. Movie produced by Ramu and Malashree directed by Lucky Shankar.
  Friday, December 31, 2021, 17:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X