»   » ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ

ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ

Posted By:
Subscribe to Filmibeat Kannada

ನೀವು ಹಾರರ್ ಚಿತ್ರಗಳನ್ನ ಇಷ್ಟ ಪಡುವವರಾದರೆ.. ನಿಮಗೆ ಭೀಕರ, ಭಯಾನಕ ಅನುಭವ ಆಗ್ಬೇಕು ಅಂತಿದ್ದರೆ.. ನಿಮ್ಮ ಗುಂಡಿಗೆ ಗಟ್ಟಿ ಇದ್ದರೆ.. ಮಿಸ್ ಮಾಡದೆ 'ಮಮ್ಮಿ save me' ಚಿತ್ರವನ್ನ ನೋಡಿ. ಯಾಕಂದ್ರೆ, ಮೊದಲ ದೃಶ್ಯದಿಂದ ಹಿಡಿದು ಕ್ಲೈಮ್ಯಾಕ್ಸ್ ವರೆಗೂ ನೀವು ಅಕ್ಷರಶಃ ಬೆಚ್ಚಿ ಬೀಳುವುದು ಗ್ಯಾರೆಂಟಿ.


Rating:
4.5/5

ಚಿತ್ರ : 'ಮಮ್ಮಿ save me'
ನಿರ್ದೇಶಕ : ಲೋಹಿತ್.ಎಚ್.
ನಿರ್ಮಾಪಕ : ಕೆ.ರವಿಕುಮಾರ್
ಸಂಗೀತ ನಿರ್ದೇಶನ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ಎಚ್.ಸಿ.ವೇಣು
ಸಂಕಲನ : ಸಿ.ರವಿಚಂದ್ರನ್
ತಾರಾಗಣ : ಪ್ರಿಯಾಂಕಾ ಉಪೇಂದ್ರ, ಯುವಿನಾ ಪಾರ್ಥವಿ, ಐಶ್ವರ್ಯ ಸಿಂಧೋಗಿ, ಮಧುಸೂದನ್, ಸಂದೀಪ್, ವತ್ಸಲ ಮೋಹನ್ ಮತ್ತು ಇತರರು.
ಬಿಡುಗಡೆ : ಡಿಸೆಂಬರ್ 2, 2016


ಕಥಾಹಂದರ

ಅದು ಗೋವಾದ ಭವ್ಯ ಬಂಗಲೆ. ಅಲ್ಲಿರುವುದು ಕೇವಲ ನಾಲ್ಕು ಮಂದಿ. ಏಳು ತಿಂಗಳ ತುಂಬು ಗರ್ಭಿಣಿ ಪ್ರಿಯಾ (ಪ್ರಿಯಾಂಕಾ ಉಪೇಂದ್ರ), ಆಕೆಯ ತಂಗಿ ಸ್ನೇಹ (ಐಶ್ವರ್ಯ ಸಿಂಧೋಗಿ), ತಾಯಿ ಮತ್ತು ಪುತ್ರಿ ಕ್ರಿಯಾ (ಯುವಿನಾ ಪಾರ್ಥವಿ). ಅಪಘಾತದಲ್ಲಿ ಪ್ರಿಯಾ ಪತಿ ತೀರಿಕೊಂಡ ಬಳಿಕ, ಪತಿಯ ಆಸೆಯಂತೆ ಗೋವಾಗೆ ಶಿಫ್ಟ್ ಆಗುವ ಈ ಕುಟುಂಬಕ್ಕೆ, ಅಲ್ಲಿ ಎದುರಾಗುವ ಭೀಕರ, ಭಯಂಕರ ಸನ್ನಿವೇಶಗಳೇ 'ಮಮ್ಮಿ save me' ಕಥಾಹಂದರ.


ಜಾಸ್ತಿ ಕಥೆ ಹೇಳಲ್ಲ.!

ಗೋವಾ ವಿಲ್ಲಾದಲ್ಲಿರುವ ಆತ್ಮ ಯಾವುದು? ಅದು ಪ್ರಿಯಾ ಕುಟುಂಬಕ್ಕೆ ಕಾಟ ಕೊಡುವುದಾದರೂ ಯಾಕೆ? ಎಂಬುದೇ 'ಮಮ್ಮಿ save me' ಚಿತ್ರದ ಸಸ್ಪೆನ್ಸ್. ಅದನ್ನ ನಾವು ಲೀಕ್ ಮಾಡಲ್ಲ. ಚಿತ್ರಮಂದಿರದಲ್ಲಿ ನೀವು ಸಿನಿಮಾ ನೋಡಿ ಥ್ರಿಲ್ ಆಗಿ....


ನೈಜ ಘಟನೆ ಆಧಾರಿತ

ವಿದೇಶದಲ್ಲಿ ನಡೆದಿತ್ತು ಎನ್ನಲಾದ ಕೆಲವೊಂದು ನೈಜ ಘಟನೆಗಳನ್ನಿಟ್ಟುಕೊಂಡು ಯುವ ಪ್ರತಿಭೆ ಲೋಹಿತ್ 'ಮಮ್ಮಿ save me' ಚಿತ್ರಕಥೆಯನ್ನು ರಚಿಸಿದ್ದಾರೆ.


ಪ್ರಿಯಾಂಕಾ ಉಪೇಂದ್ರ ನಟನೆ ಹೇಗಿದೆ?

ಏಳು ತಿಂಗಳ ತುಂಬು ಗರ್ಭಿಣಿ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟನೆ ನೈಜವಾಗಿದೆ. ತಾವು ಭಯ ಭೀತರಾಗುವುದಲ್ಲದೆ ಪ್ರೇಕ್ಷಕರನ್ನೂ ಬೆಚ್ಚಿ ಬೀಳಿಸುವಲ್ಲಿ ಪ್ರಿಯಾಂಕಾ ಉಪೇಂದ್ರ ಯಶಸ್ವಿ ಆಗಿದ್ದಾರೆ. ಹೀಗಾಗಿ ಅವರಿಗೆ ಮುಲಾಜಿಲ್ಲದೇ ಫುಲ್ ಮಾರ್ಕ್ಸ್ ಕೊಡಲೇಬೇಕು.


ಮುದ್ದು ಪುಟಾಣಿ ಯುವಿನಾ ಪಾರ್ಥವಿ

ಪುಟಾಣಿ ಪ್ರತಿಭೆ ಯುವಿನಾ ಪಾರ್ಥವಿ ನಟನೆ ಕೂಡ ಅಚ್ಚುಕಟ್ಟಾಗಿದೆ.


ಉಳಿದವರು...

ಪ್ರಿಯಾ ತಂಗಿ ಸ್ನೇಹ ಪಾತ್ರಧಾರಿ ಐಶ್ವರ್ಯ ಸಿಂಧೋಗಿ, ವತ್ಸಲ ಮೋಹನ್, ಮಧುಸೂದನ್ ಮತ್ತು ಸಂದೀಪ್ ನಟನೆ ಬಗ್ಗೆ ತುಟಿ ಎರಡು ಮಾಡುವ ಹಾಗೇ ಇಲ್ಲ. ಎಲ್ಲರೂ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ.


'ಮಮ್ಮಿ' ಮೇಕಿಂಗ್ ಸೂಪರ್

'ಮಮ್ಮಿ save me' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಅದು ಎಚ್.ಸಿ.ವೇಣು ರವರ ಹೊನಲು-ಬೆಳಕಿನ ಆಟದ ಛಾಯಾಗ್ರಹಣ. ಒಂದೇ ಮನೆಯಲ್ಲಿ ಬಹುತೇಕ ಚಿತ್ರದ ಚಿತ್ರೀಕರಣ ನಡೆದಿದ್ದರೂ, ಒಂದೊಂದು ಫ್ರೇಮ್ ಕೂಡ ಭಿನ್ನ-ವಿಭಿನ್ನವಾಗಿದೆ. ಕ್ಯಾಮರಾ ಆಂಗಲ್ ಗಳಿಂದಲೇ ಪ್ರೇಕ್ಷಕರ ಮೊಗದಲ್ಲಿ ಬೆವರು ತರಿಸುತ್ತಾರೆ ವೇಣು.


ಪೂರಕವಾಗಿರುವ ಬ್ಯಾಕ್ ಗ್ರೌಂಡ್ ಸ್ಕೋರ್

ಅಜನೀಶ್ ಲೋಕನಾಥ್ ಬ್ಯಾಕ್ ಗ್ರೌಂಡ್ ಸ್ಕೋರ್ 'ಮಮ್ಮಿ save me' ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಲೈವ್ ಇನ್ಸ್ಟ್ರುಮೆಂಟ್ಸ್ ಬಳಸಿ ರೀ ರೆಕಾರ್ಡಿಂಗ್ ಮಾಡಿರುವ ಅಜನೀಶ್ ಲೋಕನಾಥ್ ಶ್ರಮ ತೆರೆಮೇಲೆ ಎದ್ದು ಕಾಣುತ್ತೆ.


ಮ್ಯಾಜಿಕ್ ಮಾಡಿದ್ದಾರೆ ಲೋಹಿತ್

ಎಂಥೆಂತ ಹಾಲಿವುಡ್ ಹಾರರ್ ಸಿನಿಮಾಗಳನ್ನ ಅರೆದು ಕುಡಿದಿರುವ ನಮ್ಮ ಕನ್ನಡ ಸಿನಿ ಪ್ರೇಕ್ಷಕರನ್ನ ಗಡಗಡ ನಡುಗಿಸುವುದು ಸುಲಭದ ಮಾತೇ ಅಲ್ಲ. ಆದರೂ, ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರನ್ನ ಬೆಚ್ಚಿ ಬೀಳಿಸುವಲ್ಲಿ ಲೋಹಿತ್ ಸಕ್ಸಸ್ ಆಗಿದ್ದಾರೆ ಅಂದ್ರೆ ನೀವೇ ಊಹಿಸಿ, ಲೋಹಿತ್ ಮ್ಯಾಜಿಕ್ ಹೇಗಿರಬಹುದು ಅಂತ.!


ಮೊದಲ ಪ್ರಯತ್ನದಲ್ಲಿಯೇ ಯಶಸ್ವಿ

ನಿಜ ಹೇಳ್ಬೇಕಂದ್ರೆ, 'ಮಮ್ಮಿ save me' ಚಿತ್ರದಲ್ಲಿರುವುದು ಸಿಂಪಲ್ ಕಥೆ. ಆದ್ರೆ, ಅದನ್ನ ತೆರೆಮೇಲೆ ಪರಿಣಾಮಕಾರಿಯಾಗಿ ತೋರಿಸುವಲ್ಲಿ ನಿರ್ದೇಶಕ ಲೋಹಿತ್ ಜಾಣ್ಮೆ ಮೆಚ್ಚುವಂಥದ್ದು. ಪ್ರೇಕ್ಷಕರ ಪ್ರೋತ್ಸಾಹ ಸಿಕ್ಕರೆ ಲೋಹಿತ್ ಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ಇದೆ.


ಕುಂದು-ಕೊರತೆ ಕಣ್ಣಿಗೆ ಕಾಣಲ್ಲ.!

ಇಡೀ ಸಿನಿಮಾನ ಸೀಟಿನ ತುದಿಗೆ ಕೂತು ನೋಡುವಂತೆ ಲೋಹಿತ್ ಚಿತ್ರಕಥೆ ಹೆಣೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರೇಕ್ಷಕರನ್ನ ಬಿಟ್ಟೂ ಬಿಡದೆ ಹೆದರಿಸುತ್ತಾರೆ. ಗ್ರಾಫಿಕ್ಸ್ ವರ್ಕ್ ಇನ್ನೂ ನೈಜವಾಗಿರಬಹುದಿತ್ತು ಅಂತ ಅನಿಸುವುದು ಬಿಟ್ಟರೆ, ಚಿತ್ರದಲ್ಲಿ ಹೇಳಿಕೊಳ್ಳುವಂತಹ ನೆಗೆಟಿವ್ ಅಂಶ ಇಲ್ಲ. ಅಷ್ಟರಮಟ್ಟಿಗೆ ಸಿ.ರವಿಚಂದ್ರನ್ ಸಂಕಲನ ಅಚ್ಚುಕಟ್ಟಾಗಿದೆ.


ಒಂದೊಳ್ಳೆ ಪ್ರಯತ್ನ

ಸುಖಾಸುಮ್ಮನೆ ಹಾಡುಗಳನ್ನು ತುರುಕದೆ, ಬೇಕು ಅಂತ ಸೆಂಟಿಮೆಂಟ್ ದೃಶ್ಯಗಳನ್ನು ಸೇರಿಸದೆ, ಹಾರರ್ ಚಿತ್ರವೊಂದಕ್ಕೆ ಏನೇನು ಬೇಕೋ...ಅದಕ್ಕೆ ಕುಂದು-ಕೊರತೆ ಮಾಡದೆ, ಗಟ್ಟಿ ಗುಂಡಿಗೆ ಇರುವವರನ್ನೂ ಅಲುಗಾಡಿಸುವ ಒಂದೊಳ್ಳೆ ಸಿನಿಮಾ 'ಮಮ್ಮಿ save me'.


ಹಾಲಿವುಡ್ ಸಿನಿಮಾಗಳನ್ನೂ ಮೀರಿಸುವ 'ಮಮ್ಮಿ'

ಹಾರರ್ ಸಿನಿಮಾಗಳಂದ್ರೆ ಹಾಲಿವುಡ್ ನತ್ತ ಅನೇಕರು ಮುಖ ಮಾಡುತ್ತಾರೆ. ಆದ್ರೆ, ಹಾಲಿವುಡ್ ಸಿನಿಮಾಗಳನ್ನೇ ಮೀರಿಸುವ ಥ್ರಿಲ್ಲಿಂಗ್ ಅನುಭವ 'ಮಮ್ಮಿ save me' ಚಿತ್ರದಲ್ಲಿ ಸಿಗಲಿದೆ.


ಫೈನಲ್ ಸ್ಟೇಟ್ ಮೆಂಟ್

ವೀಕೆಂಡ್ ನಲ್ಲಿ ಒಂದೊಳ್ಳೆ ಸಿನಿಮಾ ನೋಡಬೇಕು ಅಂತ ನೀವು ಪ್ಲಾನ್ ಮಾಡಿದ್ದರೆ 'ಮಮ್ಮಿ save me' ಚಿತ್ರವನ್ನ ಮಿಸ್ ಮಾಡದೆ ನೋಡಿ. ಕನ್ನಡ ಚಿತ್ರರಂಗದ ಮಟ್ಟಿಗೆ ಇದು ಖಂಡಿತ ಉತ್ತಮ ಪ್ರಯತ್ನ. ಆದ್ರೆ, ಮಕ್ಕಳನ್ನ ನಿಮ್ಮ ಜೊತೆ ಕರ್ಕೊಂಡು ಹೋಗುವ ಮುನ್ನ ಒಮ್ಮೆ ಯೋಚಿಸಿ....


ವಿಡಿಯೋ ನೋಡಿ

'ಮಮ್ಮಿ ಸೇವ್ ಮಿ' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಿದ ವೀಕ್ಷಕರ ಪ್ರತಿಕ್ರಿಯೆ ಹೇಗಿತ್ತು ಅಂತ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....


English summary
Kannada Actress Priyanka Upendra starrer Kannada Movie 'Mummy Save Me' has hit the screens today (December 2nd). Here is the complete review of 'Mummy Save Me'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada