»   » ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ

ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಕ್ಕೆ 'ರಾಜಕುಮಾರ' ಅಂತ ಶೀರ್ಷಿಕೆ ಇಟ್ಟಾಗ, ಅಣ್ಣಾವ್ರ ಹೆಸರನ್ನ ನಿರ್ದೇಶಕ ಸಂತೋಷ್ ಆನಂದರಾಮ್ ಬಳಕೆ ಮಾಡಿಕೊಂಡು ಗಿಮಿಕ್ ಮಾಡುತ್ತಿದ್ದಾರೆ ಅಂತ ಕೆಲವರು ಭಾವಿಸಿದ್ರು. ಆದ್ರೆ, ಇಂದು ದೇಶಾದ್ಯಂತ ಬಿಡುಗಡೆ ಆಗಿರುವ 'ರಾಜಕುಮಾರ' ಚಿತ್ರ ನೋಡಿದ್ಮೇಲೆ ನಿರ್ದೇಶಕ ಸಂತೋಷ್ ಆನಂದರಾಮ್, ಡಾ.ರಾಜ್ ಕುಮಾರ್ ರವರ ಹೆಸರು ಬಳಕೆ ಮಾಡಿಕೊಂಡಿಲ್ಲ. ಬದಲಾಗಿ ಅಣ್ಣಾವ್ರ ಹೆಸರನ್ನ ಉಳಿಸಿದ್ದಾರೆ ಅಂತ ಎಲ್ಲರೂ ಕೊಂಡಾಡುವುದು ಖಚಿತ. ಅಷ್ಟರಮಟ್ಟಿಗೆ 'ರಾಜಕುಮಾರ' ಪ್ರೇಕ್ಷಕರ ಮನಮುಟ್ಟುತ್ತದೆ. ಎಲ್ಲರ ಮನ ಗೆಲ್ಲುತ್ತದೆ.


Rating:
4.5/5

ಚಿತ್ರ: ರಾಜಕುಮಾರ
ನಿರ್ಮಾಣ: ವಿಜಯ್ ಕಿರಗಂದೂರ್
ಚಿತ್ರಕಥೆ-ನಿರ್ದೇಶನ: ಸಂತೋಷ್ ಆನಂದರಾಮ್
ಸಂಗೀತ ನಿರ್ದೇಶನ: ವಿ.ಹರಿಕೃಷ್ಣ
ಸಂಕಲನ: ಕೆ.ಎಂ.ಪ್ರಕಾಶ್
ತಾರಾಗಣ: ಪುನೀತ್ ರಾಜ್ ಕುಮಾರ್, ಪ್ರಿಯಾ ಆನಂದ್, ಶರತ್ ಕುಮಾರ್, ವಿಜಯಲಕ್ಷ್ಮಿ ಸಿಂಗ್, ಅನಂತ್ ನಾಗ್, ಪ್ರಕಾಶ್ ರೈ, ಸಾಧು ಕೋಕಿಲ, ಚಿಕ್ಕಣ್ಣ, ಅಚ್ಯುತ್ ಕುಮಾರ್ ಮತ್ತು ಇತರರು
ಬಿಡುಗಡೆ: ಮಾರ್ಚ್ 24, 2017


'ರಾಜಕುಮಾರ' ಚರಿತ

ಮನೆಯಲ್ಲಿ ಎಲ್ಲರಿಂದಲೂ ಪ್ರೀತಿಯಿಂದ 'ಅಪ್ಪು' ಅಂತ ಕರೆಯಿಸಿಕೊಳ್ಳುವ ಸಿದ್ದಾರ್ಥ (ಪುನೀತ್ ರಾಜ್ ಕುಮಾರ್) 'ತಂದೆಗೆ ತಕ್ಕ ಮಗ'... ದೇಶ ಪ್ರೇಮಿ... ಹಾಗೂ ಕನ್ನಡದ ಕಂದ. ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೂ, ಕರ್ನಾಟಕದ ಒಳಿತಿಗೆ ಕನ್ನಡಿಗರಿಗೆ ಸಹಾಯ ಮಾಡುವ ಸಹೃದಯಿ. ಇಂತಿಪ್ಪ ಅಪ್ಪು ಜೀವನದಲ್ಲಿ ಒಂದು ದುರ್ಘಟನೆ ಸಂಭವಿಸಿದ ನಂತರ 'ಕಸ್ತೂರಿ ನಿವಾಸ' ಅಧ್ಯಾಯ ಪ್ರಾರಂಭ. ಇದೇ 'ರಾಜಕುಮಾರ' ಚರಿತ.


'ರಾಜ'ಕುಮಾರ ಮಾರ್ಗ

'ಅಪ್ಪ'ನ ಹೆಸರಿಗೆ ಕಪ್ಪು ಚುಕ್ಕೆ ಬಾರದಂತೆ, ತಂದೆಯ ಹೆಸರನ್ನು ಉಳಿಸಲು ಅಪ್ಪು ತೆಗೆದುಕೊಳ್ಳುವ ನಿರ್ಧಾರ, ಅನುಸರಿಸುವ ಮಾರ್ಗವೇ 'ರಾಜಕುಮಾರ' ಚಿತ್ರದ ಕಥೆ.


'ರಾಜಕುಮಾರ' ಕಥೆಯನ್ನ ನಾವು ಹೇಳಲ್ಲ.!

'ರಾಜಕುಮಾರ' ಚಿತ್ರದ ಕಥೆ ಸಿಂಪಲ್ ಆಗಿದ್ದರೂ, ಅದನ್ನ ಹೇಳಿರುವ ರೀತಿ ಮನಮುಟ್ಟುತ್ತದೆ. ಸಂಭಾಷಣೆ ವಾಸ್ತವಕ್ಕೆ ತೀರಾ ಹತ್ತಿರವಾಗಿದೆ. ಹೀಗಾಗಿ, 'ರಾಜಕುಮಾರ' ಚಿತ್ರವನ್ನ ನೀವು ತೆರೆಮೇಲೆ ನೋಡಿ ಆನಂದಿಸಿ. ನಾವು ಮಾತ್ರ ಕಥೆಯ ಎಳೆಯನ್ನು ಬಿಟ್ಟುಕೊಡುವುದಿಲ್ಲ.


ಮತ್ತೆ ಮತ್ತೆ ನೆನಪಾಗುವ 'ರಾಜಕುಮಾರ'

'ರಾಜಕುಮಾರ' ಚಿತ್ರದಲ್ಲಿ ನಿಮಗೆ ಮತ್ತೆ ಮತ್ತೆ ಡಾ.ರಾಜ್ ಕುಮಾರ್ ನೆನಪಾದರೆ ಅಚ್ಚರಿ ಪಡಬೇಡಿ. ಯಾಕಂದ್ರೆ, ಸಿನಿಮಾದ ಹೆಸರೇ 'ರಾಜಕುಮಾರ'. ಈ ಸಿನಿಮಾಗೆ ಸ್ಫೂರ್ತಿಯೂ ಅವರೇ.! ಅವರ ಚಿತ್ರಗಳೇ ಪ್ರೇರಣೆ.! ಅದಕ್ಕೆ ತಾನೇ.. ''ಬೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ... ನೀನೇ 'ರಾಜಕುಮಾರ'' ಅಂತ ಹಾಡು ಇರುವುದು.!


ಪುನೀತ್ ರಾಜ್ ಕುಮಾರ್ ನಟನೆ ಅದ್ಭುತ

ಇಡೀ ಸಿನಿಮಾದಲ್ಲಿ ತಮ್ಮ ಪಾತ್ರವನ್ನ ಪುನೀತ್ ರಾಜ್ ಕುಮಾರ್ ನಿರ್ವಹಿಸಿರುವ ರೀತಿ ನಿಜಕ್ಕೂ ಅದ್ಭುತ. ಸೆಂಟಿಮೆಂಟ್ ದೃಶ್ಯಗಳಲ್ಲಿ ಅಪ್ಪು ಅಭಿನಯ ಲೀಲಾಜಾಲ. ಡೈಲಾಗ್ ಡೆಲಿವರಿ, ಡ್ಯಾನ್ಸ್ ಹಾಗೂ ಫೈಟ್ಸ್ ನಲ್ಲಂತೂ ಅಪ್ಪು ಎಕ್ಸಲೆಂಟ್.


ಅಪ್ಪು ಡ್ಯಾನ್ಸ್... ಡ್ಯಾನ್ಸ್... ಡ್ಯಾನ್ಸ್

''ಅಪ್ಪು ಡ್ಯಾನ್ಸ್...ಡ್ಯಾನ್ಸ್...ಡ್ಯಾನ್ಸ್'' ಹಾಡಿನಲ್ಲಿ ಅಪ್ಪು ಹಾಕಿರುವ ಸ್ಟೆಪ್ಸ್ ಸೂಪರ್. ಈ ಹಾಡು ಬಂದಾಗ್ಲಂತೂ ಥಿಯೇಟರ್ ನಲ್ಲಿ ಪರದೆ ಮೇಲೆ ಕಾಸಿನ ಸುರಿಮಳೆ. ಅಪ್ಪು ಅಪ್ಪಟ ಭಕ್ತರಂತೂ 'ಅಪ್ಪು ಡ್ಯಾನ್ಸ್' ಹಾಡಿಗೆ ಸ್ಟೆಪ್ ಹಾಕದೆ ಸುಮ್ಮನೆ ಅಂತೂ ಕೂರಲ್ಲ.!


ಗ್ಲಾಮರ್ ಗೊಂಬೆ ಪ್ರಿಯಾ ಆನಂದ್

ಬಹುಭಾಷಾ ನಟಿ ಪ್ರಿಯಾ ಆನಂದ್ ರವರಿಗಿದು ಮೊದಲ ಕನ್ನಡ ಸಿನಿಮಾ. ಮೊದಲಾರ್ಧದಲ್ಲಿ ಮಾತ್ರ ಗ್ಲಾಮರ್ ಗೊಂಬೆಯಾಗಿ ಮಿಂಚುವ ಪ್ರಿಯಾ ಆನಂದ್ ಗೆ ಸೆಕೆಂಡ್ ಹಾಫ್ ನಲ್ಲಿ ಹೆಚ್ಚು ಕೆಲಸವಿಲ್ಲ. ನಟನೆಯಲ್ಲೂ ಅಷ್ಟು ಅವಕಾಶ ಸಿಕ್ಕಿದಂತಿಲ್ಲ.


ಉಳಿದವರ ನಟನೆ ಹೇಗಿದೆ.?

ಅಪ್ಪು ಅಪ್ಪನ ಪಾತ್ರದಲ್ಲಿ ಶರತ್ ಕುಮಾರ್ ನಟನೆ ಚೆನ್ನಾಗಿದೆ. ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರೂ ಅನಂತ್ ನಾಗ್ ಇಷ್ಟವಾಗುತ್ತಾರೆ. ಕೊಟ್ಟ ಪಾತ್ರಗಳನ್ನ ಅಚ್ಯುತ್ ಕುಮಾರ್, ದತ್ತಣ್ಣ, ಅವಿನಾಶ್, ಪ್ರಕಾಶ್ ರೈ, ವಿಜಯಲಕ್ಷ್ಮಿ ಸಿಂಗ್, ಭಾರ್ಗವಿ ನಾರಾಯಣ್ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.


ಕಾಮಿಡಿ ಕಚಗುಳಿ ಇಡುವ ಕಿಲಾಡಿಗಳು

ಮೊದಲಾರ್ಧ ರಂಗಾಯಣ ರಘು ಕಾಮಿಡಿ ಕಿಕ್ ಕೊಟ್ಟರೆ, ಸೆಕೆಂಡ್ ಹಾಫ್ ನಲ್ಲಿ ಚಿಕ್ಕಣ್ಣ ಹಾಗೂ ಸಾಧು ಕೋಕಿಲ ಪ್ರೇಕ್ಷಕರನ್ನ ನಗೆಗಡಲಿನಲ್ಲಿ ತೇಲಿಸುತ್ತಾರೆ.


ಸೂಪರ್ ಸಂಭಾಷಣೆ

ಅಬ್ಬರವಿಲ್ಲದ ಡೈಲಾಗ್ ಗಳೇ 'ರಾಜಕುಮಾರ' ಚಿತ್ರದ ಮೊದಲ ಸ್ಪೆಷಾಲಿಟಿ. ಹೀರೋಗೆ ಬಿಲ್ಡಪ್ ಬೇಕು ಅಂತ ಯಾವುದೇ ಡೈಲಾಗ್ ಬರೆದಿಲ್ಲ. ಬದಲಾಗಿ ಬರೆದಿರುವ ಎಲ್ಲಾ ಡೈಲಾಗ್ ಗಳೂ 'ರಾಜವಂಶ'ದ ವಾಸ್ತವ.


ಫಸ್ಟ್ ಹಾಫ್ ಟೈಮ್ ಪಾಸ್, ಸೆಕೆಂಡ್ ಹಾಫ್ ಫುಲ್ ಮೀಲ್ಸ್

'ರಾಜಕುಮಾರ' ಚಿತ್ರದ ಮೊದಲಾರ್ಧ ಒಂದು ಫೈಟ್... ಎರಡು ಹಾಡು... ಅದೇ ಗ್ಯಾಪ್ ನಲ್ಲಿ ಸ್ವಲ್ಪ ಕಾಮಿಡಿಯಿಂದ ಟೈಮ್ ಪಾಸ್ ಆದ್ರೆ, ಇಂಟರ್ವಲ್ ನಲ್ಲಿ ಸಿಗುವ ಟ್ವಿಸ್ಟ್ ಹಾಗೂ ತದನಂತರದ ಕಥೆ ಹೆಂಗಳೆಯರ ಕಣ್ಣಾಲಿಗಳನ್ನ ತೇವಗೊಳಿಸುತ್ತದೆ.ಅಪ್ಪು ಅಭಿಮಾನಿಗಳಿಗೆ 'ರಾಜ'ಭಕ್ತರಿಗೆ ತೃಪ್ತಿ

'ರಾಜಕುಮಾರ' ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಹಾಗೂ ಡಾ.ರಾಜ್ ಕುಮಾರ್ ಭಕ್ತರಿಗೆ ಹೇಳಿ ಮಾಡಿಸಿದ ಸಿನಿಮಾ.


ಕಾಡುವ ಬೊಂಬೆ

ಥಿಯೇಟರ್ ನಿಂದ ಹೊರಬಂದ ಮೇಲೂ 'ಬೊಂಬೆ ಹೇಳುತೈತೆ... ನೀನೇ ರಾಜಕುಮಾರ' ಹಾಡು ಕಾಡುತ್ತದೆ. ಉಳಿದಂತೆ ವಿ.ಹರಿಕೃಷ್ಣ ಕಂಪೋಸ್ ಮಾಡಿರುವ 'ಅಪ್ಪು ಡ್ಯಾನ್ಸ್..' ಹಾಗೂ 'ಯಾರಿವನು ಕನ್ನಡದವನು..' ಹಾಡುಗಳು ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚಿತ್ರಕಥೆಗೆ ಪೂರಕವಾಗಿದೆ.


ಕ್ಯಾಮರಾ ಕೈಚಳಕ

ವೆಂಕಟೇಶ್ ರವರ ಕ್ಯಾಮರಾ ಕೈಚಳಕ ಚೆನ್ನಾಗಿದೆ. ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣಗೊಂಡಿರುವ ಸನ್ನಿವೇಶಗಳು ಕಣ್ಣಿಗೆ ಹಬ್ಬ.


ಗೆದ್ದ ಸಂತೋಷ್ ಆನಂದರಾಮ್

'ಕಸ್ತೂರಿ ನಿವಾಸ'ದ ಫೀಲ್ ನಲ್ಲಿ ಗಟ್ಟಿಯಾದ ಚಿತ್ರಕಥೆ ರಚಿಸಿರುವ ಸಂತೋಷ್ ಆನಂದರಾಮ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲೂ ಬೋರ್ ಆಗದಂತೆ, ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರನ್ನೂ ಹಿಡಿದು ಕೂರಿಸುವ ಸಿನಿಮಾ 'ರಾಜಕುಮಾರ'.


ಸಾಮಾಜಿಕ ಸಂದೇಶ ಸಾರುವ ಸಿನಿಮಾ

'ರಾಜಕುಮಾರ' ಚಿತ್ರದಲ್ಲಿ ಒಂದೊಳ್ಳೆ ಸಾಮಾಜಿಕ ಸಂದೇಶ ಕೂಡ ಇದೆ. ಅಪ್ಪ-ಮಗನ ಅನುಬಂಧ ಸಾರುವ 'ರಾಜಕುಮಾರ' ಚಿತ್ರದಲ್ಲಿರುವ ಸಂದೇಶವನ್ನ ವಿದ್ಯಾವಂತರು ಅಚ್ಚುಕಟ್ಟಾಗಿ ಪಾಲಿಸಿದರೆ ಬಹುಶಃ ವೃದ್ಧಾಶ್ರಮಗಳೇ ಇರುವುದಿಲ್ಲ.


ವೀಕೆಂಡ್ ನಲ್ಲಿ ತಪ್ಪದೇ ನೋಡಿ

ಮಾಸ್ ಹಾಗೂ ಕ್ಲಾಸ್ ಎಂಬ ಭೇದಭಾವ ಇಲ್ಲದೇ ಎಲ್ಲರೂ ಆರಾಮಾಗಿ ನೋಡಬಹುದಾದ ಸಿನಿಮಾ 'ರಾಜಕುಮಾರ'. ವೀಕೆಂಡ್ ನಲ್ಲಿ ಫ್ರೀ ಮಾಡಿಕೊಂಡು ತಪ್ಪದೇ 'ರಾಜಕುಮಾರ' ಚಿತ್ರ ನೋಡಿ, ಕನ್ನಡ ಚಿತ್ರಗಳನ್ನ ಪ್ರೋತ್ಸಾಹಿಸಿ.


English summary
Power Star Puneeth Rajkumar starrer Kannada Movie 'Raajakumara' has hit the screens today (March 24th). Here is the Movie Review. 'Raajakumara' is treat for Dr.Rajkumar and Puneeth Rajkumar fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada