Don't Miss!
- News
ಮಹಾ ಸಿಎಂ ಬಗ್ಗೆ ಶಿವಾಜಿ ವಂಶಸ್ಥ ಬೇಸರ, ರಾಜ್ಯಸಭಾ ಚುನಾವಣೆಯಿಂದ ಹೊರಕ್ಕೆ
- Automobiles
ಹೊಸ ಟ್ರಯಂಫ್ ಟೈಗರ್ 1200 ಅಡ್ವೆಂಚರ್ ಬೈಕ್ ವಿಶೇಷತೆಗಳು
- Finance
ಬಿಎಸ್ಎನ್ಎಲ್ ಗ್ರಾಹಕರಿಗೆ ಬಂಪರ್ ಆಫರ್: 2,399 ಪ್ರಿಪೇಯ್ಡ್ ರೀಚಾರ್ಜ್ಗೆ ಹೆಚ್ಚುವರಿ ವ್ಯಾಲಿಡಿಟಿ
- Sports
IPL 2022 ಕ್ವಾಲಿಫೈಯರ್ 2: RCB vs RR; ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Technology
ಸ್ಯಾಮ್ಸಂಗ್ನಿಂದ ಮತ್ತೆ ನೂತನ ಸ್ಮಾರ್ಟ್ಫೋನ್ ಅನಾವರಣ!
- Lifestyle
ಜೂನ್ 2022: ಈ ತಿಂಗಳಲ್ಲಿರುವ ಪ್ರಮುಖ ಹಬ್ಬ ಹಾಗೂ ವ್ರತಗಳ ಪಟ್ಟಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Sarkaru Vaari Paata Movie Review: ಹಣದ ಹಿಂದೆ ಬಿದ್ದ ಮಹೇಶ್ ಬಾಬು, ಗೆಲ್ಲೋದು ಯಾರು?
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಕೊನೆಗೂ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಟ್ರೇಲರ್ ಮೂಲಕ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾ ಪ್ರೇಕ್ಷಕರು ಇಟ್ಟಿದ್ದ ನಿರೀಕ್ಷೆಯನ್ನು ಸುಳ್ಳಾಗಿಸಿಲ್ಲ. ನಿರ್ದೇಶಕ ಪರಶುರಾಮ್ ಪೆಟ್ಲಾ, ಮೋಸ್ಟ್ ಹ್ಯಾಂಡ್ಸಮ್ ಮಹೇಶ್ ಬಾಬುವನ್ನು ಹಿಂದೆಂದೂ ನೋಡದ ಮಾಸ್ ಅವತಾರದಲ್ಲಿ ತೆರೆ ಮೇಲೆ ತೋರಿಸಿದ್ದಾರೆ.
ಭಿನ್ನ ಟಚ್ ಉಳ್ಳ ಕತೆ, ಪ್ರೀತಿ, ರೊಮ್ಯಾನ್ಸ್, ಕಾಮಿಡಿ ಎಲ್ಲದಕ್ಕೂ ಅವಕಾಶ ಉಳ್ಳ ಚಿತ್ರಕತೆ, ಅದ್ಭುತ ನಟನೆ, ಬಿಗಿಯಾದ ನಿರೂಪಣೆ, ದೃಶ್ಯಗಳಿಗೆ ಸರಿಹೊಂದುವಂಥಹಾ ಹಿನ್ನೆಲೆ ಸಂಗೀತ, ಕಣ್ಣಿಗೆ ಮುದ ನೀಡುವ ದೃಶ್ಯಗಳು ಹಾಗೂ ವಿಶ್ಯುಲ್ ಎಫೆಕ್ಟ್ಸ್‌ಗಳು ಎಲ್ಲವೂ ಹದವಾಗಿ ಬೆರೆತ ಒಳ್ಳೆಯ ಸಿನಿಮ್ಯಾಟಿಕ್ ಅನುಭವ. ಇತ್ತೀಚಿನ ಸೂಪರ್ ಹಿಟ್ ಬಿಗ್ ಬಜೆಟ್ ಸಿನಿಮಾಗಳ ಟ್ರೆಂಡ್ ಅನ್ನು ಮುಂದುವರೆಸುವ ಸಿನಿಮಾ 'ಸರ್ಕಾರು ವಾರಿ ಪಾಟ'.
ಕತೆ ಶುರುವಾಗುವುದು ಮಹೇಶ್ ಬಾಬು ಅವರ ತಂದೆ ತಾಯಿ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯದ ಮೂಲಕ. ಪಡೆದ ಸಾಲ ಕಟ್ಟಲಾಗದೆ, ಹೊಸ ಸಾಲ ಎಲ್ಲೂ ಹುಟ್ಟದೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮಹೇಶ್ ಬಾಬು ಅನಾಥ ಮಕ್ಕಳ ಶಾಲೆ ಸೇರಿ ಚೆನ್ನಾಗಿ ಕಲಿತು ಅಮೆರಿಕಕ್ಕೆ ಹಾರುತ್ತಾನೆ. ಅಲ್ಲಿ ಫೈನಾನ್ಸ್ ವ್ಯವಹಾರ ಆರಂಭಿಸುತ್ತಾನೆ. ಅವಶ್ಯಕತೆ ಇರುವವರಿಗೆ ಹಣ ಕೊಡುವುದು ಅವನ ಕೆಲಸ. ಅದನ್ನು ಸರಿಯಾಗಿಯೇ ವಸೂಲಿ ಸಹ ಮಾಡುತ್ತಾನೆ.

ಸಿನಿಮಾದ ಕತೆ ಏನು?
ಸಿನಿಮಾದ ನಾಯಕಿ ಕೀರ್ತಿ ಸುರೇಶ್‌ಗೆ ಜೂಜಾಡುವ ಚಟ, ಅದಕ್ಕಾಗಿ ಮಹೇಶ್ ಬಾಬುಗೆ ಸುಳ್ಳು ಹೇಳಿ ದೊಡ್ಡ ಮೊತ್ತ ಸಾಲ ಪಡೆಯುತ್ತಾಳೆ ಆದರೆ ಅದನ್ನು ಮರುಪಾವತಿಸುವುದಿಲ್ಲ. ಆಗ ಕೀರ್ತಿ ಸುರೇಶ್‌ಳ ತಂದೆ ಸಮುದ್ರಕಿಣಿ ಎಂಟ್ರಿ ಆಗುತ್ತೆ. ತನ್ನ ಹಣ ವಾಪಸ್ ಪಡೆಯಲೆಂದು ಮಹೇಶ್ ಬಾಬು ಭಾರತಕ್ಕೆ ಬರುತ್ತಾನೆ. ಆಗ ಕತೆಯಲ್ಲಿ ಮತ್ತೊಂದು ದೊಡ್ಡ ಟ್ವಿಸ್ಟ್ ಏರ್ಪಡುತ್ತದೆ.

ಮೊದಲಾರ್ಧ ಹೇಗಿದೆ?
ಸಿನಿಮಾದ ಮೊದಲಾರ್ಧ ಸಾಮಾನ್ಯ ಕಮರ್ಶಿಯಲ್ ಸಿನಿಮಾಗಳಂತೆ ಪಾತ್ರಗಳ ಪರಿಚಯ ಬಳಿಕ ನಾಯಕ-ನಾಯಕಿ ಮಧ್ಯೆ ಪರಿಚಯ, ಪ್ರೇಮ ನಡುವೆ ತುಸು ಹಾಸ್ಯ ಇವುಗಳಲ್ಲಿ ಸಾಗುತ್ತದೆ. ಇಂಟರ್ವೆಲ್ ಬರುವ ವೇಳೆಗೆ ಕತೆ ವೇಗ ಪಡೆದುಕೊಳ್ಳುತ್ತದೆ. ಇಂಟರ್ವೆಲ್ ನಂತರ ಕತೆ ವೇಗವಾಗಿ ಸಾಗುತ್ತದೆ. ಅದ್ಭುತ ಆಕ್ಷನ್ ದೃಶ್ಯಗಳು, ವಿಶ್ಯುಲ್ ಎಫೆಕ್ಟ್‌ಗಳು ಕೊನೆಗೆ ಒಂದು ಭಾವನಾತ್ಮಕ ಟಚ್‌ನೊಂದಿಗೆ ಸಿನಿಮಾ ಮುಗಿಯುತ್ತದೆ.

ಮಹೇಶ್ ಬಾಬು ಪರ್ಫಾರ್ಮೆನ್ಸ್ ಹೇಗಿದೆ?
ಮಾಸ್ ಅಪೀಲ್ ಜೊತೆಗೆ ಮಹೇಶ್ ಬಾಬು ಹೊಸ ರೀತಿಯಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಪೂರ್ಣ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತಿರುವ ಮಹೇಶ್ ಬಾಬು ತಮ್ಮ ಫವರ್‌ಫುಲ್, ಆಲ್‌ರೌಂಡ್ ಪ್ರದರ್ಶನದ ಜೊತೆ ಅದನ್ನು ಸರಿಯಾಗಿ ದಡ ತಲುಪಿಸಿದ್ದಾರೆ. ನಟನೆ ಮಾತ್ರವಲ್ಲ ಡ್ಯಾನ್ಸ್‌ನಲ್ಲೂ ಮಹೇಶ್ ಬಾಬು ಸಾಕಷ್ಟು ಸುಧಾರಿಸಿದ್ದಾರೆ.

ಕೀರ್ತಿ ಸುರೇಶ್ ಅಭಿನಯ ಹೇಗಿದೆ?
ಕಲಾವತಿ ಪಾತ್ರದಲ್ಲಿ ನಟಿಸಿರುವ ಕೀರ್ತಿ ಸುರೇಶ್ ಸಹ ಪಾತ್ರದಲ್ಲಿ ಜೀವಿಸಿದ್ದಾರೆ. ಗ್ಲಾಮರಸ್ ಆಗಿ ಸುಂದರವಾಗಿ ಕಾಣುವುದರ ಜೊತೆಗೆ ಫವರ್‌ಫುಲ್ ಫರ್ಫಾರ್ಮೆನ್ಸ್ ಅನ್ನು ಕೀರ್ತಿ ಸುರೇಶ್ ನೀಡಿದ್ದಾರೆ. ಸಮುದ್ರಕಿಣಿ, ವೆನ್ನೆಲ ಕಿಶೋರ್, ಸುಬ್ಬರಾಜು ಅವರುಗಳು ತಮ್ಮ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಇತರೆ ಕೆಲವು ಪಾತ್ರಗಳು ಸಿನಿಮಾದಲ್ಲಿವೆಯಾದರೂ ಅವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಯಾವ ನಟನೆಯ ಬಗ್ಗೆಯೂ ದೂರುವಂತಿಲ್ಲ ಪ್ರೇಕ್ಷಕ.

ತಾಂತ್ರಿಕ ಅಂಶಗಳು ಹೇಗಿವೆ?
ಸಿನಿಮಾಟೊಗ್ರಾಫರ್ ಆರ್.ಮಧಿಗೆ ವಿಶೇಷ ಅಭಿನಂದನೆ ಹೇಳಲೇಬೇಕು. ಈ ಹಿಂದಿನ ಸಿನಿಮಾಗಳಂತಲ್ಲದೆ ಮಹೇಶ್ ಬಾಬು ಬಹಳ ಭಿನ್ನವಾಗಿ, ರಿಫ್ರೆಶಿಂಗ್ ಆಗಿ ಕಾಣುವಂತೆ ಅವರು ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾದ ದೃಶ್ಯಗಳು ಸಹ ಕಣ್ಣಿಗೆ ಮುದ ನೀಡುತ್ತವೆ. ಹಾಡುಗಳಂತೂ ಅದ್ಭುತವಾಗಿ ತೆರೆಯ ಮೇಲೆ ಕಾಣುತ್ತವೆ. ಇನ್ನು ಸಂಗೀತ ನಿರ್ದೇಶಕ ಎಸ್ ತಮನ್ ಕೆಲವು ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಹಿನ್ನೆಲೆ ಸಂಗೀತ ಇನ್ನಷ್ಟು ಪರಿಣಾಮಕಾರಿಯಾಗಿರಬಹುದಿತ್ತು ಎನಿಸುತ್ತದೆ.

ಪರಶುರಾಮ್ ನಿರ್ದೇಶನ ಚೆನ್ನಾಗಿದೆ
ನಿರ್ದೇಶನದ ವಿಷಯಕ್ಕೆ ಬರುವುದಾದರೆ, ಪರುಶುರಾಮ್ ಇದೇ ಮೊದಲ ಬಾರಿಗೆ ಸ್ಟಾರ್ ನಟನೊಂದಿಗೆ ಕೆಲಸ ಮಾಡಿದ್ದಾರೆ. ದ್ವಿತೀಯಾರ್ಧದಲ್ಲಿ ಕೆಲವು ಏರಿಳಿತಗಳನ್ನು ಅವರು ಅನುಭವಿಸುವುದು ಕತೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸಿನಿಮ್ಯಾಟಿಕ್ ಅಂಶಗಳನ್ನು ಬಳಸಿ ಕತೆಯನ್ನು ತಿರುವು ಮುರುವು ಮಾಡುವ ತಂತ್ರವನ್ನು ಬಳಸಿದ್ದಾರೆ. ಮಹೇಶ್ ಬಾಬು ಸಿನಿಮಾದಲ್ಲಿ ಸಾಮಾನ್ಯವಾಗಿ ಸಂದೇಶವೊಂದು ಇದ್ದೇ ಇರುತ್ತದೆ. ಇಲ್ಲೂ ಸಹ ಪರುಶುರಾಮ್ ಸಂದೇಶವೊಂದನ್ನು ಭಿನ್ನವಾಗಿ ಪ್ರೇಕ್ಷಕರಿಗೆ ದಾಟಿಸುವ ಯತ್ನ ಮಾಡಿದ್ದಾರೆ.

ಮಹೇಶ್ ಬಾಬು ಕಾಸ್ಟೂಮ್ ಸೂಪರ್
ಸಿನಿಮಾದ ಕಾಸ್ಟೂಮ್ ಬಗ್ಗೆ ವಿಶೇಷ ಉಲ್ಲೇಖ ಮಾಡಲೇ ಬೇಕು. ಸಿನಿಮಾದ ಮುಖ್ಯ ಪಾತ್ರಗಳಿಗೆ ಬಹಳ ಒಳ್ಳೆಯ ಕಾಸ್ಟೂಮ್‌ಗಳನ್ನು ಡಿಸೈನರ್‌ಗಳು ನೀಡಿದ್ದಾರೆ. ವಿಶೇಷವಾಗಿ ಮಹೇಶ್ ಬಾಬುಗೆ ತೊಡಿಸಲಾಗಿರುವ ಕಾಸ್ಟೂಮ್‌ಗಳು ಗಮನ ಸೆಳೆಯುತ್ತವೆ. ಕೀರ್ತಿ ಸುರೇಶ್ ಸಹ. ಇನ್ನುಳಿದಂತೆ ಸಿನಿಮಾದ ಒಟ್ಟು ಅವಧಿಯನ್ನು 10-15 ಕಡಿಮೆ ಗೊಳಿಸಬಹುದಿತ್ತು ಎನಿಸುತ್ತದೆ. ಕ್ಲೈಮ್ಯಾಕ್ಸ್ ತುಸು ಹೆಚ್ಚು ಉದ್ದವಾಯಿತೆಂದು ಭಾಸವಾಗುತ್ತದೆ.

ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ
ಮಹೇಶ್ ಬಾಬು ನಟನೆ, ಲುಕ್ ಚೆನ್ನಾಗಿದೆ. ಕಾಮಿಡಿ ಫ್ರೆಶ್ ಆಗಿದೆ. ಸಿನಿಮಾಟೊಗ್ರಫಿ ಅದ್ಭುತವಾಗಿದೆ. ಹಾಡುಗಳ ಸಹ ಗುನುಗುವಂತಿವೆ. ಸಿನಿಮಾದ ಅವಧಿ ಉದ್ದ ಎನಿಸುತ್ತದೆ, ಕೆಲವು ಕಡೆ ಅದೇ ಹಳೆ ಕತೆ ನೋಡಿದ ಭಾಸವಾಗುತ್ತದೆ. ಕೆಲವು ಕಡೆ ಕತೆಯನ್ನು ಬಿಟ್ಟು ಹೀರೋಯಿಸಂಗೆ ಹೆಚ್ಚು ಒತ್ತು ನೀಡಲಾಗಿದೆ. ಹಿನ್ನೆಲೆ ಸಂಗೀತ ಇನ್ನಷ್ಟು ಚೆನ್ನಾಗಿರಬಹುದಿತ್ತು ಎನಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ 'ಸರ್ಕಾರು ವಾರಿ ಪಾಟ' ಸಿನಿಮಾ ಪಕ್ಕಾ ಕಮರ್ಶಿಯಲ್, ಫ್ಯಾಮಿಲಿ ಎಂಟರ್ಟೈನರ್. ಈ ವಾರಾಂತ್ಯಕ್ಕೆ ಒಂದೊಳ್ಳೆ ರಿಲೀಫ್ ಅನ್ನು ನೀಡಬಲ್ಲದು.