twitter
    For Quick Alerts
    ALLOW NOTIFICATIONS  
    For Daily Alerts

    ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ

    By Prasad
    |

    'ತಿಥಿ' ನೋಡಿ ಚಿತ್ರಮಂದಿರದಿಂದ ಹೊರಬಂದ ಪ್ರೇಕ್ಷಕನ ಮುಖದಲ್ಲಿ ಅರಳಿರುವ ನ್ಯಾಚುರಲ್ ನಗು, ರಾಮ್ ರೆಡ್ಡಿ ನಿರ್ದೇಶಿಸಿರುವ ಚಿತ್ರ ದೇಶವಿದೇಶದಲ್ಲಿ ಯಾವ ಪರಿ ಹವಾ ಎಬ್ಬಿಸಿದೆ ಎಂದು ಸಾರಿಸಾರಿ ಹೇಳುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದರಮೇಲೊಂದು ಪ್ರಶಸ್ತಿ ಗಳಿಸಿರುವ ಚಿತ್ರ ಸಾಮಾನ್ಯ ಪ್ರೇಕ್ಷಕನ ಹೃದಯವನ್ನೂ ಗೆದ್ದು ಜಯಭೇರಿ ಬಾರಿಸಿದೆ.

    ಎದುರುಗಡೆ ಶಿವಲಿಂಗ, ಪಕ್ಕದಲ್ಲಿ ಚಕ್ರವ್ಯೂಹದಂಥ ಬ್ಲಾಕ್ ಬಸ್ಟರ್ ಚಿತ್ರಗಳನ್ನು ಇಟ್ಟುಕೊಂಡೂ, ಅವೆರಡರಿಗಿಂತ ಹೆಚ್ಚು ಪ್ರೇಕ್ಷಕರನ್ನು ವಾರಾಂತ್ಯದಲ್ಲಿ ಸೆಳೆಯುತ್ತಿರುವ ಚಿತ್ರದಲ್ಲಿ ಏನೈತಿ ಅಂಥಾದ್ದೇನೈತಿ ಎಂದು ನಿಮಗೆ ಅಚ್ಚರಿಯಾಗಬಹುದು. ತಿಥಿಯಲ್ಲಿ ಏನೇನಿಲ್ಲ ಎಂಬುದನ್ನು ಪಟ್ಟಿ ಮಾಡುತ್ತ ಹೋದರೆ, ಅದರಲ್ಲಿ ಏನೇನಿದೆ ಎಂಬುದು ತಾನಾಗಿಯೇ ಅರಿವಾಗುತ್ತದೆ.

    ತಿಥಿಯಲ್ಲಿ, 'ಇಲ್ಲಿ ನಂದೇ ಹವಾ' ಎಂಬಂಥ ನಾಯಕನ ಧಿಮಾಕಿನ ಡೈಲಾಗುಗಳಿಲ್ಲ, ಪ್ರೇಕ್ಷಕರನ್ನು ನಿದ್ದೆಯಿಂದ ಬಡಿದೆಬ್ಬಿಸುವಂಥ ಅಬ್ಬರದ ಹಿನ್ನೆಲೆ ಸಂಗೀತವಿಲ್ಲ, ನೋಡುಗರನ್ನು ಗೋಳುಹೊಯ್ಯುವಂಥ ಸೆಂಟಿಮೆಂಟಿನ ಸೀನುಗಳಿಲ್ಲ, ಭಾವಾವೇಷವನ್ನು ಅತಿರೇಕದಿಂದ ತೋರಿಸುವಂಥ ನಟನೆಯಿಲ್ಲ, ಗುನುಗುವಂಥ ಹಾಡುಗಳಿಲ್ಲ... ಆದರೂ ಪ್ರೇಕ್ಷಕರ, ತೀರ್ಪುಗಾರರ ಮನಸನ್ನು ಗೆದ್ದಿದೆ. ['ತಿಥಿ'ಯಲ್ಲಿ ಪಾಲ್ಗೊಂಡ ವಿಮರ್ಶಕರು ಹೇಳಿದ್ದೇನು?]

    Thithi - Kannada movie review

    ಎರಡೇ ನಿಮಿಷ ತೆರೆಯ ಮೇಲೆ ಬರುವ ಸೆಂಚುರಿ ಗೌಡನಿಂದ ಹಿಡಿದು, ಕುರಿಮಂದೆ ಕೂಡ ಈ ಚಿತ್ರದ ಪ್ರಮುಖ ಪಾತ್ರವೆ. ಪಾತ್ರಗಳ ಒಂದಕ್ಕಿಂತ ಒಂದು ಕಲರ್‌ಫುಲ್ ಆಗಿವೆ, ಜೀವಂತಿಕೆ ತುಂಬಿವೆ. ಯಾರ ನಟನೆಯೂ ಇಲ್ಲಿ ಅತಿರೇಕ ಅಥವಾ ಕೃತಕ ಅಂತ ಅನ್ನಿಸುವುದಿಲ್ಲ ಎನ್ನುವುದೇ ಚಿತ್ರದ ಹೆಗ್ಗಳಿಕೆ. ಪ್ರತಿಯೊಂದು ಘಟನೆಯೂ ನಮ್ಮ ಕಣ್ಣ ಮುಂದೆ ಸಹಜವಾಗಿ ನಡೆಯುತ್ತಿದೆ ಎಂಬಂತೆ ಭಾಸವಾಗುತ್ತದೆ.

    ರಾಮ್ ರೆಡ್ಡಿ ಸೇರಿಕೊಂಡು ಎರೇಗೌಡ ರಚಿಸಿರುವ ಚಿತ್ರಕಥೆ ತಿಥಿಯ ಜೀವಾಳ. ಸೆಂಚುರಿಗೌಡನ ಸಾವು, ಕುಡಿತ ಮತ್ತು ಬೀಡಿಯೊಂದನ್ನು ಬಿಟ್ಟು ತನಗೂ ಈ ಜಗತ್ತಿಗೂ ಸಂಬಂಧವೇ ಇಲ್ಲ ಎನ್ನುವಂಥ ಗಡ್ಡಪ್ಪ, ತಾತನ ತಿಥಿಗಾಗಿ ಅಪ್ಪನ 'ತಿಥಿ'ಯನ್ನೂ ಮಾಡುವ ತಮ್ಮಣ್ಣನ ಕಂತ್ರಿ ಕೆಲಸಗಳು, ಉಡಾಫೆಯೇ ಬದುಕೆಂದುಕೊಂಡ ಅಭಿಯ ಹಸಿಬಿಸಿ ಪ್ರೇಮ ಒಂದಕ್ಕೊಂದು ಹೆಣೆದುಕೊಂಡು ಬಿಳಿಯ ಕ್ಯಾನ್ವಾಸಿನ ಮೇಲೆ ಮಾಡರ್ನ್ ಆರ್ಟ್ ಅಲ್ಲದ ಅದ್ಭುತ ವರ್ಣಮಯ ಚಿತ್ರವನ್ನು ಬಿಡಿಸಿಟ್ಟಿವೆ. ['ತಿಥಿ' ಕನ್ನಡ ಚಿತ್ರರಂಗಕ್ಕೆ ಸಿಕ್ಕ ರಾಗಿಮುದ್ದೆ, ಹೊಟ್ಟೆಗೆ ಮೋಸವಿಲ್ಲ!]

    "ಇದು ನಮ್ಮೂರ್ ಕಡೆಯ ಬಾಸೆಯಾ..." ಅಂತ ಮಂಡ್ಯದ ಕಡೆಯವರು, ಸಹಜ ಹಾಸ್ಯದಿಂದ ಕೂಡಿರುವ ಒಂದೊಂದು ಮಾತುಗಳನ್ನೂ ಆಸ್ವಾದಿಸುತ್ತಾರೆ. ಇಲ್ಲಿ ಹಾಸ್ಯ ಸನ್ನಿವೇಶ ಅಂತ ಇಲ್ಲವೇ ಇಲ್ಲ. ಆದರೆ ಪ್ರತಿಯೊಂದು ಸನ್ನಿವೇಶದಲ್ಲಿಯೂ ಹಾಸ್ಯ ಹಾಸುಹೊಕ್ಕಾಗಿದೆ. ಅಷ್ಟೊಂದು ಕುಶಾಗ್ರಮತಿಯಿಂದ, ತನ್ಮಯತೆಯಿಂದ ಸನ್ನಿವೇಶಗಳನ್ನು, ಸಂಭಾಷಣೆಯನ್ನು ಹೆಣೆಯಲಾಗಿದೆ. ಅಲ್ಲಲ್ಲಿ ಎಬ್ಬಿಸುವ ನಗೆಯ ಅಲೆಗಳು, ಚಿತ್ರದ ಕೊನೆಯ ತನಕವೂ ಹಿಡಿದಿಟ್ಟುಕೊಂಡು, ಹೊರಬಂದ ನಂತರವೂ ಉಳಿಸುವುದೇ ಈ ಚಿತ್ರದ ಹೆಗ್ಗಳಿಕೆ.

    ತಿಥಿಯಂಥ ಒಂದು ಘಟನೆಯ ಸುತ್ತ ಹಳ್ಳಿಯಲ್ಲಿ ನಡೆಯಬಹುದಾದ ಸಮಸ್ತ ಘಟನಾವಳಿಗಳನ್ನು ನವಿರಾದ ಹಾಸ್ಯದ ಮೂಲಕ ರಾಮ್ ರೆಡ್ಡಿ ಸುರುಳಿಸುರುಳಿಯಾಗಿ ಬಿಚ್ಚಿಟ್ಟಿದ್ದಾರೆ. ಇಲ್ಲಿ ಮಂಡ್ಯದ ಕಡೆಯ ಮಾತಿದೆ, ಮನೆಮನೆಯಲ್ಲಿರುವಂಥ ಮುನಿಸಿದೆ, ಅಸ್ತಿಗಾಗಿ ಆಸ್ತಿಯ ಮೇಲಿರುವಂಥ ಆಸೆಯಿದೆ, ಎರಡು ಯುವ ಹೃದಯಗಳ ನಡುವಿನ ಕಾಮದ ವಾಸನೆಯೂ ಇದೆ. ಬಾಡೂಟ ಪ್ರಿಯರಿಗಾಗಿ ಕೊನೆಯಲ್ಲಿ ಭರ್ಜರಿ ಊಟವೂ ಇದೆ. ['ಅತ್ಯುತ್ತಮ ಪೋಷಕ ನಟಿ' ಪೂಜಾ ಸಂದರ್ಶನ]

    ಇಂಥ ಮೃಷ್ಟಾನ್ನ ಭೋಜನ ಮಾಡುವಾಗ ಮಂಡ್ಯದ ಕಡೆಯ ಭಾಷೆಯನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟಕರ ಎನಿಸಿದರೂ ಆ ಭಾಷೆಯೇ ಚಿತ್ರಕ್ಕೆ ಸಾಕಷ್ಟು ತೂಕ ತಂದಿದೆ. ಗಡ್ಡದಪ್ಪ ಆಡುವ ಉದ್ದದ ಮಾತುಗಳು ಸ್ವಲ್ಪ ಕೃತಕ ಅನಿಸುತ್ತವೆ, ಚಿತ್ರಕ್ಕೆ ಪರಿಣಾಮಕಾರಿಯಾದ ಹಿನ್ನೆಲೆ ಸಂಗೀತವಿದ್ದರೆ ಚೆನ್ನಾಗಿತ್ತು ಅನ್ನುವುದನ್ನು ಹೊರಪಡಿಸಿದರೆ, ಒಂದು ಕನ್ನಡ ಚಿತ್ರಕ್ಕಿರಬಹುದಾದ ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ಒಂದು ವಿಭಿನ್ನವಾದ ಅನುಭವವನ್ನು ತಿಥಿ ನೀಡುತ್ತದೆ.

    ಅಪ್ಪಟ ಸಿನೆಮಾದ ವಾಸನೆ ಅಘ್ರಾಣಿಸಬೇಕೆಂದಿದ್ದರೆ, ಹಳ್ಳಿಯ ಸ್ವಚ್ಛ ಗಾಳಿಯನ್ನು ಸೇವಿಸಬೇಕೆಂದಿದ್ದರೆ, ಕಿವಿಗೆ ಬಿದ್ದಕೂಡಲೆ ನಗೆಯರಳಿಸುವಂಥ ಸ್ವಚ್ಛ ಹಾಸ್ಯವನ್ನು ಆನಂದಿಸಬೇಕೆಂದಿದ್ದರೆ ಮತ್ತು ಕನ್ನಡ ಸಿನೆಮಾ ಬಗ್ಗೆ ಅಸ್ಖಲಿತವಾದ ಪ್ರೀತಿಯಿದ್ದರೆ, ಫಾರ್ಮ್ಯೂಲಾ ಸಿನೆಮಾಕ್ಕಿಂತ ಹೊರತಾದ ಎಂಟರ್ಟೇನ್ಮೆಂಟ್ ಬೇಕಿದ್ದರೆ ತಿಥಿ ಇರುವ ಚಿತ್ರಮಂದಿರದತ್ತ ಹೆಜ್ಜೆಹಾಕಿ.

    English summary
    Thithi - movie review. Thithi is a 2016 Kannada-language film written and directed by Raam Reddy. Screenplay by Ere Gowda and Raam Reddy. Thithi has non-professional actors from villages in the Mandya district of Karnataka. The film is a light-hearted story about three generations of men reacting to the death of their 101-year old patriarch.
    Friday, May 20, 2016, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X