For Quick Alerts
  ALLOW NOTIFICATIONS  
  For Daily Alerts

  ಯಾರಿವನು : ಕಡ್ಡಾಯವಾಗಿ ಮದನ್ ಅಭಿಮಾನಿಗಳಿಗೆ

  By Prasad
  |

  Rating:
  2.0/5
  ಕೆಲ ದಶಕಗಳ ಹಿಂದೆ ಹೊಸ ಚಿತ್ರ ಬಿಡುಗಡೆಯಾದಾಗ ಭಿತ್ತಿಚಿತ್ರದ ಮೇಲೆ 'ಇಂದೇ ನೋಡಿರಿ' ಎಂಬ ನಿರ್ದೇಶನವಿರುತ್ತಿತ್ತು. ನಾಳೆ ಚಿತ್ರಮಂದಿರದಲ್ಲಿ ಚಿತ್ರ ಇರುತ್ತದೋ ಇಲ್ಲವೋ ಎಂಬ ಗುಮಾನಿ ಇರುತ್ತಿದ್ದರಿಂದ ನಾವು ಕೂಡ ಇಂದೇ ನೋಡಬೇಕು ಎಂದು ಹಠ ಹಿಡಿಯುತ್ತಿದ್ದೆವು. ಚಿತ್ರ ಮಂದಿರದಿಂದ ಮರುದಿನ ಮಾಯವೇನೂ ಆಗುತ್ತಿರಲಿಲ್ಲ. ಆದರೂ ಒಂಥರ ಟುಕುಟುಕು. ಆದಷ್ಟು ಬೇಗ ನೋಡಿದರೆ ಏನೋ ಸಮಾಧಾನವಿರುತ್ತಿತ್ತು.

  ಮದನ್ ಪಟೇಲ್ ಅವರು ಸ್ವತಃ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು, ಸಂಗೀತ ಮತ್ತು ಚಿತ್ರದ ನಿರ್ದೇಶನ ಮಾಡಿ, ನಾನಾ ಅಡೆತಡೆಗಳನ್ನು ಎದುರಿಸಿ ಬಿಡುಗಡೆ 'ಭಾಗ್ಯ' ಕಂಡಿರುವ 'ಯಾರಿವನು' ಚಿತ್ರದ ಭಿತ್ತಿಚಿತ್ರಗಳ ಮೇಲೂ 'ಇಂದೇ ನೋಡಿರಿ' ಎಂಬ ಬರಹವಿದ್ದರೆ ಚೆನ್ನಾಗಿರುತ್ತದೆ! ಯಾಕೆ ಅಂತ ಚಿತ್ರ ನೋಡಿದರೆ ನಿಮಗೇ ಗೊತ್ತಾಗುತ್ತದೆ.

  ಇದು 'ರಾಜ್ಯ ಪ್ರಶಸ್ತಿ ವಿಜೇತ' ಮದನ್ ಪಟೇಲ್ ಅವರ ಕಟ್ಟಾ ಅಭಿಮಾನಿಗಳಿಗೆ ಮಾತ್ರ. ಭಾರೀ ಮಹತ್ವಾಕಾಂಕ್ಷೆಯಿಂದ ರಾಜಕೀಯಕ್ಕೆ ಕಾಲಿಟ್ಟಿರುವ ಮದನ್ ಅವರು ಚಿತ್ರದುದ್ದಕ್ಕೂ ತಮ್ಮನ್ನು ಅದೇ ರೀತಿ ಬಿಂಬಿಸಿಕೊಂಡಿದ್ದಾರೆ. ಸಮಾಜಸೇವಕನಾಗಿ, ಬಡವರ ಬಂಧುವಾಗಿ, ಮೋಸ ವಂಚನೆಯ ವಿರುದ್ಧ ಹೋರಾಡಲು ಜನರನ್ನು ರೊಚ್ಚಿಗೆಬ್ಬಿಸುವ, ಸಮಾಜದಲ್ಲಿ ನಡೆಯುತ್ತಿರುವ ಮೋಸವನ್ನು ಚಿತ್ರ ನಿರ್ಮಿಸುವ ಮುಖಾಂತರ ತೋರಿಸುವ ಈ ಚಿತ್ರದ ನಿಜವಾದ ಹೀರೋ ತಾವೇ ಆಗಲು ಹೋಗಿದ್ದಾರೆ. ತಪ್ಪೇನೂ ಇಲ್ಲ.

  ಆದರೆ, ಈ ಚಿತ್ರದ ಮುಖಾಂತರ ಏನನ್ನು ಹೇಳಲು ಹೊರಟಿದ್ದಾರೆ? ಯಾವ ಉದ್ದೇಶ ಇಟ್ಟುಕೊಂಡು ಈ ಚಿತ್ರ ನಿರ್ದೇಶಿಸಿದ್ದಾರೆ? ಎಂಬುದು ಜನರಿಗೆ ಮನವರಿಕೆಯಾದರೆ ಅವರ ಪ್ರಯತ್ನ ಸಾರ್ಥಕವಾದಂತೆ. ಚಿತ್ರ ಹೇಗಿದೆ? ಪ್ರೇಕ್ಷಕರನ್ನು ತಟ್ಟಿತಾ ಅಥವಾ ತಟ್ಟಿ ಎಬ್ಬಿಸಿತಾ? ಎಂಬುದನ್ನು ಮುಂದೆ ಓದಿರಿ. [ಗ್ಯಾಲರಿ]

  'ನಿತ್ಯ' ಕಥೆ ಆಧರಿಸಿದ 'ಸತ್ಯ' ಕಥೆ

  'ನಿತ್ಯ' ಕಥೆ ಆಧರಿಸಿದ 'ಸತ್ಯ' ಕಥೆ

  ಇದರಲ್ಲಿ ಅನುಮಾನವೇ ಇಲ್ಲ. ಇದು ನಾನಾ ಕಾರಣಗಳಿಂದಾಗಿ ವಿವಾದಕ್ಕೆ ಸಿಲುಕಿರುವ 'ಕಾಮಿ ಸ್ವಾಮಿ'ಯ ಅನೈತಿಕ ಹಗರಣಗಳನ್ನು ಹೊಂದಿರುವ ಸತ್ಯ ಕಥೆಯೇ. ಚಿತ್ರದ ಶೀರ್ಷಿಕೆ ಬದಲಾದರೇನಂತೆ ಚಿತ್ರಕಥೆಯಂತೂ ಬದಲಾಗಿಲ್ಲವಲ್ಲ? ಹಾಗೆ ನೋಡಿದರೆ ಚಿತ್ರದ ಶೀರ್ಷಿಕೆ ಬದಲಾಯಿಸುವ ಅಗತ್ಯವೂ ಇರಲಿಲ್ಲ. ಚಿತ್ರಕ್ಕೆ ವಿವಾದ ಸುತ್ತಿಕೊಂಡಿದ್ದರೂ ಓಪನಿಂಗ್‌ಗೆ ಈ ವಿವಾದ ಖಂಡಿತ ಸಹಾಯವಾಗಿಲ್ಲ.

  ಏನಿದು 'ಯಾರಿವನು' ಚಿತ್ರದ ಕಥೆ?

  ಏನಿದು 'ಯಾರಿವನು' ಚಿತ್ರದ ಕಥೆ?

  ಇದರಲ್ಲಿ ಹೇಳುವಂಥದ್ದೇನೂ ಇಲ್ಲ. ಯಾಕೆಂದರೆ ಇದು ಎಲ್ಲರಿಗೂ ತಿಳಿದ ಸಂಗತಿಯೆ. ಕಾಮಿ ಸ್ವಾಮಿ ತನ್ನ ಆಶ್ರಮದಲ್ಲಿ ನಡೆಸಿರಬಹುದಾದ ಅನೈತಿಕ ಚಟುವಟಿಕೆಗಳನ್ನು ತಮಗೆ ತಿಳಿದ ರೀತಿಯಲ್ಲಿ ಹೇಳಲು ಮದನ್ ಯತ್ನಿಸಿದ್ದಾರೆ. ಹೊಸತೇನೂ ಇಲ್ಲದಿರುವುದರಿಂದ ನೋಡುಗರಲ್ಲಿ ಆಸಕ್ತಿಯನ್ನೂ ಕೆರಳಿಸುವುದಿಲ್ಲ. ಕಾಮಿ ಸ್ವಾಮಿ ಸತ್ಯಾನಂದ(ರವಿ ಚೇತನ್)ನ ಆಟಾಟೋಪ ನೋಡಿ ರೋಸಿಹೋಗುವ ಜನರು ಮದನ್ ಅವರನ್ನು ಚಿತ್ರ ನಿರ್ಮಿಸಲು ಪ್ರೇರೇಪಿಸುವುದು ಚಿತ್ರದ ಸಾರ.

  ಮನರಂಜನೆಗೇನಾದ್ರೂ ಇದೆಯಾ?

  ಮನರಂಜನೆಗೇನಾದ್ರೂ ಇದೆಯಾ?

  ಚಿತ್ರದ ಆರಂಭದಲ್ಲಿ ಮದನ್ ಒಂದು ಮಾತು ಹೇಳುತ್ತಾರೆ. ಚಿತ್ರದಲ್ಲಿ ಎಂಟರ್ಟೇನ್ಮೆಂಟ್ ಇದ್ದರೆ ಮಾತ್ರ ಜನರು ಮಂದಿರಕ್ಕೆ ಬರುತ್ತಾರೆ. ಇಲ್ಲದಿದ್ದರೆ ಥಿಯೇಟರ್ ಹತ್ತಿರವೂ ಜನ ಸುಳಿಯುವುದಿಲ್ಲ. ಯಾರಿವನು ಚಿತ್ರದಲ್ಲಿ ಎಂಟರ್ಟೇನ್ ಮಾಡುವಂಥದ್ದು ಏನಿದೆ? ಅಂಥದ್ದೇನೂ ಇಲ್ಲ. ಆದರೆ, ಬ್ರಹ್ಮಾಂಡವನ್ನೇ ಗಿರಗಿರನೆ ತಿರುಗಿಸುವ ಜ್ಯೋತಿಷಿ ಧೀರೇಂದ್ರ ಶರ್ಮಾ ಮತ್ತು ದೇವಿಯ ನುಡಿ ಕೇಳಿ ಭವಿಷ್ಯ ನುಡಿಯುವ ಜ್ಯೋತಿಷಿ ಕಿವಿ ಚೌಡೇಶ್ವರಿ ಪಾತ್ರಗಳು ಸ್ವಲ್ಪ ಮಟ್ಟಿಗೆ ರಂಜನೆ ನೀಡುತ್ತವೆ. ಹಾಗೆಯೆ, ಸ್ವಾಮಿಯ ಯೋಗವೆಂಬ ಭೋಗಕ್ಕೆ ಬಲಿಯಾಗುವ 'ದೀಪ್ತಿ' ಎಂಬ ಪಾತ್ರವೂ ಬಂದು ಹೋಗುತ್ತದೆ.

  ರಾಸಲೀಲೆಯ ದೃಶ್ಯಗಳು ಅವಶ್ಯಕವಿದ್ದವಾ?

  ರಾಸಲೀಲೆಯ ದೃಶ್ಯಗಳು ಅವಶ್ಯಕವಿದ್ದವಾ?

  ವಿವಾದಿತ ಸ್ವಾಮಿಗೆ ಸಂಬಂಧಿಸಿದ ರಾಸಲೀಲೆಯ ಚಿತ್ರದ ತುಣುಕನ್ನು ಎಲ್ಲಿಯೂ ಪ್ರಸಾರ ಮಾಡಬಾರದೆಂದು ಕೋರ್ಟ್ ಆದೇಶಿಸಿದೆ. ಆದರೆ, ಇಲ್ಲಿ ಆ ಪಾತ್ರಕ್ಕೂ ಈ ಪಾತ್ರಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿ, ಅದೇ ರಾಸಲೀಲೆ ದೃಶ್ಯಾವಳಿಗಳನ್ನು ಹಸಿಹಸಿಯಾಗಿಯೇ ಚಿತ್ರೀಕರಿಸಿದ್ದಾರೆ. ಹಲವಾರು ಮಹಿಳೆಯರೊಡನೆ ಪಲ್ಲಂಗದ ಮೇಲೆ ಕಪಟ ಸ್ವಾಮಿ ಹೊರಳಾಡುವ ದೃಶ್ಯಗಳನ್ನು ಹಾಗೆಯೇ ತೋರಿಸುವ ಅವಶ್ಯಕತೆ ಇತ್ತಾ? ಮದನ್ ಅವರೇ ಹೇಳಬೇಕು.

  ಬೋರ್ ಹೊಡೆಸುವ ಪಾತ್ರ ಪೋಷಣೆ

  ಬೋರ್ ಹೊಡೆಸುವ ಪಾತ್ರ ಪೋಷಣೆ

  ಚಿತ್ರಕಥೆಯಲ್ಲಿ ಗಟ್ಟಿತನ ಮತ್ತು ಕಥೆಯಲ್ಲಿ ಹೊಸತನ ಇಲ್ಲದ್ದರಿಂದ ನೋಡನೋಡುತ್ತಲೇ ತೂಕಡಿಕೆ ಬಂದರೆ ಅಚ್ಚರಿಯಿಲ್ಲ. ಆದರೆ, ಆ ತೂಕಡಿಕೆಯನ್ನು ತಟ್ಟಿ ಎಬ್ಬಿಸುವಂಥ ಪಾತ್ರ ಮದನ್ ಇಲ್ಲಿ ತಂದಿದ್ದಾರೆ. ಅದು ಹೈದರಾಬಾದಿನ ಮೂಲದ ಟೆನ್ನಿಸ್ ಆಟಗಾರ್ತಿ ಏಂಜೆಲಿನಾ (ಅನೂಕಿ) ಪಾತ್ರ. ಸ್ವಾಮಿಯ ಮೋಹಪಾಶದಲ್ಲಿ ಆಕೆ ಸಿಲುಕುವ, ಮಳೆಯಲ್ಲಿ ಸ್ವಾಮೀಜಿಯೊಡನೆ ಡ್ಯೂಯೆಟ್ ಹಾಡುವ ದೃಶ್ಯ ಸಖತ್ ಹಾಟ್ ಆಗಿದೆ. ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡಿದ್ದರಿಂದ ಹಿರಿಯರಿಗೆ ಕಡ್ಡಾಯ. ತಪ್ಪಿ ಚಿತ್ರಮಂದಿರಕ್ಕೆ ಕಾಲಿಟ್ಟ ಮಹಿಳೆಯರಿಬ್ಬರು ಅರ್ಧದಲ್ಲೇ ಜಾಗ ಖಾಲಿ ಮಾಡಿದ್ದು ಇದಕ್ಕೆ ನಿದರ್ಶನ.

  ಮೆಚ್ಚುವಂಥದ್ದು ಏನಿದೆ?

  ಮೆಚ್ಚುವಂಥದ್ದು ಏನಿದೆ?

  ವಿವಾದಿತ ಸ್ವಾಮಿಯ ಪಾತ್ರವನ್ನು ರವಿ ಚೇತನ್ ಸಮರ್ಥವಾಗಿ ಬಿಂಬಿಸಿದ್ದಾರೆ. ಮಾತಿನ ಮೋಡಿ ಮಾಡಿ ಮಹಿಳೆಯರ ಮೇಲೆ ಸಮ್ಮೋಹನಾಸ್ತ್ರ ಬೀಸುವ ಕಪಟ ಸ್ವಾಮೀಜಿಯಾಗಿ ರವಿ ಚೇತನ್ ವಿಶಿಷ್ಟ ಹಾವಭಾವದಿಂದ ರಂಜಿಸುತ್ತಾರೆ. ಆದರೆ ಪಾತ್ರಪೋಷಣೆ ರಾಸಲೀಲೆಗೆ ಮಾತ್ರ ಹೆಚ್ಚು ಸೀಮಿತವಾಗಿದ್ದರಿಂದ ಅಂತಹ ಪ್ರಭಾವ ಬೀರುವುದಿಲ್ಲ. ಅವರ ಪಾತ್ರಕ್ಕೆ ನೂರಕ್ಕೆ ನೂರರಷ್ಟು ಜೀವವನ್ನು ತುಂಬಲು ರವಿ ಯತ್ನಿಸಿದ್ದಾರೆ. ಆ ಪಾತ್ರವೂ ಇಲ್ಲದಿದ್ದರೆ ಚಿತ್ರ ಮದನ್ ಅವರ ಚುನಾವಣಾ ಪ್ರಣಾಳಿಕೆಯಾಗುವ ಅಪಾಯವಿತ್ತು.

  ಮದನ್ ಕೊನೆಗೆ ಒಂದು ಸಂದೇಶ ನೀಡಿದ್ದಾರೆ

  ಮದನ್ ಕೊನೆಗೆ ಒಂದು ಸಂದೇಶ ನೀಡಿದ್ದಾರೆ

  ನಿಜ ಜೀವನದಲ್ಲೂ ಹೆಣ್ಣಿನ ಬಾಳು ಹಾಳು ಮಾಡುವಂಥ ಇಂತಹ ಕಪಟ ಸ್ವಾಮೀಜಿಗಳು ಇದ್ದೇ ಇರುತ್ತಾರೆ. ಇಂಥವರು ಮಾಡುವ ಮೋಸ, ವಂಚನೆಗೆ ಬಲಿಯಾಗಿ ಯಾಮಾರಿಸಿಕೊಳ್ಳಬೇಡಿ. ಬುದ್ಧಿಯನ್ನು ನಿಮ್ಮ ಹಿಡಿತದಲ್ಲಿಯೇ ಇಟ್ಟುಕೊಳ್ಳಿ ಎಂಬ ಸಂದೇಶವನ್ನು ಮದನ್ ಸಾರಿದ್ದಾರೆ. ಜೈಲಿಗೆ ಹೋದರೂ ಅಷ್ಟೇ, ಬೀದಿಗೆ ಬಿದ್ದರೂ ಅಷ್ಟೇ ಇಂಥ ಸ್ವಾಮೀಜಿಗಳು ಬಿಡ್ತಾರಾ? ಹೊಸಹೊಸ ವೇಷದಲ್ಲಿ ಜನರನ್ನು ಮರಳು ಮಾಡಲು ಬರುತ್ತಲೇ ಇರುತ್ತಾರೆ. ಇಂಥದೊಂಡು ಸಂದೇಶ ಸಾರಿದ ಮದನ್ ಅವರ ರಾಜಕೀಯ ಜೀವನಕ್ಕೆ ಶುಭವಾಗಲಿ.

  English summary
  Yaarivanu - Kannada movie review. The movie directed by Madan Patel is based on a real story of a swamiji who traps women to quench his lust. What is there in the movie? Does it awake people? Watch it if you are handcore fan of music director Madan Patel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X