For Quick Alerts
  ALLOW NOTIFICATIONS  
  For Daily Alerts

  Vijayanand Movie Review : ವಿಜಯ್ ಸಂಕೇಶ್ವರರ ಛಲದ ಕತೆ 'ವಿಜಯಾನಂದ'

  |

  ಕನ್ನಡದಲ್ಲಿ ಬಯೋಪಿಕ್‌ ಸಿನಿಮಾಗಳ ಕೊರತೆಯಿದೆ ಎಂಬ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಉದ್ಯಮಿ, ರಾಜಕಾರಣಿ, ಪದ್ಮಶ್ರೀ ವಿಜಯ್ ಸಂಕೇಶ್ವರ್ ಅವರ ಜೀವನ ಆಧರಿಸಿದ ಸಿನಿಮಾ 'ವಿಜಯಾನಂದ' ತೆರೆಗೆ ಬಂದಿದೆ. ಸಿನಿಮಾಕ್ಕೆ ಅವರ ಪುತ್ರ ಆನಂದ್ ಸಂಕೇಶ್ವರ್ ಅವರದ್ದೇ ಬಂಡವಾಳ.

  ಥಳ ಮಟ್ಟದಿಂದ ಆರಂಭಸಿ ದೊಡ್ಡ ಉದ್ಯಮ ಕಟ್ಟಿದ ಕೆಲವೇ ಕರ್ನಾಟಕದ ಯಶಸ್ವಿ ಉದ್ಯಮಿಗಳಲ್ಲೊಬ್ಬರು ವಿಜಯ್ ಸಂಕೇಶ್ವರ್. ಈ ಹಿಂದೆ ರಮೇಶ್ ಅರವಿಂದ್‌ರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ತಮ್ಮ ಜೀವನದ ಬಗ್ಗೆ ಮಾತನಾಡಿದ್ದರು ವಿಜಯ್ ಸಂಕೇಶ್ವರ್. ಇದೀಗ ಅವರ ಜೀವನವೇ ಸಿನಿಮಾ ಆಗಿದೆ. ವೀಕೆಂಡ್‌ ವಿತ್ ರಮೇಶ್‌ನಲ್ಲಿಲ್ಲದ ಹಲವು ಮಾಹಿತಿಗಳು ಸಿನಿಮಾದಲ್ಲಿ ನೋಡ ದೊರಕುತ್ತವೆ.

  ಕತೆ ಆರಂಭವಾಗುವುದು ಮುಂಬೈಯಿಂದ ಗದಗಕ್ಕೆ ಬಂದ ರೈಲಿನಿಂದ ವಿಜಯ್ ಸಂಕೇಶ್ವರ್ ಇಳಿಯುವ ಮೂಲಕ. ತಂದೆಯ ಹಳೆಯ ಮಾದರಿ ಪ್ರಿಂಟಿಂಗ್ ಪ್ರೆಸ್‌ಗೆ ವೇಗ ತುಂಬಲೆಂದು ಹೊಸದೊಂದು ಸೆಮಿ ಆಟೊಮ್ಯಾಟಿಕ್ ಪ್ರಿಂಟಿಂಗ್ ಯಂತ್ರ ತರುತ್ತಾರೆ ವಿಜಯ್ ಸಂಕೇಶ್ವರ್. ಅಪ್ಪ ಹತ್ತು ದಿನ ಮಾಡಿದ್ದನ್ನು ಮಗ ಒಂದೇ ದಿನದಲ್ಲಿ ಮಾಡುತ್ತಾನೆ, ಉದ್ಯಮದಲ್ಲಿ ವೇಗ ಬೇಕು ವಿಜಯ್‌ ಸಂಕೇಶ್ವರ್‌ಗೆ. ಅದೇ ಕಾರಣಕ್ಕೆ ಪ್ರಿಂಟಿಂಗ್ ಪ್ರೆಸ್ ಬಿಟ್ಟು ಸಾರಿಗೆ ಉದ್ಯಮಕ್ಕೆ ಇಳಿಯುತ್ತಾರೆ. ಮೊದಲಿಗೆ ಒಂದು ಲಾರಿ, ಬಳಿಕ ನಾಲ್ಕು ಹೀಗೆ ವರ್ಷಗಳುರುಳಿದಂತೆ ಲಾರಿಗಳ ಸಂಖ್ಯೆ ದುಪ್ಪಟ್ಟು, ಮೂರ್ಪಟ್ಟು ಆಗುತ್ತಲೇ ಹೋಗುತ್ತವೆ.

  ಸಿನಿಮಾದ ಮೊದಲ ಕೆಲ ನಿಮಿಷಗಳು ಪ್ರಿಂಟಿಂಗ್ ಪ್ರೆಸ್‌ನಲ್ಲಿಯೇ ಕತೆ ಗಿರಕಿ ಹೊಡೆಯುತ್ತದೆ. ಈ ನಡುವೆ ಅಪ್ಪ ಹಾಗೂ ಮಗನ ನಡುವಿನ ಸಂಬಂಧದ ಅನಾವರಣವನ್ನೂ ನಿರ್ದೇಶಕಿ ರಿಷಿಕಾ ಶರ್ಮಾ. ವಿಜಯ್‌ಗೆ ವ್ಯವಹಾರದಲ್ಲಿರುವ ಚುರುಕುತನ, ಆತನ ದೂರದೃಷ್ಟಿ, ಬ್ಯುಸಿನೆಸ್ ಮಾಡುವ ಹಂಬಲ ಎಲ್ಲದರ ಪರಿಚಯವನ್ನೂ ಸೂಕ್ಷ್ಮವಾಗಿ ನಿರ್ದೇಶಕಿ ರಿಷಿಕಾ ಶರ್ಮಾ ಮಾಡಿಸಿದ್ದಾರೆ. ಆದರೆ ನಿಜವಾಗಿಯೂ ಕತೆಯಲ್ಲಿ ಕಾನ್‌ಫ್ಲಿಕ್ಟ್‌ ಆರಂಭವಾಗುವುದು ವಿಜಯ್ ಸಂಕೇಶ್ವರ್ ಲಾರಿ ಖರೀದಿ ಮಾಡಿದ ಬಳಿಕ.

  ಸಾಲ ಮಾಡಿ ಒಂದು ಲಾರಿ ಖರೀದಿಸಿದ ಬಳಿಕ ವಿಜಯ್ ಸಂಕೇಶ್ವರ್ ಆ ಬಳಿಕ ಎದುರಿಸುವ ಸವಾಲುಗಳು, ಅಡೆ-ತಡೆಗಳು, ದೈಹಿಕ, ಮಾನಸಿಕ ಶ್ರಮಗಳು ಪ್ರೇಕ್ಷಕನನ್ನು ತಾಕುತ್ತವೆ. ತಮ್ಮ ಲಾರಿ ಉದ್ಯಮವನ್ನು ಬೆಳೆಸಲು ವಿಜಯ್ ಸಂಕೇಶ್ವರ್‌ ಮಾಡಿದ ಹೋರಾಟ, ಶ್ರಮದ ಕಥನ ಬಹು ಕುತೂಹಲಕಾರಿಯೂ, ಸ್ಪೂರ್ತಿದಾಯಕವಾಗಿಯೂ ಇದೆ. ಉದ್ಯಮ ಕಟ್ಟುವಲ್ಲಿ ವಿಜಯ್‌ ಸಂಕೇಶ್ವರ್ ಎದುರಿಸಿದ ಸೋಲುಗಳನ್ನು ಅದನ್ನು ಮೆಟ್ಟಿನಿಂತ ಬಗೆಗಳು ನವೋದ್ಯಮಿಗಳಿಗೆ ಸ್ಪೂರ್ತಿ.

  Rating:
  3.0/5

  ಪತ್ರಿಕೋದ್ಯಮದ ಕಡೆಗೆ ಹೊರಳಿದ ವಿಜಯ್ ಸಂಕೇಶ್ವರ್

  ಪತ್ರಿಕೋದ್ಯಮದ ಕಡೆಗೆ ಹೊರಳಿದ ವಿಜಯ್ ಸಂಕೇಶ್ವರ್

  ಲಾರಿ ಉದ್ಯಮವನ್ನು ಕಟ್ಟಿ ನಿಲ್ಲಿಸಿದ ಬಳಿಕ ವಿಜಯ್ ಹೊರಳುವುದು ಪತ್ರಿಕೋದ್ಯಮದ ಕಡೆಗೆ. ಹಿರಿಯ ಪತ್ರಕರ್ತರೊಬ್ಬರು ತಮ್ಮನ್ನು ಹೀಗಳೆದಿದ್ದಕ್ಕೆ ದಿನಪತ್ರಿಕೆಯೊಂದನ್ನೇ ಆರಂಭಿಸುವ ವಿಜಯ್, ಅದೇ ಹಿರಿಯ ಪತ್ರಿಕೋದ್ಯಮಿಯಿಂದ ಎದುರಾದ ಅಡೆ-ತಡೆಗಳನ್ನು ದಾಟಿ ತಮ್ಮ ಪತ್ರಿಕೆಯನ್ನು ನಂಬರ್ ಒನ್ ಮಾಡಿಬಿಡುತ್ತಾರೆ. ನಂತರ ಅದನ್ನು ಮಾರಾಟ ಮಾಡಿ ಮತ್ತೊಂದು ಪತ್ರಿಕೆ ಆರಂಭಿಸಿ ಅದನ್ನೂ ನಂಬರ್ ಒನ್ ಮಾಡುತ್ತಾರೆ.

  ಲಾರಿ ಉದ್ಯಮದ ಸಾಹಸ ಬೆಸ್ಟ್

  ಲಾರಿ ಉದ್ಯಮದ ಸಾಹಸ ಬೆಸ್ಟ್

  ಆದರೆ ವಿಜಯ್‌ ಸಂಕೇಶ್ವರರ ಲಾರಿ ಉದ್ಯಮದ ಸಾಹಸದಷ್ಟು, ಪತ್ರಿಕೋದ್ಯಮದ ಸಾಹಸ ರುಚಿಸುವುದಿಲ್ಲ. ಲಾರಿ ಉದ್ಯಮದ ಕತೆ ಹೇಳುವಾಗ ಡೀಟೇಲಿಂಗ್‌ಗೆ ನೀಡಿದಷ್ಟು ಮತ್ವವನ್ನು ಪತ್ರಿಕೋದ್ಯಮದ ಭಾಗದಲ್ಲಿ ನೀಡಲಾಗಿಲ್ಲ. ಅಲ್ಲದೆ, ಪತ್ರಿಕೋದ್ಯಮದ ವಿಷಯದಲ್ಲಿ ಹೇಳದೇ ಉಳಿದ ವಿಷಯಗಳೂ ಇವೆ ಎಂದೆನಿಸುತ್ತದೆ. ಮೊದಲು ಮಾಡಿದ ಪತ್ರಿಕೆಯನ್ನು ಮಾರಾಟ ಮಾಡಿದ್ದಕ್ಕೆ ನೀಡುವ ಕಾರಣ ಕನ್‌ವಿನ್ಸಿಂಗ್ ಎನಿಸುವುದಿಲ್ಲ. ಹಾಗೂ ಅದಾದ ಐದಾರು ವರ್ಷಗಳ ಬಳಿಕ ಮತ್ತೊಂದು ಪತ್ರಿಕೆ ಆರಂಭ ಮಾಡುವುದಕ್ಕೂ ಸೂಕ್ತ ಕಾರಣ ನೀಡುವುದಿಲ್ಲ.

  ನಿಹಾಲ್ ರಜಪೂತ್ ನಟನೆ ಚೆನ್ನಾಗಿದೆ

  ನಿಹಾಲ್ ರಜಪೂತ್ ನಟನೆ ಚೆನ್ನಾಗಿದೆ

  ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಟಿಸಿರುವ ನಿಹಾಲ್ ರಜಪೂತ್ ಚೆನ್ನಾಗಿ ನಟಿಸಿದ್ದಾರೆ. ತೆರೆಯ ಮೇಲೆ ಹೆಚ್ಚು ಕಾಣಿಸಿಕೊಳ್ಳುವುದು ಅವರೇ. ಇನ್ನುಳಿದ ಪಾತ್ರಗಳಲ್ಲಿ ನಟಿಸಿರುವ ಅನಂತ್‌ನಾಗ್, ರವಿಚಂದ್ರನ್, ಶೈನ್ ಶೆಟ್ಟಿ, ದಯಾಳ್ ಪದ್ಮನಾಭ್, ವಿಲನ್ ಪಾತ್ರಧಾರಿ ಪ್ರಕಾಶ್ ಬೆಳವಾಡಿ ಎಲ್ಲರೂ ಪಾತ್ರಕ್ಕನುಗುಣವಾಗಿ ಚೆನ್ನಾಗಿ ನಟಿಸಿದ್ದಾರೆ. ಆದರೆ ಮಹಿಳಾ ಪಾತ್ರಗಳಿಗೆ ತುಸುವೂ ಪ್ರಾಮುಖ್ಯತೆ ಎಂಬುದಿಲ್ಲ. ಅವು ಆಟಕ್ಕಷ್ಟೆ ಲೆಕ್ಕ. ಸಿನಿಮಾದ ಪ್ರಮುಖ ಹೈಲೈಟ್‌ಗಳಲ್ಲೊಂದು ಚಿತ್ರದ ಸಂಭಾಷಣೆ, ಉತ್ತರ ಕರ್ನಾಟಕದಲ್ಲಿ ಕತೆ ನಡೆಯುವ ಕಾರಣ ಆ ಭಾಗದ ಗಾದೆಗಳ ಬಳಕೆ ಹೇರಳವಾಗಿದೆ. ಅದರಲ್ಲಿಯೂ ಪ್ರಕಾಶ್ ಬೆಳವಾಡಿಯ ಪಾತ್ರದ ಸಂಭಾಷಣೆ ಬೊಂಬಾಟ್ ಆಗಿವೆ.

  ಕಂಜೂಸಿ ಮಾಡಿದ ನಿರ್ಮಾಪಕರು

  ಕಂಜೂಸಿ ಮಾಡಿದ ನಿರ್ಮಾಪಕರು

  ತಾಂತ್ರಿಕವಾಗಿ ಸಿನಿಮಾ ಚೆನ್ನಾಗಿದೆ. ಸಿನಿಮಾದ ಮೊದಲಾರ್ಧ ರಿಚ್‌ ಆಗಿ ಕಾಣಿಸುತ್ತದೆ, ಆದರೆ ಅಂತ್ಯಕ್ಕೆ ಬರುವ ವೇಳೆಗೆ ಯಾಕೋ ನಿರ್ಮಾಪಕರು ಜಿಪುಣತನ ಮಾಡಿದಂತೆನಿಸುತ್ತದೆ. ಟೈಮ್ಸ್‌ ಗ್ರೂಪ್‌ನವರು ಮೀಟಿಂಗ್ ಮಾಡುವ ರೂಂ ಯಾವುದೋ ಹಳೆಯ ಕಟ್ಟಡದಂತಿದೆ. ಮೊದಲ ಪತ್ರಿಕೆ ಪ್ರಾರಂಭ ಮಾಡಲು ವಿಜಯ್‌ ಸಂಕೇಶ್ವರರು ಮಾಡುವ ಸಭೆಯೂ ಅಂಥಹುದೇ ಸ್ಥಳದಲ್ಲಿ ನಡೆಯುತ್ತದೆ. ಸೆಟ್ ಪ್ರಾಪರ್ಟಿಗಳಿಗೆ ಹೆಚ್ಚು ಗಮನಹರಿಸಲಾಗಿಲ್ಲ. ಹಿನ್ನೆಲೆ ಸಂಗೀತ ಪರವಾಗಿಲ್ಲ. ಎರಡು ಹಾಡುಗಳು ಚೆನ್ನಾಗಿವೆ.

  ನಿರಾಸೆ ಮೂಡಿಸದ ಅಚ್ಚು-ಕಟ್ಟಾದ ಸಿನಿಮಾ

  ನಿರಾಸೆ ಮೂಡಿಸದ ಅಚ್ಚು-ಕಟ್ಟಾದ ಸಿನಿಮಾ

  ರಾಜಕಾರಣ, ಉದ್ಯಮ ಎರಡರಲ್ಲೂ ಸಕ್ರಿಯವಾಗಿರುವ ಸಿರಿವಂತ ವ್ಯಕ್ತಿಯೊಬ್ಬರ ಬಗ್ಗೆ ಅವರ ಪುತ್ರನೇ ಸಿನಿಮಾ ಮಾಡಿದಾಗ ಇದೊಂದು ಸ್ವ-ಪ್ರಶಂಸೆಯ ಯತ್ನವಿರಬಹುದೆಂಬ ಅನುಮಾನ ಸಹಜ. 'ವಿಜಯಾನಂದ' ವಿಷಯದಲ್ಲಿ ಅದು ಪೂರ್ಣ ನಿಜವಲ್ಲ. ಸಿನಿಮಾದಲ್ಲಿ ವಿಜಯ್ ಸಂಕೇಶ್ವರ್ ಪಾತ್ರ ತನಗೆ ಎದುರಾಗುವ ಎಲ್ಲ ಅಡೆ-ತಡೆಗಳನ್ನು ತಾನೇ ದಾಟಿಬಿಡುವುದಿಲ್ಲ, ಹಲವರ ಸಹಾಯ ಕೇಳುತ್ತಾರೆ, ಮಂಡಿ ಊರುತ್ತಾರೆ, ತನಗೆ ಸಹಾಯ ಮಾಡಿದವರ, ತನ್ನ ಏಳ್ಗೆಗೆ ಕಾಣಿಕೆ ಕೊಟ್ಟವರಿಗೆ ಧನ್ಯವಾದ ಹೇಳುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ 'ವಿಜಯಾನಂದ' ನಿರಾಸೆ ಮಾಡದ ಅಚ್ಚ-ಕಟ್ಟಾದ ಸಿನಿಮಾ.

  English summary
  Businessman, politician Vijay Sankeshwar's biopic Vijayananda Kannada movie review. Movie is good.
  Friday, December 9, 2022, 7:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X