For Quick Alerts
ALLOW NOTIFICATIONS  
For Daily Alerts

  ವಿಮರ್ಶೆ: ಪ್ರಶಾಂತವಾಗಿರೋ ರಾಕ್ಷಸನ ಜಾದೂ, ಯಶ್ ಇಲ್ಲಿ ರಾಕಿಂಗ್ ರಣಹದ್ದು

  By ಭಾಸ್ಕರ ಬಂಗೇರ
  |

  "ಅವನು ಇಲ್ಲಿಗ್ ಯಾಕ್ ಬಂದಿದಾನೆ ಅಂತ ಯೋಚ್ನೆ ಮಾಡ್ತಿದ್ದೆ. ಈಗ್ ಗೊತ್ತಾಯ್ತು, ಅವನು ಕಟ್ಟುಕಥೆಗಳನ್ನ ನಿಜ ಮಾಡೋಕೆ ಬಂದಿದಾನೆ ಅಂತ" ಕೆ.ಜಿ.ಎಫ್ ಸಿನೆಮಾದ ಸಂಭಾಷಣೆಯ ಸಣ್ಣ ಸಾಲಿದು. ಕನ್ನಡ ಚಿತ್ರರಂಗದ ಮಟ್ಟಿಗೆ ನಾವುಗಳು ಕಟ್ಟಿಕೊಂಡಿದ್ದ ಮಿತಿಗಳೆಂಬ ಗೋಡೆಗಳಿಗೂ ಈ ಮಾತು ಅನ್ವಯವಾಗುತ್ತದೆ.

  ನಮ್ಮ ಸಿನೆಮಾ ಮಾರುಕಟ್ಟೆಯ ವಿಸ್ತಾರದ ಬಗ್ಗೆ ನಮ್ಮಲ್ಲಿದ್ದ ಪುಕ್ಕಲುತನವನ್ನು ಒಡೆದು ಪುಡಿಮಾಡಿದ ಸಿನೆಮಾ ಕೆ.ಜಿ.ಎಫ್. ಇಂದಿನ ಮಾರುಕಟ್ಟೆ ತಂತ್ರದ ಎಲ್ಲ ಸಾಧ್ಯತೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಂಡು ಕನ್ನಡಿಗರ ಸಿನೆಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿದ್ದಕ್ಕೆ ನಾವು ಮೊದಲು ಧನ್ಯವಾದ ತಿಳಿಸಬೇಕು.

  ಕೆ.ಜಿ.ಎಫ್ ಟ್ರೈಲರ್ ನೋಡಿದವರಿಗೆ ಇದೊಂದು ಮಾಸ್ ಸಿನೆಮಾದಂತೆ ಕಾಣಿಸುತ್ತದೆ. ಆದರೆ ಚಿತ್ರಕಥೆ ಹೆಣೆದ ಪರಿ ಕೆ.ಜಿ.ಎಫ್ ಕೇವಲ ಒಂದು ಬಗೆಯ ಸಿನೆಮಾ ಎನ್ನುವ ಲೇಬಲ್ ಅಂಟಿಸಲಾಗದ ಸಿನೆಮಾವಾಗಿ ಮೂಡಿ ಬಂದಿದೆ. ಸಿನೆಮಾದ ಆತ್ಮದ ಕೂಗು ಪರಿಪೂರ್ಣ ಮನರಂಜನೆ. ನೈತಿಕವಾಗಿ ಯಾವುದು ಸರಿ, ಉದ್ದೇಶ ಶುದ್ಧಿಯ ಬಗ್ಗೆ ಅತಿಯಾದ ಗಮನ, ಚಿತ್ರಕಥೆ ಹೀಗೆ ಸಾಗಬೇಕು, ಗಂಭೀರ ದೃಶ್ಯದ ನಡುವೆ ಹಾಸ್ಯ ಇಣುಕಬಾರದು ಎನ್ನುವ ಯಾವುದೇ ಸ್ಥಾಪಿತ ನಂಬಿಕೆಗಳನ್ನು ಮುರಿದು ಮಾಡಿದ ಸಿನೆಮಾವಿದು.

  ಬೇಜಾರಾಗದಂತೆ ಕಥೆ ಸಾಗುತ್ತದೆ

  ಕಥೆ! ಕಥೆಗಳನ್ನು ಸಿನೆಮಾ ಮಾಡುವ ಕಾಲ ಹೋಗಿ ಬಹಳ ಸಮಯವಾಗಿದೆ. ಸಿನೆಮಾ ತನ್ನದೇ ವಾತಾವರಣವನ್ನು ಸೃಷ್ಟಿಸಿಕೊಂಡು ಚಿತ್ರಮಂದಿರದ ಒಳಗೆ ತನ್ನನ್ನು ನೋಡುತ್ತ ಕುಳಿತ ಪ್ರೇಕ್ಷಕರನ್ನು ಅವರ ದೈನಂದಿನ ದುಗುಡದಿಂದ ಹೊರಗಡೆ ಎಳೆದು ತಂದು ಬೇಜಾರಾಗದಂತೆ ನೋಡಿಕೊಳ್ಳಬೇಕು. ಆ ಕೆಲಸವನ್ನು ಕೆ.ಜಿ.ಎಫ್ ಮಾಡುತ್ತದೆ.

  ಅಧಿಕಾರ ದಾಹ ಕುರಿತಾದ ಸಿನಿಮಾವಿದು

  ದುಡಿಯುವ ವರ್ಗದ ಶೋಷಣೆಯ ಕುರಿತಾಗಿ ಬಹಳಷ್ಟು ಸಿನೆಮಾಗಳು ಬಂದಿವೆ. ಸಿನೆಮಾದ ಹೆಸರೇ ಹೇಳುವಂತೆ ಕೆ.ಜಿ.ಎಫ್ ಪ್ರದೇಶದ ಗಣಿಗಳಲ್ಲಿ ನಡೆಯುವ ಅಮಾನವೀಯ ಕಾರ್ಮಿಕ ಶೋಷಣೆ, ಅದರ ಸುತ್ತ ಬೆಳೆದು ನಿಂತ ಅಧಿಕಾರ ದಾಹದ ಕುರಿತಾದ ಸಿನೆಮಾವಿದು. ಉಳಿದಂತೆ ಇದು ಈ ಊರಿನಿಂದ ಆ ಊರಿಗೆ ಕಥೆ ಬೆಳೆದು ಮತ್ತೆ ಇಲ್ಲಿಗೆ ಬಂದು ನಿಲ್ಲುತ್ತಾ ದೂರದೂರನು ನೋಡುವ ಸಿನೆಮಾ. ಹೆಚ್ಚಿನ ಮಾಹಿತಿಯನ್ನು ಸಿನೆಮಾ ನೋಡಿಯೇ ತಿಳಿದುಕೊಳ್ಳಬೇಕು.

  ಯಶ್ -ಪಾತ್ರದಲ್ಲಿ ಜೀವಿಸಿದ್ದಾರೆ

  ಯಶ್ ತೆರೆಯ ಮೇಲೆ ಅದ್ಭುತವಾಗಿ ಕಾಣಿಸುವುದರ ಜೊತೆಗೆ ಪಾತ್ರವನ್ನು ಜೀವಿಸಿದ್ದಾರೆ. ಮಾತುಗಳ ಮಳೆಗೆ ಅವಕಾಶ ಇಲ್ಲದ ಹೊರತಾಗಿಯೂ ಗಣಿ ಧೂಳಿನಲ್ಲಿಯು ಯಶ್ ಹೊಳೆಯುತ್ತಾರೆ. ಪ್ರಶಾಂತ್ ನೀಲ್ ಹೊಳೆಯುವಂತೆ ಮಾಡಿದ್ದಾರೆ. ಪಾತ್ರ ವಿಜೃಂಭಣೆ ಇನ್ನೇನು ಹೆಚ್ಚಾಗುತ್ತಿದೆ ಎನ್ನುವಷ್ಟರಲ್ಲೇ ಯಶ್ ಪಾತ್ರವನ್ನು ಎಳೆದು ತಂದು ಚಿತ್ರಕತೆ ಮಾಮೂಲಿ ಅನಿಸದಂತೆ ನಿರ್ದೇಶಕರು ನಿಗಾ ವಹಿಸಿದ್ದಾರೆ.

  ಚಿತ್ರಕಥೆ ಜೋಡಿಸುವ ಕಸೂತಿ ಕಲೆ ಒಲಿದಿದೆ

  ಉಗ್ರಂ ಸಿನೆಮಾದಂತೆಯೇ ಇಲ್ಲಿಯೂ ಕೂಡ ಪ್ರಶಾಂತ್ ನೀಲ್ ಸಾಮರ್ಥ್ಯ ಕಾಣಿಸುವುದು ಅವರು ದೃಶ್ಯಗಳನ್ನು ಕಟ್ಟುವ ಕಲೆಯಿಂದ. ದೃಶ್ಯದ ಕ್ಯಾನ್ವಾಸ್'ಗಳ ವ್ಯಾಪ್ತಿ ಹಿರಿದಾದದ್ದು ಹಾಗು ಅದನ್ನು ತುಂಬಿಸಲು ಬಳಸುವ ಬಣ್ಣಗಳು ಕೂಡ ವೈವಿದ್ಯಮಯವಾದವುಗಳು. ಭಿನ್ನ ರಸದ ಬಿಡಿಬಿಡಿ ದೃಶ್ಯಗಳನ್ನು ಚಿತ್ರಕಥೆಗೆ ಜೋಡಿಸುವ ಕಸೂತಿ ಅವರಿಗೆ ಒಲಿದಿದೆ. ಹೀಗಾಗಿಯೇ ಕೆ.ಜಿ.ಎಫ್ ಸಿನೆಮಾದಲ್ಲಿ ರಕ್ತ ಸುರಿಯುತ್ತಲೇ ಇದ್ದರು ಅದರ ಕಮುಟು ನಮ್ಮನ್ನು ಕಥೆಯ ಆಚೆಗೇ ಹಿಂಸೆ ಕೊಡುವುದಿಲ್ಲ.

  ಸಂಗೀತ, ಛಾಯಾಗ್ರಾಹಣ ಕಥೆಗೆ ಪೂರಕವಾಗಿದೆ.

  ಮೊದಲೆಲ್ಲ ಸಿನೆಮಾದ ಹಿನ್ನೆಲೆ ಸಂಗೀತದ ಕುರಿತು ಚರ್ಚೆಯೇ ಇರಲಿಲ್ಲ. ಅದಕ್ಕೊಂದು ಗಾಂಭೀರ್ಯ ತಂದು ಕೊಟ್ಟವರು ರವಿ ಬಸ್ರೂರು. ಪ್ರಶಾಂತ್ ನೀಲ್ ಕಟ್ಟಿದ ದೃಶ್ಯಗಳು ಎಲ್ಲಿಯೂ ಅಲುಗಾಡದಂತೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರು ಶ್ರಮ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಅಂತೆಯೇ ಕ್ಯಾಮರ ಹೊತ್ತು ಚಿಗರೆಯ ವೇಗದಲ್ಲಿ ಚಲಿಸುತ್ತ ನಿರ್ದೇಶಕರ ಕಲ್ಪನೆಯನ್ನು ವಾಸ್ತವಕ್ಕೆ ಹಿಡಿದು ಕೊಟ್ಟಿರುವ ಛಾಯಾಗ್ರಾಹಕ ಭುವನ್ ಗೌಡ ಅವರ ಕಾರ್ಯ ಕೂಡ ಪ್ರಶಂಸನೀಯ.

  ಕುತೂಹಲ ಮೂಡಿಸುತ್ತದೆ

  ಹಾಸ್ಯಲೇಪಿತ ಒಂಟಿ ಸಾಲುಗಳ ಸಂಭಾಷಣೆ, ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಅಬ್ಬರದ ಮಾತುಗಳು, ಫ್ರೌಡ ಎನಿಸುವ ಉಪದೇಶಗಳು ಸಿನೆಮಾದ ಮತ್ತೊಂದು ಆಕರ್ಷಣೆ. ಕಥೆ ಬೆಳೆದು ನಿಲ್ಲಬೇಕಾದ ಸಂದರ್ಭದಲ್ಲಿ ಹೀಗೆ ಬಂದು ಹಾಗೆ ಹೋಗುವ "ಜೋಕೆ" ಹಾಡಿನ ಅಗತ್ಯ ಇರಲಿಲ್ಲವಾಗಿ ತಾಂತ್ರಿಕವಾಗಿ ಉತ್ತಮ ಗುಣಮಟ್ಟ ಇರುವ ಚಿತ್ರಮಂದಿರದಲ್ಲೇ ನೋಡಬೇಕಾದ ಸಿನೆಮಾ. ಇದರ ಮುಂದುವರಿದ ಭಾಗದ ಕುರಿತು ಕುತೂಹಲ ಹೆಚ್ಚಾಗಿದೆ.

  English summary
  Rocking Star Yash and Shrinidhi Shetty starrer KGF film is path breaking film, Prashanth Neel direction, Bhuvan Gowda Cinematography is worth praising says review by Bhaskar Bangera.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more