»   »  ಹೃದಯ ತಟ್ಟುತ್ತಿರುವ ಬದುಕು ಜಟಕಾಬಂಡಿ

ಹೃದಯ ತಟ್ಟುತ್ತಿರುವ ಬದುಕು ಜಟಕಾಬಂಡಿ

Posted By:
Subscribe to Filmibeat Kannada
Zee Kannada's Baduku Jataka Bandi
ಬದುಕಿನಲ್ಲಿ ಏಳು ಬೀಳು ಕಂಡವರ ನೈಜ ಜೀವನದ ಕಥೆಯನ್ನು ಆಧಾರವಾಗಿಟ್ಟುಕೊಂಡು ಜೀ ಕನ್ನಡ ಪ್ರತಿದಿನ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರ ಮಾಡುತ್ತಿರುವ 'ಬದುಕು ಜಟಕಾ ಬಂಡಿ' ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಪ್ರಕ್ರಿಯೆಯಿಂದ ಉತ್ತೇಜನಗೊಂಡ ಜೀ ಕನ್ನಡ, ಜೀವನದಲ್ಲಿ ನೊಂದವರ ಸಹಾಯಕ್ಕಾಗಿ ಜೀ ಫೌಂಡೇಷನ್ ಮೂಲಕ ದಾನಿಗಳಿಗೆ ಅವಕಾಶ ಕಲ್ಪಿಸಿದೆ.

ಇತ್ತೀಚೆಗೆ ಏಡ್ಸ್ ರೋಗಿಯ ಸಂಚಿಕೆಯನ್ನು ಚಿತ್ರೀಕರಿಸುವ ಸಂದರ್ಭದಲ್ಲೇ ಚಿತ್ರಿಕರಣ ತಂಡದಲ್ಲಿರುವ ಹುಡುಗರು ಸೇರಿ ಅವರಿಗೆ ಸುಮಾರು 20 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಕೊಟ್ಟರು. ಸಂಚಿಕೆ ಪ್ರಸಾರವಾದಾಗ ಒಂದೇ ದಿನದಲ್ಲಿ ನೂರು ರೂಪಾಯಿಗಳಿಂದ ಹಿಡಿದು ಸಾವಿರ ರೂಪಾಯಿಗಳ ಡಿಡಿಗಳು ಜೀ ಫೌಂಡೇಶನ್ ಹೆಸರಿಗೆ ಬಂದವು. ಈಗ ಆ ಹಣವನ್ನು ಏಡ್ಸ್ ರೋಗಿಗೆ ನೀಡುವ ಏರ್ಪಾಡು ಮಾಡಲಾಗುತ್ತಿದೆ ಎಂದು ಕಾರ್ಯಕ್ರಮ ಸಹಾಯಕಿ ಕುಸುಮಾ ತಿಮ್ಮಯ್ಯ ಹೇಳುತ್ತಾರೆ.

ಕಾರ್ಯಕ್ರಮ ಪ್ರಸಾರವಾದ ಒಂದೇ ವಾರದಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. TAM ವರದಿಯ ಪ್ರಕಾರ ಸರಾಸರಿ 1.5 ಹಾಗೂ ಅತೀ ಹೆಚ್ಚು ಎಂದರೆ 2.09 ಟಿವಿಆರ್ ಪಡೆದುಕೊಂಡಿದೆ. ಕೇವಲ TAM ವರದಿ ಮಾತ್ರವಲ್ಲದೆ ಕಳೆದ ವಾರಪೂರ್ತಿ ಫೋನ್ ಕಾಲ್‌ಗಳು, ಈ ಮೇಲ್‌ಗಳು, ಪತ್ರಗಳನ್ನು ಕರ್ನಾಟಕದಾದ್ಯಂತದಿಂದ ಜೀ ಕನ್ನಡಕ್ಕೆ ಬಂದಿವೆ ಎಂದು ವಾಹಿನಿಯ ಮಾರ್ಕೆಟಿಂಗ್ ಹಾಗೂ ಬ್ರಾಂಡ್ ಪ್ರಮೋಷನ್ ವಿಭಾಗದ ಹಿರಿಯ ಮೆನೆಜರ್ ವರ್ಷಾ ಗೌಡ ಹೇಳಿದರು.

ಜೀವನದ ಏಳು ಬೀಳುಗಳಿಂದ ಬೇಸತ್ತ ಎಷ್ಟೋ ವ್ಯಕ್ತಿಗಳಿಗೆ ಆಸರೆಯಾಗುವ ಹಾಗೂ ಸಾಂತ್ವನವಾಗುವ ಉದ್ದೇಶವಿರಿಸಿಕೊಂಡು ಪ್ರಾರಂಭವಾಗಿರುವ ಈ ಕಾರ್ಯಕ್ರಮದಿಂದ ಅಂತಹ ವ್ಯಕ್ತಿಗಳು ಸಹಾಯ ಪಡೆದುಕೊಳ್ಳಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈಗ ಬರುತ್ತಿರುವ ಪ್ರತಿಕ್ರಿಯೆಗಳಿಂದ ನಮ್ಮ ಶ್ರಮ ಸಾರ್ಥಕವಾಗಿದೆ ಎನಿಸುತ್ತಿದೆ ಎಂದು ಜೀಕನ್ನಡದ ಮುಖ್ಯಸ್ಥ ಜೆ.ಶೇಖರ್ ಹೇಳುತ್ತಾರೆ.

ಸಮಾಜದ ಮುಖ್ಯ ವಾಹಿನಿಗೆ ಬರದ ಎಷ್ಟೋ ಸಮಸ್ಯೆಗಳ ಬಗ್ಗೆ ಈ ಕಾರ್ಯಕ್ರಮ ಬೆಳಕು ಚೆಲ್ಲುತ್ತಿದೆ. ಮುಖ್ಯವಾಗಿ ಕೌಟುಂಬಿಕ ದೌರ್ಜನ್ಯ, ಸಾಮಾಜಿಕ ಪಿಡುಗುಗಳು, ಸಲಿಂಗಕಾಮ, ಆಸಿಡ್ ದಾಳಿಗೆ ಒಳಗಾದವರು, ವರದಕ್ಷಿಣೆ ದಾಹಕ್ಕೆ ತುತ್ತಾದವರು, ಕಣ್ಮರೆಯಾದ ವ್ಯಕ್ತಿಗಳು, ವೈದ್ಯಕೀಯ ನಿರ್ಲಕ್ಷ್ಯದಿಂದ ಬದುಕು ನರಕವಾಗಿಸಿಕೊಂಡವರು, ಹದಿಹರೆಯದ ಪ್ರೇಮ ಪ್ರಕರಣಗಳು, ಎಚ್.ಐ.ವಿ ಬಾದಿತರು, ಹೀಗೆ ಬದುಕಿನ ವಿಪರ್ಯಾಸಗಳಿಗೆ ಬಲಿಯಾದವರು, ವಿಪರ್ಯಾಸಗಳನ್ನು ಮೆಟ್ಟಿ ನಿಂತವರನ್ನು ನೇರವಾಗಿ ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಂದರ್ಶಿಸಲಾಗುತ್ತಿದೆ.
ಈ ರೀತಿಯ ಸಮಸ್ಯೆ ಇರುವವರು bjbzee@zeenetwork.com ಗೆ ಮೇಲ್ ಮಾಡಬಹುದು ಅಥವಾ 080-41231575 , 080-32449482ಅಥವಾ 9900549900 ದೂರವಾಣಿಗೆ ಸಂಪರ್ಕಿಸಬಹುದು ಎಂದು ಜೀ ಕನ್ನಡ ನಾನ್ ಫಿಕ್ಷನ್ ಮುಖ್ಯಸ್ಥೆ ಎಚ್.ಎಸ್.ವೈಷ್ಣವಿ ಹೇಳುತ್ತಾರೆ.

ಬದುಕು ಜಟಕಾಬಂಡಿಯಲ್ಲಿ ಪ್ರಸಾರವಾಗುವ ಸಂಚಿಕೆಗಳನ್ನು ವೀಕ್ಷಿಸಿದವರು ಸಹಾಯ ಮಾಡುವ ಉದ್ದೇಶವಿದ್ದಲ್ಲಿ ಚೆಕ್ ಅಥವಾ ಡಿಡಿಯನ್ನು 'Zee Foundation ಹೆಸರಿನಲ್ಲಿ ಜೀ ಕನ್ನಡ, 39, ಯುನೈಟೆಡ್ ಮ್ಯಾನಷನ್ಸ್, 3 ನೇ ಮಹಡಿ, ಎಂ.ಜಿ.ರಸ್ತೆ, ಬೆಂಗಳೂರು-01 ಈ ವಿಳಾಸಕ್ಕೆ ಕಳುಹಿಸ ಬಹುದಾಗಿದೆ. ದಾನಿಗಳು ಜೊತೆಗೆ ಕಳುಹಿಸುವ ಪತ್ರದಲ್ಲಿ ಹಣ ಯಾರಿಗೆ ಕೊಡಬೇಕು ಎಂದು ಸ್ಪಷ್ಟವಾಗಿ ಬರೆಯಬೇಕು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada