»   » ಫೆಬ್ರವರಿ 18ರ ಮುಂಜಾನೆಯಿಂದ ಜನಶ್ರೀ ನ್ಯೂಸ್

ಫೆಬ್ರವರಿ 18ರ ಮುಂಜಾನೆಯಿಂದ ಜನಶ್ರೀ ನ್ಯೂಸ್

Posted By:
Subscribe to Filmibeat Kannada
Janashree News on Feb 18
ಕಡೆಗೂ ಬಳ್ಳಾರಿ ರೆಡ್ಡಿಗಳ ಒಡೆತನದ 'ಜನಶ್ರೀ' ವಾಹಿನಿ ಯಾವಾಗ ಪ್ರಸಾರವಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಗ ಪ್ರಾರಂಭವಾಗುತ್ತದೆ, ಈಗ ಪ್ರಾರಂಭವಾಗುತ್ತದೆ ಎಂಬ ಸುದ್ದಿಗಳಿಗೆ ತೆರೆ ಬಿದ್ದಿದೆ. ಇದೇ ಫೆಬ್ರವರಿ 18ರ ಮುಂಜಾನೆಯಿಂದ ಜಾಣರ ಪೆಟ್ಟಿಗೆಯಲ್ಲಿ ಜನಶ್ರೀ ಪ್ರತ್ಯಕ್ಷವಾಗಲಿದೆ.

ಕಳೆದ ಕೆಲವು ತಿಂಗಳಿಂದ ಜನಶ್ರೀ ವಾಹಿನಿ ದೀಪಾವಳಿಗೆ ಆರಂಭವಾಗುತ್ತದೆ, ಇಲ್ಲ ಇಲ್ಲ ರಾಜ್ಯೋತ್ಸವಕ್ಕಂತೆ, ಹೊಸ ವರ್ಷಕ್ಕೆ ಗ್ಯಾರಂಟಿ, ಸಂಕ್ರಾಂತಿ ಹಬ್ಬಕ್ಕೆ ಎಳ್ಳುಬೆಲ್ಲ ಬೀರಲಿದೆ...ಹೀಗೆ ಪುಂಕಾನು ಪುಂಕ ಸುದ್ದಿಗಳು ಮಾಧ್ಯಮ ವಲಯದಲ್ಲಿ ಕಿವಿಯಿಂದ ಕಿವಿಗೆ ಹರಿದಾಡಿದ್ದವು. ಜನಶ್ರೀ ವಾಹಿನಿ ಆರಂಭವಾಗುತ್ತದೋ ಇಲ್ಲವೋ ಎಂಬ ಗುಮಾನಿಯೂ ಸಣ್ಣಗೆ ಸುಳಿದಾಡಿತ್ತು.

"ಇದೇ ಫೆಬ್ರವರಿ 18ರ ಮುಂಜಾನೆ.... ಕನ್ನಡ ಟಿವಿ ಜಗತ್ತಿನಲ್ಲಿ ಒಂದು ಹೊಸ ಕಿರಣ... ಜನಶ್ರೀ ನ್ಯೂಸ್.... ಜನಮನ ದನಿ... ಜನರ ಬಳಿಗೆ ಜನಶ್ರೀ ಬಳಗ" ಎಂಬ ಬಣ್ಣದ ಜಾಹೀರಾತು ಇಂದಿನ (ಫೆ.5) 'ವಿಜಯ ಕರ್ನಾಟಕ' ಮುಖಪುಟದಲ್ಲಿ ಲಕಲಕ ಎಂದು ಹೊಳೆಯುತ್ತಿದೆ.

ಇಷ್ಟಕ್ಕೂ ಫೆಬ್ರವರಿ 18ರಂದು ಅಂತಹ ವಿಶೇಷ ಏನಿದೆ ಎಂದು ಕ್ಯಾಲೆಂಡರ್ ತಿರುವಿದರೆ ಅಂದು 'ಭರತ ಹುಣ್ಣೆಮೆ' ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಜನಶ್ರೀ ವಾಹಿನಿಗೆ ಒಳ್ಳೆಯ ಮುಹೂರ್ತವನ್ನೇ ರೆಡ್ಡಿಗಳು ಆಯ್ಕೆ ಮಾಡಿಕೊಂಡಿದ್ದಾರೆ. ಕೋರಮಂಗಲ ಬಿಗ್ ಬಜಾರ್‌ನ ನಾಲ್ಕನೆ ಮಹಡಿಯಲ್ಲೀಗ ಸಂಭ್ರಮದ ವಾತಾವರಣ ಮನೆಮಾಡಿದೆ.

ಸುಮಾರು ಹತ್ತು ವರ್ಷಗಳಿಂದ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅನಂತ ಚಿನಿವಾರ ಅವರ ಸಂಪಾದಕತ್ವದಲ್ಲಿ ಜನಶ್ರೀ ವಾಹಿನಿ ಪ್ರಸಾರ ಆರಂಭಿಸಲಿದೆ. ಅಭಿಮಾನ ಪತ್ರಿಕೆಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಚಿನಿವಾರ ಬಳಿಕ ಸ್ಟಾರ್ ಆಫ್ ಮೈಸೂರು, ಟಿವಿ ಟುಡೆ, ಇಂಡಿಯನ್ ಎಕ್ಸ್‌ಪ್ರೆಸ್, ದಿನತಂತಿ, ಉದಯ ಟಿವಿ, ಸುವರ್ಣ ಮತ್ತು ಓ ಮನಸೆ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪತ್ರಕರ್ತ ರವಿ ಬೆಳಗೆರೆ ಅವರು 'ಬ್ರೇಕ್‌ಫಾಸ್ಟ್' ಎಂಬ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

English summary
Much awaited Kannada news channel 'Janashree News' launch on Feb 18, 2011. The Bellary Reddy brothers owned TV channel reported today that the broadcasting is launched on Insat 2E satellite. Anatha Chinivara lead the channel as editor. Ravi belegere would be anchoring a program called breakfast.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada