»   »  ರಿಯಾಲಿಟಿ ಶೋನಲ್ಲಿ ರೀಯಲ್ ಮದುವೆ

ರಿಯಾಲಿಟಿ ಶೋನಲ್ಲಿ ರೀಯಲ್ ಮದುವೆ

Posted By:
Subscribe to Filmibeat Kannada
Real marriage in reality show
ಬೆಂಗಳೂರು, ಅ. 16 : ಬಂಧುಬಾಂಧವರ ಅಣತಿಯನ್ನು ಧಿಕ್ಕರಿಸಿ ಪ್ರೇಮಿಸುವ ಹುಡುಗ ಹುಡುಗಿಯ ಮದುವೆ ದೇವಸ್ಥಾನಗಳಲ್ಲಿ, ಅಥವಾ ಪೊಲೀಸರ ಸಹಾಯದಿಂದ ಪೊಲೀಸು ಸ್ಟೇಷನ್ ನಲ್ಲಿ ನಡೆಯುವುದು ಅಪರೂಪವೇನಲ್ಲ. ಆದರೆ, ರಿಯಾಲಿಟಿ ಶೋನಲ್ಲಿಯೇ ಪ್ರೇಮಿಗಳು ಸಪ್ತಪದಿ ತುಳಿದಿದ್ದು ಅಪರೂಪ. ಇಂಥದೊಂದು ಅಪರೂಪದ ಗಳಿಗೆಗೆ ಜೀ ಕನ್ನಡದಲ್ಲಿ ಬರುತ್ತಿರುವ ಬದುಕು ಜಟಕಾ ಬಂಡಿ ಸಾಕ್ಷಿಯಾಗಿದೆ.

ಸೋಮವಾರ ಮಧ್ಯಾಹ್ನ 1.30ಕ್ಕೆ ಪ್ರಸಾರ ಕಾಣುತ್ತಿರುವ ಬದುಕು ಜಟಕಾಬಂಡಿ ಸಂಚಿಕೆ, ಎಲ್ಲಾ ಸಾಮಾಜಿಕ ವೈರುಧ್ಯಗಳನ್ನು ಮೀರಿ ಎರಡು ಯುವ ಮನಸ್ಸುಗಳನ್ನು ಮದುವೆಯ ಮೂಲಕ ಒಂದು ಗೂಡಿಸಿದೆ. ಕಾರ್ಯಕ್ರಮ ನಿರ್ಮಾಣದ ಸಮಯದಲ್ಲೇ ನಿಜವಾದ ಮದುವೆ ನಡೆದದ್ದು ರಿಯಾಲಿಟಿ ಶೋಗಳ ಇತಿಹಾಸದಲ್ಲಿಯೇ ಮೊದಲನೆಯದು.

ಜೈನ ಸಮುದಾಯಕ್ಕೆ ಸೇರಿದ ನೇಮಿನಾಥ್ ಹಾಗೂ ಕುರುಬ ಜಾತಿ ಹಿನ್ನೆಲೆಯ ಸಂಗೀತ ಎಂಬ ಯುವ ಪ್ರೇಮಿಗಳ ಮದುವೆಗೆ, ಜಾತಿಯ ಸಂಕೋಲೆ ಅಡ್ಡಗಾಲು ಹಾಕಿತ್ತು. ಜಾತಿಯ ಕಾರಣದಿಂದಲೇ ಸಮಾಜ ಹಾಗೂ ಕುಟುಂಬದಿಂದ ಬೆದರಿಕೆ ಎದುರಿಸುತ್ತಿದ್ದ ಈ ಪ್ರೇಮಿಗಳ ಬಾಳು ಬದುಕು ಜಟಕಾಬಂಡಿಯ ಮೂಲಕ ಈಗ ಹಸನಾಗಿದೆ. ಜಾತಿಯ ಗೊಂದಲಕ್ಕೆ ಸಿಲುಕಿದ್ದ ಪ್ರೇಮ ಪ್ರಕರಣವೊಂದು ಈ ಮೂಲಕ ಸುಖಾಂತ್ಯ ಕಂಡಂತಾಗಿದೆ.

ನೇಮಿನಾಥ್ ಹಾಗೂ ಸಂಗೀತ ಅವರ ಪ್ರೇಮ ಪ್ರಕರಣ ಅರಿತಿದ್ದ ಅವರ ಗ್ರಾಮಸ್ಥರು, ಪ್ರಕರಣವನ್ನು ಜೀ ಕನ್ನಡದ ಗಮನಕ್ಕೆ ತಂದಿದ್ದರು. ಪ್ರಕರಣವನ್ನು ಗಂಭೀರವಾಗಿ ಗಮನಿಸಿ ಪ್ರಕರಣಕ್ಕೆ ಸಂಬಂಧಿಸಿದವರನ್ನು ಬದುಕು ಜಟಾಕಾಬಂಡಿ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. ಹುಡುಗಿಯೇನೋ ಮದುವೆಗೆ ಸಿದ್ದಳಿದ್ದಳಾದರೂ ಅನೇಕ ವೈರುಧ್ಯಗಳಲ್ಲಿ ಸಿಲುಕಿದ್ದ ನೇಮಿನಾಥ್ ಗೊಂದಲದಲ್ಲಿ ಮುಳುಗಿದ್ದ. ಆದರೆ ಕಾರ್ಯಕ್ರಮದ ನಿರ್ವಾಹಕಿ ಮಾಳವಿಕಾ ಹಾಗೂ ಬದುಕು ಜಟಕಾಬಂಡಿ ತಂಡದ ಅವಿರತ ಶ್ರಮ ಹಾಗೂ ನೆರವಿನಿಂದಾಗಿ ಪ್ರಕರಣ ಸುಖಾಂತ್ಯ ಕಾಣುವಲ್ಲಿ ಯಶಸ್ವಿಯಾಯ್ತು.

ಟಿ.ವಿ ಕಾರ್ಯಕ್ರಮ ನಿರ್ಮಿಸುತ್ತಿದ್ದ ವೇಳೆ, ಪ್ರೇಮಿಗಳಾಗಿದ್ದ ನೇಮಿನಾಥ್ ಹಾಗೂ ಸಂಗೀತ ಅವರಿಗೆ ನಿಜವಾಗಿಯೂ ಕಂಕಣ ಬಲ ಕೂಡಿ ಬಂದ ಗಳಿಗೆ ನೆರೆದಿದ್ದವರಲ್ಲಿ ಪುಳಕವುಂಟುಮಾಡಿತು. ಮದುವೆ ಅನಿರೀಕ್ಷಿತವಾದರೂ ವಿಧಿ ವಿಧಾನಗಳ ಮೂಲಕವೇ ನೆರವೇರಿತು. ಯುವ ಹೃದಯಗಳನ್ನು ಒಂದಾಗಿಸುವಲ್ಲಿ ಯಶಸ್ವಿಯಾಗಿ, ಹೊಸ ಜೋಡಿಗಳ ಬಾಳಿಗೆ ಬೆಳಕನ್ನು ನೀಡಿತು ಬದುಕು ಜಟಕಾಬಂಡಿ. ಈ ಮನಮುಟ್ಟುವ ಗಳಿಗೆಗಳನ್ನು ಬೆಳಕಿನ ಹಬ್ಬ ದೀಪಾವಳಿಯ ವಿಶೇಷ ಸಂಚಿಕೆಯಾಗಿ ಜೀ ಕನ್ನಡ ಅಕ್ಟೋಬರ್ 19ರ ಸೋಮವಾರ ಮಧ್ಯಾಹ್ನ 1.30ಕ್ಕೆ ಪ್ರಸಾರ ಮಾಡಲಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada