»   »  ಸರಿಗಮಪ ಚಾಂಪಿಯನ್ ಆಫ್ ಚಾಂಪಿಯನ್ ಅಶ್ವಿನ್

ಸರಿಗಮಪ ಚಾಂಪಿಯನ್ ಆಫ್ ಚಾಂಪಿಯನ್ ಅಶ್ವಿನ್

Posted By:
Subscribe to Filmibeat Kannada
Ashwin Sharma SRGMP winner Zee Kannada
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಚಾಂಪಿಯನ್ ಆಪ್ ಚಾಂಪಿಯನ್ಸ್ ಸ್ಫರ್ಧೆಯಲ್ಲಿ ಅಶ್ವಿನ್ ಶರ್ಮಾ ವಿಜೇತರಾಗಿ 7.5 ಲಕ್ಷ ಮೌಲ್ಯದ ಶಿಕ್ಷಣ ವಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಅಜಯ್ ಭಾರದ್ವಜ್ ಆಯ್ಕೆಯಾಗಿದ್ದು ಡಿ.ಎಸ್.ಮ್ಯಾಕ್ಸ್ ಪ್ರಾಪರ್‍ಟೀಸ್ ವತಿಯಿಂದ 2.5 ಲಕ್ಷ ಮೌಲ್ಯದ ಶಿಕ್ಷಣ ವಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂತಿಮ ಸ್ಫರ್ಧೆಯಲ್ಲಿ ಇವರನ್ನುಳಿದು ಮನೋಜವಂ, ಧನುಷ್, ಚೇತನ್, ಇಂಚರ ಸ್ಪರ್ಧೆಯಲ್ಲಿದ್ದರು.

ಸ್ಫರ್ಧೆಯ ಅಂತಿಮ ಕಣಕ್ಕೆ ಕೇವಲ ಮೂರು ಸ್ಫರ್ಧಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಕಳೆದ ವಾರ ನಡೆದ ಎಲಿಮಿನೇಷನ್ ಸುತ್ತಿನಲ್ಲಿ ಎಲ್ಲ ಸ್ಪರ್ಧಿಗಳೂ ಉತ್ತಮ ಪ್ರದರ್ಶನ ನೀಡಿದ್ದರಿಂದ ಆರೂ ಸ್ಫರ್ಧಿಗಳನ್ನೂ ಅಂತಿಮ ಸಂಚಿಕೆಗೆ ಉಳಿಸಿಕೊಳ್ಳಲಾಯ್ತು.

ಕಳೆದ ಸಂಚಿಕೆಯಲ್ಲಿ ತನ್ನ ಮಧುರ ಕಂಠದಿಂದ ಸ್ಪರ್ಷ ಚಿತ್ರದ ಇವಳೇ ಅವಳು ಕನಸಲಿ ಬಂದವಳು ಹಾಡಿನಿಂದ ವೀಕ್ಷಕರ ಹಾಗೂ ನಿರ್ಣಾಯಕರ ಗಮನ ಸೆಳೆದಿದ್ದ ಅಶ್ವಿನ್ ಶರ್ಮಾ ಮೆಲ್ಲ ಮೆಲ್ಲನೆ ನಡೆಯುವವಳೇ ಹಾಗೂ ಅಂಬರೀಷ್ ಅಭಿನಯದ ನಾನು ಯಾರು ಯಾವ ಊರು ಎಂಬ ಹಾಡನ್ನು ಹಾಡುವ ಮೂಲಕ ಉಳಿದ ಸ್ಫರ್ಧಿಗಳಿಗೆ ಉತ್ತಮ ಪೈಪೋಟಿ ನೀಡುವ ಮೂಲಕ ಸ್ಫರ್ಧೆಯ ವಿಜೇತರಾಗಿ ಹೊರಹೊಮ್ಮಿದರು. ಸ್ಫರ್ಧೆಯ ಪ್ರಾರಂಭದಿಂದಲೂ ಉತ್ತಮ ಪೈಪೋಟಿ ನೀಡಿದ್ದ ಅಜಯ್ ಭಾರದ್ವಜ್ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ವಿಜೇತರ ಹೆಸರನ್ನು ಘೋಷಿಸಿದ ಎಸ್. ಜಾನಕಿ ಅವರು ಇಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಉತ್ತಮ ಪ್ರತಿಭೆಗಳಾಗಿದ್ದು. ಇಲ್ಲಿ ಸೋಲು ಗೆಲವುಗಳಿಲ್ಲ ಎಲ್ಲರೂ ವಿಜೇತರು. ಒಬ್ಬರನ್ನು ಆಯ್ಕೆ ಮಾಡಬೇಕು ಎನ್ನುವ ಕಾರಣದಿಂದ ಒಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಫೈನಲ್ ಸ್ಪರ್ಧೆಯು ಮೂರು ರೌಂಡ್‌ಗಳಲ್ಲಿ ನಡೆದಿದ್ದು ಮೊದಲ ಸುತ್ತಿನಲ್ಲಿ ಶಾಸ್ತ್ರೀಯ ಸಂಗೀತದ ಟಚ್ ಇರುವ ಗೀತೆಗಳು, ಎರಡನೇ ಸುತ್ತಿನಲ್ಲಿ ಜನಪ್ರಿಯ ಗೀತೆಗಳು ಮತ್ತು ಮೂರನೇ ಸುತ್ತಿನಲ್ಲಿ ರಾಕ್ ಗೀತೆಗಳನ್ನು ಸ್ಪರ್ಧಿಗಳು ಹಾಡಿದರು. ಫೈನಲ್ ಸಂಚಿಕೆಯ ನಿರ್ಣಾಯಕರಾಗಿ ರಾಜೇಶ್ ಕೃಷ್ಣನ್, ಎಸ್.ಜಾನಕಿ ಹಾಗೂ ಸ್ಟೀಫನ್ (ಖ್ಯಾತ ಮ್ಯೂಸಿಕ್ ಕಂಪೋಸರ್) ಭಾಗವಹಿಸಿದ್ದರು. ಕಸ್ತೂರಿ ಶಂಕರ್, ಕೆ.ಕುಸುಮಾ, ಕವಿರಾಜ್, ಕೆ.ಎಸ್.ಎಲ್ ಸ್ವಾಮಿ, ವಿನೋದರಾಜ್, ಎಸ್.ಎನ್.ಸೇತುರಾಂ, ಶೃತಿ ನಾಯ್ಡು, ಸುರೇಶ್ ರೈ, ಶಾಂತಲಾ ಕಾಮತ್, ನೆ.ಲ.ನರೇಂದ್ರ ಬಾಬು, ಎಂ ಕೃಷ್ಣಪ್ಪ ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ವಿಜೇತರಿಗೆ ಬಹುಮಾನವನ್ನು ಜೀ ಸಮೂಹದ ಬೋಮನ್ ಮೊರಾಡಿಯನ್, ಗೌತಮ್ ಮಾಚಯ್ಯ ಮತ್ತು ಜೆ. ಶೇಖರ್ ವಿತರಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಖ್ಯಾತ ಗಾಯಕಿ ಅರ್ಚನಾ ಉಡುಪ ನಡೆಸಿಕೊಟ್ಟರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಸರಿಗಮಪ ಚಾಂಪಿಯನ್ ಆಫ್ ಚಾಂಪಿಯನ್ಸ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada