»   » ಜ್ಯೋತಿಷಿ ನರೇಂದ್ರ ಶರ್ಮಾಗೆ ಧಿಕ್ಕಾರ ಧಿಕ್ಕಾರ!

ಜ್ಯೋತಿಷಿ ನರೇಂದ್ರ ಶರ್ಮಾಗೆ ಧಿಕ್ಕಾರ ಧಿಕ್ಕಾರ!

Posted By:
Subscribe to Filmibeat Kannada
Narendra Babu Sharma
ಬೆಂಗಳೂರು/ಎಚ್ .ಡಿ ಕೋಟೆ, ಮೇ.28: ಜ್ಯೋತಿಷಿ ನರೇಂದ್ರಬಾಬು ಶರ್ಮ ಅವರು ಸವಿತಾ ಸಮಾಜದವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ, ಎಚ್.ಡಿ ಕೋಟೆ ತಾಲೂಕು ಹಾಗೂ ಬೆಂಗಳೂರಿನ ಯಲಹಂಕದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಎಚ್ ಡಿ ಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಹೊರಟ ಸವಿತಾ ಸಮಾಜದವರ ಪ್ರತಿಭಟನಾ ಮೆರವಣಿಗೆ ಬಾಬೂಜಿ ವೃತ್ತದ ಬಳಿ ನಿಂತು, ನರೇಂದ್ರ ಶರ್ಮರ ಪ್ರತಿಕೃತಿ ದಹಿಸಿದರು. ನಂತರ ತಾಲೂಕು ಕಚೇರಿ ಮುಂದೆ ಧರಣಿ ನಡೆಸಿದರು.

ಜಾತಿನಿಂದನೆ ಪ್ರಕರಣ ದಾಖಲಿಸಬೇಕು ಹಾಗೂ ಜೀ ಕನ್ನಡ ವಾಹಿನಿ ಅವರ ಭವ್ಯ ಬ್ರಹ್ಮಾಂಡ ಜೋತಿಷ್ಯ ಕಾರ್ಯಕ್ರಮವನ್ನು ನಿಷೇಧಿಸಬೇಕು ಎಂದು ತಹಸೀಲ್ದಾರ್ ಜಗದೀಶ್ ಅವರಿಗೆ ಸವಿತಾ ಸಮಾಜದ ಅಧ್ಯಕ್ಷ ರೇವಣ್ಣ ಹಾಗೂ ಸಮಾಜದ ಮುಖ್ಯಸ್ಥರು ಮನವಿ ಸಲ್ಲಿಸಿದರು.

ನರೇಂದ್ರನನ್ನು ಗಡಿಪಾರು ಮಾಡಿ: ನರೇಂದ್ರ ಶರ್ಮ ನನ್ನು ಐಪಿಸಿ ಸೆಕ್ಷನ್ 499,500 ಹಾಗೂ 163 ಅಡಿಯಲ್ಲಿ ಬಂಧಿಸಬೇಕು. ಯಾವುದೇ ಕನ್ನಡ ವಾಹಿನಿ ಅವರಿಗೆ ಮತ್ತೆ ಅವಕಾಶ ನೀಡಬಾರದು. ಅಲ್ಪಸಂಖ್ಯಾತರ ನಿಂದನೆ ಸಂವಿಧಾನ ಪ್ರಕಾರ ದೊಡ್ಡ ಅಪರಾಧ. ಇಂಥವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಪ್ರತಿ ಭಟನಾಕಾರರು ಗುಡುಗಿದರು.

ಭವಿಷ್ಯದ ಕನಸುಗಳ ಕಾಣುವ ವೀಕ್ಷಕರಿಗೆ ಬೈಯುವ ಮೂಲಕವೆ ಜ್ಯೋತಿಷಿ ನರೇಂದ್ರ ಶರ್ಮ ಎಂಬ ಮಾಜಿ ನಟ(ಉಪ್ಪಿ ದಾದಾ ಎಂಬಿಬಿಎಸ್ ಚಿತ್ರ ನೆನಪಿಸಿಕೊಳ್ಳಿ , ಸಹ ನಿರ್ದೇಶಕ ಕಾಯಕ ಮಾಡಿಕೊಂಡಿದ್ದಾರೆ. ಮೊದಲಿಗೆ ಕಸ್ತೂರಿ ವಾಹಿನಿ , ನಂತರ ಸುವರ್ಣ ವಾಹಿನಿಯಲ್ಲಿ ಭವಿಷ್ಯ, ಫಲ ಜ್ಯೋತಿಷ್ಯ ಹೇಳುತ್ತಾ, ನರೇಂದ್ರ ದೇಗುಲಗಳ ದರ್ಶನ ಮಾಡಿಸುತ್ತಿದ್ದರು.

ಸದ್ಯ ಜೀ ಕನ್ನಡ ವಾಹಿನಿಯ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಅದೇ ದಾಟಿಯಲ್ಲಿ ಮುಂದುವರೆಸಿಕೊಂಡು ಬಂದಿದ್ದರು. ಇತ್ತೀಚೆಗೆ ತಮ್ಮ ಕಾರ್ಯಕ್ರಮದಲ್ಲಿ 'ಬೆಳಗ್ಗೇನೆ ಎದ್ದ ತಕ್ಷಣ ಚಪ್ಪಲಿ, ಪೊರಕೆ, ಕೆಟ್ಟ ಕೆಟ್ಟ ಪೋಸ್ಟರು, ಹಜಾಮರನ್ನು ನೋಡಬಾರದು . . .' ಎಂದು ವೀಕ್ಷಕರಿಗೆ ಉಪದೇಶಿಸಿದ್ದರು. ಈ ಹೇಳಿಕೆಯಿಂದ ನೊಂದ ಸವಿತಾ ಸಮಾಜದವರು ನರೇಂದ್ರರ ವಿರುದ್ಧ ತಿರುಗಿಬಿದ್ದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada