'ಕೋಟ್ಯಾಧಿಪತಿ' ಶೀರ್ಷಿಕೆಯಲ್ಲಿ ವ್ಯಾಕರಣ ದೋಷ

'ಕೋಟ್ಯಾಧಿಪತಿ' ಎಂಬ ಶಬ್ದವನ್ನು ಹುಡುಕಿದರೆ ಯಾವುದೇ ನಿಘಂಟಿನಲ್ಲಿ ಕಾಣಸಿಗುವುದಿಲ್ಲ. 'ಕೋಟಿ' ಮತ್ತು 'ಅಧಿಪತಿ' ಎಂಬ ಎರಡು ಪದಗಳನ್ನು ಕೂಡಿಸಿ ಬರೆದರೆ 'ಕೋಟ್ಯಧಿಪತಿ' ಎಂದಾಗುತ್ತದೆಯೇ ಹೊರತು 'ಕೋಟ್ಯಾಧಿಪತಿ' ಅಲ್ಲ. ಇನ್ನು 'ಕೋಟ್ಯಧಿಪತಿ' ಪದವನ್ನು ಸಂಧಿ ಮಾಡಿದಾಗ ಯಣ್ ಸಂಧಿಯಾಗುತ್ತದೆ.
ಇದಕ್ಕೆ ಇನ್ನೊಂದೆರಡು ಉದಾಹರಣೆಗಳನ್ನೂ ಕೊಡಬಹುದು. ಅತಿ + ಅಂತ್ಯ =ಅತ್ಯಂತ ಹಾಗೆಯೇ ಮನು + ಅಂತರ= ಮನ್ವಂತರ. ಆದರೆ 'ಲಕ್ಷಾಧಿಪತಿ' ಪದವನ್ನು ಬಿಡಿಸಿ ಬರೆದಾಗ ಲಕ್ಷ + ಅಧಿಪತಿ = ಲಕ್ಷಾಧಿಪತಿ (ಸವರ್ಣದೀರ್ಘ ಸಂಧಿ) ಆಗುತ್ತದೆ. ಹಾಗಾಗಿ ಕೋಟ್ಯಂತರ ವೀಕ್ಷಕರು ನೋಡುವ ಕೋಟ್ಯಧಿಪತಿ ಶೀರ್ಷಿಕೆಯಲ್ಲಿನ ವ್ಯಾಕರಣ ದೋಷವನ್ನು ಸರಿಪಡಿಸಬೇಕು ಎಂಬುದಷ್ಟೇ ನನ್ನ ವಿನಂತಿ. ನನ್ನ ಅಭಿಪ್ರಾಯದಲ್ಲಿ ಏನಾದರೂ ತಪ್ಪಿದ್ದರೆ ದಯವಿಟ್ಟು ತಿಳಿಸಿ.
ಕನ್ನಡದ ವ್ಯಾಕರಣವನ್ನು ಇಂದು ಮತ್ತೊಮ್ಮೆ ವಿಶದವಾಗಿ ತಿಳಿದುಕೊಳ್ಳಬೇಕಾದ ಅಗತ್ಯ ತುಂಬಾ ಇದೆ. ಏನಂತೀರಾ ಸ್ವಾಮಿ. ನನ್ನ ಈ ವಾದಕ್ಕೆ ಶತಾಯುಷಿಯಾಗುತ್ತಿರುವ ನಡೆದಾಡುವ ನಿಘಂಟು ಎಂದೇ ಖ್ಯಾತರಾಗಿರುವ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಕೃಪೆ ಇದೆ ಅಂದುಕೊಳ್ಳುತ್ತೇನೆ.


Click it and Unblock the Notifications











