»   » ಶರ್ಮಾಗೆ ಮಸ್ತ್ ಚಮಕ್ ಕೊಟ್ಟ ಸುದೀಪ್!

ಶರ್ಮಾಗೆ ಮಸ್ತ್ ಚಮಕ್ ಕೊಟ್ಟ ಸುದೀಪ್!

Posted By:
Subscribe to Filmibeat Kannada

"ಗುರುಗಳೇ, ನಿಮಗೆ ಕೇವಲ ಐದು ನಿಮಿಷ ಮಾತ್ರ ಕಾಲಾವಕಾಶವಿದೆ. ಮನೆ ಮಂದಿಗೆಲ್ಲ ಏನೇನು ಹೇಳಬೇಕೋ ಹೇಳಿಬಿಡಿ, ಕ್ವಿಕ್" ಎಂದು ಬಿಗ್ ಬಾಸ್‌ನ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಹೇಳಿದಾಗ ಚಂದ್ರಿಕಾರನ್ನು ಹೊರತುಪಡಿಸಿ ಮನೆಮಂದಿಯೆಲ್ಲ ಸ್ಟನ್. ಬ್ರಹ್ಮಾಂಡ ಶರ್ಮಾರ ಕಣ್ಣಲ್ಲಿ ಜಲಪಾತ. ಬಚಾವ್ ಆದೆ ಎಂದು ರಿಷಿಕಾ ಸಿಂಗ್ ಕಣ್ಣು ಮುಚ್ಚಿಕೊಂಡಳು.

ನಗುಮುಖದಲ್ಲೇ ಒತ್ತರಿಸಿ ಬರುತ್ತಿದ್ದ ಕಣ್ಣೀರನ್ನು ಹಿಡಿದಿಟ್ಟುಕೊಂಡ ನರೇಂದ್ರ ಬಾಬು ಶರ್ಮಾ "ಎಲ್ಲಾರೂ ಚೆನ್ನಾಗಿರಿ, ಗೇಮನ್ನು ಗೇಮಾಗಿಯೇ ತೆಗೆದುಕೊಳ್ಳಿ. ಎಂಜಾಯ್ ಮಾಡಿ, ಜಗಳಾಡಬೇಡಿ. ನಿಮ್ಮೆಲ್ಲರಿಗೂ ಆ ದೇವಿ ಒಳ್ಳೆಯದು ಮಾಡುತ್ತಾಳೆ" ಎಂದು ಹೇಳುತ್ತಲೇ ಇದ್ದಂತೆ ಉಳಿದ ಸ್ಪರ್ಧಾಳುಗಳೆಲ್ಲ ಕಣ್ಣನ್ನು ಕೊಳ ಮಾಡಿಕೊಂಡು ಶರ್ಮಾ ಕಾಲಿಗೆ ನಮಸ್ಕರಿಸಿ, ತಬ್ಬಿಕೊಂಡು ಇನ್ನೇನು ಬೀಳ್ಕೊಡಬೇಕು...

"ಏನ್ ಗುರುಗಳೇ, ಎರಡೇ ನಿಮಿಷ ಮಾತಾಡಿ ಅಂದ್ರೆ ಮಾತಾಡ್ತಾನೇ ಇದ್ದೀರಲ್ಲ. ನಾನೆಲ್ಲಿ ನೀವು ಎಲಿಮಿನೇಟ್ ಆಗಿದ್ದೀರೆಂದು ಹೇಳಿದೆ, ನೀವು ಸೇಫ್" ಅಂದಾಗ ಸ್ಟನ್ ಆಗಿದ್ದು ಮನೆಮಂದಿ ಅಷ್ಟೇ ಅಲ್ಲ, ಈಟಿವಿ ನೋಡುತ್ತಿದ್ದ ಪ್ರೇಕ್ಷಕರು ಕೂಡ. ಬಚಾವಾದೆ ಅಂತ ಅಂದ್ಕೊಂಡಿದ್ದ ಡೋಂಟ್ ಕೇರ್ 'ಸುನಾಮಿ' ರಿಷಿಕಾ ಸಿಂಗ್ ಆರ್ಟಿಫೀಷಿಯಲ್ ನಗು ತಂದುಕೊಂಡು ಟ್ರಾಲಿ ಹಿಡಿದು ಹೊರಟೇಬಿಟ್ಟರು. ಅಲ್ಲಿ ತಬ್ಬಿಕೊಳ್ಳುವ, ಮುತ್ತಿಡುವ ಮತ್ತೊಂದು ನಾಟಕ ಶುರು.

ಶುಕ್ರವಾರದ ಎಪಿಸೋಡ್ ವಿಶಿಷ್ಟವಾಗಿತ್ತು. ಸಣ್ಣಸಣ್ಣ ವಿಷಯಕ್ಕೆಲ್ಲ ಮಗುವಿನ ಮೇಲೆ ಆಣೆ ಮಾಡಿ ಜಗಳ ತೆಗೆಯುತ್ತ ಕಣ್ಣೀರುಗರೆಯುತ್ತಿದ್ದ ಜಗತ್ ಜಗಳಗಂಟಿ ಚಂದ್ರಿಕಾಗೆ ಈ ಬಾರಿ ಸುದೀಪ್ ಬೆವರಿಳಿಸಿದರು. ಚಂದ್ರಿಕಾ ಮತ್ತು ನಿಕಿತಾರನ್ನು ಉದ್ದೇಶಿಸಿ, ನೀವೇನಾದರೂ ಮಾಡಿಕೊಳ್ಳಿ ನಮಗೊಂದಿಷ್ಟು ಮರ್ಯಾದೆ ಕೊಡುವಂತೆ ನಡೆದುಕೊಳ್ಳಿ ಎಂದು ಹೇಳಿ ಶಾಲು ಹೊದಿಸಿ ಚಾಟಿ ಏಟು ನೀಡಿದ್ದಾರೆ.

ಇನ್ನು ಉಳಿದವರು ಆರು ಪ್ಲಸ್ ಒಂದು (ಯೋಗೇಶ್). ಇವರಲ್ಲಿ ಯಾರು ಗಟ್ಟಿ, ಯಾರು ಜೊಳ್ಳು? ಮುಂದಿನ ದಿನಗಳಲ್ಲಿ ಸ್ಪರ್ಧೆ ಇನ್ನೂ ತುರುಸಿನಿಂದ ಕೂಡಿರಲಿದೆ. ಮತ್ತಷ್ಟು ಆಸಕ್ತಿ ಕೆರಳಿಸುವುದಾ ನೋಡೋಣ.

'ಟಿಆರ್‌ಪಿ' ನರೇಂದ್ರ ಬಾಬು ಶರ್ಮಾ

"ಈ ಬಿಕನಾಸಿ ಕಾರ್ಯಕ್ರಮ ಯಾರು ನೋಡ್ತಾರೆ" ಅಂತ ಹೇಳಿಯೂ, ಬಿಗ್ ಬಾಸ್‌ಗೇ ಧಮ್ಕಿ ಹಾಕಿಯೂ ನರೇಂದ್ರ ಬಾಬು ಶರ್ಮಾ ಮನೆಯಲ್ಲಿ ಉಳಿದುಕೊಂಡಿರುವುದು ನಿಜಕ್ಕೂ 8ನೇ ವಂಡರ್. ಹಾಳಾಗಿ ಹೋಗ್ತೀಯಾ, ಮುಂಡಾಮೋಚ್ಕೊಂಡು ಹೋಗ್ತೀಯಾ ಎಂದು ಎಷ್ಟೇ ಬೈಸಿಕೊಂಡರೂ ಬಿಗ್ ಬಾಸಿಗೆ ಬೇಕಾಗಿರುವುದೂ ಅದೇ. ನನ್ನನ್ನು ಹಾಕಿಕೊಂಡಿದ್ದಕ್ಕೆ ಟಿಆರ್‌ಪಿ ಹೆಚ್ಚಾಗಿದೆ ಎಂದು ಶರ್ಮಾ ಹೇಳಿದ್ದರಲ್ಲಿ ಅತಿಶಯೋಕ್ತಿಯಿಲ್ಲ. ಶರ್ಮಾರನ್ನು ಮನೆಯಿಂದ ಹೊರಗೆ ಕಳಿಸಿ ಪಾಪ್ಯುಲಾರಿಟಿ ಉಳಿಸಿಕೊಳ್ಳಲು ಬಿಗ್ ಬಾಸಿಗೆ ಸಾಧ್ಯವೆ? ಡೌಟ್.

ಅತಿಯಾದ ಮಾತುಗಾರ ಅರುಣ್ ಸಾಗರ್

ನಾಟಕೀಯತೆಯನ್ನೇ ಸಹಜವಾಗಿ ಮಾಡುವ ಪ್ರತಿಭಾವಂತ ನಟ ಅರುಣ್ ಸಾಗರ್ ಎಲಿಮಿನೇಷನ್ನಿಗೆ ನಾಮಿನೇಟ್ ಆಗಿದ್ದು ಕಡಿಮೆ. ಅತಿಯಾದ ಮಾತುಗಾರಿಕೆ, ನಿಷ್ಠೆಯಿಂದಾಗಿ ಗಮನ ಸೆಳೆದಿದ್ದರೂ ಮನೆಯಲ್ಲಿಯೇ ಕೆಲವರ ವಿರೋಧ ಕಟ್ಟಿಕೊಂಡಿರುವುದು ನಿಜ. ಆದರೆ, ಯಾವುದೇ ಟಾಸ್ಕನ್ನು ಲೀಲಾಜಾಲವಾಗಿ ಮಾಡುವ ಅರುಣ್ ಸಾಗರ್ ಬಿಗ್ ಬಾಸ್ ಗೆಲ್ಲುವ ಪ್ರಬಲ ಸ್ಪರ್ಧಾಳು. ಅರುಣ್‌ಗೆ ಸರಿಸಾಟಿಯೆಂದರೆ ಜಗಳಗಂಟಿ ಎಂದು ಬಿರುದು ಪಡೆದಿರುವ ಚಂದ್ರಿಕಾ ಮಾತ್ರ.

ಸ್ಟ್ರಾಂಗೂ ಅಲ್ಲ ವೀಕೂ ಅಲ್ಲ ನಿಕಿತಾ ತುಕ್ರಲ್

61 ದಿನಗಳಾದರೂ 61 ಕನ್ನಡ ಪದಗಳನ್ನು ಸರಿಯಾಗಿ ಕಲಿಯದ ನಿಕಿತಾ ತುಕ್ರಲ್ ಅತ್ತ ಸ್ಟ್ರಾಂಗೂ ಅಲ್ಲ, ಅತ್ತ ವೀಕೂ ಅಲ್ಲ ಎಂಬಂತಹ ಸ್ಪರ್ಧಾಳು. ಕನ್ನಡ ಬರುವುದಿಲ್ಲ ಮತ್ತು ನಾಟಕೀಯತೆ ಇಲ್ಲ ಎಂಬ ಅಂಶವೇ ನಿಕಿತಾ ಮೇಲೆ ಪ್ರೇಕ್ಷಕರಿಗೆ ಅನುಕಂಪ ಮೂಡುವಂತೆ ಮಾಡಿದೆ. ಒಟ್ಟಿನಲ್ಲಿ ಇಂಥವರೊಬ್ಬರು ಇರಲೇಬೇಕೆಂದು ನಿಕಿತಾ ಇನ್ನೂ ಉಳಿದುಕೊಂಡಿದ್ದಾರೆ.

ಇದ್ದಂತೂ ಇಲ್ಲದಿರುವ ವಿಜಯ ರಾಘವೇಂದ್ರ

ಅತ್ಯಂತ ಸುರಕ್ಷಿತ ಸ್ಪರ್ಧಾಳು ಎಂದು ಎಲ್ಲರಿಂದ ಹೊಗಳಿಸಿಕೊಂಡಿರುವ ವಿಜಯ ರಾಘವೇಂದ್ರ ಅವರಿಗೆ ಆ ಗುಣವೇ ದೌರ್ಬಲ್ಯವೆ ಎಂದು ಸುದೀಪ್ ಕೇಳಿದ್ದು ಸಮಂಜಸವಾಗಿತ್ತು. ಎಂದೂ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವುದಿಲ್ಲ, ಕಾಲುಕೆರೆದು ಜಗಳಕ್ಕೆ ಹೋಗುವುದಿಲ್ಲ. ಒಟ್ಟಿನಲ್ಲಿ ಸ್ಪರ್ಧೆಯಲ್ಲಿ ಇದ್ದರೂ ಇಲ್ಲದಂತೆ ಇದ್ದಾರೆ ವಿಜಯ್. ಚಂದ್ರಿಕಾರಿಂದ ಕ್ಯಾರೆಕ್ಟರ್‌ಲೆಸ್ ಅಂತ ಕರೆಯಿಸಿಕೊಂಡಿದ್ದಾರೆ. ಅತಿಯಾದ ಒಳ್ಳೆಯದನ ತೋರಿಸುವುದು ಸ್ಪರ್ಧೆಯಲ್ಲಿ ತರವಲ್ಲ ಎಂದು ವಿಜಯ್ ರಾಘವೇಂದ್ರ ಇನ್ನಾದರೂ ಅರಿತುಕೊಳ್ಳಬೇಕು.

ಜಗತ್ ಜಗಳಗಂಟಿ ಚಂದ್ರಿಕಾ

ಬಿಗ್ ಬಾಸ್ ಮನೆಯಲ್ಲಿ ಇರುವ ಏಕೈಕ 'ಗಂಡಸು' ಎಂದು ಯೋಗರಾಜ್ ಭಟ್ಟರಿಂದ ಬಣ್ಣಿಸಿಕೊಂಡಿರುವ ಚಂದ್ರಿಕಾ ಮತ್ತೊಬ್ಬ ಪ್ರಬಲ ಸ್ಪರ್ಧಾಳು. ಆದರೆ, ತಮ್ಮೆಲ್ಲ ಶಕ್ತಿ, ಸಮಯವನ್ನೆಲ್ಲ ಜಗಳವಾಡುವುದರಲ್ಲಿ, ಕಣ್ಣೀರುಗರೆಯುವುದರಲ್ಲಿ, ಬಿಗ್ ಬಿಗಿಯಾಗಿ ಬಟ್ಟೆ ತೊಟ್ಟು ಅಸಹ್ಯವಾಗಿ ಕಾಣಿಸಿಕೊಳ್ಳುವುದರಲ್ಲಿ ವ್ಯಯಿಸಿಕೊಳ್ಳುತ್ತಿದ್ದಾರೆ. ಮಾತುಮಾತಿಗೂ ಮಗನ ಮೇಲೆ ಆಣೆ ಮಾಡುತ್ತ ನಗೆಪಾಟಲಿಗೀಡಾಗುತ್ತಿದ್ದಾರೆ. ಇದಿಷ್ಟು ಹೊರತುಪಡಿಸಿದರೆ ಅರುಣ್‌ಗೆ ಚಂದ್ರಿಕಾ ಸರಿಸಾಟಿಯಾಗಬಲ್ಲರು.

ಊಟದ ಜೊತೆ ಉಪ್ಪಿನಕಾಯಿ ಅನುಶ್ರೀ

ಕಳ್ಳ ಮಿಂಡ್ರಿ ಅಂತ ಶರ್ಮಾರಿಂದ ಅನ್ನಿಸಿಕೊಂಡಿರುವ ಅನುಶ್ರೀ ಊಟದ ಜೊತೆ ಉಪ್ಪಿನಕಾಯಿ ಇದ್ದಂತೆ. ಇದ್ದರೆ ಪರವಾಗಿಲ್ಲ, ಇಲ್ಲದಿದ್ದರೂ ತೊಂದರೆಯಿಲ್ಲ ಎಂಬಂತಹ ಸ್ಪರ್ಧಾಳು. ಪ್ರಬಲ ಕಂಟೆಂಡರ್ ಅಂತ ಯಾವತ್ತೂ ಅನ್ನಿಸಿಲ್ಲ. ಅನವಶ್ಯಕವಾಗಿ ಚೀರಾಡಿಕೊಂಡು, ಅಗತ್ಯವಿಲ್ಲದೆ ಕೂಗಾಡಿಕೊಂಡು, ಅವರಿವರ ಜೊತೆ ಹಾಳುಹರಟೆ ಹೊಡೆದುಕೊಂಡು ಬಿಗ್ ಬಾಸ್ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಯಾವಾಗ ಹೊರಬರುತ್ತಾರೆ? ಗೊತ್ತಿಲ್ಲ.

ವೀಕೆಸ್ಟ್ ಸ್ಪರ್ಧಿ ಲೂಸ್ ಮಾದ ಯೋಗೇಶ್

ಬಿಗ್ ಬಾಸ್ ಮನೆಯಲ್ಲಿ ಹೊಕ್ಕ ಅತ್ಯಂತ ಬಲಹೀನ ವ್ಯಕ್ತಿ ಎಂದರೆ ಲೂಸ್ ಮಾದ ಯೋಗೇಶ್. ಹಳ್ಳಿ ಹುಡುಗ ರಾಜೇಶ್‌ಗಿಂತಲೂ ವೀಕ್ ಅಂತ ಕರೆದರೂ ಪರವಾಗಿಲ್ಲ. ಉಳಿದವರಲ್ಲಿ ಇರುವಂಥ ಜಾಣ್ಮೆಯಾಗಲಿ, ಸ್ಪರ್ಧಾಳುಗಳಲ್ಲಿ ಇರಬೇಕಾದಂತಹ ಸ್ಪಿರಿಟ್ ಆಗಲಿ ಇಲ್ಲವೇ ಇಲ್ಲ. ವೈಲ್ಡ್ ಕಾರ್ಡ್ ಎಂಟ್ರಿಯಾಗಿರುವ ಯೋಗೇಶ್‌ನಿಂದಾಗಿ ನಿಕಿತಾಗೂ ಹಿನ್ನಡೆಯಾದರೂ ಅಚ್ಚರಿಯಿಲ್ಲ. ಬರದೆಯಿದ್ದರೇ ಚೆನ್ನಾಗಿತ್ತು ಅಂತ ಅನ್ನಿಸಿದರೆ ಅಚ್ಚರಿಯಿಲ್ಲ.

English summary
Bigg Boss 61st day highlights. Sudeep gives surprise shock to Narendra Babu Sharma by asking him to be ready for elimination, but eliminates Rishika Singh. Ultimately fight is between remaining 6 contestants. Who is strongest contender to win the reality show.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada