ಮಾರ್ಚ್ ನಿಂದ ಈಟಿವಿ ಕನ್ನಡದಲ್ಲಿ ಬಿಗ್ ಬಾಸ್
ಈಟಿವಿ ಕನ್ನಡ ಮತ್ತೊಂದು ರಿಯಾಲಿಟಿ ಶೋಗೆ ವೇದಿಕೆ ಸಿದ್ಧ ಮಾಡಿಕೊಂಡಿದೆ. ಮೂಲಗಳ ಪ್ರಕಾರ ಇದೇ ಮಾರ್ಚ್ ನಿಂದ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಕಾರ್ಯಕ್ರಮವನ್ನು ನಡೆಸಿಕೊಡಲಿರುವುದು ಬೇರಾರು ಅಲ್ಲ ನಮ್ಮ ಕಿಚ್ಚ ಸುದೀಪ್.
ಕಲರ್ಸ್ ವಾಹಿನಿಯಲ್ಲಿ ಮೂಡಿಬಂದ ಬಿಗ್ ಬಾಸ್ ರಿಯಾಲಿಟಿ ಶೋವನ್ನು ನಟ ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದಾರೆ. ಈಗ ಅದೇ ರಿಯಾಲಿಟಿ ಶೋ ಕನ್ನಡಕ್ಕೆ ರೀಮೇಕ್ ಆಗಿ ಈಟಿವಿ ಕನ್ನಡದಲ್ಲಿ ಮೂಡಿಬರಲಿದೆ. ದಿನಾಂಕ ಇನ್ನೂ ಪಕ್ಕಾ ಆಗದಿದ್ದರೂ, ವಾಹಿನಿಯ ನಾನ್ ಫಿಕ್ಷನ್ ಹೆಡ್ ರಾಘವೇಂದ್ರ ಹುಣಸೂರು ಅವರ ಪ್ರಕಾರ ಮಾರ್ಚ್ ನಿಂದ ಆರಂಭವಾಗಲಿದೆ.

ಮುಂಬೈನ ಲೋನಾವಾನಾದಲ್ಲಿರುವ ಬಿಗ್ ಬಾಸ್ ಸೆಟ್ಸ್ ನಲ್ಲೇ ಕನ್ನಡ ಕಾರ್ಯಕ್ರಮ ಚಿತ್ರೀಕರಿಸಲಾಗಿದೆ. ಸಿನಿಮಾ ತಾರೆಯರು, ಕ್ರೀಡಾಪಟುಗಳು, ಫ್ಯಾಷನ್ ಲೋಕದವರು, ಜನಪ್ರಿಯ ವ್ಯಕ್ತಿಗಳನ್ನು ಕಣಕ್ಕಿಳಿಸಲಿದೆ ಈಟಿವಿ ಕನ್ನಡ ವಾಹಿನಿ.
ವಿಭಿನ್ನ ಕ್ಷೇತ್ರದ, ವಿಭಿನ್ನ ಮನೋಭಾವದ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ ವಿವಿಧ ಸ್ಪರ್ಧೆಗಳನ್ನು ಒಡ್ಡಲಾಗುತ್ತದೆ. ಕಡೆಗೆ 'ಬಿಗ್ ಬಾಸ್' ಮನೆಯಲ್ಲಿ ಉಳಿದವರೇ ಗೆದ್ದಂತೆ. ಮೂಲಗಳ ಪ್ರಕಾರ ಈಟಿವಿ ಕನ್ನಡ ವಾಹಿನಿ 'ಬಿಗ್ ಬಾಸ್' ಕಣದಲ್ಲಿ ಹಲವಾರು ಖ್ಯಾತನಾಮರು ಇದ್ದಾರೆ ಎನ್ನಲಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











