twitter
    For Quick Alerts
    ALLOW NOTIFICATIONS  
    For Daily Alerts

    ಪಬ್ಲಿಕ್ ಟಿವಿ ನಾನೇಕೆ ಬಿಟ್ಟೆ? - ಬಿಟ್ಟವನ ಪತ್ರ

    By Shami
    |

    Kannada TV journalist quits payroll on media parole
    ಒಂದು ಕೆಲಸಕ್ಕೆ ರಾಜೀನಾಮೆ ಕೊಡುವುದು, ಬೇರೊಂದು ಕಂಪನಿಗೆ ಸೇರಿಕೊಳ್ಳುವುದು ಕನ್ನಡ ಪತ್ರಿಕೋದ್ಯಮದ ಜಾಬ್ ಮಾರ್ಕೆಟ್ಟಿನಲ್ಲಿ ಬ್ರೇಕಿಂಗ್ ಸುದ್ದಿ ಎನಿಸಿಕೊಳ್ಳುವುದಿಲ್ಲ. ಪೇರೋಲುಗಳಲ್ಲಿ ಇರೋಕ್ಕಿಂತ ತಾನೇ ಒಂದು ಕಂಪನಿ ಶುರುಮಾಡುವುದು ಲೇಸೆಂದು ನಿಶ್ಚಯಿಸಿದ ಯುವಕನೊಬ್ಬ ಪೆರೋಲ್ ಮೇಲೆ ಕಂಪನಿಯಿಂದ ಹೊರಬಂದ ಸಾಫ್ಟ್ ಸ್ಟೋರಿ ಹೀಗಿದೆ.

    ಕಥೆ ಇಷ್ಟು : ಪಬ್ಲಿಕ್ ಟಿವಿಯಲ್ಲಿ ಸ್ಪೆಷಲ್ ಟಾಸ್ಕ್ ಎಡಿಟರ್ ಆಗಿದ್ದ ಕಿರಿಕ್ ಕೀರ್ತಿ ಉರುಫ್ ಕೀರ್ತಿ ಶಂಕರಘಟ್ಟ ಉದ್ಯೋಗ ತೊರೆದು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಅವರ ಉದ್ಯಮಶೀಲತೆಯ ಕನಸುಗಳಿಗೆ ಶುಭಹಾರೈಸುವದರ ಜತೆಗೆ, ಕನಸುಗಳ ಜತೆಗಿನ ಅವರ ಅಕ್ಷರ ಅನುಸಂಧಾನವನ್ನು ಮೆಚ್ಚಿ ಅವರ ಪತ್ರ ಪ್ರಕಟಿಸಲಾಗಿದೆ. ಇಂಥ ಪತ್ರಗಳನ್ನು, ನಿವೇದನೆಗಳನ್ನು ನೀವೂ ಬರೆಯಬಹುದು. ಅಂತರ್ಜಾಲ ಮಾತ್ರ ಒದಗಿಸುವ ಸ್ಪೇಸುಗಳನ್ನು ನೀವೂ ಬಳಸಿಕೊಳ್ಳಬಹುದು - ಸಂಪಾದಕ. ಬರೆಯಿರಿ : [email protected]

    ***
    why you left Public TV...? ಕಳೆದ ಒಂದು ವಾರದಲ್ಲಿ ನಾನು ಅತಿ ಹೆಚ್ಚು ಎದುರಿಸಿದ ಪ್ರಶ್ನೆ ಇದು. ಪ್ರತಿಯೊಬ್ಬರಿಗೂ ಉತ್ತರಿಸುವ ಪ್ರಯತ್ನ ಮಾಡಿದ್ದೇನೆ. ಕೆಲವರು ಉಲ್ಟಾ ಪ್ರಶ್ನೆ ಕೇಳಿದಾಗ ಅಲ್ಲಿಗೆ ಚ್ಯಾಟ್ ಮಾಡೋದನ್ನ ನಿಲ್ಲಿಸಿದ್ದೇನೆ.

    ಒಂದು ವಾರ ಆದ್ಮೇಲೆ ಮನಸ್ಸು ಸ್ವಲ್ಪ ನಿರಾಳವಾಗಿದೆ. ಈಗ ಅದರ ಕಥೆ ಹೇಳ್ತೀನಿ ಕೇಳಿ... 2 ತಿಂಗಳ ಹಿಂದೆಯೇ ಡಿಸೈಡ್ ಮಾಡಿಬಿಟ್ಟಿದ್ದೆ, ನನ್ನ ಕನಸಿನ ವಿಸ್ಮಯ ಕ್ರಿಯೇಶನ್ಸ್ ಶುರು ಮಾಡೋಣ ಅಂತ. ಸರಿ ಅಂತ ಗಟ್ಟಿ ಮನಸ್ಸು ಮಾಡಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್ ಸರ್ ಗೆ 4 ಪುಟದ ಸೋಡಾಚೀಟಿ ಬರೆದು ಕಳಿಸಿದೆ. ಕೊಟ್ಟ 10 ನಿಮಿಷಕ್ಕೆ ಕರೆದು ಒಂದಷ್ಟು ಸಾಧ್ಯಾಸಾಧ್ಯತೆಗಳನ್ನ ಹೇಳಿದ್ರು. 2-3 ದಿನ ಟೈಂ ಕೊಡು ನಾನೂ ಯೋಚ್ನೆ ಮಾಡಿ ಹೇಳ್ತೀನಿ ಅಂದ್ರು.

    ಅದಾಗಿ ಮರುದಿನವೇ ವಿಧಾನಸಭಾ ಚುನಾವಣೆ ಅನೌನ್ಸ್ ಆಗಿಬಿಡ್ತು. ನಂಗೂ ಅನ್ನಿಸ್ತು, ಈ ಟೈಮಲ್ಲಿ ಬಿಟ್ಟು ಹೋಗ್ಬಾರ್ದು ಅಂತ. ಒಂದೂವರೆ ತಿಂಗಳು ಕತ್ತೆ ಕೆಲಸ ಮಾಡಿದ ಹಾಗೆ ಮಾಡಿದ್ದೀನಿ ಅನ್ನೋದು ರಂಗನಾಥ್ ಸರ್ ಗಮನಕ್ಕೂ ಬಂದಿತ್ತು. ಆರೋ ದೀಪ ಜೋರಾಗಿ ಉರೀತಿದೆ' ಅಂತ ಆಫೀಸಿನ ಗೆಳೆಯರು ರೇಗಿಸ್ತಿದ್ರು. ಎಲೆಕ್ಷನ್ ರಿಸಲ್ಟ್ ಬಂದು ಏಳನೇ ದಿನಕ್ಕೆ ಮತ್ತೆ ಸರ್ ಜೊತೆ ಮಾತುಕತೆ.

    ಈ ಸಲ ಡಿಸೈಡ್ ಮಾಡಿಬಿಟ್ಟಿದ್ದೆ. ಇಲ್ಲಿಂದ ಹೊರಗೆ ಹೋಗಿ ಏನಾದ್ರೂ ಸಾಧಿಸಲೇಬೇಕು ಅಂತ. ಹಂಗೂ ಹಿಂಗೂ ಸರ್ ಕನ್ವಿನ್ಸ್ ಆದ್ರು. ಮೇ 17ನೇ ತಾರೀಕು ಬೆಳಿಗ್ಗೆ ರಾಜೀನಾಮೆ ಕೊಟ್ಟೆ ಸಂಜೆಗೆ ರಿಲೀವ್ ಮಾಡಿಬಿಟ್ರು. ಅಲ್ಲಿಂದ ಹೊರಗೆ ಬಿದ್ದ ದಿನ ಅನುಭವಿಸಿದ ಸಂಕಟ ಅಷ್ಟಿಷ್ಟಲ್ಲ. ಯಸ್, ನಾನು ಪಬ್ಲಿಕ್ ಟಿ.ವಿ ಬಿಟ್ಟುಬಿಟ್ಟಿದ್ದೆ. ಪಬ್ಲಿಕ್ ಟಿವಿಯ ಮೊಟ್ಟಮೊದಲ ಎಡಿಟೋರಿಯಲ್ ಎಂಪ್ಲಾಯಿ ನಾನೇ. ನಾನೇ ನನ್ನನ್ನ ನಂಬೋಕೆ ಸಾಧ್ಯ ಆಗ್ಲಿಲ್ಲ. ಆದ್ರೂ ನನ್ನ ಮೇಲಿರುವ ನನ್ನ ಭಯಂಕರ ನಂಬಿಕೆಯನ್ನ ನಂಬಿ ಹೊರಬಿದ್ದುಬಿಟ್ಟೆ.

    ನನ್ನ ವಿಸ್ಮಯ ಕ್ರಿಯೇಶನ್ಸ್' ಕನಸು ಇಂದು ನಿನ್ನೆಯದಲ್ಲ. ಇದರ ಲೋಗೋ ರೆಡಿಯಾಗಿ 27 ತಿಂಗಳು ಕಳೆದಿದೆ. ನನಗಿರೋ ತಾಕತ್ತನ್ನ ನನಗೋಸ್ಕರ ವ್ಯಯ ಮಾಡಿದ್ರೆ ದೊಡ್ಡದಾಗಿ ಬೆಳೀಬಹುದು ಅನ್ನೋ ಹುಂಬತನ, ನಂಬಿಕೆ ಇಟ್ಕೊಂಡು ಈ ಕೆಲಸಕ್ಕೆ ಕೈ ಹಾಕಿದೀನಿ. ನನ್ನ ಗೆಳೆಯರು ನನಗೆ ಬೇಕಾದಷ್ಟು ಸಪೋರ್ಟ್ ಮಾಡ್ತಿದಾರೆ. ನನಗೂ ಗೆದ್ದು ಬಿಡ್ತೀನಿ ಅನ್ನೋ ದೊಡ್ಡ ನಂಬಿಕೆ ಇದೆ. ಪ್ರಯತ್ನ ನನ್ನದು, ಫಲ ದೇವರದು...ಅಲ್ವಾ..?

    ಅದಕ್ಕೂ ಮುಂಚೆ 7 ವರ್ಷ ಮೀಡಿಯಾದಲ್ಲಿ ಏನ್ ಏನ್ ಮಾಡ್ದೆ ಅನ್ನೋದನ್ನ ತಿರುಗಿ ನೋಡ್ಲೇಬೇಕು. ನಾನು ಕೆಲಸಕ್ಕೆ ಸೇರಿದಾಗ ನಾನು ಡಿಗ್ರಿ ಪಾಸ್ ಆಗಿರ್ಲಿಲ್ಲ. ಕಸ್ತೂರಿ ಚಾನಲ್ ಆಗ ತಾನೇ ಶುರು ಆಗಿತ್ತು. ನನ್ನ ಫ್ರೆಂಡ್ ಶುಭಾ ಹೇರಳೆ ಕರೆದು ಶೈಲಜಾ ಸಂತೋಷ್ ಅವರಿಗೆ ಮೀಟ್ ಮಾಡಿಸಿದ್ಲು. 'ಮುಂಗಾರುಮಳೆ ಸಿನಿಮಾ ಬಗ್ಗೆ ಏನನ್ಸುತ್ತೆ ಬರಿ' ಅಂದ್ರು. ನಾನು ಬರೆದಿದ್ದನ್ನ ಅವರು ಓದಿದ 2 ಗಂಟೆಗಳಲ್ಲಿ ನನ್ನ ಕೈಲಿ ಆಫರ್ ಲೆಟರ್ ಇತ್ತು.

    ಅದಾಗಿ ಒಂದು ವರ್ಷಕ್ಕೆ ಸುವರ್ಣ ನ್ಯೂಸ್ ಕಡೆ ಪ್ರಯಾಣ. ಎರಡೂವರೆ ವರ್ಷ ಅಲ್ಲೆ ಫಿಕ್ಸ್. ಆಮೇಲೆ ಗ್ಯಾಪಲ್ಲಿ 6 ತಿಂಗಳು ರೆಡ್ ಎಫ್ಎಂ ನಲ್ಲಿ ಅಸೋಸಿಯೇಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡ್ದೆ. ನಮಗೆ ಈ ರೇಡಿಯೋ ಸರಿ ಹೋಗಲ್ಲ ಅಂತ ಮತ್ತೆ ರಂಗನಾಥ್ ಸರ್ ಕೈಕಾಲು ಹಿಡ್ದು ಸುವರ್ಣ ನ್ಯೂಸ್ ಕಡೆ ಬಂದೆ. ಮತ್ತೆರಡು ವರ್ಷ ಅಲ್ಲಿ ಫಿಕ್ಸ್. ಈ ಟೈಮಲ್ಲಿ ನನ್ನ ಮೀಡಿಯಾ ಲೈಫ್ ಟಾಪ್ ಗೇರ್ ನಲ್ಲಿ ಹೋಗ್ತಿತ್ತು.

    ಅಷ್ಟರಲ್ಲಿ ರಂಗನಾಥ್ ಸುವರ್ಣ ನ್ಯೂಸ್ ಬಿಟ್ಟುಬಿಟ್ರು. ಅದಾಗಿ ತಿಂಗಳಿಗೆ ನಾನೂ ಬಿಟ್ಟೆ. ಅಲ್ಲಿಂದ ನೇರವಾಗಿ ಹೋಗಿದ್ದು ಬಿಗ್ ಎಫ್ಎಂ ಕಡೆಗೆ. ಕಿರಿಕ್ ಕೀರ್ತಿ ಅಂತ ಆರ್ ಜೆ ಆದೆ. ಅದಾಗಿ 8 ತಿಂಗಳಿಗೆ ಮತ್ತೆ ರಂಗನಾಥ್ ಸರ್ ಕರೆದ್ರು. ಚಾನಲ್ ಶುರು ಮಾಡ್ತಿದೀನಿ ಬಾ ಅಂತ. ನೆಕ್ಸ್ಟ್ ಡೇ ಪಬ್ಲಿಕ್ ಟಿವಿ ಅಂಗಳಕ್ಕೆ ಬಿದ್ದವನ್ನು 20 ತಿಂಗಳು ಅಲ್ಲೇ ನೆಲೆಯೂರಿ ಬಿಟ್ಟೆ. ಆಗಾಗ ನನ್ನನ್ನ ನೀವು ಟಿವಿಯಲ್ಲಿ ನೋಡಿರ್ತೀರಿ. ಮೆಣಸಿನಕಾಯಿ ಅನ್ನೋ ಪ್ರೋಗ್ರಾಮಲ್ಲಿ ನಾನು ತೊದ್ಲೇಶ್. ಕಾಶ್ಮೋರ'ಕ್ಕೆ ನಾನೇ ಆಂಕರ್..!

    ಇದೆಲ್ಲದರ ನಡುವೆ ಅಮ್ಮ-ಅಪ್ಪ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಸೆಟಲ್ ಆದ್ರು. ನಾನು ಪ್ರೀತಿಸಿದ ಹುಡುಗಿಯ ಜೊತೆ ನನ್ನ ಮದುವೆ ಆಯ್ತು. ಲೈಫ್ ಕೂಲಾಗಿ ಸಾಗ್ತಾ ಇತ್ತು. ಆಗಲೇ ಬಂದಿದ್ದು ಈ ಐಡಿಯಾ ವಿಸ್ಮಯ ಕ್ರಿಯೇಶನ್ಸ್'.. ನನ್ನ ಬೆಂಬಲಕ್ಕೆ ನನ್ನ ಫ್ಯಾಮಿಲಿ, ನನ್ನ ಸ್ನೇಹಿತರು ನಿಂತಿದ್ದಾರೆ. ಏನೋ ಮಾಡ್ತಿಯ ಬಿಡೋ' ಅಂತ ಕೆಲವರು ಧೈರ್ಯ ತುಂಬಿದ್ದಾರೆ. ಮತ್ತೆ ಕೆಲವರು ಇವೆಲ್ಲಾ ಯಾಕ್ ಬೇಕು ಮಗಾ, ತೆಪ್ಪಗೆ ಸಂಬಳ ತಿಂದ್ಕೊಂಡ್ ಇರೋದಲ್ವಾ' ಅಂತ ನನ್ನ ಹಿತ ಬಯಸಿದ್ದಾರೆ.

    ಅಯ್ಯೋ ಒಂದು ವರ್ಷದಲ್ಲಿ ವಾಪಸ್ ಬರ್ತಾನೆ' ನೋಡ್ತೀರಿ ಅಂತ ಹಿಂದಿನಿಂದ ಕಾಲೆಳೆದವರೂ ಇದ್ದಾರೆ. ಎಲ್ಲರ ಬಗ್ಗೆಯೂ ಐ ಆಮ್ ಹ್ಯಾಪಿ. ನನ್ನ ತಾಕತ್ತು ನನಗಿಂತಲೂ ಚೆನ್ನಾಗಿ ನನ್ನ ಆಪ್ತರಿಗೆ ಗೊತ್ತು. ಸೋ ಹೋಪ್ ಫಾರ್ ದ ಬೆಸ್ಟ್... ನನ್ನ ಐಡಿಯಾ ಇಷ್ಟೆ. ಒಂದೆರಡು ವರ್ಷ ಕಷ್ಟಪಟ್ಟು ದುಡೀತೀನಿ. ಈಗ ಮದುವೆ ಆಗಿ ಒಂದು ವರ್ಷ ಆಗಿದೆ. ಮಕ್ಕಳು ಬೇಕು ಅಂತ ಅನ್ನಿಸೋದ್ರೊಳಗೆ ನನ್ನ ಲೈಫ್ ಸೆಟ್ಲ್ ಆಗಿರ್ಬೇಕು ಅಷ್ಟೆ.

    ಹಂಗೂ ಆ ದೇವರಿಗೆ ನಾನು ಮೀಡಿಯಾದಲ್ಲೇ ಇರೋದು ಇಷ್ಟ ಅನ್ನಿಸಿದ್ರೆ ನನ್ನ ಕನಸು ಸೋತು ಬಿಡಬಹುದು. ಮತ್ತೆ ನಾನು ಯೂ ಟರ್ನ್ ತಗೊಂಡು ಯಾವ್ದೋ ನ್ಯೂಸ್ ಚಾನಲ್ ನಲ್ಲಿ ಕೆಲಸ ಮಾಡಬಹುದು. ಅಷ್ಟೆ...! ಎಲ್ಲ ತಿರುವುಗಳನ್ನೂ ಎದುರಿಸೋಕೆ ರೆಡಿಯಾಗಿದೀನಿ... ಈ ಟೈಮಲ್ಲಿ ರಿಸ್ಕ್ ತಗೊಂಡಿಲ್ಲ ಅಂದ್ರೆ ಇನ್ಯಾವಾಗ..?

    ಬೈದಬೈ ಹೇಳೋದು ಮರೆತು ಬಿಟ್ಟೆ. ನಮ್ಮ ವಿಸ್ಮಯದಲ್ಲಿ ಡಾಕ್ಯುಮೆಂಟರಿ, ಆಡ್ ಶೂಟ್, ಆಡಿಯೋ ಪ್ರೊಡಕ್ಷನ್ ಮಾಡ್ತೀವಿ. ನಿಮ್ಮ ಕಾರ್ಯಕ್ರಮಗಳು ನಮ್ಮ ಕೈಗೆ ಸಿಕ್ರೆ ಅವು ಮತ್ತಷ್ಟು ಕಲರ್ ಫುಲ್. ಅಂದ್ರೆ ನಾವು ಇವೆಂಟ್ ಮ್ಯಾನೇಜ್ ಮೆಂಟ್ ಗೂ ಸೈ. ಇದೆಲ್ಲದರ ಆಚೆ. ನಮ್ಮದು ಫೋಟೋಗ್ರಫಿ ತಂಡ. ಅದ್ರಲ್ಲೂ ಕಾನ್ಸೆಪ್ಟ್ ಫೋಟೋಗ್ರಫಿ ನಮ್ಮ ತಾಕತ್. ನಿಮ್ಮ ಪೋಟೋ ನೋಡಿ ನೀವೇ ಆಶ್ಚರ್ಯ ಪಡೋ ಹಾಗೆ ನಿಮ್ಮ ಫೋಟೋ ತೆಗೆದುಕೊಡೋ ಜವಾಬ್ದಾರಿ ನಮ್ಮದು.

    ಬೆಂಗಳೂರಿನ ಎತ್ತರದ ಬಿಲ್ಡಿಂಗ್ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿದೆ ನಮ್ಮ ಆಫೀಸ್. ಅವಕಾಶ ಸಿಕ್ಕಾಗ ಬಳಸಿಕೊಂಡು ಬಿಡ್ಬೇಕು ಏನಂತೀರಿ. ನನಗೆ ನಿಮ್ಮ ಸಪೋರ್ಟ್ ಬೇಕು. ನೀವೇ ಸಪೊರ್ಟ್ ಮಾಡ್ಲಿಲ್ಲ ಅಂದ್ರೆ ನಾವ್ ಹೆಂಗ್ರೀ ಉದ್ದಾರ ಆಗೋದು? ನನ್ನ ಫೇಸ್ ಬುಕ್ ಪೇಜ್ ಲೈಕ್ ಮಾಡಿ.. ನಮ್ಮ ಜೊತೆಗಿರಿ.. ಪ್ಲೀಸ್... [ಕೀರ್ತಿ ಬರೆದ ಮತ್ತೊಂದು ಲೇಖನ]

    English summary
    Kannada TV journalist Keerthi Shankaraghatta quits Public TV to start his own start-up, Vismaya Creations. A private company for documentary productions, Photo-shoots and event management. In a letter, he argues its better get out of payroll, got to go on a media parole!
    Tuesday, May 28, 2013, 14:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X