ಜನಶ್ರೀಯಲ್ಲಿ ಅಪರೂಪದ ಧಾರಾವಾಹಿ 'ಕಥೆಗಾರ'

"ಗುಡ್ಡದ ಭೂತ ಮತ್ತು 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ಪ್ರಸಾರ ಮಾಡುವ ಮೂಲಕ ದೇಶದ ನ್ಯೂಸ್ ಚಾನಲ್ ಗಳ ಇತಿಹಾಸದಲ್ಲೇ ಹೊಸ ಭಾಷ್ಯ ಬರೆದ ಹೆಮ್ಮೆ ನಮ್ಮ ವಾಹಿನಿಯದ್ದು. ಹಳೆಯ ಶ್ರೇಷ್ಠ ಧಾರಾವಾಹಿಗಳನ್ನು ಮರುಪ್ರಸಾರ ಮಾಡುವ ನಮ್ಮ ಈ ಪ್ರಯತ್ನಕ್ಕೆ ನೋಡುಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಒಳ್ಳೆಯದಕ್ಕೆ ಸರ್ವಕಾಲದಲ್ಲೂ ಮೌಲ್ಯ ಗೌರವಗಳು ಇದ್ದೇ ಇರುತ್ತವೆ ಅನ್ನುವ ನಮ್ಮ ನಂಬಿಕೆಯನ್ನು ಗಟ್ಟಿಗೊಳಿಸಿದೆ" ಎನ್ನುತ್ತಾರೆ ವಾಹಿನಿಯ ಪ್ರಧಾನ ಸಂಪಾದಕ ಅನಂತ ಚಿನಿವಾರ್.
ಅದೇ ನಂಬಿಕೆಯಿಂದಲೇ ಇದೀಗ ಜನಶ್ರೀ ವಾಹಿನಿ ಪ್ರಾರಂಭವಾಗಿ ಎರಡು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ, ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಪ್ರಯೋಗಾತ್ಮಕ ಧಾರಾವಾಹಿ 'ಕಥೆಗಾರ'ವನ್ನು ಪ್ರಸಾರ ಮಾಡಲು ಉದ್ದೇಶಿಸಿದೆ. ಫೆಬ್ರವರಿ 18 ರಿಂದ ಈ ಧಾರಾವಾಹಿ ಜನಶ್ರೀಯಲ್ಲಿ ಪ್ರಸಾರವಾಗಲಿದೆ.
'ಕಥೆಗಾರ' ಧಾರಾವಾಹಿ 1996 ರಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಇದು ಟಿವಿಯಲ್ಲಿ ಕಂಡ ಕನ್ನಡದ ಮೊದಲ ಸಣ್ಣ ಕಥಾ ಸರಣಿ. ಶಿವಕೋಟ್ಯಾಚಾರ್ಯರ 'ವಡ್ಡಾರಾಧನೆಯಿಂದ' ಹಿಡಿದು ಜಯಂತ್ ಕಾಯ್ಕಿಣಿಯವರ 'ಅಮೃತ ಬಳ್ಳಿ ಕಷಾಯ' ದವರೆಗೆ ಸಣ್ಣ ಕಥಾಲೋಕದ ಅನೇಕ ಮೇರು ಕೃತಿಗಳನ್ನು ಈ ಸರಣಿಯಲ್ಲಿ ದೃಶ್ಯರೂಪಕ್ಕಿಳಿಸಲಾಗಿದೆ.
ದೂರದರ್ಶನದಲ್ಲಿ ಸುಮಾರು ಒಂದೂವರೆ ವರ್ಷ ಪ್ರಸಾರಗೊಂಡ 'ಕಥೆಗಾರ' (75 ಕಂತುಗಳು) ಒಂದು ಅಪರೂಪದ ಮಾಲಿಕೆ. ಕನ್ನಡ ಸಾಹಿತ್ಯದಲ್ಲಿ ಸಣ್ಣ ಕಥಾ ಪ್ರಕಾರ ನಡೆದು ಬಂದ ದಾರಿಯನ್ನು ಗುರುತಿಸುವ ನಿಟ್ಟಿನಲ್ಲಿ ಇದೊಂದು ಅಪರೂಪದ ಧಾರಾವಾಹಿ.
"ಕನ್ನಡದ ಪ್ರಮುಖ ಕಥೆಗಾರರ ಶ್ರೇಷ್ಠ ಕಥೆಗಳಿಗೆ ದೃಶ್ಯರೂಪ ಕೊಡುವುದರ ಒಟ್ಟೊಟ್ಟಿಗೆ ಕಥೆಗಾರ ಮತ್ತು ಕಥೆಗಳ ಒಳಗೆ ಇಣುಕಿ ನೋಡುತ್ತಾ ಇತಿಹಾಸದ ಹೆಜ್ಜೆಗುರುತುಗಳಲ್ಲಿ ದಾಖಲಿಸುವ ಈ ಪ್ರಯತ್ನ ಕನ್ನಡ ಸಾರಸ್ವತ ಲೋಕದ ಮಟ್ಟಿಗೆ ತುಂಬ ವಿಶಿಷ್ಟವಾದದ್ದು" ಎನ್ನುತ್ತಾರೆ ಚಿನಿವಾರ್.
ಖ್ಯಾತ ನಿರ್ದೇಶಕರುಗಳಾದ ಟಿ.ಎನ್ ಸೀತಾರಾಮ್, ಪಿ. ಶೇಷಾದ್ರಿ, ಮತ್ತು ನಾಗೇಂದ್ರ ಶಾ ಅವರು ಈ ಧಾರಾವಾಹಿಯ ನಿರ್ದೇಶಕರು. ಶೀರ್ಷಿಕೆ ಗೀತೆ ದಿ. ಪು.ತಿ.ನರಸಿಂಹಾಚಾರ್ ಅವರದ್ದು. ಸಂಗೀತ ನೀಡಿರುವವರು, ದಿ. ಸಿ. ಅಶ್ವತ್ಥ್. ಮುಖ್ಯಮಂತ್ರಿ ಚಂದ್ರು, ಹೇಮಂತ್ ಹೆಗಡೆ, ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಅಪರ್ಣ, ವಿಜಯಕಾಶಿ, ವಿದ್ಯಾಮೂರ್ತಿ ಮುಂತಾದ ಅನೇಕ ಟೀವಿ ತಾರೆಯರ ಬಳಗವೇ ಈ ಧಾರಾವಾಹಿಯಲ್ಲಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











