»   » ಹೇಮಶ್ರೀ ಸಾವಿನ ಹಿಂದೆ ಅಂತೆಕಂತೆಗಳ ಮಹಾಪೂರ

ಹೇಮಶ್ರೀ ಸಾವಿನ ಹಿಂದೆ ಅಂತೆಕಂತೆಗಳ ಮಹಾಪೂರ

By: ರವಿಕಿಶೋರ್
Subscribe to Filmibeat Kannada
ಕಿರುತೆರೆ ಹಾಗೂ ಸಿನೆಮಾ ತಾರೆ ಎಚ್.ಎನ್. ಹೇಮಾಶ್ರೀ ಅವರ ಅಕಾಲಿಕ ಸಾವಿನ ಹಿಂದೆ ಅಂತೆಕಂತೆಗಳ ಮಹಾಪೂರವೇ ಹರಿದುಬರುತ್ತಿದೆ. ತನ್ನ ಮಗಳದು ಆಕಸ್ಮಿಕ ಸಾವಲ್ಲ. ಕೊಲೆ ಇರಬಹುದು ಎಂದು ಹೇಮಾಶ್ರೀ ಅವರ ತಂದೆ ನಾಗರಾಜ್ ಪೊಲೀಸರಿಗೆ ದೂರು ನೀಡಿರುವುದು ಗೊತ್ತೇ ಇದೆ.

ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬ ಬಗ್ಗೆ ಹೆಬ್ಬಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬುಧವಾರ (ಅ.10)ನಡೆದ ಮರಣೋತ್ತರ ಪರೀಕ್ಷೆ ವರದಿಯೂ ಇನ್ನೂ ಖಚಿತವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವರದಿಯನ್ನು ಕಳುಹಿಸಲಾಗಿದೆ.

ಏತನ್ಮಧ್ಯೆ ಪೊಲೀಸರು ಹೇಮಶ್ರೀ ಅವರ ಪತಿ ಸುರೇಂದ್ರ ಬಾಬು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಪೊಲೀಸರು ಆರೋಪಿಯನ್ನು 10 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಸರಿ ಮುಂದೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಇಷ್ಟಕ್ಕೂ ಹೇಮಶ್ರೀ ಯಾರು ಏನು ಎತ್ತ? ಈಕೆಯ ಸ್ವಂತ ಊರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹೊಸಹಳ್ಳಿ. ತಂದೆ ನಾಗರಾಜ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಹೇಮಶ್ರೀ ತಾಯಿ ಲೀಲಾವತಿ ಗೃಹಿಣಿ.

ಬೆಂಗಳೂರಿನಲ್ಲೇ ವಿದ್ಯಾಭ್ಯಾಸ ಪಡೆದ ಹೇಮಾಶ್ರೀ, ಚಿತ್ರರಂಗಕ್ಕೆ ಪ್ರವೇಶಿಸಿದ್ದು ಆಕಸ್ಮಿಕವಾಗಿ. ಬಳಿಕ ಈಕೆಗೆ ಜೆಡಿಎಸ್ ಮುಖಂಡ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಸುರೇಂದ್ರ ಬಾಬು ಜೊತೆ ಜೂ.22, 2011ರಲ್ಲಿ ಮದುವೆ ಮಾಡಲಾಯಿತು. ಆದರೆ ಈ ಮದುವೆ ಆಕೆಗೆ ಇಷ್ಟವಿರಲಿಲ್ಲವಂತೆ.

ಮದುವೆಯಾದ ಮರುದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು ಹೇಮಶ್ರೀ. ಅಂದಿನ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರಿಗೆ ದೂರು ನೀಡಿದ್ದರು. ಕುಟುಂಬದವರು ಬಲವಂತವಾಗಿ 48 ವರ್ಷದ ವ್ಯಕ್ತಿಯ ಜೊತೆ ನನಗೆ ಮದುವೆ ಮಾಡಿದ್ದಾರೆ. ಆತನಿಗೆ ಈಗಾಗಲೆ ಮದುವೆಯಾಗಿದೆ ಎಂದು ದೂರು ನೀಡಿದ್ದರು.

ಬಳಿಯ ಹಿರಿಯರು ಮಧ್ಯಪ್ರವೇಶಿಸಿ ಸಂಧಾನ ನಡೆಸುವ ಮೂಲಕ ತಮ್ಮ ದೂರನ್ನು ಹೇಮಶ್ರೀ ವಾಪಸ್ಸು ಪಡೆದಿದ್ದರು. ಈ ದಂಪತಿಗಳು ಬೆಂಗಳೂರು ಬನಶಂಕರಿಯ 3ನೇ ಹಂತದಲ್ಲಿ ವಾಸವಾಗಿದ್ದರು. ಮದುವೆಯಾದ ಬಳಿಕ ಅಷ್ಟಾಗಿ ಸಿನೆಮಾಗಳ ಕಡೆಗೆ ಹೇಮಶ್ರೀ ಗಮನಹರಿಸುತ್ತಿರಲಿಲ್ಲ ಎನ್ನಲಾಗಿದೆ.

ಮಾನಸಿಕವಾಗಿ ನೊಂದಿದ್ದ ಆಕೆ ನಿಮ್ಹಾನ್ಸ್ ನಲ್ಲೂ ಚಿಕಿತ್ಸೆ ಪಡೆದಿದ್ದರಂತೆ. ಸಾಂಸಾರಿಕವಾಗಿ ಜರ್ಝರಿತಾಗಿದ್ದ ಆಕೆ ವೈದ್ಯರ ಸಲಹೆ ಮೇರೆಗೆ ನಿದ್ದೆ ಮಾತ್ರೆಗಳನ್ನು ಸೇವಿಸುತ್ತಿದ್ದರಂತೆ. ಗಂಡನೊಂದಿಗೆ ಪ್ರವಾಸಕ್ಕೆಂದು ಹೋದ ಹೇಮಶ್ರೀ ಬಾರದ ಲೋಕಕ್ಕೆ ಹೋಗಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಪುಕ್ಕಲು ಸ್ವಭಾವದವಳಲ್ಲ ಎನ್ನುತ್ತಾರೆ ಆಕೆಯನ್ನು ಹತ್ತಿರದಿಂದ ಬಲ್ಲ ಗೆಳೆತಿಯರು.

English summary
Rumor mills behind Kannada actress Hemashree mysterious death. According to the police, Hemashree had complained at more than one police station that Babu had lied about his age before their marriage and that her parents had forcibly taken her to Tirupati and got her married.
Please Wait while comments are loading...