For Quick Alerts
  ALLOW NOTIFICATIONS  
  For Daily Alerts

  ಕನ್ನಡ ಧಾರಾವಾಹಿಗಳಿಗೆ ನಾಯಕರೇ ಇಲ್ಲ!

  By Shami
  |

  ಸುಳ್ಳೇ ಸುಳ್ಳು ಅಂತೀರಾ? ದಿನಾ ನಿಮ್ಮ ಮನೆಯ ಟಿವಿ ಪೆಟ್ಟಿಗೆಯಲ್ಲಿ ಕಾಣುವ ಅಸಂಖ್ಯಾತ ಕನ್ನಡ ಸೀರಿಯಲ್ಲುಗಳಲ್ಲಿ ನಾಯಕರ ದಂಡೇ ಇದೆ ಅಲ್ವಾ? ಪತ್ನೀ ಪೀಡಕರೂ, ಹೆನ್ ಪೆಕ್ಡ್ ಹಸ್ಬಂಡುಗಳೂ, ಅಮ್ಮನ ಆಜ್ಞಾಪಾಲಕರೂ, ಕುಡ್ಕ ಶಿಖಾಮಣಿಗಳೂ, ಪೆದ್ದರೂ, ಅರೆ ಹುಚ್ಚರೂ ಹೆಂಡತಿಯ ಡಬ್ಬಲ್ಲು ವಯಸ್ಸಿನ ಗಂಡಂದಿರೂ.. ಹೀಗೆ ಹಲ ಬಗೆಯ ಸೀರಿಯಲ್ ಹೀರೋಗಳು ನಮ್ಮ ಕಿರುತೆರೆಯನ್ನು ಅಲಂಕರಿಸಿ ಮಿನುಗುತ್ತಿದ್ದಾರೆ.

  ವಿಷ್ಯ ಅದಲ್ಲ. ಈ ಹೀರೋಗಳನ್ನು ತೆರೆಗೆ ತರುವ ತೆರೆಮರೆಯ ನಾಯಕರಿದ್ದಾರಲ್ಲ, ಅವರ ಸುದ್ದಿ ಇದು. ಎಲ್ಲ ಟಿ.ವಿ.ಚಾನಲ್ ಗಳಲ್ಲೂ ಫಿಕ್ಷನ್ ಹೆಡ್ ಗಳು ಅಂತಿರ್ತಾರೆ. ಅಂದ್ರೆ-ಧಾರಾವಾಹಿ ವಿಭಾಗಗಳ ಮುಖ್ಯಸ್ಥರು. ಸದ್ಯಕ್ಕೆ ಎಲ್ಲ ಕನ್ನಡ ಜಿ.ಇ.ಸಿ-ಜನರಲ್ ಎಂಟರ್ ಟೇನ್ಮೆಂಟ್ ಚಾನಲ್ಲುಗಳಲ್ಲಿ ಫಿಕ್ಷನ್ ಹೆಡ್ ಸ್ಥಾನಗಳು ಖಾಲಿ ಬಿದ್ದಿವೆ ಎನ್ನುವ ಬ್ರೇಕಿಂಗ್ ನ್ಯೂಸ್ ಇದು!

  ಧಾರಾವಾಹಿಗಳನ್ನು ತೆರೆಗೆ ಕಳಿಸುವ ಮಂದಿಗಳ ಗುಂಪಿನ ನಾಯಕ ಹುದ್ದೆ ಕ್ರಮೇಣ ಎಲ್ಲ ಕಡೆ ಖಾಲಿಯಾಗುತ್ತ ಬಂದು, ಇದೀಗ ನಶಿಸಿ ಹೋಗುವ ಸಂತತಿಗಳ ಸಾಲಿಗೆ ಸೇರ್ಪಡೆಯಾಗಿದೆ! Endangered Species.

  ಮೊದಲಿಗೆ ಝೀ ಕನ್ನಡ ತಗಂಡ್ರೆ- ಪರಮೇಶ್ವರ ಗುಂಡ್ಕಲ್ ಅವರು ಫಿಕ್ಷನ್ ಹೆಡ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಪ್ರೋಗ್ರಾಮಿಂಗ್ ಹೆಡ್ ಆಗಿ ಭಡ್ತಿ ಹೊಂದಿದ ಮೇಲೆ ಫಿಕ್ಷನ್ ಹೆಡ್ ಸ್ಥಾನ ಖಾಲಿಯಾಯಿತು. ಅವರಿಗೆ ಧಾರಾವಾಹಿಗಳ ಅನುಭವ ಚೆನ್ನಾಗಿ ಇದ್ದಿದ್ದರಿಂದ, ಪ್ರೋಗ್ರಾಮಿಂಗ್ ಹೆಡ್ ಆದ ಮೇಲೂ ಧಾರಾವಾಹಿಗಳನ್ನ ಅವರೇ ಮ್ಯಾನೇಜ್ ಮಾಡುತ್ತಿದ್ದರು.

  ಅಲ್ಲಿನ ಫಿಕ್ಷನ್ ಟೀಮು ಚೆನ್ನಾಗಿರುವುದೂ ಅದಕ್ಕೆ ಕಾರಣ ಅನ್ನಬಹುದು. ಈಗೇನಾಗಿದೆ ಅಂದ್ರೆ ಗುಂಡ್ಕಲ್, ಝೀ ಬಿಟ್ಟಿದ್ದಾರೆ. ಅಲ್ಲಿಗೆ ಝೀ ಕನ್ನಡದ ಫಿಕ್ಷನ್ ಹುದ್ದೆ ಖಾಲಿ-ಜೊತೆಗೆ ಪ್ರೊಗಾಮಿಂಗ್ ಹೆಡ್ ಹುದ್ದೆ ಕೂಡ. ಆದರೂ ಅಲ್ಲಿನ ಸೀರಿಯಲ್ಲುಗಳು ಅವುಗಳ ಪಾಡಿಗೆ ಅವು ಓಡುತ್ತಲೇ ಇವೆ. ಸಾರಥಿಯಿಲ್ಲದ ರಥದ ಹಾಗೆ!

  ಇನ್ನು ಈ ಟಿವಿ. ಈಟಿವಿಗೆ ಅಂದಕಾಲತ್ತಿಲೆಯಿಂದ ಕೂಡ ಸೂರಿ ಫಿಕ್ಷನ್ ಹೆಡ್. ಕಳೆದ ಹಲವು ವರ್ಷಗಳಿಂದ ಅವರದೇ ಅಧಿಪತ್ಯ. ಆದರೆ ಸೂರಿ ಈಗ ಈ ಟಿವಿಗೆ ರಾಜೀನಾಮೆ ಕೊಟ್ಟಿದ್ದಾರೆ. ಹಿಂದಿಯ ಪ್ರಮುಖ ಚಾನಲ್ ಗ್ರೂಪೊಂದು ಈಟಿವಿಯ ಶೇರುಗಳನ್ನು ಖರೀದಿಸಿದ್ದು, ಚಾನಲಿನ ರೂಪು ರೇಷೆ ಬದಲಾಗುತ್ತಿದೆ. ಹೀಗಾಗಿ ಹಳೆಯ ತಲೆಗಳನ್ನ ತೆಗೆದು ಹೊಸಬರನ್ನ ತರುತ್ತಾರಂತೆ ಅನ್ನುವ ಸುದ್ದಿ ಇದೆ. ಹೀಗಾಗಿ ಸೂರಿ ಈಟಿವಿಗೆ ವಿದಾಯ ಹೇಳಿದ್ದಾರೆ. ಅಲ್ಲಿಗೆ, ಈ ಟಿವಿಯಲ್ಲೂ ಫಿಕ್ಷನ್ ಹೆಡ್ ಪೊಸಿಷನ್ ಖಾಲಿ ಖಾಲಿ.

  ಸುವರ್ಣ ವಾಹಿನಿಯ ಕಥೆ ಮತ್ತೊಂದು ತರ. ಅಲ್ಲಿ ಕಳೆದ ಎರಡು-ಮೂರು ವರ್ಷಗಳಿಂದ ಸುಧೀಂದ್ರ ಕಂಚಿತೋಟ ಫಿಕ್ಷನ್ ವಿಭಾಗವನ್ನು "ನೋಡಿಕೊಳ್ಳುತ್ತಿದ್ದಾರೆ". ಆದರೆ ಅವರು ಅಧಿಕೃತವಾಗಿ "ಫಿಕ್ಷನ್ ಹೆಡ್" ಎನ್ನುವ ಡೆಸಿಗ್ನೇಷನ್ ಹೊಂದಿಲ್ಲ. ಫಿಕ್ಷನ್ ಮ್ಯಾನೇಜರ್ ಅಂತೇನೋ ಕಂಚಿತೋಟರ ಹುದ್ದೆಯ ಹೆಸರು.

  ಸುಧೀಂದ್ರ ಸಮರ್ಥವಾಗಿ ಸುವರ್ಣದ ಧಾರಾವಾಹಿಗಳನ್ನ ಗೆಲ್ಲಿಸಿಕೊಟ್ಟರೂ ಅಲ್ಲಿನ ಅನೂಪ್ ಚಂದ್ರಶೇಖರ್ ಅವರನ್ನ ಫಿಕ್ಷನ್ ಹೆಡ್ ಮಾಡೋಕೆ ಯಾಕೋ ಮನಸ್ಸು ಮಾಡಿಲ್ಲ. ಸುವರ್ಣದಲ್ಲಿನ ನಾನ್-ಫಿಕ್ಷನ್ ಹೆಡ್ ರಾಘವೇಂದ್ರ ಹುಣಸೂರು ಕೂಡ ಕೆಲಸ ಬಿಟ್ಟು ಪಬ್ಲಿಕ್ ಟಿವಿಯ ಹೊಸ ಚಾನಲ್ಲಿಗೆ ಸೇರಿಕೊಳ್ಳುತ್ತಾರೆ ಎನ್ನುವ ಸುದ್ದಿ ಇದೆ. ಹಳ್ಳಿ ಹೈದ, ಪ್ಯಾಟೆ ಹುಡುಗರ ಹಿಟ್ ಸೀರಿಸ್ ಕೊಟ್ಟ ಹುಣಸೂರು ಪಬ್ಲಿಕ್ ಗೆ ಹೋದರೆ ಸುವರ್ಣಕ್ಕೆ ದೊಡ್ಡ ಹೊಡೆತ ಖಚಿತ.

  ಕಸ್ತೂರಿ ಚಾನಲ್ಲಿನ ಬಗ್ಗೆ ಹೇಳದಿರುವುದೇ ವಾಸಿ. ನಿಖಿಲ್ ಕ್ರಿಯೇಷನ್ಸ್ ಹೆಸರಲ್ಲಿ ಸೀರಿಯಲ್ಲುಗಳನ್ನ ಆ ಚಾನಲ್ ನಲ್ಲಿ ಪ್ರೊಡ್ಯೂಸ್ ಮಾಡಲಾಗುತ್ತಿದೆ. ಎಲ್ಲ ಔಟ್ ಸೋರ್ಸೇ ಆಗಿರುವ ಅಲ್ಲಿ ಸೀರಿಯಲ್ಲುಗಳೂ ಸರಿ ಇಲ್ಲ, ಅವುಗಳಿಗೆ ಟಿಆರ್ಪಿಯೂ ಇಲ್ಲ. ನಾವಿಕನಿಲ್ಲದ ಹಡಗಿನಂತಿರುವ ಅಲ್ಲಿನ ಧಾರಾವಾಹಿ ವಿಭಾಗ ಹೇಗೋ ಓಡುತ್ತಿದೆ.

  ಇನ್ನು ಸನ್ ಟಿವಿಯ ಅಂಗ ಸಂಸ್ಥೆಯಾಗಿರುವ ಉದಯ ಟಿವಿ, ಕಮೀಷನ್ ಆಧಾರದಲ್ಲಿ ಸೀರಿಯಲ್ಲುಗಳನ್ನ ಮಾಡುತ್ತಿದ್ದು ಅಲ್ಲಿಗೆ ಫಿಕ್ಷನ್ ಹೆಡ್ ಅನ್ನುವ ಹುದ್ದೆಯ ಅಗತ್ಯವೇ ಇಲ್ಲ. ತಮಿಳು ಸೀರಿಯಲ್ಲುಗಳನ್ನ ಮೇಲಿಂದ ಮೇಲೆ ರಿಮೇಕ್ ಮಾಡಿ ಚಚ್ಚುತ್ತಿರುವ ಚಾನಲ್ ಉದಯ. ಅವರಿಗೆ ತೀರಾ ಕ್ರಿಯೇಟಿವ್ ಆಗಿ ಯೋಚಿಸುವ ತಲೆಗಳೂ ಬೇಕಿಲ್ಲ!

  ಹೀಗೆ ಕನ್ನಡ ಎಲ್ಲ ಮನರಂಜನಾ ಚಾನಲ್ಲುಗಳು ಧಾರಾವಾಹಿಗಳನ್ನು ಮುನ್ನಡೆಸಲು "ಹೆಡ್ಡುಗಳಿಲ್ಲದೆ" ಕೂತಿವೆ. ನೋಡಿ, ನಿಮ್ಮಲ್ಯಾರಿಗಾದರೂ ಆಸಕ್ತಿ ಇದೆಯಾ ಅಂತ?

  English summary
  Wanted Fiction heads ! Most of the Kannada TV channels have become headless. GEC General entertainment channels ETV, Suvarna, Zee Kannada..very badly need of professionals who can occupy strategic slots.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X